'ಗೆದ್ದಾಗ ಸರಿ, ಸೋತಾಗ ಸರಿಯಿರಲ್ವ..' ಇವಿಎಂಗೆ ಗ್ರೀನ್‌ ಸಿಗ್ನಲ್‌ ನೀಡಿದ ಸುಪ್ರೀಂ ಕೋರ್ಟ್‌

By Kannadaprabha News  |  First Published Nov 27, 2024, 10:26 AM IST

ಚುನಾವಣೆಗಳಲ್ಲಿ ಇವಿಎಂ ಬಳಕೆ ನಿಲ್ಲಿಸಿ, ಬ್ಯಾಲೆಟ್ ಪೇಪರ್‌ಗೆ ಮರಳಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಚುನಾವಣೆಯಲ್ಲಿ ಸೋತಾಗ ಮಾತ್ರ ರಾಜಕಾರಣಿಗಳು ಇವಿಎಂ ಸರಿಯಿಲ್ಲ ಎಂದು ಆರೋಪಿಸುತ್ತಾರೆ ಎಂದು ಕೋರ್ಟ್‌ ಟೀಕಿಸಿದೆ.


ನವದೆಹಲಿ (ನ.27): ದೇಶದ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಬಳಕೆ ನಿಲ್ಲಿಸಬೇಕು ಮತ್ತು ಹಳೆಯ ಪೇಪರ್ ಬ್ಯಾಲೆಟ್ ಮತದಾನ ಪದ್ಧತಿಗೆ ಮರಳಲು ಆದೇಶ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ ಹಾಗೂ ‘ಚುನಾವಣೆಯಲ್ಲಿ ಸೋತಾಗ ಮಾತ್ರ ರಾಜಕಾರಣಿಗಳು ಇವಿಎಂ ಸರಿಯಿಲ್ಲ ಎಂದು ಆರೋಪಿಸುತ್ತಾರೆ’ ಎಂದು ಕಿಡಿಕಾರಿದೆ. ಅನಾಥರು ಹಾಗೂ ವಿಧವೆಯರ ರಕ್ಷಣೆಗಾಗಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತ ವಿ.ಕೆ. ಪೌಲ್‌ ಎಂಬುವರು 2 ವಿಷಯಗಳ ಬಗ್ಗೆ ಅರ್ಜಿ ಸಲ್ಲಿಸಿ, ‘ಇವಿಎಂ ಬಳಕೆ ನಿರ್ಬಂಧಿಸಬೇಕು ಹಾಗೂ ಚುನಾವಣೆ ವೇಳೆ ಹಣ, ಮದ್ಯ ಹಾಗೂ ಇತರ ವಸ್ತು ಹಂಚುವ ಅಭ್ಯರ್ಥಿಯನ್ನು ಸ್ಪರ್ಧೆಯಿಂದ 5 ವರ್ಷ ನಿಷೇಧಿಸಬೇಕು’ ಕೋರಿದ್ದರು.

ಈ ಅರ್ಜಿಯ ವಾದದ ವೇಳೆ ಪೌಲ್‌ ಅವರು, ‘ಇವಿಎಂ ಸರಿಯಿಲ್ಲ. ಅವನ್ನು ತಿರುಚಬಹುದು ಎಂದು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಹೇಳಿದ್ದರು’ ಎಂದು ವಾದಿಸಿದರು.

Latest Videos

undefined

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ಹಿಂದೆ ನಾಯ್ಡು ಸೋತಾಗ ಇವಿಎಂ ಸರಿಯಿಲ್ಲ ಎಂದಿದ್ದರು. ಆದರೆ ಇಂದು ನಾಯ್ಡು ಗೆದ್ದಿದ್ದಾರೆ ಹಾಗೂ ಜಗನ್‌ ಸೋತಿದ್ದಾರೆ. ಇಂದು ಜಗನ್‌ ಈ ಆರೋಪ ಮಾಡುತ್ತಿದ್ದಾರೆ. ಏನಾಗುತ್ತಿದೆ ಎಂದರೆ, ನೀವು ಚುನಾವಣೆಯಲ್ಲಿ ಗೆದ್ದಾಗ, ಇವಿಎಂ ಟ್ಯಾಂಪರಿಂಗ್ ಆಗಿರುವುದಿಲ್ಲ. ನೀವು ಚುನಾವಣೆಯಲ್ಲಿ ಸೋತಾಗ ಮಾತ್ರ ಟ್ಯಾಂಪರಿಂಗ್‌ ಆಗಿರುತ್ತವೆ. ಸೋತಾಗ ಮಾತ್ರ ಇವಿಎಂಗಳ ವಿರುದ್ಧ ಆರೋಪ ಕೇಳಿಬರುತ್ತವೆ’ ಎಂದು ನ್ಯಾ। ವಿಕ್ರಮ್ ನಾಥ್ ಮತ್ತು ನ್ಯಾ। ಪಿ.ಬಿ. ವರಾಳೆ ಅವರ ಪೀಠವು ಟೀಕಿಸಿತು.

