ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಫೆಂಗಲ್ ಚಂಡಮಾರುತದಿಂದಾಗಿ ಕರ್ನಾಟಕದಲ್ಲಿ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರು (ನ.30): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಫೆಂಗಲ್ ಚಂಡಮಾರುತದ ಕಾರಣದಿಂದಾಗಿ ರಾಜ್ಯದಲ್ಲಿ ಇಂದಿನಿಂದ 4 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಶನಿವಾರ ಕೋಲಾರ, ಚಿಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ತುಮಕೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. ಅದರೊಂದಿಗೆ ಕರಾವಳಿ ಕರ್ನಾಟಕ, ಉತ್ತರ ಒಳ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂಧು ತಿಳಿಸಿದೆ.
ಉತ್ತರ ಆಂತರಿಕ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಲಿದ್ದು, ಬೆಂಗಳೂರು ನಗರದಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ. ಶನಿವಾರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 25 ಮತ್ತು 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ.
ತಮಿಳುನಾಡಲ್ಲಿ ಫೆಂಗಲ್ ಚಂಡಮಾರುತ; ಕರ್ನಾಟಕದಲ್ಲೂ ಭಾರೀ ಮಳೆ ಅಲರ್ಟ್!
ಫೆಂಗಲ್ ಚಂಡಮಾರುತವು ಚೆನೈನಿಂದ ಅಗ್ನೇಯ ದಿಕ್ಕಿನೆಡೆ 250ಕಿ.ಮೀ ದೂರಲ್ಲಿದ್ದು, ಈ ಚಂಡಮಾರುತವು ಚೆನ್ನೈ ಹಾಗೂ ಪುದುಚೇರಿ ಕರಾವಳಿ ಭಾಗದಲ್ಲಿ ಇಂದು ಸಂಜೆ ಹಾದು ಹೋಗಲಿದೆ. ಗಾಳಿಯ ವೇಗವು ಗಂಟೆಗೆ 70-80 km ಇರಲಿದೆ. ಇದರ ಪರಿಣಾಮ ಇಂದು ಮತ್ತು ನಾಳೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಗುರ ಮಳೆಯಾಗಲಿದೆ. ಡಿಸೆಂಬರ್ 2 ಹಾಗೂ 3ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಹೀಗಾಗಿ ಡಿಸೆಂಬರ್ 3ರಂದು ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಬೆಂಗಳೂರಲ್ಲಿ ಕನಿಷ್ಟ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.