
ಸರ್ವ ಧರ್ಮಗಳನ್ನು ಹೊಂದಿದ ಭಾರತದಲ್ಲಿ ಅನೇಕ ಧರ್ಮದವರು ನೆಲೆಸಿದ್ದಾರೆ. ಎಲ್ಲ ಧರ್ಮದವರೂ ಅವರದೇ ಆದ ದೇವಾಲಯ, ಮಸೀದಿ, ಚರ್ಚ್ ಮುಂತಾದವನ್ನು ಹೊಂದಿದ್ದಾರೆ. ಎಲ್ಲ ಪಂಥದವರೂ ತಮ್ಮ ತೊಂದರೆ ತೊಡಕುಗಳನ್ನು ದೇವರ ಮುಂದೆ ಹೇಳಿಕೊಳ್ಳುತ್ತಾರೆ ಮತ್ತು ಕಷ್ಟ ನಿವಾರಣೆಗೆ ಪರಿಹಾರ ಹುಡುಕುತ್ತಾರೆ. ಭೂತ, ಪ್ರೇತಗಳನ್ನು ಓಡಿಸಲು, ಮಕ್ಕಳಿಗೆ ಎದುರಾಗುವ ತೊಂದರೆಗಳನ್ನು ನಿವಾರಿಸಲು, ದೃಷ್ಟಿ ನಿವಾಳಿಸಲು ಹೀಗೆ ಹಲವಾರು ಕಷ್ಟಗಳನ್ನು ಮಾಟ, ಮಂತ್ರ, ತಂತ್ರದ ಮೂಲಕ ನಿವಾರಿಸಲಾಗುತ್ತದೆ. ಅಂತಹ ಆಚರಣೆಗಳನ್ನು ಮಾಡುವುದಕ್ಕಾಗಿಯೇ ಕೆಲವು ಸ್ಥಳಗಳು ಮತ್ತು ವ್ಯಕ್ತಿಗಳು ಇರುತ್ತಾರೆ. ಇಂದು ನಾವು ಭೂತ, ಪ್ರೇತ ಮತ್ತು ದುಷ್ಟ ಶಕ್ತಿಗಳನ್ನು ಓಡಿಸುವ ಅಂತಹುದೇ ಕೆಲವು ಧಾರ್ಮಿಕ ಸ್ಥಳದ ಬಗ್ಗೆ ತಿಳಿಸಲಿದ್ದೇವೆ.
ಜಾಮ್ ಸನ್ವಾಲಿ ದೇವಸ್ಥಾನ : ಈ ದೇವಸ್ಥಾನ (Temple) ವು ಮಧ್ಯಪ್ರದೇಶದ ಛಿಂದಾವಾಡಾ ಜಿಲ್ಲೆಯಲ್ಲಿದೆ. ಇಲ್ಲಿನ ಹನುಮಂತನ ಮೂರ್ತಿ ಪ್ರತಿವರ್ಷವೂ ಬೆಳೆಯುವುದು ಈ ದೇವಾಲಯ ವಿಶೇಷತೆಯಾಗಿದೆ. ಇಲ್ಲಿ ಭೂತ (Ghost) , ಪ್ರೇತಗಳನ್ನು ನಿವಾಳಿಸಿಕೊಂಡು ಹೋಗಲು ಮತ್ತು ಮಾನಸಿಕ ತೊಂದರೆ ಇರುವ ಜನರು ದೂರದೂರದಿಂದ ಬರುತ್ತಾರೆ. ಈ ಮೂರ್ತಿಯ ಕೆಳಗೆ ದೊಡ್ಡ ಮೊತ್ತದ ಹಣ (Money) ವಿದೆ. ಮೊದಲು ಈ ಮೂರ್ತಿ ನಿಂತೇ ಇತ್ತು ನಂತರ ಅಲ್ಲಿರುವ ಹಣವನ್ನು ಕಾಪಾಡಲು ಹನುಮಂತನ ಮೂರ್ತಿ ಮಲಗಿತು ಆನಂತರ ಅದನ್ನು ಯಾರಿಂದಲೂ ಎತ್ತಲಾಗಲಿಲ್ಲ ಎಂದು ಹೇಳಲಾಗುತ್ತೆ.
ಈ ದೇಗುಲಗಳಲ್ಲಿ ದೇವರಿಗೆ ಆಲ್ಕೋಹಾಲ್ , ದೋಸೆ, ಬರ್ಗರ್ ನೇವೇದ್ಯ!
ಮೆಹಂದಿಪುರ ಬಾಲಾಜಿ : ರಾಜಸ್ಥಾನದಲ್ಲಿರುವ ಈ ದೇವಸ್ಥಾನ ದುಷ್ಟಶಕ್ತಿಗಳನ್ನು ಓಡಿಸಲು ಪ್ರಸಿದ್ಧವಾದ ಭಾರತದ ದೇವಾಲಯವಾಗಿದೆ. ಇಲ್ಲಿಗೆ ಪ್ರತಿದಿನ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಬರುವ ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ತೋರಿಸಲು ಮೈಮೇಲೆ ಬಿಸಿ ನೀರನ್ನು ಹಾಕಿಕೊಳ್ಳುವುದು ಮತ್ತು ತಮ್ಮನ್ನು ತಾವು ಬಂಧಿಸಿಕೊಳ್ಳುವುದು ಮುಂತಾದವನ್ನು ಮಾಡುತ್ತಾರೆ. ಇಲ್ಲಿ ಅನೇಕ ಕೆಟ್ಟ ಆತ್ಮಗಳು ವಾಸಮಾಡುತ್ತವೆ ಎಂದು ಕೂಡ ಹೇಳಲಾಗುತ್ತೆ.
