ಅಕ್ಷರ ಹೂ; ಇದು ಕತೆಯರಳುವ ಸಮಯ!

By Kannadaprabha NewsFirst Published Aug 25, 2020, 1:31 PM IST
Highlights

ಕತೆಯಂತೆಯೋ ಬದುಕಿನಲ್ಲಿ ಗಮನಕ್ಕೇ ಬರದಂತೆ ಸರಿದುಹೋದ ಗೆರೆಗಳಂತೆಯೋ ಇರುವ ಸಾಲುಗಳಿವು. ನಿಮ್ಮ ಬದುಕಿನ ಇಂಥಾ ಗೆರೆಗಳನ್ನೂ ಒಟ್ಟು ಸೇರಿಸಿ ಚಿತ್ರ ಮಾಡಿ ನೋಡಿ, ಖುಷಿಯಾಗುತ್ತೆ.

- ಪ್ರಿಯಾ ಕೆರ್ವಾಶೆ

1.

ನಡುಮಧ್ಯಾಹ್ನ. ಸೂರ್ಯ ಒಮ್ಮೆ ಖಾರವಾಗುತ್ತಿದ್ದ. ಮತ್ತೊಂದು ಕ್ಷಣ ಮಳೆ ಸುರಿದು ತಣ್ಣಗಾಗುತ್ತಿದ್ದ. ಚಿತ್ರದುರ್ಗದ ಕೋಟೆಯ ಒಂದು ಬಂಡೆಯನ್ನೇರಿ ಕೂತರೆ ಪಕ್ಕದಲ್ಲಿ ಇಂಥಾ ಬಂಡೆಗಳದೇ ದೊಡ್ಡ ಬೆಟ್ಟ. ಮಳೆಗೆ ಒಮ್ಮೆ ಮಂಕಾಗಿ ಮತ್ತೊಂದು ಬ್ರೈಟ್‌ ಆಗಿ ಕಾಣುವ ಅದರ ಚೆಂದವನ್ನೇ ಮತ್ತೆ ಮತ್ತೆ ಅತೃಪ್ತಿಯಿಂದ ದಿಟ್ಟಿಸುತ್ತಿದ್ದಳು ಸಂಪನ್ನ. ಒಮ್ಮೆ ತನ್ನ ಬದುಕಿನ ಕಷ್ಟಗಳೇ ಆ ಬೆಟ್ಟವಾದ ಹಾಗನಿಸಿತು. ಮತ್ತೊಮ್ಮೆ ಆ ಬೆಟ್ಟವನ್ನು ಕಂಡಾಗ ಮನಸ್ಸಿಗಾಗುತ್ತಿದ್ದ ಖುಷಿ ಕಂಡು ಅರೆ, ಕಷ್ಟಕ್ಕೆ ಇಂಥಾ ಖುಷಿ ಕೊಡುವ ಶಕ್ತಿ ಎಲ್ಲಿಂದ ಅಂತ ಮತ್ತೆ ಅದರತ್ತ ನೋಡಿದಳು. ತೃಪ್ತಿಯಾಗದೇ ಬೈನಾಕ್ಯುಲರ್‌ ಹಿಡಿದಳು. ಅಲ್ಲೊಂದು ಚಲನೆ, ಪೊದೆಯಿಂದ ಚಿರತೆಯಂಥಾ ಪ್ರಾಣಿ ಮರಿಯೊಂದನ್ನು ಕಚ್ಚಿಕೊಂಡು ಈಚೆ ಬಂತು. ಅದನ್ನಿಲ್ಲಿ ಬಿಟ್ಟು ಮತ್ತೆ ಬಿರುಕಿನ ಒಳ ಹೋಗಿ ಮತ್ತೊಂದು ಮರಿ ಎತ್ತಿ ತಂದಿತು. ಆಗ ಮೊದಲು ತಂದ ಮರಿ ನಾಪತ್ತೆ. ಅತ್ತಿತ್ತ ಹುಡುಕಿ ಎರಡೂ ಮರಿಗಳನ್ನು ಜೊತೆ ಮಾಡಿ ಮತ್ತೆ ಒಳ ಹೋಯ್ತು. ಅದರ ಬಾಯಲ್ಲಿ ಮತ್ತೊಂದು ಮರಿ. ಮೂರು ಮರಿಗಳನ್ನು ಬಂಡೆಯಿಂದ ಬಂಡೆಗೆ ದಾಟಿಸುತ್ತಾ ಮುನ್ನಡೆಯುತ್ತಿತ್ತು. ಅದನ್ನೇ ಹಿಂಬಾಲಿಸುತ್ತಾ ಹೋಗುತ್ತಿದ್ದಾಗ ಎಲ್ಲೋ ಒಂದು ಕಡೆ ನೆಟ್‌ ವರ್ಕ್ ಸಿಕ್ಕಿ ಮೊಬೈಲ್‌ ಹೊಡೆದುಕೊಳ್ಳತೊಡಗಿತು. ಪ್ರಕೃತಿ ಧ್ಯಾನದಿಂದ ಬದುಕಿನತ್ತ ಮನಸ್ಸಿಲ್ಲದ ಮನಸ್ಸಿಂದ ಹೊರಳಿಕೊಂಡಳು.

