ಟೀವಿ ಚಾನಲ್‌ಗಳ ದರ ಇಳಿಸಲು ಟ್ರಾಯ್‌ ಹೊಸ ನಿಯಮ; ಅನುಮಾನಕ್ಕಿಲ್ಲಿದೆ ಉತ್ತರ!

By Shrilakshmi ShriFirst Published Jan 4, 2020, 5:13 PM IST
Highlights

ಹೊಸ ವರ್ಷದ ಆರಂಭದಲ್ಲಿಯೇ ಟ್ರಾಯ್‌ (ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಡಿಟಿಎಚ್‌ ಅಥವಾ ಕೇಬಲ್‌ ಸಂಪರ್ಕವನ್ನು ಚಾಲನೆಯಲ್ಲಿ ಇಡಲು ಸಂಸ್ಥೆಗಳು ಪಡೆಯುತ್ತಿದ್ದ ಕಡ್ಡಾಯ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕಕ್ಕೆ (ಎನ್‌ಸಿಎಫ್‌) 130 ರು.ಗಳ ಗರಿಷ್ಠ ಮಿತಿಯನ್ನು ಟ್ರಾಯ್‌ ನಿಗದಿಪಡಿಸಿದೆ.

ಹೊಸ ವರ್ಷದ ಆರಂಭದಲ್ಲಿಯೇ ಟ್ರಾಯ್‌ (ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಡಿಟಿಎಚ್‌ ಅಥವಾ ಕೇಬಲ್‌ ಸಂಪರ್ಕವನ್ನು ಚಾಲನೆಯಲ್ಲಿ ಇಡಲು ಸಂಸ್ಥೆಗಳು ಪಡೆಯುತ್ತಿದ್ದ ಕಡ್ಡಾಯ ನೆಟ್‌ವರ್ಕ್ ಸಾಮರ್ಥ್ಯ ಶುಲ್ಕಕ್ಕೆ (ಎನ್‌ಸಿಎಫ್‌) 130 ರು.ಗಳ ಗರಿಷ್ಠ ಮಿತಿಯನ್ನು ಟ್ರಾಯ್‌ ನಿಗದಿಪಡಿಸಿದೆ.

ಅಲ್ಲದೆ ಇದೇ ಬೆಲೆಗೆ ಮತ್ತೆ 100 ಚಾನಲ್‌ಗಳನ್ನು ಉಚಿತವಾಗಿ ನೀಡಬೇಕೆಂಬ ನಿಯಮ ರೂಪಿಸಿದೆ. ಆದರೆ ಇತ್ತೀಚೆಗಷ್ಟೇ ಈ ಕುರಿತ ನಿಯಮ ಬದಲಿಸಿದ್ದ ಟ್ರಾಯ್‌ ಮತ್ತೊಮ್ಮೆ ಪರಿಷ್ಕರಿಸಿದ್ದು ಏಕೆ, ಹಿಂದಿದ್ದ ನಿಯಮಗಳೇನು, ಹೊಸ ನಿಯಮ ಏನು, ಇದರಿಂದ ನಿಜಕ್ಕೂ ಗ್ರಾಹಕರ ಹೊರೆ ಕಡಿಮೆಯಾಗುತ್ತಾ ಎಂಬ ಮಾಹಿತಿ ಇಲ್ಲಿದೆ.

ಆನ್‌ಲೈನ್‌ ಮಾರಾಟ ಕ್ಷೇತ್ರಕ್ಕೆ ರಿಲಯನ್ಸ್‌ ಜಿಯೋ ಮಾರ್ಟ್‌ ಲಗ್ಗೆ!

ಹಿಂದಿನ ನಿಮಯ ಏನು? ಈಗಿನ ನಿಯಮ ಏನು?

