ಹಳ್ಳಿ ಅಂದ್ರೆ ಇದೀಗ ಮೊಬೈಲ್ ರೀಚ್ ಆಗುತ್ತಾ, ನೆಟ್ವರ್ಕ್ ಸರಿಯಾಗಿ ಸಿಗುತ್ತಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಎಲ್ಲವುಕ್ಕಿಂತಲೂ ಭಿನ್ನವಾದ ಉತ್ತರ ಕನ್ನಡ ಹಳ್ಳಿಯೊಂದರ ಬಗ್ಗೆ ಕನ್ನಡದ ಖ್ಯಾತ ಲೇಖಕ ಜೋಗಿ ಬರೆದಿದ್ದಾರೆ.
- ಜೋಗಿ
‘ಮೊಬೈಲ್ ಕನೆಕ್ಟ್ ಆಗತ್ತಾ?’‘ಆ ಗುಡ್ಡ ಹತ್ತಿದರೆ ನೆಟ್‌ವರ್ಕ್ ಸಿಗುತ್ತೆ.’
‘ಟೀವಿ ಬರುತ್ತಾ?’
‘ಬರುತ್ತಂತೆ!’
‘ನೀವು ಟೀವಿ ನೋಡ್ತೀರಾ?’
‘ಇಲ್ಲ.’
‘ಮನರಂಜನೆಗೆ ಏನ್ ಮಾಡ್ತೀರಿ?’
‘ಬೇಸಾಯ ಮಾಡ್ತೀವಿ. ತರಕಾರಿ ಬೆಳೀತೀವಿ.’
ಆ ಹೆಣ್ಣುಮಗಳಿಗೆ ಪ್ರಶ್ನೆ ಅರ್ಥವಾಗಲಿಲ್ಲ ಎಂದುಕೊಂಡು ಮತ್ತೆ ಕೇಳಿದೆ. ‘ಹೊತ್ತು ಕಳೆಯೋದಕ್ಕೆ ಏನು ಮಾಡ್ತೀರಿ?’
‘ಬೇಸಾಯ ಮಾಡ್ತೀವಿ!’
ಕೇರಳದ ಈ ದೇಗುಲಕ್ಕೆ ನಾಯಿಯೂ ಪ್ರವೇಶಿಸಬಹುದು, ಸಿಗೋದು ಮೀನಿನ ಪ್ರಸಾದ
ದಾಂಡೇಲಿಯಿಂದ ಹೊರಟು, ಜೋಯಿಡಾ ದಾಟಿ, ಕಾಡ ನಡುವಿನ ರಸ್ತೆಯಲ್ಲಿ ಸುಮಾರು 30 ಕಿಲೋಮೀಟರ್ ಹೋದ ನಂತರ ಸಿಕ್ಕಿದ ಊರು ಅದು. ಅಲ್ಲಿರುವುದು ಕೇವಲ ಹನ್ನೆರಡು ಮನೆಗಳು. ಪ್ರತಿಯೊಂದು ಮನೆಯೂ ಅಚ್ಚುಕಟ್ಟು. ಚೆನ್ನಾಗಿ ಗುಡಿಸಿ ಸಾರಿಸಿದ ಅಂಗಳ, ಮನೆಗಳ ಪಕ್ಕದಲ್ಲೇ ಬಣ್ಣಬಣ್ಣದ ಶಾಲೆ. ಅಲ್ಲಿ ಓದುವುದು ಕೇವಲ ಐದು ಮಕ್ಕಳು. ಒಂದನೇ ಕ್ಲಾಸಿನಲ್ಲಿ ಒಬ್ಬ, ಮೂರನೇ ಕ್ಲಾಸಿನಲ್ಲಿ ಇಬ್ಬರು, ನಾಲ್ಕನೇ ಕ್ಲಾಸಿನಲ್ಲಿ ಇಬ್ಬರು. ಒಬ್ಬರೇ ಟೀಚರ್. ಅವರ ಮುಂದೆ ಆರು ಮಕ್ಕಳು ಕೂತಿದ್ದರು. ಮತ್ತೊಬ್ಬ ಹುಡುಗ ಅಂಗನವಾಡಿ ಬಾಲಕ.
