ನನ್ನ ಜನರಿಗೆ ಅನ್ಯಾಯವಾದಾಗ ನಾನು ರೆಬಲ್ ಆಗಲೇಬೇಕು. ಅದು ನನ್ನ ಸ್ವಭಾವ. ರೆಬಲ್ ಅನ್ನೋದೇ ನನಗೆ ಸಚಿವ ಸ್ಥಾನವಿದ್ದಂತೆ ಎಂದ ಶಾಸಕ ರಮೇಶ ಜಾರಕಿಹೊಳಿ
ಗೋಕಾಕ(ನ.30): ವಿದ್ಯಾರ್ಥಿ ಜೀವನದಿಂದ ರಾಜಕಾರಣ ಮಾಡುತ್ತ ಬಂದಿದ್ದು, 25 ವರ್ಷಗಳಿಂದ ಶಾಸಕನಾಗಿದ್ದೇನೆ. ನನ್ನ ಜನರಿಗೆ ಅನ್ಯಾಯವಾದಾಗ ನಾನು ರೆಬಲ್ ಆಗಲೇಬೇಕು. ಅದು ನನ್ನ ಸ್ವಭಾವ. ರೆಬಲ್ ಅನ್ನೋದೇ ನನಗೆ ಸಚಿವ ಸ್ಥಾನವಿದ್ದಂತೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿದ ರಾಜಋಷಿ ಶ್ರೀ ಭಗೀರಥರ ಮೂರ್ತಿ ಅನಾವರಣ ಕಾರ್ಯಕ್ರಮ ಹಾಗೂ ಶುಕ್ರವಾರ ಆಯೋಜಿಸಿದ್ದ ಜಗದ್ಗುರು ಶ್ರೀ ಪುರುಷೋತ್ತಮಾ ನಂದಪುರಿ ಮಹಾಸ್ವಾಮಿಗಳ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ಪಕ್ಷದಲ್ಲೂ ಅನ್ಯಾಯ ಆಗಿದೆ. ಬಿಜೆಪಿ ಕೆಲ ಮುಖಂಡರಿಂದಲೂ ಅನ್ಯಾಯವಾಗಿದೆ. ನನ್ನದು ಹೋರಾಟದ ಬದುಕು ಎಂದರು.
ಕಾಂಗ್ರೆಸ್ ಸರ್ಕಾರ ಬೀಳಿಸೋದಾಗಿದ್ರೆ ನಾನೇ ನೇತೃತ್ವ ವಹಿಸ್ತಿದ್ದೆ: ರಮೇಶ ಜಾರಕಿಹೊಳಿ
ಹಿಂದುಳಿದ ಜನಾಂಗಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಹಿಂದುಳಿದ ಜನಾಂಗ ಸುಮಾರು ಶೇ.70ಕ್ಕಿಂತ ಹೆಚ್ಚಿದ್ದು, ಅವರಿಗೆ ಸಿಗಬೇಕಾದ ಮೀಸಲಾತಿ ಸಿಗುತ್ತಿಲ್ಲ. ಅದರ ಬಗ್ಗೆ ಈಗಾಗಲೇ ಶ್ರೀಗಳ ಸಮ್ಮುಖದಲ್ಲಿ ಚರ್ಚಿಸಿದ್ದೇನೆ. ಅವರೆಲ್ಲರ ಮಾರ್ಗದರ್ಶನ ಪಡೆದು ಬೃಹತ್ ಹೋರಾಟ ಆಯೋಜಿಸಲಾಗುವುದು ಎಂದು ವಿರೋಧ ಪಕ್ಷದಲ್ಲಿದ್ದಾಗ ಬೇರೆ ಮಾತಾಡುತ್ತಾರೆ. ಅಧಿಕಾರಕ್ಕೆ ಬಂದಾಗ ಮಾತನಾಡಿದ್ದನ್ನು ಕಾರ್ಯ ರೂಪಕ್ಕೆ ತರುವುದಿಲ್ಲ, ನಾವು ನೋಡಿದ ಒಳ್ಳೆಯ ರಾಜಕಾರಣಿ ಮಾಜಿ ಸಿಎಂ ಬಂಗಾರಪ್ಪನವರು. ಅವರಂತೆ ನಾನು ನುಡಿದಂತೆ ನಡೆಯುತ್ತಿದ್ದೇನೆ. ಹಿಂದುಳಿದ ವರ್ಗಗಳು ಎಸ್ಪಿಗೆ ಸೇರಲು ಅರ್ಹತೆ ಹೊಂದಿವೆ. ಎಸ್ಪಿಗೆ ಸೇರಲು ನಾವು ವಿರೋಧ ಮಾಡಲ್ಲ, ಈಗಿರುವ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಹೊಸದುರ್ಗ ಬ್ರಹ್ಮ ವಿದ್ಯಾನಗರ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತ ಬಂದಿರುವ ಜಾರಕಿಹೊಳಿ ಸಹೋದರರು ಗೋಕಾಕ ನಗರದಲ್ಲಿ ಎಲ್ಲ ಸಮುದಾಯಗಳ ಮಹಾತ್ಮರ ವೃತ್ತಗಳಲ್ಲಿ ಪುತ್ಥಳಿಗಳನ್ನು ಸ್ಥಾಪಿಸಿದ್ದಾರೆ. ಅದರಂತೆ ಗೋಕಾಕ ನಗರದ ಹೆಬ್ಬಾಗಿಲಿನಂತಿರುವ ಮಾಲದಿನ್ನಿ ಕ್ರಾಸ್‌ನಲ್ಲಿ ಭಗೀರಥ ಪುತ್ಥಳಿ ಲೋಕಾರ್ಪಣೆ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಮೇಲೆ ಅತೀವ ಪ್ರೀತಿಯನ್ನು ಹೊಂದಿರುವ ಅವರು ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟ ಮಾಡಲು ಮುಂದಾಗಿದ್ದು ಸಂತಸದ ವಿಷಯ. ಅವರ ಹೋರಾಟಕ್ಕೆ ನಾವು ಬೆನ್ನು ಕೊಡಲು ಸದಾ ಸಿದ್ದರಿದ್ದೇವೆ ಎಂದು ತಿಳಿಸಿದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಸಾ ನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಸಂಘಟನೆಗೆ ರಾಜ್ಯಾದ್ಯಂತ ಸಂಚರಿಸಿ ಸಮಾಜದ ಅಭಿವೃದ್ಧಿಗೆ ಡಾ.ಪುರುಷೋತ್ತಮಾನಂದಪುರಿ ಶ್ರೀಗಳು ಶ್ರಮಿ ಸುತ್ತಿದ್ದಾರೆ. ಉಪ್ಪಿನ ಮಹತ್ವವನ್ನು ಸಾರಿದ ಸಮಾಜ ಉಪ್ಪಾರ ಸಮಾಜ. ಈ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಬೇಕಿದೆ ಎಂದು ನುಡಿದರು.
ಅಂಕಲಗಿ-ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮಿಜಿ ಮಾತನಾಡಿ, ಗೋಕಾಕ ಜಿಲ್ಲೆಯನ್ನಾಗಿ ಮಾಡಲು ಜಾರಕಿಹೊಳಿ ಸಹೋದರರು ಶ್ರಮಿಸುತ್ತಿದ್ದಾರೆ. ಈ ಗೋಕಾವಿ ನಗರಕ್ಕೆ ಬರಲು ಮಾಲದಿನ್ನಿಕ್ರಾಸ್ ಹೆಬ್ಬಾಗಿಲು, ಈ ಹೆಬ್ಬಾಗಲ ಪವಿತ್ರ ಗಂಗೆಯನ್ನು ಧರೆಗಿಳಿಸಿದ ರಾಜಋಷಿ ಶ್ರೀ ಭಗೀರಥರ ಪುತ್ಥಳಿಯನ್ನು ಸ್ಥಾಪಿಸಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಭಗೀರಥರ ದರ್ಶನ ಭಾಗ್ಯ ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಥಣಿಯ ಕವಲಗುಡ್ಡದ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಉಪ್ಪಾರಹಟ್ಟಿಯ ಶ್ರೀನಾಗೇಶ್ವರ ಮಹಾಸ್ವಾಮಿಗಳು ಮಾತನಾಡಿದರು.