ಟ್ರಾಯ್‌ನ ಈ ಹಿಂದಿನ ನಿಯಮದಲ್ಲಿ ತೆರಿಗೆ ಹೊರತುಪಡಿಸಿ 130 ರು.( ಜಿಎಸ್‌ಟಿ ಸೇರಿ ಒಟ್ಟು 154 ರು.) ಎನ್‌ಸಿಎಫ್‌ ಪಾವತಿಸಿದರೆ ದೂರದರ್ಶನದ 26 ಚಾನಲ್‌ಗಳು ಸೇರಿದಂತೆ 100 ಚಾನಲ್‌ಗಳ ಉಚಿತ ವೀಕ್ಷಣೆಗೆ ಅವಕಾಶ ಇತ್ತು. ಉಚಿತವಾಗಿರುವ 74 ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಗ್ರಾಹಕರಿಗೆ ಇತ್ತು. ಈ ನೂರು ಚಾನಲ್‌ಗಳ ಜೊತೆಗೆ ಇನ್ನೂ ಉಚಿತವಾಗಿ ಲಭ್ಯವಿರುವ ಚಾನಲ್‌ ವೀಕ್ಷಣೆಗೆ ಪ್ರತಿ 25 ಉಚಿತ ಚಾನಲ್‌ಗಳಿಗೆ 20 ರು. ಜಿಎಸ್‌ಟಿ ಸೇರಿದಂತೆ ಸುಮಾರು 25 ರು. ಪಾವತಿಸಬೇಕಿತ್ತು.

ಅಂತೆಯೇ ಚಾನಲ್‌ಗಳ ಸಂಖ್ಯೆ ಹೆಚ್ಚಾದಂತೆ ಸರಾಸರಿ 1 ರು. ಎನ್‌ಸಿಎಫ್‌ ದರ ಹೆಚ್ಚುತ್ತಾ ಹೋಗುತ್ತಿತ್ತು. ಸದ್ಯ ಈ ನಿಯಮವನ್ನು ಪರಿಷ್ಕರಿಸಿರುವ ಟ್ರಾಯ್‌ ಅದೇ ಎನ್‌ಸಿಎಫ್‌ (130 + ಜಿಎಸ್‌ಟಿ= 154) ಪಾವತಿಸಿ 100 ಚಾನಲ್‌ಗಳ ಬದಲಿಗೆ 200 ಚಾನಲ್‌ಗಳನ್ನು ಉಚಿತವಾಗಿ ನೀಡುವಂತೆ ನಿಯಮ ರೂಪಿಸಿದೆ. ಹಾಗೂ ಗ್ರಾಹಕರು 160 ರುಪಾಯಿ (ತೆರಿಗೆ ಬಿಟ್ಟು) ಪಾವತಿಸಿದರೆ ಅದಕ್ಕೆ ಲಭ್ಯವಿರುವ ಎಲ್ಲಾ ಉಚಿತ ಚಾನಲ್‌ಗಳನ್ನು ನೀಡಬೇಕು ಎಂದಿದೆ.

ಅಲ್ಲದೆ ಸರ್ಕಾರ ಕಡ್ಡಾಯ ಎಂದು ಘೋಷಿಸಿರುವ ಚಾನಲ್‌ಗಳನ್ನು ‘ಉಚಿತ’ ಪಟ್ಟಿಯಲ್ಲಿ ಪರಿಗಣಿಸುವಂತಿಲ್ಲ ಎಂದು ಟ್ರಾಯ್‌ ತನ್ನ ನೂತನ ನಿಯಮದಲ್ಲಿ ತಿಳಿಸಿದೆ. ಈ ಮೂಲಕ ಕಡಿಮೆ ಹಣ ಪಾವತಿಸಿ ಹೆಚ್ಚಿನ ಚಾನಲ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಪೇ ಚಾನಲ್‌, ಫ್ರೀ ಟು ಏರ್‌ ಚಾನಲ್‌ ಎಂದರೆ ಏನು?

ಯಾವುದೇ ಟೀವಿ ಚಾನಲ್‌ನ ಮಾಲಿಕ ತಾನು ಪ್ರಸಾರ ಮಾಡುವ ಚಾನಲ್‌ಗೆ ದರ ನಿಗದಿಪಡಿಸಿದರೆ ಅದು ಪೇ ಚಾನಲ್‌ ಆಗುತ್ತದೆ. ಫ್ರೀ ಟು ಏರ್‌ (ಎಫ್‌ಟಿಎ) ಎಂದರೆ ಚಾನಲ್‌ ಮಾಲಿಕ ತನ್ನ ಚಾನಲ್ಲನ್ನು ಗ್ರಾಹಕರಿಗೆ ಯಾವುದೇ ದರ ನಿಗದಿಪಡಿಸದೆಯೇ ನೀಡುವುದು. ಈ ಚಾನಲ್‌ಗಳನ್ನು ವೀಕ್ಷಿಸಲು ಗ್ರಾಹಕರು ಪ್ರತ್ಯೇಕ ಹಣ ನೀಡಬೇಕಿಲ್ಲ.

