
ರೈಲಿನಲ್ಲಿ ಮಗುವನ್ನು ಬಿಟ್ಟು ಹಾಲು ಏನೋ ತರುವುದಕ್ಕೆ ಬಂದ ಮಹಿಳೆಯೊಬ್ಬರಿಗೆ ರೈಲು ಮಿಸ್ ಆಗಿದೆ. ಇದರಿಂದ ಮಗು ಕಳೆದು ಹೋಗುವ ಬಯದಲ್ಲಿ ದಿಕ್ಕು ತೋಚದೇ ಟ್ರ್ಯಾಕ್‌ನಲ್ಲಿ ಅಳುತ್ತಾ ನಿಂತಿದ್ದ ತಾಯಿಯೊಬ್ಬರನ್ನ ರೈಲ್ವೆ ಗಾರ್ಡ್ ಒಬ್ಬರು ರೈಲು ನಿಲ್ಲಿಸುವ ಮೂಲಕ ಮಗುವಿನ ಜೊತೆ ಸೇರಿಸಿದ ಮಾನವೀಯ ಘಟನೆ ದೆಹಲಿ ರೈಲು ನಿಲ್ದಾಣದಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ಕುಟುಂಬವೂ ಬಿಹಾರದ ಗುಲ್ಫನ್‌ನ ಮಧುಬಾನಿಯ ನಿವಾಸಿಯಾಗಿದ್ದು, ದೆಹಲಿಯಿಂದ ಇವರು ತಮ್ಮ ಊರಿಗೆ ರೈಲು ಹತ್ತಿದ್ದಾರೆ. ದೆಹಲಿಯಿಂದ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ ಮೇಲೆ ಮಹಿಳೆ ಏನೋ ತರುವುದಕ್ಕಾಗಿ ಮಗುವನ್ನು ಬಿಟ್ಟು ರೈಲಿನಿಂದ ಇಳಿದಿದ್ದು, ಅಷ್ಟರಲ್ಲಿ ರೈಲು ಹೊರಟಿದೆ. ಓಡುತ್ತಿರುವ ರೈಲನ್ನು ಹತ್ತಲಾಗದೇ ಮಹಿಳೆ ಪಕ್ಕದ ಟ್ರ್ಯಾಕ್‌ನಲ್ಲಿ ಅಳುತ್ತಾ ನಿಂತಿದ್ದು, ಕೂಡಲೇ ಈ ವಿಚಾರ ರೈಲ್ವೆಯ ಗಾರ್ಡ್ ಒಬ್ಬರ ಗಮನಕ್ಕೆ ಬಂದಿದ್ದು, ರೈಲನ್ನು ನಿಲ್ಲಿಸಲಾಯ್ತು. ಹೀಗಾಗಿ ಅಳುತ್ತಿದ್ದ ಮಹಿಳೆ ಓಡಿ ಹೋಗಿ ರೈಲನ್ನು ಹತ್ತಿದ್ದು ತಮ್ಮ 2 ವರ್ಷದ ಮಗಳನ್ನು ಸೇರಿಕೊಂಡಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ರೈಲ್ವೆ ಗಾರ್ಡ್ ಹಾಗೂ ಅಧಿಕಾರಿಗಳ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ. @Gulzar_sahab ಎಂಬುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, 2 ಮಿಲಿಯನ್‌ಗೂ ಹೆಚ್ಚು ಜನ ವೀಡಿಯೋ ವೀಕ್ಷಿಸಿದ್ದಾರೆ. ಕೆಲವರು ತಾಯಿಯ ಪ್ರೀತಿಯನ್ನು ನೆನಪು ಮಾಡಿಕೊಂಡರೆ ಮತ್ತೆ ಕೆಲವರು ಗಾರ್ಡ್‌ನ ಸಮಯಪ್ರಜ್ಞೆಗೆ ಧನ್ಯವಾದ ತಿಳಿಸಿದ್ದಾರೆ. ಈ ಪ್ರಪಂಚದಲ್ಲಿ ಮಾನವೀಯತೆ ಇನ್ನು ಜೀವಂತವಾಗಿದೆ. ತಾಯಿ ತನ್ನ ಮಗುವಿಗಾಗಿ ಏನು ಬೇಕಾದರೂ ಮಾಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಕೆಲ ವರದಿಗಳ ಪ್ರಕಾರ ಈ ಸುದ್ದಿಗೆ ಮತ್ತೊಂದು ಆಯಾಮವಿದ್ದು, ಮಹಿಳೆ ತನ್ನ ಮಾನಸಿಕ ಅಸ್ವಸ್ಥ ಪತಿ ಹಾಗೂ ಮಗಳ ಜೊತೆ ಸ್ವಾತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲನ್ನು ಹತ್ತಬೇಕಿತ್ತು. ಆದರೆ ರೈಲು ನಿಲ್ದಾಣದಲ್ಲಿದ್ದ ತೀವ್ರ ಜನಸಂದಣಿಯಲ್ಲಿ ಮಹಿಳೆಯ ಪತಿ ಮಗುವಿನೊಂದಿಗೆ ಪ್ರಯಾಗ್‌ರಾಜ್ ದುರಂತೋ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದು, ಮಹಿಳೆಗೆ ಆಕೆಯ ಪತಿಯನ್ನು ಪತ್ತೆ ಮಾಡಲಾಗಲಿಲ್ಲ, ಆಕೆ ತನ್ನ ಸಂಬಂಧಿಗಳ ಜೊತೆ ರೈಲ್ವೆ ಸ್ಟೇಷನ್‌ನಲ್ಲೇ ಬಾಕಿ ಆಗಿದ್ದಾರೆ. ಆದರೆ ಗಂಡ ಹಾಗೂ ಮಗುವನ್ನು ರೈಲು ನಿಲ್ದಾಣದಲ್ಲಿ ಕಳೆದುಕೊಂಡ ಮಹಿಳೆಯ ಅಳಲು ಕೂಡಲೇ ಟ್ವಿಟ್ಟರ್ ಮೂಲಕ ರೈಲ್ವೆಯನ್ನು ತಲುಪಿದ್ದು, ಕೂಡಲೇ ಈ ಪ್ರಯಾಗ್ ರಾಜ್ ದುರಂತೋ ರೈಲನ್ನು ಇತ್ವಾ ಜಂಕ್ಷನ್‌ನಲ್ಲಿ ಬೆಳಗ್ಗೆ 9.18ಕ್ಕೆ ನಿಲ್ಲಿಸಲಾಯ್ತು. ನಂತರ ರೈಲ್ವೆ ಆರ್‌ಪಿಎಫ್ ಪೊಲೀಸರರು ತಂದೆ ಹಾಗೂ ಮಗವನ್ನು ಆ ರೈಲಿನಿಂದ ಇಳಿಸಿ ಕರೆದುಕೊಂಡು ಬಂದು ಮಧ್ಯಾಹ್ನ 12.16ಕ್ಕೆ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲಿಗೆ ಹತ್ತಿಸಿದ್ದಾರೆ. ಈ ಕಾರಣಕ್ಕೆ ಸ್ಟಾಪ್ ಇಲ್ಲದಿದ್ದರೂ ಇತ್ವಾ ಜಂಕ್ಷನ್‌ನಲ್ಲಿ ಸ್ವಾತಂತ್ರ ಸೇನಾನಿ ರೈಲನ್ನು ನಿಲ್ಲಿಸಲಾಯ್ತು ಎಂದು ವರದಿಯಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ರೈಲ್ವೆಯ ವಕ್ತಾರ ಅಮಿತ್ ಮಾಳವೀಯಾ ಪ್ರತಿಕ್ರಿಯಿಸಿದ್ದು, ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೊಂದು ಇದು ಸೂಕ್ಷ್ಮವಾದ ಸನ್ನಿವೇಶವಾಗಿತ್ತು, ಮತ್ತು ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕುಟುಂಬವನ್ನು ಮತ್ತೆ ಒಂದುಗೂಡಿಸಲು ತಂಡವು ತ್ವರಿತವಾಗಿ ಕಾರ್ಯನಿರ್ವಹಿಸಿತು ಎಂದು ಅವರು ಹೇಳಿದ್ದಾರೆ.
ಮರೆಯಲಾಗದ ಕರುಳಬಳ್ಳಿಯ ಅನುಬಂಧ: ತೊರೆದು ಹೋದ ಹೆತ್ತಮ್ಮನ ಹುಡುಕಿ ಭಾರತಕ್ಕೆ ಬಂದ ಸ್ಪೇನಿಶ್ ಯುವತಿ
ತನ್ನ ಸಾಕಿ ಬೆಳೆಸಿದ ವಿಧವೆ ತಾಯಿಗೆ ಮರು ಮದ್ವೆ ಮಾಡಿಸಿದ 18 ವರ್ಷದ ಪುತ್ರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.