ಕಾಡಾನೆ ಹಾವಳಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆಯಿಂದ Operation Elephant

- ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಕಾಡಾನೆಗಳ ಹಾವಳಿ ಜೋರು

- ಡಿಜೆ ಸಿಸ್ಟಮ್, ಮತ್ತಿತರ ಪ್ರಯೋಗ ಮಾಡಿದರೂ ಆನೆ ಕಾಟ ತಪ್ಪಿದ್ದಲ್ಲ 

- ಕಾಡಾನೆ ಹಾವಳಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆಯಿಂದ ಆಪರೇಷನ್ ಎಲಿಫೆಂಟ್
 

First Published Mar 31, 2022, 11:42 AM IST | Last Updated Mar 31, 2022, 11:50 AM IST

 ಚಿಕ್ಕಮಗಳೂರು (ಮಾ. 31):  ಕೆಲ ಬಯಲುಸೀಮೆ ಭಾಗ ಹಾಗೂ ಬಹುತೇಕ ಮಲೆನಾಡು ಭಾಗ ಕಳೆದೊಂದು ದಶಕಗಳಿಂದ ಆನೆ ಹಾವಳಿಗೆ ಹೈರಾಣಗಿದ್ದಾರೆ. ಅದರಲ್ಲೂ ಮೂಡಿಗೆರೆ ತಾಲೂಕಿನಲ್ಲೇ ಹೆಚ್ಚು. ಮೂಡಿಗೆರೆಯ ಸಾರಗೋಡು, ಕೆಳಗೂರು, ಆಲ್ದೂರು ಸೇರಿದಂತೆ ಹತ್ತಾರು ಹಳ್ಳಿಯ ಜನ ಆನೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಆದ್ರೆ, ಕಳೆದ ಎರಡ್ಮೂರು ವರ್ಷಗಳಿಂದ ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತವೂ ಆನೆ ಹಾವಳಿ ಮಿತಿ ಮೀರಿದೆ. 
ನಗರಕ್ಕೂ ಭೇಟಿ ನೀಡಿದ್ದ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್ ಮಾಡಿದ್ದವು. ಈ ಮಧ್ಯೆ ಕಳೆದ ಎರಡು ತಿಂಗಳಿಂದ ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿಯಲ್ಲಿ ಒಂಟಿ ಸಲಗದ ಕಾಟ ಹೆಚ್ಚಿತ್ತು. ದಿನಬಿಟ್ಟು ದಿನ ನಡೆಸುತ್ತಿದ್ದ ದಾಂಧಲೆಗೆ ರೈತರು ಹೊಲಗದ್ದೆಗಳಿಗೆ ಹೋಗುವುದನ್ನೇ ಬಿಟ್ಟಿದ್ದರು. ಕೆಲ ತೋಟದ ಮಾಲೀಕರು ತೋಟದಲ್ಲಿ ಡಿಜೆ ಸಿಸ್ಟಮ್ ಇಟ್ಟು ಆನೆ ಹಾವಳಿ ಬ್ರೇಕ್ ಹಾಕೋದಕ್ಕೆ ಮುಂದಾಗಿದ್ದರು. ಆದರೆ, ಸಲಗದ ಕಾಟ ನಿಲ್ಲಲಿಲ್ಲ. ಹಾಗಾಗಿ, ಸಾವು-ನೋವು ಸಂಭವಿಸಬಾರದು ಎಂದು ಅರಣ್ಯ ಇಲಾಖೆ ಸಾಕಾನೆಗಳನ್ನ ತಂದು ಒಂಟಿ ಸಲಗದ ಕಾರ್ಯಚಾರಣೆಗೆ ಮುಂದಾಗಿದೆ.