ಬತ್ತ ಬೆಳೆಯುತ್ತಾರೆ, ಎಂಟು ಅಡಕೆಮರ, ಆರು ಬಾಳೆ ಗಿಡಗಳಿವೆ. ಮನೆ ಮುಂದೆಯೇ ತರಕಾರಿ ಬೆಳೆಯುತ್ತಾರೆ. ಅಲ್ಲಿಗೆ ಅವರ ಅಗತ್ಯಗಳು ಮುಗಿದವು. ಪಟ್ಟಣದ ಮುಖ ನೋಡಬೇಕು ಅಂದರೆ ಇಪ್ಪತ್ತು ಕಿಲೋಮೀಟರ್ ನಡೆಯಬೇಕು. ಗಂಡು ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಾರೆ, ಹೆಣ್ಮಕ್ಕಳು ಮನೆ ನೋಡಿಕೊಳ್ಳುತ್ತಾರೆ.
ಇಡೀ ಊರಲ್ಲಿ ಹುಡುಕಿದರೂ ಒಂದೇ ಒಂದು ತೆಂಗಿನಮರವಿಲ್ಲ. ಅಲ್ಲಿ ನೀರಿಗೆ ಬರ, ತೆಂಗು ಬೆಳೆಯುವುದಿಲ್ಲ ಅನ್ನುವುದು ಗೊತ್ತಾಯಿತು. ತೆಂಗೂ ಇಲ್ಲ, ಮನರಂಜನೆಯೂ ಇಲ್ಲ. ಎರಡು ವರುಷದ ಹಿಂದೆ ಆ ಊರಿಗೆ ಪುನೀತ್ ಹೋಗಿದ್ದರಂತೆ. ಆ ಊರಿನ ಮಂದಿಗೆ ಅವರು ಯಾರೆಂಬುದು ಕೂಡ ಗೊತ್ತಿರಲಿಲ್ಲ. ಮೊನ್ನೆ ಮೊನ್ನೆ ರಿಷಬ್ ಶೆಟ್ಟಿ ಹೋದಾಗಲೂ ಅವರು ಗುರುತು ಹಿಡಿಯಲಿಲ್ಲ. ಅವರು ‘ಕಾಂತಾರ’ ಸಿನಿಮಾವನ್ನೂ ನೋಡಿರಲಿಲ್ಲ.
ನಿರೀಕ್ಷೆಗಳಿಲ್ಲದ, ಆತಂಕವಿಲ್ಲ, ದುರಾಸೆಯಿಲ್ಲದ, ದೂರಾಲೋಚನೆಯೂ ಇಲ್ಲದ ಬದುಕು ಹಾಗಿರುತ್ತದಾ ಗೊತ್ತಿಲ್ಲ. ಅವರು ಆ ಊರು ಬಿಟ್ಟು ಹೋಗಿ, ನಾಗರಿಕತೆಯ ನಡುವೆ ಬದುಕಬಹುದು. ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಹಾಗಾದಾಗ ಅವರು ಈಗಿರುವಷ್ಟು ಸಂತೋಷವಾಗಿರುತ್ತಾರಾ? ಅಥವಾ ಈಗ ಅವರು ಸಂತೋಷವಾಗಿದ್ದಾರಾ?
ಅಪರೂಪದ ಅಲ್ಬಿನೋ ಜಿಂಕೆ ಪೋಟೋ ಸೆರೆ ಹಿಡಿದ ಎಂ.ಬಿ.ಪಾಟೀಲ್ ಮಗ ಧ್ರುವ ಪಾಟೀಲ್
ನಿಮ್ಮ ಮೆಚ್ಚಿನ ನಟ ಯಾರು ಹಾಗಾದರೆ?
ಈ ಪ್ರಶ್ನೆ ಕೇಳಿಸಿಕೊಂಡ ತಾತ ಮುಗುಳ್ನಕ್ಕು ಕೇಳಿದರು:
‘ಮೆಚ್ಚಿನ ನಟ ಅಂದರೆ ಏನು?’
ಇಂಥ ಅಬೋಧ ಮುಗ್ಧತೆಯನ್ನು ಯಾವ ಊರು ತಾನೇ ಹೊಂದಿರಲು ಸಾಧ್ಯ? ಅದನ್ನು ಈ ಕಾಲ ಹೇಗೆ ತಾನೇ ಸಹಿಸಿಕೊಳ್ಳಲು ಸಾಧ್ಯ?
ಪಾತಗುಡಿ ಇಂಥ ನೂರೆಂಟು ಪ್ರಶ್ನೆಗಳನ್ನು ಹೊಟ್ಟೆಯೊಳಗೆ ಬಚ್ಚಿಟ್ಟುಕೊಂಡಂತೆ ಕಾಣಿಸುತ್ತಿತ್ತು.