ಇದೇ ವೇಳೆ ಅರ್ಜಿದಾರರಿಗೆ ಚಾಟಿ ಬೀಸಿದ ಪೀಠ, ‘ನಿಮ್ಮ ಬಳಿ ಆಸಕ್ತಿದಾಯಕ ಪಿಐಎಲ್‌ಗಳಿವೆ. ಈ ಅದ್ಭುತ ವಿಚಾರಗಳನ್ನು ನೀವು ಹೇಗೆ ಪಡೆಯುತ್ತೀರಿ?’ ಎಂದೂ ಕಿಚಾಯಿಸಿತು. ‘ನೀವು (ಅರ್ಜಿದಾರರು) 3 ಲಕ್ಷಕ್ಕೂ ಹೆಚ್ಚು ಅನಾಥರು ಮತ್ತು 40 ಲಕ್ಷ ವಿಧವೆಯರನ್ನು ರಕ್ಷಿಸಿದ ಸಂಸ್ಥೆಯ ಅಧ್ಯಕ್ಷರು ಎಂದು ಹೇಳಿಕೊಳ್ಳುತ್ತೀರಿ. ಆದರೆ ಈ ರಾಜಕೀಯ ಕ್ಷೇತ್ರಕ್ಕೆ ಏಕೆ ಬರುತ್ತಿದ್ದೀರಿ? ನಿಮ್ಮ ಕೆಲಸದ ಕ್ಷೇತ್ರವೇ ಬೇರೆ’ ಎಂದು ಮರುಪ್ರಶ್ನೆ ಹಾಕಿತು.

ಇದೇ ವೇಳೆ ಪೌಲ್‌ ಅವರು, ತಾವು 150 ದೇಶ ಸುತ್ತಿದ್ದಾಗಿ ಹೇಳಿದರು ಹಾಗೂ ಅಲ್ಲಿ ಇವಿಎಂ ಇಲ್ಲ. ಬ್ಯಾಲೆಟ್‌ ಪೇಪರ್ ಇದೆ ಎಂದು ವಾದಿಸಿದರು. ಇದಕ್ಕೆ ತಿರುಗೇಟು ನೀಡಿದ ಪೀಠ, ‘ಎಲ್ಲ ದೇಶಗಳಲ್ಲಿ ಇದ್ದಿದ್ದೇ ಇಲ್ಲೂ ಇರಬೇಕು ಎಂದು ಏಕೆ ಬಯಸುತ್ತೀರಿ? ನೀವು ಪ್ರಪಂಚದ ಇತರ ಭಾಗಗಳಿಗಿಂತ ಭಿನ್ನವಾಗಿರಲು ಏಕೆ ಬಯಸುವುದಿಲ್ಲ?’ ಎಂದು ಕೇಳಿತು.

ಇವಿಎಂ ವಿರುದ್ಧ ಭಾರತ್‌ ಜೋಡೋ ರೀತಿ ರ್‍ಯಾಲಿ: ಮಲ್ಲಿಕಾರ್ಜುನ ಖರ್ಗೆ

ಇನ್ನು, ‘ಚುನಾವಣೆ ವೇಳೆ ಭ್ರಷ್ಟಾಚಾರ ನಡೆದಿದೆ. 9000 ಕೋಟಿ ರು.ಗಳನ್ನು 2024ರ ಲೋಕಸಭೆ ಚುನಾವಣೆ ವೇಳೆ ವಶಪಡಿಸಿಕೊಂಡಿದ್ದಾಗಿ ಚುನಾವಣಾ ಆಯೋಗವೇ ಹೇಳಿದೆ’ ಎಂದು ಪೌಲ್‌ ಹೇಳಿದರು. ಆಗ ಪೀಠವು, ‘ಇವಿಎಂ ನಿರ್ಬಂಧಿಸಿ ಬ್ಯಾಲೆಟ್‌ ಪೇಪರ್‌ ಮರುಜಾರಿ ಮಾಡಿದರೆ ಭ್ರಷ್ಟಾಚಾರ ನಿಲ್ಲುತ್ತದೆಯೇ?’ ಎಂದು ಪೀಠ ಪ್ರಶ್ನಿಸಿತು.

ಶಬರಿಮಲೆಯ 18 ಪವಿತ್ರ ಮೆಟ್ಟಿಲು ಮೇಲೆ ನಿಂತು ಕೇರಳ ಪೊಲೀಸರ ಫೋಟೋಶೂಟ್‌!

click me!