ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ನರೇಂದ್ರ ಮೋದಿ ಯಾವಾಗಲೂ ನಾಚಿಕೆಗೇಡಿನ ಮೌನವನ್ನು ಹೊಂದಿದ್ದಾರೆ. ಈ ಬಗ್ಗೆ ಪ್ರಧಾನಿ ಉತ್ತರಿಸಬೇಕು.
ನವದೆಹಲಿ (ಮೇ.02): ಜೆಡಿಎಸ್ ಅಮಾನತಾದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ‘ಮೋದಿಯವರ ರಾಜಕೀಯ ಕುಟುಂಬದ ಭಾಗವಾಗಿರುವುದು ಅಪರಾಧಿಗಳಿಗೆ ರಕ್ಷಣೆ ನೀಡುವ ಗ್ಯಾರಂಟಿಯೇ?’ ಎಂದು ಪ್ರಶ್ನಿಸಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಎಚ್.ಡಿ. ರೇವಣ್ಣ ವಿರುದ್ಧ ಭಾನುವಾರ ಪೊಲೀಸರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ದೂರಿನ ಆಧಾರದ ಮೇಲೆ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ನರೇಂದ್ರ ಮೋದಿ ಯಾವಾಗಲೂ ನಾಚಿಕೆಗೇಡಿನ ಮೌನವನ್ನು ಹೊಂದಿದ್ದಾರೆ. ಈ ಬಗ್ಗೆ ಪ್ರಧಾನಿ ಉತ್ತರಿಸಬೇಕು. ಎಲ್ಲ ಗೊತ್ತಿದ್ದರೂ ನೂರಾರು ಹೆಣ್ಣುಮಕ್ಕಳನ್ನು ಶೋಷಿಸುವ ರಾಕ್ಷಸನ ಪರ ಪ್ರಚಾರ ಮಾಡಿದ್ದು ಯಾಕೆ? ಅಷ್ಟಕ್ಕೂ ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಆರಾಮಾಗಿ ಪರಾರಿಯಾಗೋದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ.
‘ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣುಮಕ್ಕಳ ಅಪರಾಧಿಗಳಿಗೆ ಪ್ರಧಾನಿಯ ‘ಮೌನ ಬೆಂಬಲ’ ದೇಶಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬುತ್ತಿದೆ. ಮೋದಿಯವರ ‘ರಾಜಕೀಯ ಕುಟುಂಬದ’ ಭಾಗವಾಗಿರುವುದು ಅಪರಾಧಿಗಳಿಗೆ ‘ರಕ್ಷಣೆಯ ಗ್ಯಾರಂಟಿ’ ಆಗಿದೆಯೇ?’ ಅವರು ಹೇಳಿದರು.
ಬಳ್ಳಾರಿಯನ್ನು ಜೀನ್ಸ್ ರಾಜಧಾನಿ ಮಾಡುವ ಮಾತಿಗೆ ಬದ್ಧ: ರಾಹುಲ್ ಗಾಂಧಿ
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಬಗ್ಗೆ ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ವಲ್ ಪರ ಪ್ರಚಾರ ಮಾಡಿದರು. ಕೇಸು ದಾಖಲಾಗುತ್ತಿದ್ದಂತೆಯೇ ಅವರು ದೇಶ ಬಿಟ್ಟು ಹೋಗಲು ಮೋದಿ ನೆರವಾದರು.
- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ನಾಯಕಿ