Mar 31, 2022, 12:23 PM IST
ಚಿತ್ರದುರ್ಗ(ಮಾ.31): ಗಣಿನಾಡು ಅಂದ್ರೆ ಸಾಕು ಮೊದ್ಲು ನೆನಪಿಗೆ ಬರೋದು ಬಳ್ಳಾರಿ ಜಿಲ್ಲೆ. ಆದ್ರೆ ಬಳ್ಳಾರಿಯನ್ನೆ ಮೀರಿಸುವಂತೆ ನಿಯಮಬಾಹಿರವಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ತಲೆ ಎತ್ತಿ ನಿಂತಿರೋ ಕಬ್ಬಿಣ ಗಣಿಗಾರಿಕೆ ವಿರುದ್ಧ ನ್ಯಾಯಾಧೀಶರೊಬ್ರು ಸಮರ ಸಾರಿದ್ದಾರೆ.
ನೋಡಿ ಹೀಗೆ ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿರುವ ಲಾರಿಗಳು. ಇಡೀ ಬೆಟ್ಟಕ್ಕೆ ಕೃತಕ ಹಸಿರು ಮ್ಯಾಟ್ ಹಾಕಿರೋ ಕಂಪನಿ. ನೂರಾರು ಅಡಿ ಆಳದ ಗಣಿಗಾರಿಕೆ ವೀಕ್ಷಣೆ ಮಾಡುತ್ತಿರೋ ನ್ಯಾಯಾಧೀಶರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದ ಭೀಮಸಮುದ್ರ ಗ್ರಾಮದ ಬಳಿ. ಹೌದು ಒಂದಲ್ಲ ಎರಡಲ್ಲ ಬರೋಬ್ಬರಿ 300 ರಿಂದ 400 ಅಡಿ ಆಳದವರೆಗೂ ಸುರುಳಿ ಸುರುಳಿ ಆಕಾರದಲ್ಲಿ ನಡೆಯುತ್ತಿರೋ ಕಬ್ಬಿಣದ ಗಣಿಗಾರಿಕೆಯನ್ನು ಖಾಸಗಿ ಗಣಿ ಕಂಪನಿಯೊಂದು ಯಾರ ಭಯವಿಲ್ಲದೇ ನಿಯಮ ಬಾಹಿರವಾಗಿ ನಡೆಸುತ್ತಿದೆ. ಆದ್ರೆ ಈ ವರೆಗೆ ಇಡೀ ಜಿಲ್ಲಾಡಳಿತ ಈ ಅಕ್ರಮದ ವಿರುದ್ಧ ಸೊಲ್ಲು ಎತ್ತದೇ ಮೌನ ವಹಿಸಿತ್ತು. ಹೀಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರಾದ ಗಿರೀಶ್ ಅವರು, ಗಣಿ ಪ್ರದೇಶಕ್ಕೆ ಕೇವಲ ಭೇಟಿ ನೀಡಿದ್ದಷ್ಟೇ ಅಲ್ಲ ಸರ್ಕಾರದ ಕಾನೂನು ಹಾಗು ನಿಯಮ ಮೀರಿ ಎಗ್ಗಿಲ್ಲದೆ ನಡೆಯುತ್ತಿರೋ ಗಣಿಗಾರಿಕೆಯನ್ನು ಪ್ರಶ್ನೆ ಮಾಡಿದ್ದಾರೆ. ಕೇವಲ 166 ಎಕರೆ ಪ್ರದೇಶದಲ್ಲಿ ಅನುಮತಿ ಪಡೆದು, 500 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಗಣಿಗಾರಿಕೆ ವಿಸ್ತರಣೆ ಪಡೆದಿದ್ದು ಹೇಗೆಂದು ಪ್ರಶ್ನಿಸಿದ್ದಾರೆ. ಈ ಪರಿ ಭೂತಾಯಿಯ ಗರ್ಭಪಾತ ಮಾಡ್ತಿರೋದು ಯಾಕೆಂದು ಜಿಲ್ಲಾಡಳಿತಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. ಈ ನಡೆ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗು ಗಣಿಗಾರಿಕೆ ಮಾಲಿಕರ ಎದೆ ನಡುಗುವಂತೆ ಮಾಡಿದೆ.
ಕಾಡಾನೆ ಹಾವಳಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆಯಿಂದ Operation Elephant
ಇನ್ನು ಭೀಮಸಮುದ್ರ ಗ್ರಾಮದಿಂದ ಗಣಿಗಾರಿಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಬರೋಬ್ಬರಿ ಐದು ಕಿಲೋಮೀಟರ್ ಹಾದುಹೋಗಿರುವ ರಸ್ತೆ ನರಕಕ್ಕೆ ಸಮ ಎನ್ನುವಂತಾಗಿದೆ. ಅಕ್ಕಪಕ್ಕದ ಜಮೀನು ಗಳ ರೈತರಿಗೆ ಈ ಗಣಿಗಾರಿಕೆ ಕಂಟಕವಾಗಿದೆ. ಅಂತರ್ಜಲ ಕುಸಿಯುತ್ತಿದೆ. ಅಲ್ಲದೇ ದಟ್ಟ ಅರಣ್ಯ, ವನ್ಯಜೀವಿ ಎನ್ನುವುದನ್ನು ಲೆಕ್ಕಿಸದೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಲು ಬೃಹತ್ ಬೆಟ್ಟಕ್ಕೆ ಹಸಿರು ಕೃತಕ ಮ್ಯಾಟ್ ಹಾಕಿ ಪಂಗನಾಮ ಹಾಕಿರೋ ಅನುಮಾನ ಮೂಡಿದೆ. ಹೀಗಾಗಿ, ಸ್ಥಳೀಯ ಗ್ರಾಮಸ್ಥರು ಈ ನರಕದಿಂದ ನಮಗೆ ಮುಕ್ತಿ ಯಾವಾಗೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಗಣಿಗಾರಿಕೆ ಜಾಗಕ್ಕೆ ಅಧಿಕಾರಿಗಳು ಕಾಲಿಡುವುದಷ್ಟೇ ಅಲ್ಲ, ಮಾತನಾಡಲು ಸಹ ಹಿಂದೇಟು ಹಾಕ್ತಿದ್ರು. ಆದ್ರೆ ಜಿಲ್ಲಾ ನ್ಯಾಯಾಧೀಶರೊಬ್ಬರು ಸಾಮಾಜಿಕ ಕಾಳಜಿಯಿಂದಾಗಿ ಖಾಸಗಿ ಗಣಿ ಕಂಪನಿ ವಿರುದ್ಧ ಜಿಲ್ಲಾಡಳಿತಕ್ಕೆ ಪತ್ರ ಬರೆದು ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯರಲ್ಲಿ ಬಾರಿ ಸಂಚಲನ ಮೂಡಿಸಿದೆ. ಈ ಕಾರ್ಯ ಇಷ್ಟಕ್ಕೆ ನಿಲ್ಲುತ್ತಾ ಅಥವಾ ಜಿಲ್ಲಾಡಳಿತ ಈ ಅಕ್ರಮಕ್ಕೆ ಬ್ರೇಕ್ ಹಾಕುತ್ತಾ ಅನ್ನೋದನ್ನ ಕಾದುನೋಡಬೇಕಿದೆ.