RIP Lata Mangeshkar: ಲತಾಜೀ ಕೇವಲ ಗಾಯಕಿಯಲ್ಲ, ಭಾರತದ ಆತ್ಮವಾಗಿದ್ದರು

Feb 6, 2022, 3:17 PM IST

ಮುಂಬೈ(ಫೆ.06) ಲತಾ ಮಂಗೇಶ್ಕರ್ ಅವರು 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ 8:12ಕ್ಕೆ ಲತಾ ಮಂಗೇಶ್ಕರ್ ಕೊನೆಯುಸಿರೆಳೆದಿದ್ದಾರೆ. ಸಂಜೆ 6 ಗಂಟೆಗೆ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಬಾಲಿವುಡ್ ಸೇರಿದಂತೆ ಇಡೀ ದೇಶದಲ್ಲಿ ಶೋಕಾಚರಣೆಯ ಅಲೆ ಎದ್ದಿದೆ. ಪ್ರಧಾನಿಯಿಂದ ರಾಷ್ಟ್ರಪತಿಗಳವರೆಗೆ ಮತ್ತು ವಿವಿಧ ಕ್ಷೇತ್ರಗಳ ವ್ಯಕ್ತಿಗಳು ಲತಾಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ದುಃಖವನ್ನು ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಎ. ಆಋf. ರಹಮಾನ್ ಲತಾ ಮಂಗೇಶ್ಕರ್ ಹಿಂದೂಸ್ತಾನಿ ಸಂಗೀತದ ಆತ್ಮ ಎನ್ನುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಲತಾಜಿಯವರ ಅಗಲುವಿಕೆ ಯಾವತ್ತೂ ಕಾಡಲಿದೆ

ಲತಾ ಮಂಗೇಶ್ಕರ್ ಅವರ ಸಾವಿನಿಂದ ಬಾಲಿವುಡ್ ಮಾತ್ರವಲ್ಲದೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ತೀವ್ರ ಆಘಾತಕ್ಕೊಳಗಾಗಿದ್ದಾರೆ. ‘ದಿಲ್ಸೆ’ ಚಿತ್ರದಲ್ಲಿ ಲತಾ ಮಂಗೇಶ್ಕರ್ ಜೊತೆ ಕೆಲಸ ಮಾಡಿದ್ದ ಎಆರ್ ರೆಹಮಾನ್ ಲತಾಜಿ ಕೇವಲ ಗಾಯಕಿ ಮತ್ತು ಐಕಾನ್ ಆಗಿರಲಿಲ್ಲ ಅವರು ಈ ದೇಶದ ಹಾಗೂ ಹಿಂದೂಸ್ತಾನಿ ಸಂಗೀತದ ಆತ್ಮವಾಗಿದ್ದರು. ಅವರ ಅನುಪಸ್ಥಿತಿ ಯಾವತ್ತೂ ಕಾಡಲಿದೆ. ನಾನು ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದೆ ಮತ್ತು ಲತಾ ದೀದಿಯವರ ಚಿತ್ರವನ್ನು ನೋಡಿ ಸ್ಫೂರ್ತಿ ಪಡೆಯುತ್ತಿದ್ದೆ. ಅವರೊಂದಿಗೆ ಕೆಲವು ಹಾಡುಗಳನ್ನು ರೆಕಾರ್ಡ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅವರು ವಿವಿಧ ಭಾಷೆಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅವರ ಧ್ವನಿ ಸದಾ ನಮ್ಮೊಂದಿಗೆ ಇರುತ್ತದೆ ಎಂದಿದ್ದಾರೆ.