2.

‘ಪಾತ್ರೇ .. ಸಾಮಾನ್‌’ ಅಂತೊಂದು ಧ್ವನಿ. ಮತ್ತೊಮ್ಮೆ ಬೈಕ್‌ ಹೋದ ಸದ್ದು. ಗೇಟ್‌ ನ ಪಕ್ಕವೇ ನಾಯಿ ಬೊಗಳುವ ಶಬ್ದ. ದೂರದಲ್ಲಿ ಅಸ್ಪಷ್ಟದನಿ. ಯಾರೋ ಕಿರಿಚಾಡುತ್ತಿರುವ ಹಾಗೆ. ಎಂಬತ್ತೈದು ವರ್ಷದ ಸವಿತಾ ನಿಧಾನಕ್ಕೆ ಮಂಚದಿಂದ ಮೇಲೆದ್ದು ತುರುಬು ಕಟ್ಟಿಚಪ್ಪಲಿ ಮೆಟ್ಟಿನಿಂತಳು. ಪ್ರತೀ ದಿನ ರಾತ್ರಿ ಮಲಗುವಾಗ ಅವಳದೊಂದು ಪ್ರಾರ್ಥನೆ - ’ದೇವರೇ, ನನ್ನ ಪಾಲಿಗೆ ನಾಳೆ ಬೆಳಗಾಗದಿರಲಿ’. ಆದರೆ ಅವಳ ಪ್ರಾರ್ಥನೆಗಳಿಗೆಲ್ಲ ದೇವರು ಕ್ಯಾರೇ ಮಾಡುತ್ತಿರಲಿಲ್ಲ. ಅವಳ ಬೆಳಗುಗಳು ಮುಂದುವರಿಯುತ್ತಿದ್ದವು. ದೇವರ ಮೇಲೆ ಸಿಟ್ಟು, ದಿನದ ಬಗ್ಗೆ ಜಿಗುಪ್ಸೆ ಬಂದು ಎಷ್ಟೋ ಹೊತ್ತು ಮಲಗೇ ಇದ್ದವಳು ಆಮೇಲೆ ಅನಿವಾರ್ಯವಾಗಿ ಎದ್ದಳು. ಚಹಾ ಕಾಯಲಿಟ್ಟು ಬ್ರೆಶ್‌ ಮಾಡತೊಡಗಿದಳು. ಧೂಳಿಲ್ಲದ ಮನೆಯನ್ನು ಮತ್ತೆ ಗುಡಿಸಿದಾಗ ಸೋಫಾದ ಯಾವುದೋ ಮೂಲೆಯಿಂದ ಬಣ್ಣದ ಪೆನ್ಸಿಲ್‌ ಜಿಗಿದು ಈಚೆ ಬಂತು. ಕಳೆದ ವಾರ ಪಕ್ಕದ ಮನೆ ಮಗು ಬಂದು ಬಿಟ್ಟು ಹೋದ ಬಣ್ಣದ ಪೆನ್ಸಿಲ್‌. ಇಂಟೆರೆಸ್ಟಿಂಗ್‌ ಅನಿಸಿತು. ನಡುಗುವ ಕೈಯಿಂದ ಅದನ್ನು ಹಿಡಿದು ಗೋಡೆಯ ಮೇಲೆ ಓಂ ಬರೆದಳು. ಪದ್ಯ ಬರೆದಳು. ಚಿತ್ರ ಮಾಡಿದಳು. ಎಷ್ಟೋ ವರ್ಷಗಳಿಂದ ನಸು ಹಳದಿ ಬಣ್ಣದಲ್ಲೇ ಇದ್ದ ಗೋಡೆಗಳ ತುಂಬ ಬಣ್ಣ. ಗಬಗಬ ಊಟ ಮಾಡಿ ಮಧ್ಯಾಹ್ನ ವಿಡೀ ಕೂತು ಬರೆದಳು. ಸಂಜೆ ಗಡಿ ಬಿಡಿಯಲ್ಲಿ ಗಾರ್ಡನ್‌ ಕೆಲಸ ಮುಗಿಸಿ ಬಂದು ಬರೆದಳು. ಆ ಬಣ್ಣದ ಪೆನ್ಸಿಲ್‌ ಕರಗುತ್ತಾ ಬಂತು. ಮರುದಿನ ಹೊಸತು ತರಬೇಕು ಅಂದುಕೊಳ್ಳುತ್ತಾ ಮಲಗಿದವಳಿಗೆ ದೇವರನ್ನು ಪ್ರಾರ್ಥಿಸಲು ಮರೆತು ಹೋಗಿತ್ತು. ಆದರೆ ಅವಳು ಹೊಸ ಪೆನ್ಸಿಲ್‌ ಕೊಳ್ಳಲಾಗಲಿಲ್ಲ.

