Jul 29, 2022, 10:36 PM IST
ದಕ್ಷಿಣ ಕನ್ನಡ (ಜು. 29): ಸುಳ್ಯ ಹಾಗೂ ಸುರತ್ಕಲ್‌ನಲ್ಲಿ ನಡೆದಿರುವ ಸರಣಿ ಹತ್ಯೆಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಖಾಕಿ ಹದ್ದಿನ ಕಣ್ಣಿಟ್ಟಿದ್ದು, ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಜು.29ರಿಂದ ಆ.6ರ ಮಧ್ಯರಾತ್ರಿ 12 ಗಂಟೆಯವರೆಗೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಗುಪ್ತಚರ ಇಲಾಖೆ ಪ್ರಕಾರ ಮೂರು ದಿನ ಕಠಿಣ ಪರಿಸ್ಥಿತಿ ಇದೆ. ಹೀಗಾಗಿ, ದಕ್ಷಿಣ ಕನ್ನಡದಲ್ಲಿ ಸಂಜೆ 6ರಿಂದ ಬೆಳಗ್ಗೆ 6 ಗಂಟೆವರೆಗೆ ಅಂಗಡಿ ಮುಂಗಟ್ಟು ಬಂದ್ ಮಾಡುವ ಆದೇಶ ಹೊರಡಿಸಲಾಗಿದೆ. ಮೆಡಿಕಲ್, ಆಸ್ಪತ್ರೆ ಸೇರಿ ಅತ್ಯಗತ್ಯ ಸೇವೆಗಳಿಗೆ ಮಾತ್ರ ನಿರ್ಬಂಧವಿಲ್ಲ. ಇನ್ನು ರಾತ್ರಿ ಸಿನಿಮಾ ಶೋ, ಸಾರ್ವಜನಿಕ ಸಭೆ ಸಮಾರಂಭಗಳಿಗೂ ನಿರ್ಬಂಧ ಹಾಕಲಾಗಿದೆ. ಅಗತ್ಯ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದೆ. ರಾತ್ರಿ ಅಗತ್ಯ ಪ್ರಯಾಣ ಮಾಡುವವರು ಟಿಕೆಟ್ ತೋರಿಸಬೇಕು. ಈಗಾಗಲೇ ವಿಧಿಸಿದ್ದ 144 ಸೆಕ್ಷನ್ ಆಗಸ್ಟ್ 6ರವರೆಗೆ ವಿಸ್ತರಿಸಲಾಗಿದೆ.
ಕೊಲೆಗಡುಕರ ಎನ್‌ಕೌಂಟರ್‌ಗೆ ಸರ್ಕಾರ ಸಿದ್ಧ: ಅಶ್ವತ್ಥ್ ನಾರಾಯಣ್
ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆಗೆ ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ADGP ಅಲೋಕ್ ಕುಮಾರ್, ಡಿಸಿ ಡಾ.ಕೆ.ವಿ.ರಾಜೇಂದ್ರ, ಕಮಿಷನರ್ ಶಶಿಕುಮಾರ್ ನೇತೃತ್ವದಲ್ಲಿ ನಡೆಯೋ ಸಭೆಯಲ್ಲಿ ಜಿಲ್ಲೆಯ ಧಾರ್ಮಿಕ ಮುಖಂಡರು ಭಾಗಿಯಾಗಲಿದ್ದಾರೆ. ಮಂಗಳೂರಲ್ಲಿ ಶಾಂತಿ ಸ್ಥಾಪನೆಗೆ ಜಿಲ್ಲಾಡಳಿತ, ಪೊಲೀಸರು ಹರಸಾಹಸ ಪಡ್ತಿದ್ದಾರೆ. ಖಾಕಿ ಕೋಟೆಯನ್ನೇ ಹೆಣೆಯಲಾಗಿದೆ. ಇತ್ತ ಬೆಂಗಳೂರಲ್ಲೂ ಖಾಕಿ ಅಲರ್ಟಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ.