ಇನ್ನು 3 ದಿನದಲ್ಲಿ ಚಂದ್ರನ ಮೇಲೆ ಇಸ್ರೋ ನೌಕೆ

By Kannadaprabha NewsFirst Published Sep 4, 2019, 8:12 AM IST
Highlights

ಇನ್ನು 3 ದಿನದಲ್ಲಿ ಚಂದ್ರನ ಮೇಲೆ ಇಸ್ರೋ ನೌಕೆ | ಆರ್ಬಿಟರ್‌ನಿಂದ ಲ್ಯಾಂಡರ್‌ ಪ್ರತ್ಯೇಕಿಸುವಲ್ಲಿ ಇಸ್ರೋ ಯಶಸ್ವಿ |  7ರಂದು ರಾತ್ರಿ 1.55ಕ್ಕೆ ಚಂದ್ರನ ಮೇಲೆ ನೌಕೆ ಪದಾರ್ಪಣೆ | ಕುತೂಹಲದ ಕ್ಷಣಕ್ಕೆ ಇಡೀ ವಿಶ್ವವೇ ಕಾತುರ

ಬೆಂಗಳೂರು (ಸೆ. 04): ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ಹೊಸ ಇತಿಹಾಸ ಸೃಷ್ಟಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ಮಹತ್ವದ ಮೈಲುಗಲ್ಲೊಂದನ್ನು ದಾಟಿದೆ. ಚಂದ್ರಯಾನ-2 ನೌಕೆಯಲ್ಲಿರುವ ಆರ್ಬಿಟರ್‌ ಹಾಗೂ ಲ್ಯಾಂಡರ್‌ ಸಾಧನಗಳು ಗಣೇಶ ಚತುರ್ಥಿಯ ದಿನವಾದ ಸೋಮವಾರ ಯಶಸ್ವಿಯಾಗಿ ಪ್ರತ್ಯೇಕಗೊಂಡಿವೆ.

ಚಂದ್ರನ ಕುಳಿಗಳ ಚಿತ್ರ ಸೆರೆಹಿಡಿದ ಚಂದ್ರಯಾನ-2!

ಯಾವುದೇ ವಿಘ್ನವಿಲ್ಲದೇ ಈ ಪ್ರಕ್ರಿಯೆ ನೆರವೇರಿದ ಬೆನ್ನಿಗೇ ಮಂಗಳವಾರ ಇಸ್ರೋ ವಿಜ್ಞಾನಿಗಳು ಲ್ಯಾಂಡರ್‌ ಅನ್ನು ಚಂದ್ರನ ಬಳಿಗೆ ಮತ್ತಷ್ಟುಇಳಿಸಿದ್ದಾರೆ. ಸೆ.7ರಂದು ನಸುಕಿನ ಜಾವ 1.55ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಯುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿದೆ. ಈ ಘಳಿಗೆಗಾಗಿ ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ.

ಸೋಮವಾರ ಮಧ್ಯಾಹ್ನ 1.15ರ ವೇಳೆಗೆ ಆರ್ಬಿಟರ್‌ನಿಂದ ‘ವಿಕ್ರಮ್‌’ ಹೆಸರಿನ ಲ್ಯಾಂಡರ್‌ ಯಶಸ್ವಿಯಾಗಿ ಪ್ರತ್ಯೇಕಗೊಂಡಿತು. ಇದೀಗ ಈ ಎರಡೂ ಸಾಧನಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋದ ‘ಇಸ್ಟ್ರಾಕ್‌’ ಕೇಂದ್ರವು ಬೆಂಗಳೂರು ಹೊರವಲಯದ ಬ್ಯಾಲಾಳುವಿನಲ್ಲಿರುವ ಘಟಕದ ಜತೆ ಸೇರಿಕೊಂಡು ಆರ್ಬಿಟರ್‌ ಹಾಗೂ ಲ್ಯಾಂಡರ್‌ ಮೇಲೆ ನಿಗಾ ಇಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳವಾರ ಬೆಳಗ್ಗೆ 8.50ರ ವೇಳೆಗೆ ಲ್ಯಾಂಡರ್‌ ಅನ್ನು ಚಂದ್ರನ ಮತ್ತಷ್ಟುಸನಿಹಕ್ಕೆ ತರಲಾಗಿದೆ. ಬುಧವಾರ ಮಧ್ಯಾಹ್ನ 3.30ರಿಂದ 4.30ರೊಳಗೆ ಇದೇ ರೀತಿಯ ಮತ್ತೊಂದು ಪ್ರಕ್ರಿಯೆ ನಡೆದು, ಲ್ಯಾಂಡರ್‌ ಚಂದ್ರನ ಇನ್ನಷ್ಟುಸಮೀಪಕ್ಕೆ ಬರಲಿದೆ. ಸೆ.7ರ ಶನಿವಾರ ನಸುಕಿನ ಜಾವ ಲ್ಯಾಂಡರ್‌ ಅನ್ನು ನಿಧಾನವಾಗಿ ಚಂದ್ರನ ಮೇಲೆ ಇಳಿಸಲಾಗುತ್ತದೆ.

ಚಂದಮಾಮ ಸೆರೆಸಿಕ್ಕ: ಚಂದ್ರಯಾನ-2 ಕ್ಲಿಕ್ಕಿಸಿದ ಫೋಟೋ ಚೊಕ್ಕ!

ಆ ನಂತರ ಲ್ಯಾಂಡರ್‌ನಿಂದ ‘ಪ್ರಜ್ಞಾನ್‌’ ಹೆಸರಿನ ರೋವರ್‌ ಹೊರಬಂದು, ಅಧ್ಯಯನದಲ್ಲಿ ತೊಡಗಲಿದೆ. 14 ದಿನಗಳ ಕಾಲ 500 ಮೀಟರ್‌ನಷ್ಟುಅಡ್ಡಾಡಿ, ಚಂದ್ರನ ಮೇಲ್ಮೈನಲ್ಲಿರುವ ಹಲವು ಮಾಹಿತಿಗಳನ್ನು ರವಾನಿಸಲಿದೆ. ಈಗಾಗಲೇ ಲ್ಯಾಂಡರ್‌ನಿಂದ ಪ್ರತ್ಯೇಕಗೊಂಡಿರುವ ಆರ್ಬಿಟರ್‌ ಚಂದ್ರನ ಸುತ್ತ ಒಂದು ವರ್ಷ ಸುತ್ತಲಿದೆ.

ಈವರೆಗೆ ವಿಶ್ವದ 3 ದೇಶಗಳು ಮಾತ್ರವೇ ಚಂದ್ರನ ಮೇಲೆ ನೌಕೆ ಇಳಿಸಿವೆ. ಭಾರತ ಯಶಸ್ವಿಯಾಗಿ ನೌಕೆಯನ್ನು ಚಂದ್ರನ ಮೇಲೆ ಇಳಿಸಿದರೆ ರಷ್ಯಾ, ಅಮೆರಿಕ, ಚೀನಾ ಬಳಿಕ ಆ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ.

click me!