Oct 10, 2024, 8:42 PM IST
ಕರ್ನಾಟಕ ಕಾಂಗ್ರೆಸ್‌ನಲ್ಲಿ ಇಷ್ಟು ದಿನ ಪವರ್ ಹೌಸ್‌ಗಳು ಎಂದು ಕಂಡುಬರುತ್ತಿದ್ದುದು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಗಳು ಮಾತ್ರ. ಆದರೆ, ಇದೀಗ ಕಾಂಗ್ರೆಸ್‌ನಲ್ಲಿ 3ನೇ ಪವರ್ ಹೌಸ್ ಆಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯೂ ಕಾಣಿಸಿಕೊಂಡಿದೆ. ಕಳೆದ 15 ದಿನಗಳಿಂದ ಸಚಿವ ಸತೀಶ್ ಹಾರಕಿಹೊಳಿ ಅವರು ದಲಿತ ನಾಯಕರ ಡಿನ್ನರ್ ಮೀಟಿಂಗ್ ಸೇರಿದಂತೆ ಹಲವು ನಾಯಕರನ್ನು ಕರೆಸಿ ಮೀಟಿಂಗ್ ಮಾಡಿದ್ದಾರೆ. ರಾಜ್ಯದಲ್ಲಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ತೂಗುಗತ್ತಿ ತೂಗುತ್ತಿದೆ. ಹೀಗಿರುವಾಗ ಬಹು ವರ್ಷಗಳಿಂದ ಕೆಳಿಬರುತ್ತಿದ್ದ ಕಾಂಗ್ರೆಸ್‌ನ ದಲಿತ ಸಿಎಂ ಕೂಗು ಇದೀಗ ಜೋರಾಗುತ್ತಿದೆ.
ಕಳೆದ 2013ರಲ್ಲಿಯೇ ಮುಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಎಂದು ಬಿಂಬಿತವಾಗಿದ್ದ ಡಾ.ಜಿ. ಪರಮೇಶ್ವರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದರು. ಇದೀಗ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆದು ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಪೈಪೋಟಿಯ ನಡುವೆ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಈ ಮಂತ್ರಿಮಂಡಲದಲ್ಲಿ ಗೃಹ ಸಚಿವ ಪರಮೇಶ್ವರ್ ಗೃಹ ಸಚಿವರಾಗಿ ಪ್ರಭಾವಿ ಖಾತೆಯಲ್ಲಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಇದೀಗ ದಲಿತ ಸಿಎಂ ಕೂಗು ಜೋರಾಗಿದೆ. ದಲಿತ ಸಿಎಂ ಎಂದಾಕ್ಷಣ ಸತೀಶ್ ಜಾರಕಿಹೊಳಿ ಮುನ್ನೆಲೆಗೆ ಬಂದಿದ್ದಾರೆ. ಹೀಗಾಗಿ, ಸತೀಶ್ ಜಾರಕಿಹೊಳಿ ಅವರು ರಾಜ್ಯದ ದಲಿತ ನಾಯಕರಾದ ಗೃಹ ಸಚಿವ ಡಾ.ಜಿ. ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರನ್ನು ತಮ್ಮ ಮೆನೆಗೆ ಕರೆಸಿಕೊಂಡು ಡಿನ್ನರ್ ಮೀಟಿಂಗ್ ಮಾಡಿದ್ದಾರೆ.