ಒಂದಕ್ಕಿಂತ ಹೆಚ್ಚು ಕನೆಕ್ಷನ್‌ಗೆ 40% ಡಿಸ್ಕೌಂಟ್‌

ಕೇಬಲ್ ಗ್ರಾಹಕರು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕನೆಕ್ಷನ್‌ ಹೊಂದಿದ್ದರೆ ಮೊದಲ ಕನೆಕ್ಷನ್‌ ಹೊರತುಪಡಿಸಿ ನಂತರ ಪಡೆಯುವ ಪ್ರತಿ ಕನೆಕ್ಷನ್‌ಗೆ ಎನ್‌ಸಿಎಫ್‌ ಶುಲ್ಕದಲ್ಲಿ ಗರಿಷ್ಠ 40% ರಿಯಾಯಿತಿ ಲಭ್ಯವಾಗಲಿದೆ. ಈ ಮೂಲಕ ಹೆಚ್ಚುವರಿ ಕನೆಕ್ಷನ್‌ಗೆ ಮೊದಲ ಕನೆಕ್ಷನ್‌ನಷ್ಟೇ ಹಣ ಪಾವತಿಸುವುದು ತಪ್ಪಲಿದೆ.

ಕೇಬಲ್‌ ಟೀವಿ ಚಾನಲ್ ಶುಲ್ಕ ಭಾರೀ ಇಳಿಕೆ

ದೀರ್ಘಾವಧಿ ಪ್ಯಾಕ್‌ಗೆ ರಿಯಾಯಿತಿ

ಈ ಹಿಂದೆ ಕೆಲವು ರಿಯಾಯಿತಿಗಳನ್ನು ಪಡೆಯಲು ದೀರ್ಘಾವಧಿ ಚಂದಾದಾರಿಕೆ ಯೋಜನೆಗಳಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಆದ್ಯತೆ ನೀಡುತ್ತಿದ್ದರು. ಇತ್ತೀಚಿನ ಬದಲಾವಣೆಯು ರಿಯಾಯಿತಿಗಳ ಮೇಲೆ ಪರಿಣಾಮ ಬೀರಿತ್ತು. ಆದರೆ ಟ್ರಾಯ್‌ನ ಹೊಸ ನಿಯಮವು ಕೇಬಲ್ ಟೀವಿ ಆಪರೇಟರ್‌ಗಳು ಮತ್ತು ಡಿಟಿಎಚ್‌ ಪೂರೈಕೆದಾರರಿಗೆ ಆರು ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ದೀರ್ಘಾವಧಿಯ ಚಂದಾದಾರಿಕೆಗಳಿಗೆ ರಿಯಾಯಿತಿ ನೀಡಲು ಅನುಮತಿ ನೀಡಿದೆ. ಇದು ಒಂದು ರೀತಿಯಲ್ಲಿ ಗ್ರಾಹಕ ಸ್ನೇಹಿ ಬದಲಾವಣೆ ಎಂದು ಹೇಳಬಹುದು.

ಚಾನಲ್‌ವೊಂದರ ದರ 12 ರು. ಮೀರುವಂತಿಲ್ಲ

ಗುಚ್ಚಗಳಲ್ಲಿ ಲಭ್ಯವಿರುವ ಚಾನಲ್‌ಗಳನ್ನು ಗ್ರಾಹಕನೊಬ್ಬ ಪ್ರತ್ಯೇಕವಾಗಿ ಪಡೆಯಬಯಸಿದರೆ, ಆತನಿಗೆ ಸೇವಾ ಕಂಪನಿಗಳು ಪ್ರತಿ ಚಾನಲ್‌ಗೆ ವಿಧಿಸುವ ಶುಲ್ಕವು ಗುಚ್ಚದಲ್ಲಿ ಲಭ್ಯವಿರುವ ಎಲ್ಲಾ ಚಾನಲ್‌ಗಳ ಸರಾಸರಿ ಶುಲ್ಕದ ಒಂದೂವರೆ ಪಟ್ಟಿಗಿಂತ ಹೆಚ್ಚಿರಬಾರದು.

