ಏಪ್ರಿಲ್ 2 ರಂದು ಊಟಿಗೆ ಹೋಗುವ ಪ್ರವಾಸಿಗರು ಗಮನಿಸಿ. ಇ-ಪಾಸ್ ಕಡ್ಡಾಯ ವಿರೋಧಿಸಿ ನೀಲಗಿರಿ ಜಿಲ್ಲೆಯಲ್ಲಿ ಬಂದ್ ಆಚರಿಸಲಾಗುತ್ತಿದೆ. ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರಿಕೆ ವಹಿಸಿ.
ವರದಿ - ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಮಾ.29): ಬೇಸಿಗೆ ರಜೆ ಬಂತು ಮಕ್ಕಳನ್ನು ಕರೆದುಕೊಂಡು ಊಟಿಗೆ ಹೋಗ್ಬೇಕು ಅಂತಾ ಪ್ಲ್ಯಾನ್ ಮಾಡಿದ್ದೀರಾ? ಮದುವೆಯಾಯ್ತು ಹನಿಮೂನ್‌ಗೆ ಊಟಿಗೆ ಹೋಗೋ ಯೋಚನೆ ಮಾಡ್ತಿದ್ದೀರಾ? ಹಾಗಿದ್ದಲ್ಲಿ ನೀವು ಈ ಸ್ಟೋರಿ ಓದಲೇಬೇಕು. ಏಪ್ರಿಲ್ 2 ರಂದು ಊಟಿಗೆ ಪ್ರವಾಸ ಹೋಗ್ಬೇಕು, ಅಲ್ಲಿಯೇ ಉಳಿದುಕೊಳ್ಳಬೇಕು ಅನ್ನೋ ಪ್ಲ್ಯಾನ್‌ನಲ್ಲಿದ್ದರೆ ಅದರಲ್ಲಿ ಬದಲಾವಣೆ ಮಾಡೋದು ಅನಿವಾರ್ಯವಾಗಿದೆ.
ಏ 2 ರಂದು ಊಟಿಗೆ ಹೋಗುವ ಮುನ್ನ ಕರ್ನಾಟಕ ಪ್ರವಾಸಿಗರು ಎಚ್ಚರಿಕೆಯಲ್ಲಿರೋದು ಅನಿವಾರ್ಯವಾಗಿದೆ. ಊಟಿಗೆ ಹೋಗಲು ಏಪ್ರಿಲ್ 1 ರಿಂದ ಇ-ಪಾಸ್ ಕಡ್ಡಾಯವಾಗಿದೆ. ಇದನ್ನು ವಿರೋಧಿಸಿ ತಮಿಳುನಾಡಿನ ನೀಲಗಿರಿ ಜಿಲ್ಲೆಯಾದ್ಯಂತ ಬಂದ್ ಘೋಷಣೆಯಾಗಿದೆ. ಹೌದು ಊಟಿಗೆ ಹೋಗಬೇಕಾದಲ್ಲಿ ಆನ್‌ಲೈನ್‌ನಲ್ಲಿ ಮೊದಲೇ ಇ- ಪಾಸ್ ಪಡೆಯಬೇಕು. ಪ್ರವಾಸಿಗರ ದಟ್ಟಣೆ ತಪ್ಪಿಸಲು ಚನ್ನೈ ಹೈಕೋರ್ಟ್ ಈ ಆದೇಶ ನೀಡಿದೆ. ಬಹುತೇಕ ಮೈಸೂರು-ಬಂಡೀಪುರ ರಸ್ತೆ ಮೂಲಕವೇ ಪ್ರವಾಸಿಗರು ಊಟಿಗೆ ಹೋಗುತ್ತಾರೆ. ಇ-ಪಾಸ್ ಕಡ್ಡಾಯದಿಂದ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ ಇ ಪಾಸ್ ರದ್ದುಗೊಳಿಸುವಂತೆ ಏಪ್ರಿಲ್ 2 ರಂದು ಊಟಿ ಬಂದ್‌ಗೆ ಕರೆ ನೀಡಲಾಗಿದೆ.
ನೀಲಗಿರಿ ಜಿಲ್ಲಾ ವ್ಯಾಪಾರಿ ಸಂಘಟನೆಗಳು ಹಾಗು ಇತರ ಸಂಘಟನೆಗಳು ಕರೆ ನೀಡಿದ್ದು, ಏಪ್ರಿಲ್ 2 ರಂದು ಊಟಿಗೆ ಕರ್ನಾಟಕದ ಪ್ರವಾಸಿಗರು ಭೇಟಿ ನೀಡದಂತೆ ಸಂಘಟನೆಗಳು ಮನವಿ ಮಾಡಿವೆ. ಇಂದಿನಿಂದ ವ್ಯಾಪಾರ ಅಂಗಡಿಗಳ ಮೇಲೆ, ಮನೆ ಮನೆಯ ಬಳಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಲಾಗುತ್ತಿದೆ.
ನೀಲಗಿರಿ ಜಿಲ್ಲೆಗೆ ಹೋಗಲು ಚೆನ್ನೈ ಹೈಕೋರ್ಟ್ ಇ-ಪಾಸ್ ಕಡ್ಡಾಯ ಮಾಡಿದೆ. ಇ ಪಾಸ್ ಅನ್ವಯ ನಿತ್ಯ 6 ಸಾವಿರ ವಾಹನಗಳಿಗಷ್ಟೇ ಪ್ರವೇಶಕ್ಕೆ ಅವಕಾಶವಿದೆ.
ಆದರೆ, ಈಗ ಬೇಸಿಗೆ ಕಾಲ ಶಾಲಾ ಕಾಲೇಜುಗಳಿಗೆ ರಜೆ ಕೂಡ ಬಂದಿದೆ. ನಿತ್ಯ ಏನಿಲ್ಲವೆಂದರೂ 25 ಸಾವಿರಕ್ಕೂ ಹೆಚ್ಚು ವಾಹನಗಳು ನೀಲಗಿರಿ ಜಿಲ್ಲೆಗೆ ಆಗಮಿಸುತ್ತವೆ. ಇ ಪಾಸ್ ಜಾರಿ ಅನ್ವಯ 6 ಸಾವಿರ ವಾಹಗಳಿಗಷ್ಟೇ ಪ್ರವೇಶ ಅವಕಾಶವಿದೆ. ಕೋರ್ಟ್ ಆದೇಶದಿಂದ ವ್ಯಾಪಾರ ವಹಿವಾಟು,ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ.
ಇ ಪಾಸ್ ಅನ್ನು ಸಂಪೂರ್ಣ ರದ್ದುಗೊಳಿಸಬೇಕು, ಹಿಂದಿನಿಂದ ನಡೆದುಕೊಂಡು ಬಂದಿರುವ ರೀತಿಯಲ್ಲಿ ಎಲ್ಲಾ ವಾಹನಗಳಿಗೂ ಪ್ರವೇಶಾವಕಾಶ ಕೊಡಬೇಕು ಅಂತಾ ಆಗ್ರಹಿಸಿ ಏಪ್ರಿಲ್ 2 ರಂದು ನೀಲಗಿರಿ ಜಿಲ್ಲಾದ್ಯಂತ ಬಂದ್ ಆಚರಿಸಲು ವ್ಯಾಪಾರಿ ಸೇರಿದಂತೆ ನಾನಾ ಒಕ್ಕೂಟಗಳು ಬಂದ್ ಗೆ ಕರೆ ಕೊಟ್ಟಿವೆ.
ಇನ್ನೂ ತಮಿಳುನಾಡಿನ ನೀಲಗಿರಿ ಜಿಲ್ಲೆಗೆ ಆಗಮಿಸಲು ಆರು ಮಾರ್ಗಗಳಿವೆ. ಅದರಲ್ಲಿ ನಾಲ್ಕು ಮಾರ್ಗ ಕೇರಳದಿಂದ ಬಂದ್ರೆ ತಮಿಳುನಾಡು ಹಾಗೂ ಕರ್ನಾಟಕದ ಬಂಡಿಪುರದ ಕೆಕ್ಕನಹಳ್ಳ ಮಾರ್ಗವಾಗಿ ಸಂಚಾರ ಕೂಡ ನಡೆಯುತ್ತದೆ. ಈ ಎಲ್ಲಾ ಮಾರ್ಗಗಳಿಂದಲೂ ಸರಕು ಸೇವೆ ಸೇರಿದಂತೆ ಪ್ರವಾಸೋದ್ಯಮಕ್ಕೆ ಬರುವವರ ಸಂಖ್ಯೆ ವೀಪರಿತವಾಗಿದೆ.
