ನಿಯಮದಂತೆ ರಾಜ್ಯಕ್ಕೆ ತರುವಂತಿಲ್ಲ, ದೆಹಲಿಯಲ್ಲೇ ಅಂಗಡಿ ಅಂತ್ಯಕ್ರಿಯೆ?

Sep 24, 2020, 10:27 AM IST

ಬೆಂಗಳೂರು(ಸೆ.24): ಕೇಂದ್ರ ಸಚಿವ ಸುರೇಶ್‌ ಅಂಗಡಿ ಅಂತ್ಯಕ್ರಿಯೆ ಬಹುತೇಕ ದೆಹಲಿಯಲ್ಲೇ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ಸುರೇಶ್‌ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಕರೆತರಲು ವ್ಯವಸ್ಥೆ ಮಾಡಿದ್ದರೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಲೋದಿ ಗಾರ್ಡನ್‌ ರಸ್ತೆಯಲ್ಲಿರುವ ಚಿತಾಗಾರದಲ್ಲೇ ಅಂತ್ಯಸಂಸ್ಕಾರ ನಡೆಸುವ ಉದ್ದೇಶಿಸಲಾಗಿದೆ.

ಕೋವಿಡ್‌ ನಿಯಮಾವಳಿ ಪ್ರಕಾರ ವ್ಯಕ್ತಿ ಮೃತಪಟ್ಟಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ನಿಯಮಾವಳಿ ಪ್ರಕಾರ ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಯುವ ನಿರೀಕ್ಷೆ ಇದೆ. ಈಗಾಗಲೇ ಅಂಗಡಿ ಪತ್ನಿ, ಕುಟುಂಬಸ್ಥರು ದೆಹಲಿಯಲ್ಲೇ ಇದ್ದು, ಅವರ ಮನವೊಲಿಸುವ ಕಾರ್ಯ ನಡೆಯುತ್ತಿದೆ.

ಈ ಮಧ್ಯೆ, ಮತ್ತೊಂದು ಕಡೆ ಅಂಗಡಿ ಅವರ ಪಾರ್ಥಿವ ಶರೀರವನ್ನು ಸ್ವಕ್ಷೇತ್ರಕ್ಕೆ ಕೊಂಡೊಯ್ಯಲು ಒಪ್ಪಿಗೆ ಪಡೆಯುವ ಪ್ರಯತ್ನವೂ ನಡೆಯುತ್ತಿದೆ. ಮೃತದೇಹವನ್ನು ಎಂಬಾಲ್ಮಿಂಗ್‌ ಮಾಡಿ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ತರುವ ಪ್ರಯತ್ನಕ್ಕೆ ರಾಜ್ಯ ಸರ್ಕಾರದಿಂದಲೂ ಒಪ್ಪಿಗೆ ಸಿಕ್ಕಿದೆ. ಆದರೆ, ಕೋವಿಡ್‌ ನಿಯಮಾವಳಿಯಿಂದ ಇದಕ್ಕೆ ಕೇಂದ್ರ ಒಪ್ಪಿಗೆ ನೀಡುವುದು ಅಸಾಧ್ಯ ಎನ್ನಲಾಗಿದೆ.