(ಉದಾಹರಣೆಗೆ ಒಂದು ಗುಚ್ಚದಲ್ಲಿ 5 ಚಾನಲ್‌ಗಳಿದ್ದು, ಅದಕ್ಕೆ 40 ರು. ಶುಲ್ಕ ಇದೆ ಎಂದಿಟ್ಟುಕೊಳ್ಳಿ. ಆಗ 5 ಚಾನಲ್‌ಗಳ ಸರಾಸರಿ ಶುಲ್ಕ 8 ರು. ಆಗುತ್ತದೆ. ಹೀಗಾಗಿ ಈ ಗುಚ್ಚದಲ್ಲಿ ಯಾವುದೇ ಚಾನಲ್‌ ಅನ್ನು ಗ್ರಾಹಕ ಪ್ರತ್ಯೇಕವಾಗಿ ಬಯಸಿದರೆ ಅದರ ಶುಲ್ಕ 12 ರು.ಗಿಂತ ಹೆಚ್ಚಿರಬಾರದು). ಹಾಗೆಯೇ ಪ್ರಸಾರಕರು ಕ್ಯಾರಿಯೇಜ್‌ ಶುಲ್ಕದ ರೂಪದಲ್ಲಿ ಡಿಪಿಒ (ಡಿಸ್ಟ್ರಿಬ್ಯೂಷನ್‌ ಫ್ಲಾಟ್‌ಫಾಮ್‌ರ್‍ ಆಪರೇಟ​ರ್‍ಸ್)ಗಳಿಗೆ ನೀಡಬೇಕಿದ್ದ ಶುಲ್ಕದ ಮೇಲೂ ಗರಿಷ್ಠ ಮಾಸಿಕ 4 ಲಕ್ಷ ರು.ಗಳ ಮಿತಿ ಹೇರಲಾಗಿದೆ.

ಹೊಸ ನಿಯಮ ಇದೇ ವರ್ಷ ಮಾರ್ಚ್ 1 ರಿಂದ ಜಾರಿ

ಜನವರಿ 15ರೊಳಗೆ ಕೇಬಲ್ ಟೀವಿ ಪ್ರಸಾರಕರು ಟ್ರಾಯ್ನ ಹೊಸ ನಿಯಮದನ್ವಯ ದರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಬೇಕು. ಹಾಗೆಯೇ ಟೀವಿ ಆಪರೇಟರ್‌ಗಳು ಮತ್ತು ಡಿಟಿಎಚ್‌ ಆಪರೇಟರ್‌ಗಳು ಸೇರಿದಂತೆ ಎಲ್ಲಾ ಸರ್ವೀಸ್ ಪ್ರೊವೈಡರ್‌ ತಮ್ಮ ಡಿಸ್ಟ್ರಿಬ್ಯೂಟರ್‌ ರೀಟೇಲ್‌ ಪ್ರೈಸ್‌ ಅನ್ನು ಜನವರಿ 30ರ ಒಳಗಾಗಿ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಟ್ರಾಯ್‌ನ ಈ ಹೊಸ ನಿಯಮಗಳು ಮಾರ್ಚ್ 1ರಿಂದ ಜಾರಿಗೆ ಬರಲಿವೆ.

ಹೊಸ ನಿಯಮ ಜಾರಿ ಮಾಡಿದ್ದೇಕೆ?

ಈ ಹಿಂದೆ ಗ್ರಾಹಕರು ತಾವು ನೋಡದ ಚಾನಲ್‌ಗಳಿಗೂ ಹಣ ಪಾವತಿಸಬೇಕಿತ್ತು. ಅದನ್ನು ತಪ್ಪಿಸಲೆಂದು ಕಳೆದ ವರ್ಷ ಏಪ್ರಿಲ್‌ನಲ್ಲಿ ಟ್ರಾಯ್‌ ಜಾರಿಮಾಡಿದ ನಿಯಮದಿಂದ ಗ್ರಾಹಕರಿಗೆ ನಿರೀಕ್ಷಿಸಿದಷ್ಟು ಅನುಕೂಲವಾಗಿರಲಿಲ್ಲ. ನೀವು ನೋಡುವ ಚಾನಲ್‌ಗಳಿಗಷ್ಟೇ ಹಣ ಕೊಡಿ ಎಂಬ ಸೂತ್ರದ ಮೇಲೆ ಟ್ರಾಯ್‌ ಹೊಸ ದರ ನಿಯಮ ಜಾರಿಗೆ ತಂದಿತ್ತು. ಆದರೆ, ದರ ವ್ಯವಸ್ಥೆ ಬದಲಾದರೂ ಮಾಸಿಕ ಶುಲ್ಕ ಕಡಿಮೆ ಮಾಡದ ಕೇಬಲ್‌ ಆಪರೇಟರ್‌ಗಳು ಗ್ರಾಹಕರಿಂದ ಮೊದಲಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು.