ಮಲೆನಾಡಿನಲ್ಲೂ ಸುತ್ತಲೂ ಅರಣ್ಯ ಪ್ರದೇಶ ಅಕ್ಕಪಕ್ಕವೇ ಅಡಿಕೆ, ಕಾಫಿ ತೋಟಗಳೆ ಹೆಚ್ಚು. ಹೀಗಾಗಿ  ಆನೆ ಹಾವಳಿಯನ್ನ ನಿಯಂತ್ರಿಸೋದು ಕಷ್ಟ ಸಾಧ್ಯ. ಎರಡು ದಿನಗಳ ಹಿಂದಷ್ಟೆ ಆಲ್ದೂರು ಗ್ರಾಮದ ಬಳಿ ಕಾಫಿ ತೋಟದಲ್ಲಿ ಮೆಣಸು ಕೊಯ್ಯುತ್ತಿದ್ದ ಮಹಿಳೆಯನ್ನ ಆನೆ ತುಳಿದು ಸಾಯಿಸಿ, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಈ ಬೀಕನಹಳ್ಳಿ ಕೂಡ ಕಾಡಂಚಿನ ಗ್ರಾಮವಾಗಿರೋದ್ರಿಂದ ನಾಳೆ ಮತ್ತೊಂದು ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳೋಣ ಎಂದು ಅರಣ್ಯ ಇಲಾಖೆ ಮೈಸೂರಿನ ಅಂಬಾರಿ ಹೊರುವ ಸಾಕಾನೆ ಅರ್ಜುನ ಹಾಗೂ ಭೀಮನನ್ನ ಕರೆಸಿ, ಕಾಡಿನ ಒಂಟಿ ಸಲಗದ ಅಬ್ಬರಕ್ಕೆ ಬ್ರೇಕ್ ಹಾಕಿ ಕಾಡಿಗಟ್ಟಲು ಮುಂದಾಗಿದ್ದಾರೆ.

Chikkamagaluru: ಕಾಡಾನೆಗಳ ಬಿಂದಾಸ್ ರೌಂಡ್ಸ್, ರೈತರಿಗೆ ತೋಟ, ಗದ್ದೆಗಳಿಗೆ ಹೋಗಲು ಆತಂಕ!

ಕಾರ್ಯಾಚರಣೆಯಲ್ಲಿ ಸುಮಾರು 60 ಸಿಬ್ಬಂದಿಗಳು ಭಾಗಿಯಾಗಿದ್ದು, ಒಂದೆರಡು ದಿನದಲ್ಲಿ ಒಂಟಿ ಸಲಗವನ್ನ ಕಾಡಿಗಟ್ಟಲಿದ್ದಾರೆ. ಬೀಕನಹಳ್ಳಿ ಕಾಡಂಚಿನ ಗ್ರಾಮವಾಗಿದ್ದು ಆನೆ ಹಾವಳಿ ಹೆಚ್ಚಿತ್ತು. ಬಾಳೆ-ಅಡಿಕೆ-ತೆಂಗು, ಕಾಫಿ-ಮೆಣಸು, ಭತ್ತ ಬೆಳೆದಿದ್ದು ರೈತರು ಅರ್ಧ ಕಳೆದುಕೊಂಡಿದ್ದರು. ಇದೀಗ, ಒಂಟಿ ಸಲಗವನ್ನು ಸಾಕಾನೆ ಮೂಲಕ ಕಾಡಿಗಟ್ಟಲು ಮುಂದಾಗಿರೋ ಇಲಾಖೆಯ ಕ್ರಮಕ್ಕೆ ಹಳ್ಳಿಗರು ಸಂತಸ ವ್ಯಕ್ತಪಡಿಸಿದ್ದು ಪರಿಸರವಾದಿಗಳು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ.
 
ಒಟ್ಟಾರೆ, ಆನೆಗಳಿಂದಾಗ್ತಿರೋ ಬೆಳೆಹಾನಿ ಹಾಗೂ ಪ್ರಾಣಹಾನಿಯನ್ನ ತಪ್ಪಿಸಿಕೊಳ್ಳಲು ಜನ ಕಷ್ಟಪಡ್ತಿದ್ದಾರೆ. ಕಾಡಂಚಿನ ಗ್ರಾಮಗಳ ಹಳ್ಳಿಗರು ಪ್ರಾಣಕ್ಕೂ ಆಪತ್ತು ಉಂಟಾಗಿದೆ. ಬದುಕು ಕಟ್ಟಿಕೊಡುವ ಕಾಫಿ ತೋಟಗಳು ಕೂಡ ಕಾರ್ಮಿಕರ ಪಾಲಿಗೆ ಜೀವ ಸ್ಥಳವಾಗುತ್ತಿದೆ. ಎರಡು ದಿನದ ಹಿಂದಷ್ಟೆ ಮಹಿಳೆ ಕಾಫಿತೋಟದಲ್ಲಿ ಆನೆ ದಾಳಿಗೆ ತುತ್ತಾಗಿದ್ದಾಳೆ. ಎಲ್ಲವನ್ನು ಮನಗಂಡಿರೋ ಅರಣ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಒಂಟಿ ಸಲಗದ ಕಾರ್ಯಚರಣೆಗೆ ಇಳಿದುರವುದು ಸ್ವಾರ್ಗರ್ಹವೇ ಸರಿ