ಜಾರ್ಖಂಡ್‌ ಹಣದ ರಾಶಿ ಕೇಸ್‌: ಇಬ್ಬರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ

By Kannadaprabha NewsFirst Published May 8, 2024, 6:49 AM IST
Highlights

ಮನೆಕೆಲಸದವರ ಬಳಿ ಭಾರೀ ಪ್ರಮಾಣದ ಹಣದ ರಾಶಿ ಪತ್ತೆಯಾದ ಪ್ರಕರಣ ಸಂಬಂಧ ಜಾರ್ಖಂಡ್‌ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್‌ ಆಲಂರ ಆಪ್ತ ಸಹಾಯಕ ಸಂಜೀವ್‌ ಲಾಲ್‌ ಮತ್ತು ಸಂಜೀವ್‌ಲಾಲ್‌ನ ಮನೆ ಕೆಲಸದಾಳು ಜಹಾಂಗೀರ್‌ ಆಲಂರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. 
 

ರಾಂಚಿ (ಮೇ.08): ಮನೆಕೆಲಸದವರ ಬಳಿ ಭಾರೀ ಪ್ರಮಾಣದ ಹಣದ ರಾಶಿ ಪತ್ತೆಯಾದ ಪ್ರಕರಣ ಸಂಬಂಧ ಜಾರ್ಖಂಡ್‌ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್‌ ಆಲಂರ ಆಪ್ತ ಸಹಾಯಕ ಸಂಜೀವ್‌ ಲಾಲ್‌ ಮತ್ತು ಸಂಜೀವ್‌ಲಾಲ್‌ನ ಮನೆ ಕೆಲಸದಾಳು ಜಹಾಂಗೀರ್‌ ಆಲಂರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಭಾರೀ ನಗದು ಪತ್ತೆ ಪ್ರಕರಣದಲ್ಲಿ ಇಬ್ಬರನ್ನೂ ಇ.ಡಿ. ಅಧಿಕಾರಿಗಳು ಸೋಮವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. 

ಆದರೆ ಇಬ್ಬರೂ ಸೂಕ್ತ ಉತ್ತರ ನೀಡದೇ ಅಧಿಕಾರಿಗಳ ದಾರಿ ತಪ್ಪಿಸುವ ಯತ್ನ ನಡೆಸಿದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ನಡುವೆ ಸಂಜೀವ್‌ ಆಲಂಗೆ ಸೇರಿದ ಇನ್ನೂ ಹಲವು ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಈ ವೇಳೆ ಮತ್ತಷ್ಟು ನಗದು ಪತ್ತೆಯಾಗಿದೆ. ಇದರೊಂದಿಗೆ ಕಳೆದ 2 ದಿನಗಳಲ್ಲಿ ದಾಳಿ ವೇಳೆ ವಶಪಡಿಸಿಕೊಂಡ ನಗದಿನ ಮೊತ್ತ 36.75 ಕೋಟಿ ರು. ತಲುಪಿದೆ. ಕೆಲಸದಾಳಿನ ಮನೆಯಲ್ಲಿ 32 ಕೋಟಿ ರು. ಹಾಗೂ ಮಿಕ್ಕ 4.5 ಕೋಟಿ ರು. ಅನ್ಯ ಸ್ಥಳಗಳಲ್ಲಿ ಸಿಕ್ಕಿದೆ.

ದಾರಿ ತಪ್ಪಿಸುವ ಜಾಹೀರಾತಿಗೆ ನಟಿಸಿದವರೂ ಹೊಣೆ: ಸುಪ್ರೀಂಕೋರ್ಟ್‌

ಆಗಿದ್ದೇನು?: ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಮುಖ್ಯ ಎಂಜಿನಿಯರ್‌ ವೀರೇಂದ್ರಕುಮಾರ್ ರಾಮ್‌ ಅವರನ್ನು ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ ರಾಮ್‌ಗೆ ಸೇರಿದ 39 ಕೋಟಿ ರು. ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು. ಅದೇ ಪ್ರಕರಣದ ಭಾಗವಾಗಿ ಇ.ಡಿ. ಅಧಿಕಾರಿಗಳ ತಂಡವು ಸೋಮವಾರ, ಜಾರ್ಖಂಡ್ ಸಚಿವ, ಕಾಂಗ್ರೆಸ್‌ ಮುಖಂಡ ಆಲಂಗೀರ್‌ ಆಲಂರ ಆಪ್ತ ಕಾರ್ಯದರ್ಶಿ ಸಂಜೀವ್‌ ಲಾಲ್‌ ನಂಟಿನ ಹಲವು ಆಸ್ತಿಗಳ ಮೇಲೆ ದಾಳಿ ನಡೆಸಿದೆ. ಈ ಪೈಕಿ ಸಂಜೀವ್‌ ಲಾಲ್‌ ಮನೆ ಕೆಲಸದವರ ಮನೆಯಲ್ಲಿ 30 ಕೋಟಿ ರು. ನಗದು ಪತ್ತೆಯಾಗಿದೆ. ನೋಟುಗಳನ್ನು ಎಣಿಸಲು 6 ಯಂತ್ರಗಳನ್ನು ಬಳಸಲಾಗಿದ್ದು, ಎಣಿಕೆ 1 ದಿನದಿಂದ ನಡೆಯುತ್ತಿದೆ. ಅದು ಪೂರ್ಣಗೊಂಡಾಗ ನಗದು ಮೌಲ್ಯ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

click me!