ಬೆಂಗಳೂರು ಜನರಿಗೆ ಬೇಸಿಗೆಯಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 7 ತಂಪಾದ ಸ್ಥಳಗಳು!
ಅದರಲ್ಲೂ ಬೇಸಿಗೆ ರಜೆ ಹಿನ್ನಲೆ ರಾಜ್ಯದ ನಾನಾ ಭಾಗಗಳಿಂದ ಬಂಡಿಪುರಕ್ಕೆ ಆಗಮಿಸುವ ಪ್ರವಾಸಿಗರು ಕೂಡ ಊಟಿ ಪ್ರವಾಸಕ್ಕೆ ಹೋಗುತ್ತಾರೆ. ಇದರಿಂದ ಊಟಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕೂಡ ಅಧಿಕವಾಗಿದೆ. ಏಪ್ರಿಲ್ 1 ರಿಂದ ಇ ಪಾಸ್ ಕಡ್ಡಾಯ ನಿಯಮ ಜಾರಿ ಬರಲಿದ್ದು, ಇದು ನೀಲಗಿರಿ ಪ್ರವಾಸೋದ್ಯಮ ಸೇರಿದಂತೆ ಅನೇಕ ಚಟುವಟಿಕೆಗಳ ಮೇಲೆ ಹೊಡೆತ ಕೊಡಲಿದೆ. ಈ ಆದೇಶವನ್ನು ಮರುಪರಿಶೀಲಿಸಿ ಇ ಪಾಸ್ ರದ್ದುಗೊಳಿಸಬೇಕು, ನೀಲಗಿರಿ ಜಿಲ್ಲೆಯ ಅನೇಕ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಬಂದ್ ಮಾಡಲೂ ನಿರ್ಧರಿಸಿದ್ದಾರೆ. ಶನಿವಾರದಿಂದಲೇ ನೀಲಗಿರಿ ಜಿಲ್ಲೆಯ ಅಂಗಡಿ ಮುಂಗಟ್ಟು ಹಾಗೂ ಮನೆಗಳ ಮೇಲೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುತ್ತಿದೆ.
Hill Stations: ದಕ್ಷಿಣ ಭಾರತದ 9 ಅದ್ಭುತ ಗಿರಿಧಾಮಗಳು
ಏ.2 ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆ ಸಂಪೂರ್ಣ ಸ್ಥಬ್ದವಾಗಲಿದ್ದು, ಹೋಟೆಲ್ ಅಂಗಡಿ ಮುಂಗಟ್ಟು, ಟ್ಯಾಕ್ಸಿ ಸೇರಿದಂತೆ ಯಾವುದೇ ಸೇವೆಗಳು ಕೂಡ 24 ಗಂಟೆ ಇರುವುದಿಲ್ಲ. ಕರ್ನಾಟಕದಿಂದ ಊಟಿಗೆ ಬರುವ ಪ್ರವಾಸಿಗರಿಗೆ ಯಾವುದೇ ಸೇವೆ ಸಿಗಲ್ಲ, ಊಟ ವಾಸ್ತವ್ಯ ಇರೋದಿಲ್ಲ. ಹಾಗಾಗಿ ಏ 2 ರಂದು ಯಾರೂ ಪ್ರವಾಸಕ್ಕೆ ಬರಬೇಡಿ ಅಂತಾ ನೀಲಗಿರಿ, ಊಟಿ ವರ್ತಕರ ಸಂಘದವರು ಮನವಿ ಮಾಡಿಕೊಂಡಿದ್ದಾರೆ.