ಭಾರತೀಯ ರೈಲ್ವೆ ವಿನೂತನ ಪ್ರಯೋಗಕ್ಕೆ ರಿಲಾಯನ್ಸ್ ಸಾಥ್

By Web DeskFirst Published Sep 22, 2018, 9:51 PM IST
Highlights

ಒಂದರ ಮೇಲೊಂದು ಇರಿಸಬಹುದಾದ ಕುಬ್ಜ ಕಂಟೇನರ್‌ನ್ನ ಭಾರತೀಯ ರೈಲ್ವೆ ಪರಚಯಿಸಿದೆ. ಸರಕು ಸಾಗಾಣಿಯಲ್ಲಿ ವೆಚ್ಚ, ಪರಿಸರ ಮಾಲಿನ್ಯ, ವಾಹನ ದಟ್ಟಣೆ ಸೇರಿದಂತೆ ಹಲವು ಪ್ರಯೋಜನಹೊಂದಿರುವ ಈ ಸೇವೆಯನ್ನ ರಿಲಯನ್ಸ್ ಇಂಡಸ್ಟ್ರೀಸ್ ಬಳಸಿಕೊಂಡು ಇತರರಿಗೆ ಮಾದರಿಯಾಗಿದೆ.

ಮುಂಬೈ(ಸೆ.22): ಭಾರತೀಯ ರೈಲ್ವೆ ಪರಿಚಯಿಸಿದ ಒಂದರ ಮೇಲೊಂದು ಇರಿಸಬಹುದಾದ ಕುಬ್ಜ ಕಂಟೇನರ್ ಸೇವೆಯನ್ನು ಬಳಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿ. (ಆರ್‌ಐಎಲ್) ಪಾತ್ರವಾಗಿದೆ. 82 ಕಂಟೇನರುಗಳಷ್ಟು ಪ್ರಮಾಣದ ಪಾಲಿಮರ್ ಕಾರ್ಗೋ ಅನ್ನು ಜಾಮನಗರದ ಕನಲಸ್‌ನಿಂದ ಹರಿಯಾಣದ ರೇವಾರಿಗೆ ರಿಲಾಯನ್ಸ್ ಸಂಸ್ಥೆ ಸಾಗಿಸಿದೆ.  ಒಂದು ಪೂರ್ಣ ರೈಲನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಸರಕನ್ನ ಸಾಗಿಸಿದೆ. 

ರೈಲ್ವೆ ನೂತನ ಪ್ರಯೋಗದಲ್ಲಿ ಸರಕು ಸಾಗಣಿಕೆಯ ವೆಚ್ಚವಷ್ಟೇ ಅಲ್ಲದೆ ಇಂಧನ ಬಳಕೆ ಹಾಗೂ ಮಾಲಿನ್ಯ ಕೂಡ ಕಡಿಮೆ ಎನ್ನುವುದು ಗಮನಾರ್ಹ. ಸಾಗಾಣಿಕೆಯ ಎಲ್ಲ ಅಗತ್ಯಗಳಿಗೂ ರಸ್ತೆ ಸಂಚಾರವನ್ನೇ ಹೆಚ್ಚಾಗಿ ಅವಲಂಬಿಸಿದ್ದ ರಿಲಾಯನ್ಸ್ ಇದೀಗ ರೈಲಿನ ಮೂಲಕ ಸಾಗಾಟ ಮಾಡಿದೆ.

ರಸ್ತೆ ಸಂಚಾರದ ಜೊತೆಗಿನ ಸ್ಪರ್ಧೆಯಲ್ಲಿ ಕಳೆದುಕೊಂಡ ತನ್ನ ಮಾರುಕಟ್ಟೆಯನ್ನು ಮತ್ತೆ ಗಳಿಸುವ ಯತ್ನದಲ್ಲಿದ್ದ ರೈಲ್ವೆಗೆ ಇದೊಂದು ಅತ್ಯುತ್ತಮ ಅವಕಾಶವಾಗಿ ಪರಿಣಮಿಸಿದೆ.  ಈ ಮೂಲಕ ಮಾಲಿನ್ಯವನ್ನು ಕಡಿಮೆಮಾಡುವುದಷ್ಟೇ ಅಲ್ಲದೆ ರಸ್ತೆ ಜಾಲದ ಮೇಲಿನ ಒತ್ತಡವನ್ನೂ ಗಮನಾರ್ಹವಾಗಿ ಕಡಿಮೆ ಮಾಡುವುದು ಸಾಧ್ಯವಾಗಲಿದೆ. 

ಪಾಲಿಮರ್‌‌, ವಿದ್ಯುನ್ಮಾನ ಉಪಕರಣ, ಎಫ್‌ಎಂಸಿಜಿ, ಗೃಹೋಪಯೋಗಿ ಸಾಧನ ಹಾಗೂ ವಾಹನ ಉದ್ಯಮಕ್ಕೆ ಒಂದರ ಮೇಲೊಂದು ಇರಿಸಬಹುದಾದ ಕುಬ್ಜ ಕಂಟೇನರುಗಳ ಈ ಹೊಸ ಆಯ್ಕೆ ಲಾಭದಾಯಕವಾಗಲಿದೆ. ಕಡಿಮೆ ಎತ್ತರದ ಈ ಕಂಟೇನರುಗಳನ್ನು - ಒಂದರ ಮೇಲೊಂದು ಇಟ್ಟ ನಂತರವೂ - ವಿದ್ಯುತ್ ಸಂಪರ್ಕವಿರುವ ರೈಲುಮಾರ್ಗಗಳಲ್ಲಿ ಕೊಂಡೊಯ್ಯಬಹುದಾಗಿದೆ. 

click me!