ಗೂಗಲ್‌ಗೆ ಡಕ್‌ಡಕ್‌ಗೋ ಸೆಡ್ಡು? ಇಂಟರ್ನೆಟ್ಟಲ್ಲಿ ಇದರದ್ದೇ ಸದ್ದು!

ಅಲ್ಲದೆ, ಉದಾಹರಣೆಗೆ, ಉಚಿತವಾಗಿ ಸಿಗುವ ಚಾನಲ್‌ಗಳ ಜೊತೆಗೆ ಉದಯ ಟೀವಿ ನೋಡಬೇಕೆಂದರೆ 17 ರು. (ಜಿಎಸ್‌ಟಿ ಸೇರಿ 18.5 ರು) ಪಾವತಿಸಬೇಕಿತ್ತು. ಪ್ರತಿಯೊಂದು ಚಾನಲ್‌ಗೂ ಇಷ್ಟುಹಣ ಪಾವತಿಸಬೇಕಾದ ಕಾರಣ ಗ್ರಾಹಕರು ತಿಂಗಳಿಗೆ ಕನಿಷ್ಠ 300ರಿಂದ 350 ರು. ಪಾವತಿಸಬೇಕಿತ್ತು. ಈ ಬಗ್ಗೆ ಅನೇಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಟ್ರಾಯ್‌ ಈ ಬದಲಾವಣೆಗೆ ಮುಂದಾಗಿದೆ.

ಡಿಟಿಎಚ್‌ ಕೇಬಲ್‌ ಟೀವಿಗೆ ಇಂಟರ್‌ನೆಟ್‌ ಟೀವಿಗಳ ಸಡ್ಡು

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೇಬಲ್‌ ಟೀವಿ ಮತ್ತು ಡಿಟಿಎಚ್‌ ತಲೆನೋವೇ ಬೇಡವೆಂದು ಇಂಟರ್‌ನೆಟ್‌ ಆಧಾರಿತ ಮನರಂಜನೆಗೆ ಮೊರೆ ಹೋಗುತ್ತಿದ್ದಾರೆ. ಹಾಟ್‌ಸ್ಟಾರ್‌, ಝೀ 5, ಜಿಯೊ ಟೀವಿ, ನೆಟ್‌ಫ್ಲಿಕ್ಸ್‌, ಎಂಎಕ್ಸ್‌ ಪ್ಲೆಯರ್‌, ವೂಟ್‌, ಡಿಟೊ ಟೀವಿ, ಟಾಟಾ ಸ್ಕೈ, ಆಲ್ಟ್‌ ಬಾಲಾಜಿ ಮತ್ತಿತರ (ಓವರ್‌ ದಿ ಟಾಪ್‌ ಮೀಡಿಯಾ ಸವೀರ್‍ಸ್‌) ನೆಟ್‌ವರ್ಕ್ಗಳು ಜನಪ್ರಿಯವಾಗುತ್ತಿವೆ. ಇವುಗಳು ಕೇಬಲ್‌ ಹಾಗೂ ಡಿಟಿಎಚ್‌ ಉದ್ಯಮಕ್ಕೆ ಸವಾಲಾಗಿ ಪರಿಣಮಿಸಿವೆ.

ಯಾರಿಗೆ ಏನು ಉಪಯೋಗ? ಗ್ರಾಹಕರಿಗೆ ಆಗುವ ಅನುಕೂಲ

ಹಳೇ ದರಕ್ಕೆ 200 ಚಾನಲ್‌ಗಳು ಉಚಿತವಾಗಿ ಸಿಗುತ್ತವೆ.

ತನಗೆ ಬೇಕಾದ ಚಾನಲ್‌ಗೆ ಮಾತ್ರ ಹಣ ಪಾವತಿಸುತ್ತಾನೆ, ಇದರಿಂದ ದುಂದುವೆಚ್ಚ ತಪ್ಪಿಸಬಹುದು.

ಅನಗತ್ಯವಾಗಿ ಪ್ರಸಾರ ಆಗುವ ಚಾನಲ್‌ಗಳ ಕಿರಿಕಿರಿಯಿಂದ ಮುಕ್ತವಾಗಬಹುದು.

ಒಂದಕ್ಕಿಂತ ಹೆಚ್ಚು ಟೀವಿ ಕನೆಕ್ಷನ್‌ ಹೊಂದಿರುವ ಚಂದಾದಾರರಿಗೆ ಹೆಚ್ಚುವರಿ ಕನೆಕ್ಷನ್‌ಗಳ ದರ ಕಡಿಮೆಯಾಗುತ್ತದೆ.

