
ಭಾರತ ಅನೇಕ ವೀರ ಪುರುಷ ಹಾಗೂ ಮಹಿಳೆಯರಿಗೆ ಜನ್ಮ ನೀಡಿದೆ. ಇಲ್ಲಿ ಜನ್ಮ ತಾಳಿದ ಅನೇಕ ಮಂದಿ ಇಂದು ವಿಶ್ವವ್ಯಾಪಿ ಎಲ್ಲ ಕ್ಷೇತ್ರದಲ್ಲಿಯೂ ರಾರಾಜಿಸುತ್ತಿದ್ದಾರೆ. ಬಡತನ ಹಾಗೂ ಹಳ್ಳಿಯ ಮೂಲೆ ಮೂಲೆಗಳಿಂದ ಬಂದ ಅನೇಕರು ರಾಷ್ಟ್ರ ನಾಯಕರಾಗಿ, ವಿಜ್ಞಾನಿಗಳಾಗಿ, ಕಲಾವಿದರಾಗಿ, ಆಟಗಾರರಾಗಿ ಇಡೀ ಜಗತ್ತಿಗೇ ಭಾರತದ ಶಕ್ತಿಯನ್ನು ತೋರಿಸಿದ್ದಾರೆ. ತನ್ಮೂಲಕ ಹಳ್ಳಿಗಳು ಕೂಡ ಯಾವ ರೀತಿಯಲ್ಲೂ ಹಿಂದುಳಿದಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.
ಇಂದು ನಾವು ಭಾರತ (India) ದ ಅಂತಹುದೇ ಒಂದು ಹಳ್ಳಿಯ ಬಗ್ಗೆ ಹೇಳಲಿದ್ದೇವೆ. ಈ ಹಳ್ಳಿ (Village) ಲಖನೌದಿಂದ ಸುಮಾರು ಮುನ್ನೂರು ಕಿಲೋಮೀಟರ್ ದೂರದಲ್ಲಿದೆ. ಮಾಧೋಪಟ್ಟಿ ಎಂಬ ಈ ಊರಿನ ಹೆಚ್ಚಿನ ಜನರು ಐಎಎಸ್ (IAS), ಐಪಿಎಸ್ ಅಧಿಕಾರಿಗಳಾಗಿ ದೇಶದಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ.
ಸೌತ್ ಇಂಡಿಯಾ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಬಜೆಟ್ ಫ್ರೆಂಡ್ಲೀ ಸ್ಥಳಗಳ ಮಾಹಿತಿ ಇಲ್ಲಿದೆ
47 ಮಂದಿ ಅಧಿಕಾರಿಗಳನ್ನು ಹೊಂದಿದೆ ಈ ಊರು : ಜೌನ್ಪುರದ ಚಿಕ್ಕ ಹಳ್ಳಿ ಮಾಧೋಪಟ್ಟಿ (Madhopatti) ತುಂಬ ಮಹತ್ವವನ್ನು ಹೊಂದಿದೆ. ಈ ಹಳ್ಳಿಯ ತುಂಬ ಉನ್ನತ ಅಧಿಕಾರಿಗಳೇ ತುಂಬಿಹೋಗಿದ್ದಾರೆ. ಇಲ್ಲಿ ಸುಮಾರು 75 ಕುಟುಂಬಗಳು ನೆಲೆಸಿವೆ. ಆ ಕುಟುಂಬಗಳಲ್ಲಿನ 47 ಮಂದಿ ನಾಗರಿಕ ಸೇವಾಧಿಕಾರಿಗಳಾಗಿದ್ದಾರೆ. ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ನಾಗರಿಕ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ. ಆದರೂ ಈ ಊರಿನವರು ನಮಗಾಗಿಯೇ ಈ ಪರೀಕ್ಷೆಯಿದೆ ಎನ್ನುವಷ್ಟು ಸಲೀಸಾಗಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಯಾವುದೇ ತರಬೇತಿಯಿಲ್ಲದೇ ಪರೀಕ್ಷೆ ಎದುರಿಸುತ್ತಾರೆ : ಹಳ್ಳಿಗಳು ಎಂದ ಮೇಲೆ ಅಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಇದ್ದೇ ಇರುತ್ತೆ. ಎಷ್ಟೋ ಹಳ್ಳಿಗಳಲ್ಲಿ ರಸ್ತೆ, ಸಾರಿಗೆ, ವಿದ್ಯುತ್, ಶಾಲೆ ಮುಂತಾದ ವ್ಯವಸ್ಥೆಗಳು ಸಮರ್ಪಕವಾಗಿ ಇರುವುದಿಲ್ಲ. ಎಲ್ಲ ಹಳ್ಳಿಗಳಂತೆಯೇ ಈ ಹಳ್ಳಿಯಲ್ಲಿಯೂ ಕೂಡ ಹೇಳಿಕೊಳ್ಳುವಂತಹ ಸೌಲಭ್ಯಗಳೇನು ಇಲ್ಲ.