ವೇದಿಕೆಯ ಮೇಲೆ ಹೂಲಿಕಟ್ಟಿಯ ಶಿವಲಿಂಗೇಶ್ವರ ಕುಮಾರ ದೇವರು, ಕಟಕಭಾಂವಿಯ ಅಭಿನವ ಧರೇಶ್ವರ ಮಹಾಸ್ವಾಮಿಗಳು, ಮಾಲದಿನ್ನಿಯ ಅಡವಿಸಿದ್ದೇಶ್ವರ ಮಹಾಸ್ವಾಮಿಗಳು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಕಾರ್ಯನಿರತ ಪತ್ರಕರ್ತರ ಸಂಘ ಗೌರವಾಧ್ಯಕ್ಷಹಾಗೂಯುವನಾಯಕಸರ್ವೋತ್ತಮ ಜಾರಕಿಹೊಳಿ ಉಪಸ್ಥಿತರಿದ್ದರು. ಶಾಮಾನಂದ ಪೂಜೇರಿ ಸ್ವಾಗತಿಸಿದರು. ಎ.ಜಿ.ಕೋಳಿ ನಿರೂಪಿಸಿದರು. ಪರಸಪ್ಪ ಬಬಲಿ ವಂದಿಸಿದರು.
ಹುಲಿಯಂತಿದ್ದ ಸಿದ್ದು ಈಗ ಇಲಿ ಆಗಿದ್ದಾರೆ, ಅವರ ಈಗಿನ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತೆ: ಜಾರಕಿಹೊಳಿ
ಹೊಸದುರ್ಗದ ಪುರುಷೋತ್ತಮಾನಂದ ಶ್ರೀಗಳು ಹಾಗೂ ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಸೇರಿ ಹಿಂದುಳಿದ ವರ್ಗಗಳ ಮಠಾಧೀಶರು ಸಂಕಷ್ಟ ಸಮಯದಲ್ಲಿ ನನ್ನ ಮನೆಗೆ ಬಂದು ಸಂತೈಸುವ ಕೆಲಸ ಮಾಡಿದರು. ಆಗ ಎಲ್ಲ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿ ನಾನು ಹೆದರುವುದಿಲ್ಲ ಎಂದು ಹೇಳಿದೆ. ಹಿಂದುಳಿದವರಿಗೆ ಅನ್ಯಾಯವಾಗಲು ಯಾವತ್ತೂ ಬಿಡುವುದಿಲ್ಲ, ನಾನು ಹೋರಾಟದ ಮೂಲಕ ಹಿಂದುಳಿದ 15 ಲಕ್ಷಕ್ಕೂ ಜನರನ್ನು ಸೇರಿಸಿ ಪ್ರತಿಭಟಿಸುವೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಶಕ್ತಿ ತುಂಬುವ ಕೆಲಸ ಮಾಡುತ್ತ ಬಂದಿರುವ ಜಾರಕಿಹೊಳಿ ಕುಟುಂಬದ ಶಕ್ತಿ ರಾಜ್ಯಕ್ಕೆ ಗೊತ್ತಿದೆ. ರಾಜ್ಯವನ್ನು ಆಳಲು ಸಮರ್ಥರಾಗಿದ್ದಾರೆ. ಅವರಲ್ಲಿ ರಮೇಶ್ ಜಾರಕಿಹೊಳಿ ಹೋರಾಟಗಾರ, ಅವರ ಹೋರಾಟಕ್ಕೆ ಯಾವತ್ತೂ ಗೆಲುವಿದೆ. ಅವರ ಕುಟುಂಬ ಸದಸ್ಯರು ಅತಿ ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದು ಹೊಸದುರ್ಗ ಬ್ರಹ್ಮ ವಿದ್ಯಾನಗರ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಹೇಳಿದ್ದಾರೆ.