ನಾವೇಕೆ ಮಕ್ಕಳಿಗೆ ಪುರಾಣದ ಕತೆ ಹೇಳಬೇಕು? 

3

ನಾಯಿ ಗೇಟ್‌ ಮೇಲೆ ಹತ್ತತ್ತಿ ಹಾರುತ್ತಿತ್ತು. ಗೇಟಿನಾಚೆ ಒಬ್ಬ ಹುಡುಗ ಸೀಟಿ ಹೊಡೆಯುತ್ತಾ ಓಡಾಡುತ್ತಿದ್ದ. ಅದನ್ನು ರೇಗಿಸಲೆಂದೇ ಹತ್ತಿರ ಬಂದು ಕೋತಿ ಥರ ಸೌಂಡ್‌ ಮಾಡಿ ಓಡುತ್ತಿದ್ದ. ನಾಯಿ ಮತ್ತೂ ಜೋರಾಗಿ ಬೊಗಳುತ್ತಾ ಅವನ ಮೇಲೆರಗಲು ಹವಣಿಸುತ್ತಿತ್ತು. ಮನೆಯ ಪುಟಾಣಿ ತನ್ನ ಕೋಣೆಯಿಂದ ಈ ಗಲಾಟೆ ನೋಡಿ ಆಚೆ ಬರುವಾಗ ಹುಡುಗ ಗಾಯಬ್‌. ನಾಯಿ ಇನ್ನೊಂದಿಷ್ಟುಹೊತ್ತು ಅಲ್ಲೇ ಇದ್ದು ಆಮೇಲೆ ತನ್ನ ಪಾಡಿಗೆ ತಾನು ಹೋಗುತ್ತಿತ್ತು. ಒಮ್ಮೊಮ್ಮೆ ಆ ಮನೆಯ ಹುಡುಗಿ ನಾಯಿ ಹಿಡಿದು ವಾಕಿಂಗ್‌ ಗೆ ಹೊರಟಾಗ ಆ ಹುಡುಗ ಮೂಲೆಯಲ್ಲಿ ನಿಂತು ಸೀಟಿ ಹೊಡೆಯುತ್ತಿದ್ದ, ನಾಯಿ ರೊಚ್ಚಿಗೆದ್ದು ಹುಡುಗಿ ಕೈಯಿಂದ ಓಡಲು ಇನ್ನಿಲ್ಲದ ಹಾಗೆ ಹವಣಿಸುತ್ತಿತ್ತು. ಬಹಳ ಕಷ್ಟದಲ್ಲಿ ಆ ಹುಡುಗಿ ಕಂಟ್ರೋಲ್‌ ಮಾಡುತ್ತಿದ್ದಳು. ಮನೆಗೆ ಬಂದು ನೋಡಿದರೆ ಕೈಯೆಲ್ಲ ಬೊಬ್ಬೆಗಳೆದ್ದಿರುತ್ತಿದ್ದವು. ಆ ಹುಡುಗನ ಬಗ್ಗೆ ಒಮ್ಮೆ ತಂದೆಗೆ ಹೇಳಿದಳು. ತಂದೆ ಕಾದು ಕೂತು ಆ ಹುಡುಗ ಬಂದು ಚೇಷ್ಟೆಮಾಡುವಾಗ ಚೆನ್ನಾಗಿ ಬೈದು ಕಳಿಸಿದರು. ಮರುದಿನ ಹುಡುಗ ಬರಲಿಲ್ಲ. ನಾಯಿ ಮಾತ್ರ ಕಿವಿ ನೆಟ್ಟಗೆ ಮಾಡಿ ಆಗಾಗ ಗೇಟ್‌ ಬಳಿ ಇಣುಕಿ ಬರುತ್ತಿತ್ತು. ವಾಕಿಂಗ್‌ ಟೈಮ್‌ ನಲ್ಲೂ ಆತನ ಸುಳಿವಿಲ್ಲ. ನಾಯಿ ಸಪ್ಪಗಾಯ್ತು. ಮೊದಲೆಲ್ಲ ಊಟ ಅಂದರೆ ಬಹಳ ಆಸೆ ಪಡುತ್ತಿದ್ದದ್ದು ಈಗ ಬೇಕೋ ಬೇಡವೋ ಅನ್ನುವ ಹಾಗೆ ತಿನ್ನತೊಡಗಿತು. ದೂರದಲ್ಲಿ ಯಾರೋ ಅಸ್ಪಷ್ಟವಾಗಿ ಸೀಟಿ ಹೊಡೆದಂತೆ ಕೇಳಿ ಚಂಗನೆ ನೆಗೆದು ಗೇಟ್‌ ಬಳಿ ಓಡುತ್ತಿತ್ತು. ಈಗೀಗ ನಾಯಿಗೆ ಬೊಗಳೋದೂ ಬೇಸರವೆನಿಸುತ್ತಿದೆ. ಅದು ಯಾವಾಗಲೂ ಬಿದ್ದುಕೊಂಡೇ ಇರುತ್ತದೆ.