ಈಗಂತೂ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಹೇಳಿಕೊಡಲು ಶಾಲೆಯ ಹೊರತಾಗಿ ಅವರನ್ನು ಟ್ಯೂಶನ್ ಗೆ ಸೇರಿಸಲಾಗುತ್ತೆ. ಹಾಗೆ ಎಲ್ಲ ಪರೀಕ್ಷೆಗಳಿಗೂ ಅದಕ್ಕೆಂದೇ ನಿರ್ದಿಷ್ಟವಾದ ತರಬೇತಿ ಕೇಂದ್ರಗಳು ಕೂಡ ಇರುತ್ತವೆ. ವಿವಿಧ ಕೋರ್ಸ್ ಗಳನ್ನು ಅಥವಾ ಪರೀಕ್ಷೆಯ ತರಬೇತಿಗಳನ್ನು ಅಂತಹುದೇ ಟ್ರೇನಿಂಗ್ ಸೆಂಟರ್ ಗಳಿಂದ ಪಡೆಯುತ್ತಾರೆ. ಆದರೆ ಆಶ್ಚರ್ಯದ ಸಂಗತಿ ಏನೆಂದರೆ ಈ ಹಳ್ಳಿಯ ಯುವಕರು ಅಂತಹ ಯಾವುದೇ ಕೋಚಿಂಗ್ ಸೆಂಟರ್ ಗಳಿಗೆ ಹೋಗುವುದಿಲ್ಲ. ಕೋಚಿಂಗ್ ಸೆಂಟರ್ ಗೆ ಹೋಗದೇ ಸ್ವತಃ ತಾವೇ ಪರೀಕ್ಷೆಗೆ ಸಿದ್ಧರಾಗುತ್ತಾರೆ. ತಮ್ಮ ಹಳ್ಳಿಯಲ್ಲಿ ಸೌಲಭ್ಯಗಳು ಇಲ್ಲವೆಂದಾಗಲೀ ಅಥವಾ ಸೌಕರ್ಯಗಳ ಕೊರತೆ ಇದೆಯೆಂದಾಗಲೀ ಅವರು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಹಾಗೇ ಅದ್ಯಾವ ಕೊರತೆಯೂ ಇವರ ಕಲಿಕೆಗೆ ಅಡ್ಡವಾಗಿಲ್ಲ.
India Lover : ಒಮ್ಮೆ ಭಾರತಕ್ಕೆ ಬಂದ ಇವರಿಗೆ ವಾಪಸ್ ಹೋಗೋ ಮನಸ್ಸಾಗ್ಲಿಲ್ಲ..
ಈ ಹಳ್ಳಿ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿ : ಮಾಧೋಪಟ್ಟಿಯ ಹಳ್ಳಿಯ ವಿದ್ಯಾರ್ಥಿಗಳ ಸಾಧನೆ ಕೇವಲ ನಾಗರಿಕ ಸೇವೆಗಳಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಇದೆ. ಇಲ್ಲಿನ ಪ್ರತಿಭಾವಂತರು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಕೂಡ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. 1914 ರಿಂದಲೇ ಈ ಹಳ್ಳಿಯ ಪ್ರತಿಭೆಗಳು ಹೊರಬೀಳುತ್ತಲೇ ಇದ್ದವು. ಆದರೆ ಯಾರೂ ಅದನ್ನು ಅಷ್ಟಾಗಿ ಗುರುತಿಸಿರಲಿಲ್ಲ. ಅದೇ ಮಾಧೋಪಟ್ಟಿ ಎಂಬ ಚಿಕ್ಕ ಹಳ್ಳಿ ಈಗ 47 ಮಂದಿ ಅಧಿಕಾರಿಗಳನ್ನು ಹೊಂದಿದ್ದು ಮಾದರಿ ಹಳ್ಳಿಯಾಗಿ ಚಿರಪರಿಚಿತವಾಗಿದೆ.
ಅನೇಕ ವಿದ್ಯಾರ್ಥಿಗಳು ಎಷ್ಟೇ ಸೌಲಭ್ಯಗಳಿದ್ದರೂ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಕೆಲವರು ನಮಗೆ ಕಲಿಯಲು ಸರಿಯಾದ ವ್ಯವಸ್ಥೆಯಿಲ್ಲ, ನಮ್ಮಿಂದ ಏನು ಸಾಧಿಸಲೂ ಸಾಧ್ಯವಿಲ್ಲ ಎಂದು ಹಿಂದೇಟುಹಾಕುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಮಾಧೋಪಟ್ಟಿ ಊರು ಮಾದರಿಯಾಗಿದೆ. ಹಳ್ಳಿಯ ಜನರನ್ನು ತಿರಸ್ಕಾರದಿಂದ ಕಾಣುವ ಹಾಗೂ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸದೇ ಹೊಸಕಿಹಾಕುವ ಈ ಸಮಾಜದಲ್ಲಿ ಮಾಧೋಪಟ್ಟಿ ಅನೇಕ ಅಧಿಕಾರಿಗಳನ್ನು ದೇಶಕ್ಕೆ ನೀಡುತ್ತಿರುವುದು ಶ್ಲಾಘನೀಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.