Abetment to Suicide: ಬೆದರಿಕೆ ಹಾಕಿ ವ್ಯಕ್ತಿ ಆತ್ಮಹತ್ಯೆಗೆ ಕಾರಣವಾದ್ರಾ ಜಯನಗರ ಎಸಿಪಿ ಶ್ರೀನಿವಾಸ್?‌

Jan 27, 2022, 2:38 PM IST

ಬೆಂಗಳೂರು (ಜ. 27): ಬೆದರಿಕೆ ಹಾಕಿ ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಜಯನಗರ ಎಸಿಪಿ ಶ್ರೀನಿವಾಸ್‌ (Police) ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ  ರೇವಣಸಿದ್ದೇಶ್ವರ ಎಂಬುವವರು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಎಸಿಪಿ ವಿರುದ್ಧ ದೂರು ನೀಡಿದ್ದಾರೆ. ತಮ್ಮ ತಮ್ಮನಿಗೆ ಬೆದರಿಕೆ ಹಾಕಿ ಸಾವಿಗೆ ಎಸಿಪಿ ಕಾರಣವಾಗಿದ್ದಾರೆಂದು ರೇವಣಸಿದ್ದೇಶ್ವರ ಆರೋಪಿಸಿದ್ದಾರೆ. ಜನವರಿ 20ರಂದು ಈಶ್ವರ್‌ ಕುಮಾರ್‌ 14 ಪುಟಗಳ ಡೆತ್‌ ನೋಟ್‌ ಬರೆದಿಟ್ಟು ಕಗ್ಗಲಿಪುರದಲ್ಲಿ ನೇಣಿಗೆ ಶರಣಾಗಿದ್ದರು.

ಇದನ್ನೂ ಓದಿ: Suvarna Exclusive : ಪರಪ್ಪನ ಅಗ್ರಹಾರದಲ್ಲಿ ಗಾಂಜಾದ್ದೇ ಘಾಟು..  ಬೀಡಿ, ಸಿಗರೇಟ್‌ಗೆ ಡಬಲ್ ರೇಟು!

22 ವರ್ಷಗಳ ಹಿಂದೆ ಈಶ್ವರ್‌ ರಶ್ಮಿ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ವೈಮನಸ್ಸು ಉಂಟಾಗಿ ಗಂಡ ಹೆಂಡತಿ ದೂರವಾಗಿದ್ದರು. ಈ ಬೆನ್ನಲ್ಲೆ ಹೈದರಾಬಾದ್‌ನ ಪೋಷಕರ ಮನೆಗೆ ರಶ್ಮಿ ತೆರಳಿದ್ದರು. ಜ. 19ರಂದು ಈಶ್ವರ್‌ ಜಯನಗರದ ಕಚೇರಿಗೆ ಬಂದಿದ್ದರು. ಈ ವೇಳೆ ಡಿವೋರ್ಸ್‌ಗೆ ಸಹಿ ಹಾಕು ಇಲ್ಲದಿದ್ರೆ ಎಫ್‌ಐಆರ್ ಹಾಕುತ್ತೇನೆ ಎಂದು ಎಸಿಪಿ ತಿಳಿಸಿದ್ದರು ಅಲ್ಲದೇ ಎಚ್‌ಆರ್ ಕರೆಸಿ ವೃತ್ತಿಗೆ ಧಕ್ಕೆ ತರುತ್ತೇವೆ ಎಂದು ಬೆದರಿಸಿದ್ದರು ಎಂದು ಆರೋಪಿಸಲಾಗಿದೆ. ಈಶ್ವರ್‌ ಆತ್ಮಹತ್ಯೆ ಈಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.