ಮಕ್ಕಳಿಗೆ ಕತೆ ಹೇಳೋದ್ರಿಂದ ಏನೆಲ್ಲ ಲಾಭ ಗೊತ್ತಾ?

4

ಕೆರೆಯ ತಿಟ್ಟಿಂದಾಚೆ ದೂರದಲ್ಲಿ ಬುಟ್ಟಿಹಿಡಿದು ಓಡು ನಡಿಗೆಯಲ್ಲಿ ನಡೆಯುತ್ತಿರುವ ಹಳ್ಳಿ ಹೆಣ್ಣುಗಳು. ಕೆರೆಯ ದಂಡೆಯಲ್ಲಿ ಗಾಳ ಹಾಕಿ ಕೂತು ಕೆಳಗೆ ಮೀನು ಗಾಳಕ್ಕೆ ಬಾಯಿ ಹಾಕೋದನ್ನೇ ನಿರೀಕ್ಷಿಸುತ್ತಾ ಧ್ಯಾನಸ್ಥನಾಗಿರುವ ಹುಡುಗ. ಕೆರೆಯ ಪಕ್ಕ ಬಂಡೆ. ಅಲ್ಲೊಂದು ಹಕ್ಕಿ ಕೊಕ್ಕನ್ನು ಬಂಡೆಗೆ ಉಜ್ಜಿ ಹರಿತ ಮಾಡಿಕೊಳ್ಳುತ್ತಿದೆ. ಕೆರೆಯ ನೀರಿಗೆ ತುಸುವೇ ಬಾಗಿರುವ ಮರದ ಕೊಂಬೆ ಗಾಳಿಗೆ ಕೊಂಚವೇ ಅಲುಗಾಡಿದೆ, ನೀರಲ್ಲಿ ಅದರ ಪ್ರತಿಬಿಂಬ ತುಸು ಔಟ್‌ ಆಫ್‌ ಫೋಕಸ್‌ ಆದಂತಿದೆ. ಹುಲ್ಲ ಮೇಲೆ ಕಪ್ಪೆಯೊಂದು ಜಿಗಿಯುತ್ತಿದೆ. ಹಾವು ಎಲ್ಲೋ ಅಡಗಿ ಕಪ್ಪೆಯ ನಿರೀಕ್ಷೆಯಲ್ಲಿದೆ. ಸಂಜೆಯಾದರೂ ಗಾಳಿ ಕಡಿಮೆ. ಚಳಿ ಸಣ್ಣಗೆ ಶುರುವಾಗಿದೆ. ದೂರದಲ್ಲಿ ಮಂಜಿನ ಪರದೆ ತುಸುವೇ ಹಬ್ಬಿಕೊಳ್ಳುತ್ತಿದೆ. ಆಕಾಶದ ತುಂಬ ಕೆಂಪು, ಕಿತ್ತಳೆ, ಹಳದಿ, ನೀಲಿ, ಬಿಳಿ ಬಣ್ಣಗಳೇ ಬಣ್ಣಗಳು. ಮೆರವಣಿಗೆ ಹೊರಟ ಮೋಡಗಳು ಆಗಾಗ ಆಕಾರ ಬದಲಿಸಿಕೊಳ್ಳುತ್ತವೆ. ನಾಟಕದಲ್ಲಿ ಪಾತ್ರ ಬದಲಿಸಿಕೊಳ್ಳುವ ಕಲಾವಿದರ ಹಾಗೆ....

ಇಷ್ಟನ್ನು ಬಿಡಿಸಿದ ಕಲಾವಿದ ಮೇಲೇಳುವ ಹೊತ್ತಿಗೇ ಹುಡುಗನ ಗಾಳಕ್ಕೆ ಮೀನು ಸಿಕ್ಕಿಕೊಂಡಿದು. ಕಲಾವಿದ ಮತ್ತೆ ಕ್ಯಾನ್ವಾಸ್‌ ನೊಳಗೆ ಹೊಗಬೇಕಾಯ್ತು.

click me!