Goa Elections: ಕನ್ನಡಿಗ ಮುಖಂಡರೇ ಗೋವೆಯಲ್ಲಿ ಠಿಕಾಣಿ ಹೂಡಿದ್ಯಾಕೆ..?

Jan 25, 2022, 4:55 PM IST

ಬೆಂಗಳೂರು (ಜ. 25): ಗೋವಾ (Goa) ವಿಧಾನಸಭೆಯ 40 ಕ್ಷೇತ್ರಗಳಿಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ.  ಗೋವಾ ಕನ್ನಡಿಗ ಸಂಘಟನೆಗಳು ಹೇಳುವ ಪ್ರಕಾರ ಸುಮಾರು 3 ಲಕ್ಷ 60 ಸಾವಿರ ಕನ್ನಡಿಗರು ಗೋವೆಯಲ್ಲಿದ್ದಾರೆ.  ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷ ಗೆಲುವು ಸಾಧಿಸಿದರೂ ಅದರ ಹಿಂದಿನ ಶಕ್ತಿ ಕನ್ನಡಿಗರು ಆಗಲಿದ್ದಾರೆ. ಗೋವಾದಲ್ಲಿ ವಲಸಿಗ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ ಎನ್ನುವ ಕಾರಣಕ್ಕೆ ಆಯಾ ಪಕ್ಷಗಳು ಕನ್ನಡಿಗ ಮುಖಂಡರನ್ನೇ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿವೆ.

5 States Election: ಸಿಎಂ ರೇಸ್‌ನಿಂದ ಯೂಟರ್ನ್ ಹೊಡೆದಿದ್ದೇಕೆ ಪ್ರಿಯಾಂಕ ಗಾಂಧಿ ವಾದ್ರಾ.?

ಬಿಜೆಪಿ ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕನ್ನಡಿಗ ಸಿ.ಟಿ.ರವಿ ಅವರನ್ನು ಗೋವಾ ಉಸ್ತುವಾರಿ ಮಾಡಿದೆ. ಅವರ ತಂಡದಲ್ಲಿ ಬೆಳಗಾವಿಯ ಅಭಯ ಪಾಟೀಲ್‌, ಶಶಿಕಾಂತ ಪಾಟೀಲ್‌, ಹುಬ್ಬಳ್ಳಿಯ ಮಹೇಶ್‌ ಟೆಂಗಿನಕಾಯಿ, ಲಿಂಗರಾಜ ಪಾಟೀಲ್‌, ಶಿವು ಮೆಣಸಿನಕಾಯಿ, ಮಲ್ಲಿಕಾರ್ಜುನ ಬಾಳಿಕಾಯಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಹಲವು ಕನ್ನಡಿಗರು ಇದ್ದಾರೆ.

ಇವರೆಲ್ಲಾ ಕನ್ನಡಿಗರು ವಾಸಿಸುವ ಪ್ರದೇಶಗಳನ್ನು ಹುಡುಕಿ ಹುಡುಕಿ ಭೇಟಿಯಾಗುತ್ತಿದ್ದಾರೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಕ್ಯಾಂಪೇನ್‌ ಮಾಡುತ್ತಿದ್ದರಿಂದ ಆಯಾ ಪ್ರದೇಶವೆಲ್ಲ ಕನ್ನಡಮಯ ಆಗುತ್ತಿವೆ. ಈ ಮುಖಂಡರನ್ನು ಕಂಡು ಹುಮ್ಮಸ್ಸುಗೊಂಡಿರುವ ವಲಸಿಗ ಕನ್ನಡಿಗರು ತಮ್ಮ ಹಿತರಕ್ಷಣೆಗಾಗಿ ನಿಗಮ ಸ್ಥಾಪಿಸಬೇಕು ಮತ್ತು ಗೋವಾ ನಿವಾಸಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳು ತಮಗೂ ದಕ್ಕಬೇಕು ಎಂದು ಆಗ್ರಹಿಸುತ್ತಿದ್ದಾರೆ.