ಮಂಗಳೂರು, ಜಾಗ ಕೊಟ್ಟವರ  ಪಾಡು.. ಪ್ರತಿ ದಿನ ರೈಲಿನಡಿ ಸ್ಟಂಟ್..ಸರ್ಕಸ್!

Feb 8, 2022, 9:45 PM IST

ಮಂಗಳೂರು(ಫೆ. 08)  ಅವರೆಲ್ಲಾ ಅಭಿವೃದ್ದಿಗಾಗಿ ತಮ್ಮ ಜಾಗಗಳನ್ನೇ ಸರ್ಕಾರಕ್ಕೆ ಬಿಟ್ಟು ಕೊಟ್ಟವರು. ಕರಾವಳಿಯ ನವಮಂಗಳೂರು (Nava Mangaluru) ಬಂದರಿಗಾಗಿ ಜಾಗ ಕೊಟ್ಟು ಅಲ್ಲೇ ಪಕ್ಕದಲ್ಲಿ ಬದುಕು ಕಟ್ಟಿಕೊಂಡವರು. ಆದರೆ ಇದೀಗ ಅದೇ ಅಭಿವೃದ್ಧಿ ಅವರಿಗೆಲ್ಲಾ ಮಾರಕವಾಗಿ ಪರಿಣಮಿಸಿದೆ. ಪ್ರತೀನಿತ್ಯದ ಓಡಾಟಕ್ಕೂ ಸಮಸ್ಯೆಯಾಗಿದ್ದು, ಸ್ಟಂಟ್ ಮಾಡಿಕೊಂಡು, ಸರ್ಕಸ್ ಮಾಡ್ತಾ ನಿತ್ಯ ‌ತಮ್ಮ ಕೆಲಸಗಳಿಗೆ ಹೋಗೋ ಅನಿವಾರ್ಯತೆ ಎದುರಾಗಿದೆ. ಅಷ್ಟಕ್ಕೂ ಆ ಜನರ (People) ಸಮಸ್ಯೆ ನೋಡಿದ್ರೆ ನೀವೊಮ್ಮೆ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಾ....

ನಿಂತಿರೋ ರೈಲಿನ (Indian Railways) ಅಡಿ ಭಾಗದಿಂದ ತೆವಳಿಕೊಂಡು ಬರ್ತಿರೋ ಜನ್ರು...ಕಷ್ಟಪಟ್ಟು ಸರ್ಕಸ್ ಮಾಡುತ್ತಾ ರೈಲಿನ ಅಡಿಯಿಂದ ಸಾಗುತ್ತಿರೋ ಮಹಿಳೆಯರು ಮತ್ತು ವೃದ್ದೆಯರು....ರೈಲಿನ ಕಂಬಿಗಳ ಮಧ್ಯದಿಂದ ಸ್ಟಂಟ್ ಮಾದರಿಯಲ್ಲಿ ಹತ್ತಿ ಇಳಿಯಿತ್ತಿರೋ ಯುವಕರು ಮತ್ತು ವಿದ್ಯಾರ್ಥಿಗಳು...ಈ ದೃಶ್ಯ ಕಾಣ ಸಿಕ್ಕಿದ್ದು ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮೀನಕಳಿಯ ಅನ್ನೋ ಗ್ರಾಮದಲ್ಲಿ.

ಇಬ್ಬರನ್ನ ಪ್ರೀತಿಸಿ ಜೀವಕ್ಕೆ ಕುತ್ತು ತಂದುಕೊಂಡ, ಲವ್ ಮಾಡುವಂತೆ ಬೆದರಿಕೆ ಹಾಕಿದವ ಜೈಲು ಸೇರಿದ