ಟೀವಿ ಚಾನಲ್‌ಗಳಿಗೆ ಆಗುವ ಲಾಭ

ಚಾನಲ್‌ಗಳ ಪ್ರಸಾರಕರು ತಮ್ಮ ಚಾನಲ್‌ಗೆ ತಾವೇ ಮೌಲ್ಯ ನಿಗದಿಪಡಿಸಬಹುದು ಅಥವಾ ಉಚಿತವಾಗಿ ನೀಡಬಹುದು.

ಗ್ರಾಹಕನಿಗೆ ನೇರವಾಗಿ ಅದೇ ಬೆಲೆಗೆ ಚಾನಲ್‌ ತಲುಪುತ್ತದೆ.

ಇದರಿಂದ ಚಾನಲ್‌ ಪ್ರಸಾರಕರಿಗೆ ನಿರ್ದಿಷ್ಟಆದಾಯ ಹರಿದುಬರಲಿದೆ.

ಡಿಸ್ಟ್ರಿಬ್ಯೂಟರ್‌ಗೆ ಸಿಗುವ ಅನುಕೂಲ

ವಿತರಕ ಬ್ರಾಡ್‌ಕಾಸ್ಟರ್‌ರೊಂದಿಗೆæ (ಟೀವಿ ಚಾನಲ್‌) ನೇರ ಒಪ್ಪಂದ ಮಾಡಿಕೊಂಡು ಚಾನಲ್‌ ನೀಡಬೇಕು. ಕಾನೂನಿಗೆ ವಿರುದ್ಧವಾಗಿ ಚಾನಲ್‌ ಪ್ರಸಾರ ಮಾಡಲು ಅವಕಾಶವಿರುವುದಿಲ್ಲ.

ಪ್ರಸಾರಕ ವಿತರಕನಿಗೆ ನೇರವಾಗಿ ಹಣ ಸಂದಾಯ ಮಾಡುತ್ತಾನೆ ಅಥವಾ ಆತ ಗ್ರಾಹಕನಿಗೆ ವಿಧಿಸುವ ಹಣದಲ್ಲಿಯೇ ವಿತರಕನಿಗೆ ಒಂದು ಭಾಗವನ್ನು ನೀಡುತ್ತಾನೆ.

ವಿತರಕ ತನ್ನ ಸೇವೆಯನ್ನು ಮತ್ತಷ್ಟುಉನ್ನತೀಕರಿಸುವ ಅವಕಾಶವನ್ನು ಹೊಂದಿರುತ್ತಾನೆ.

ಮಾರ್ಚ್‌ 1 ರಿಂದ ಗ್ರಾಹಕರಿಗೆ ನಿಜವಾಗಿಯೂ ಎಷ್ಟು ಉಳಿತಾಯ?

ಟ್ರಾಯ್‌ನ ಹೊಸ ನಿಯಮ ಅನುಷ್ಠಾನವಾದ ಬಳಿಕ ಗ್ರಾಹಕರಿಗೆ ಅಲ್ಪ ಹೊರೆ ಕಡಿಮೆಯಾಗಲಿದೆ. ಆದರೆ ಹೆಚ್ಚೇನೂ ಕಡಿಮೆಯಾಗುವುದಿಲ್ಲ. ಫ್ರೀ ಟು ಏರ್‌ ಚಾನಲ್‌ ಅಥವಾ ಕಡಿಮೆ ಬೆಲೆ ಇರುವ ಚಾನಲ್‌ಗಳನ್ನೇ ಆಯ್ಕೆ ಮಾಡಿಕೊಂಡರೆ ತಿಂಗಳ ಟೀವಿ ಬಿಲ್‌ ಕಡಿಮೆಯಾಗುತ್ತದೆ. ಅದೇ ಪೇಯ್ಡ್‌ ಚಾನಲ್‌ಗಳನ್ನೇ ಅಂದರೆ ಸ್ಪೋಟ್ಸ್‌ರ್‍ ಅಥವಾ ಮನರಂಜನಾ ಚಾನಲ್‌ಗಳನ್ನು ಹೆಚ್ಚು ಬಳಸಿದರೆ ಹೆಚ್ಚು ಹಣವನ್ನೂ ವ್ಯಯಿಸಬೇಕಾಗುತ್ತದೆ.

click me!