ಹಜರತ್ ಸೈಯದ್ ಅಲಿ ಮೀರಾ ದಾತಾರ್ ದರ್ಗಾ : ಗುಜರಾತಿನ ಈ ದರ್ಗಾಕ್ಕೆ ಬರುವ ಹೆಚ್ಚಿನ ಮಂದಿ ಬಂಧಿತರಾಗಿಯೇ ಬರುತ್ತಾರೆ. ಮೈಮೇಲೆ ದುಷ್ಟಶಕ್ತಿಯ ಆವಾಹನೆಯಾದವರು, ಮಾನಸಿಕ ಅಸ್ವಸ್ಥರು, ಭೂತ ಪ್ರೇತದ ತೊಂದರೆಯಿಂದ ಬಳಲುತ್ತಿರುವ ಅನೇಕ ಮಹಿಳೆಯರು ಇಲ್ಲಿ ಬರುತ್ತಾರೆ. ಮುಸ್ಲಿಂ ಸಮುದಾಯದವರು ಮಾತ್ರವಲ್ಲದೇ ಎಲ್ಲ ಜಾತಿಯ ಜನರೂ ಇಲ್ಲಿ ಬರುವುದು ಈ ಸ್ಥಳದ ವಿಶೇಷತೆಯಾಗಿದೆ.
ಇಲ್ಲಿ ಮದುವೆಗೂ ಮುನ್ನ ಯುವಕರು ಹಿರಿಯ ಹೆಂಗಸ್ರ ಜೊತೆ ಮಲಗ್ತಾರೆ!
ದೇವಿ ಮಹಾರಾಜ ಮಂದಿರ : ಮಧ್ಯಪ್ರದೇಶದಲ್ಲಿರುವ ಈ ದೇಗುಲ ತನ್ನ ರೀತಿ ರಿವಾಜಿನಿಂದಲೇ ಪ್ರಸಿದ್ಧಿ ಹೊಂದಿದೆ. ಇಲ್ಲಿ ಬರುವ ಜನರು ತಮ್ಮೊಳಗಿರುವ ದುಷ್ಟ ಶಕ್ತಿಯನ್ನು ಓಡಿಸಲು ಕೈ ಮೇಲೆ ಕರ್ಪೂರಗಳನ್ನು ಇಟ್ಟುಕೊಳ್ಳುತ್ತಾರೆ. ಪ್ರತಿವರ್ಷವೂ ಇಲ್ಲಿ ಭೂತದ ಮೇಳ ಕೂಡ ನಡೆಯುತ್ತದೆ. ಆ ಸಮಯದಲ್ಲಿ ಜನರು ಹಲವು ರೀತಿಯ ವಿಚಿತ್ರ ಆಚರಣೆಗಳನ್ನು ಮಾಡುವುದನ್ನು ಕಾಣಬಹುದು.
ನಿಜಾಮುದ್ದೀನ್ ದರ್ಗಾ : ದಿಲ್ಲಿಯಲ್ಲಿರುವ ಈ ದರ್ಗಾದಲ್ಲಿ ಭೂತೋಚ್ಛಾಟನೆ ಮಾಡುವ ಅನೇಕ ವ್ಯಕ್ತಿಗಳನ್ನು ಕಾಣಬಹುದು. ನವಿಲಿನ ಗರಿಯಿಂದ ಮಾಡಿದ ಗುಚ್ಛವನ್ನು ಹಿಡಿದ ಬಾಬಾಗಳು ಜನರ ತಲೆಯ ಮೇಲೆ ಆ ನವಿಲುಗರಿಯನ್ನು ಆಡಿಸುತ್ತಾರೆ. ಅನೇಕ ಚಲನಚಿತ್ರಗಳಲ್ಲಿ ಈ ದರ್ಗಾವನ್ನು ಕಾಣಬಹುದು.
ಚಂಡಿದೇವಿ ಮಂದಿರ: ಉತ್ತರಾಖಂಡದಲ್ಲಿರುವ ಈ ದೇವಿಯ ಮಂದಿರ ಭೂತದ ಜಾತ್ರೆಗೆ ಹೆಸರುವಾಸಿಯಾಗಿದೆ. ಇಲ್ಲಿ ರೌದ್ರ ರೂಪ ತಾಳಿದ ದೇವಿಯಿದ್ದಾಳೆ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಭೂತದ ಜಾತ್ರೆ ನಡೆಯುತ್ತದೆ. ಇಲ್ಲಿ ಭೇಟಿ ನೀಡಿದರೂ ಸಾಕು ದುಷ್ಟ ಶಕ್ತಿಗಳು ಓಡಿಹೋಗುತ್ತವೆ ಎಂಬ ನಂಬಿಕೆಯಿದೆ.
ದತ್ತಾತ್ರೇಯ ಮಂದಿರ : ಕರ್ನಾಟಕದ ಗಂಗಾಪುರದಲ್ಲಿರುವ ಈ ದತ್ತಾತ್ರೇಯ ಮೂರ್ತಿಯ ಆರತಿ ಬಹಳ ಫೇಮಸ್ ಆಗಿದೆ. ಹುಣ್ಣಿಮೆಯ ದಿನ ಬೆಳಿಗ್ಗೆ 11.30ದಿಂದ ಇಲ್ಲಿ ಮಹಾಮಂಗಳಾರತಿ ಆರಂಭವಾಗುತ್ತದೆ. ಆರತಿಯ ಸಮಯದಲ್ಲಿ ಜನರು ಕುಣಿದು ಕೂಗುವುದನ್ನ ನೋಡ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.