ಈ ದೃಶ್ಯ ನೋಡಿದರೆ ಇದೇನಪ್ಪ ಇಲ್ಲಿನ ಜನ ನಿಂತಿರೋ ರೈಲಿನಲ್ಲಿ ಸರ್ಕಸ್ ಮಾಡ್ತಾ, ಸ್ಟಂಟ್ ಪ್ರದರ್ಶಿಸ್ತಾ ಇದಾರೆ ಅಂತ ಅನ್ಕೋತೀರಾ. ಆದ್ರೆ ಇದು ಯಾವುದೇ ಸಾಹಸ ಪ್ರದರ್ಶನವಲ್ಲ. ಬದಲಾಗಿ ಮೀನಕಳಿಯ ಗ್ರಾಮದ ಜನರು ಬೈಕಂಪಾಡಿಗೆ ನಗರಕ್ಕೆ ಬರೋಕೆ ನಿತ್ಯ ಮಾಡ್ತಿರೋ ಹರಸಾಹಸ. ಮೀನಕಳಿಯದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮನೆಗಳಿದ್ದು, ಅವರೆಲ್ಲಾ ನಿತ್ಯ ನಗರಕ್ಕೆ ‌ಬಂದು ಹೋಗೋದಕ್ಕೆ ಇರೋ ಏಕೈಕ ಸಂಪರ್ಕ ರಸ್ತೆ ಈ ರೈಲ್ವೇ ಟ್ರ್ಯಾಕ್ ರಸ್ತೆ. ಆದ್ರೆ ಈ ರಸ್ತೆಯಲ್ಲಿ ರೈಲು ಹಳಿ ಹಾದು ಹೋಗಿದ್ದು, ಪ್ರತೀ ನಿತ್ಯ ಒಂದಲ್ಲ ಒಂದು ಗೂಡ್ಸ್ ರೈಲು ಇಡೀ ರಸ್ತೆಗೆ ಅಡ್ಡಲಾಗಿ ನಿಂತು ಬಿಡುತ್ತೆ. ಇದರಿಂದ ನಗರಕ್ಕೆ ಹೋಗೊಕೆ ಬೇರೆ ರಸ್ತೆಗಳೇ ಇಲ್ಲದ ಕಾರಣ ಇಲ್ಲಿನ ಜನ್ರು ಅನಿವಾರ್ಯವಾಗಿ ಈ ರೀತಿ ನಿಂತ ರೈಲನ್ನ ಸರ್ಕಸ್ ಮಾಡಿಕೊಂಡೇ ಮಾಡಬೇಕಾದ ಅನಿವಾರ್ಯತೆ ಇದೆ.

ಹೀಗಾಗಿ ಪ್ರತೀನಿತ್ಯ ಬೆಳಿಗ್ಗೆ ‌ಮತ್ತು ಸಂಜೆಯ ವೇಳೆ ಉದ್ಯೋಗಿಗಳು, ಮಹಿಳೆಯರು ಮತ್ತು ಶಾಲಾ-ಕಾಲೇಜಿಗೆ ತೆರಳೋ ವಿದ್ಯಾರ್ಥಿಗಳು ಈ ರೈಲಿನ ಅಡಿಭಾಗ ಇಲ್ಲವೇ, ಮೇಲ್ಬಾಗವನ್ನ ಹತ್ತಿ ಇಳಿದು ರಸ್ತೆ ದಾಟಬೇಕಿದೆ. ಆಚೆ ಕಡೆ ಇರೋ ಮನೆಗೆ ಕಟ್ಟಿಗೆ ಇಲ್ಲವೇ ಯಾವುದಾದ್ರೂ ಅಗತ್ಯ ವಸ್ತುಗಳನ್ನು ‌ಸಾಗಿಸಬೇಕಾದ್ರೂ ಈ ರೈಲಿನ ಅಡಿಭಾಗದಲ್ಲೇ ಮಹಿಳೆಯರು ಸರ್ಕಸ್ ಮಾಡಿಕೊಂಡೇ ಸಾಗಬೇಕು. ಇನ್ನು ದಿನದ ಬಹುತೇಕ ಸಮಯ ಈ ಗೂಡ್ಸ್ ರೈಲುಗಳು ಬಂದು ರಸ್ತೆಗೆ ಅಡ್ಡಲಾಗಿ ಈ ಟ್ರ್ಯಾಕ್ ಮೇಲೆ ನಿಲ್ಲುತ್ತೆ. ಯಾವುದಾದ್ರೂ ವಾಹನಗಳಲ್ಲಿ ವಸ್ತುಗಳನ್ನು ಸಾಗಿಸಬೇಕಾದ್ರೆ ರೈಲು ಹೋಗೋವರೆಗೂ ಕಾಯಬೇಕಾದ ಅನಿವಾರ್ಯತೆಯಿದೆ. ಇ‌ನ್ನು ಇಲ್ಲಿ ರೈಲು ಯಾವಾಗ ಬರುತ್ತೆ,‌ ಯಾವಾಗ ಹೋಗುತ್ತೆ ಅನ್ನೋದು ಕೂಡ ಗೊತ್ತಾಗಲ್ಲ. ಬಹುತೇಕ ಅವಧಿಯಲ್ಲಿ ರೈಲು ಹೀಗೆ ನಿಲ್ಲೋದ್ರಿಂದ ಜನರ ಬದುಕು ನರಕಯಾತನೆಯಾಗಿದೆ. ಒಟ್ಟಾರೆ ಅನ್ಯ ದಾರಿಯಿಲ್ಲದೇ ರಸ್ತೆ ದಾಟೋಕೆ ಇಲ್ಲಿನ ಜನರಿಗೆ ಸರ್ಕಸ್ ಅನಿವಾರ್ಯ. ಇದರಿಂದ ಬಟ್ಟೆ ಹರಿದಿದ್ದೂ ಇದೆ, ಗಾಯವಾಗಿದ್ದೂ ಇದೆ....ಆದ್ರೆ ಸಮಸ್ಯೆ ಮಾತ್ರ ಇತ್ಯರ್ಥವಾಗಲೇ ಇಲ್ಲ..