Omicron In Karnataka : ಒಮಿಕ್ರೋನ್‌ ಸೋಂಕು ತಗುಲಿದವರಿಗೆ ಕರ್ನಾಟಕದಲ್ಲಿ ಹೊಸ ರೂಲ್ಸ್!

By Kannadaprabha NewsFirst Published Dec 11, 2021, 5:41 AM IST
Highlights

* ಒಮಿಕ್ರೋನ್‌ ಸೋಂಕು ಇದ್ದವರಿಗೆ ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಕಡ್ಡಾಯ
* ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
* ಡಿಸ್ಚಾಜ್‌ರ್‍ ನಂತರ 7 ದಿನ ಹೋಂ ಕ್ವಾರಂಟೈನ್‌
*   ಒಮಿಕ್ರೋನ್‌ ಸೋಂಕಿತರಿಗೆ ಹತ್ತು ದಿನ ಆಸ್ಪತ್ರೆಯಲ್ಲಿ ಕಡ್ಡಾಯ ಚಿಕಿತ್ಸೆ

ಬೆಂಗಳೂರು(ಡಿ. 11)  ಕೊರೋನಾದ ರೂಪಾಂತರಿ ತಳಿ ಒಮಿಕ್ರೋನ್‌ ಸೋಂಕು ದೃಢಪಟ್ಟವರಿಗೆ ಕಡ್ಡಾಯವಾಗಿ 10 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ, ಬಿಡುಗಡೆಗೂ ಮುನ್ನ ಎರಡು ಬಾರಿ ನೆಗೆಟಿವ್‌ ವರದಿ ಹಾಗೂ ಒಂದು ವಾರ ಹೋಂ ಕ್ವಾರಂಟೈನ್‌ಗೆ ಸೂಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ತಜ್ಞರ ಸಮಿತಿ ಚರ್ಚಿಸಿ ನೀಡಿದ ಸಲಹೆ ಆಧರಿಸಿ ಇಲಾಖೆಯು ಒಮಿಕ್ರೋನ್‌ ಸೋಂಕು ಪರೀಕ್ಷೆ, ಚಿಕಿತ್ಸೆಗಳ ಕುರಿತು ಮಾರ್ಗಸೂಚಿ ಪ್ರಕಟಿಸಿದೆ.

ಒಮಿಕ್ರೋನ್‌ ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ದಾಖಲಿಸಿ 10 ದಿನ ಚಿಕಿತ್ಸೆ ನೀಡಬೇಕು. ಬಿಡುಗಡೆಗೂ ಸತತ ಮೂರು ದಿನ ಮುನ್ನ ಸೋಂಕಿನ ಲಕ್ಷಣಗಳಿರಬಾರದು. ಸತತ ನಾಲ್ಕು ದಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣ (ಸ್ಯಾಚುರೇಷನ್‌) ಶೇ.95ಕ್ಕಿಂತ ಹೆಚ್ಚಿರಬೇಕು. ಮುಖ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನ 24 ಗಂಟೆಗಳಲ್ಲಿ ಎರಡು ಬಾರಿ ಸೋಂಕು ಪರೀಕ್ಷೆ ವರದಿ ನೆಗೆಟಿವ್‌ ಬರಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟರೆ ಮತ್ತೆ 48 ಗಂಟೆಗಳ ಬಳಿಕ ಪರೀಕ್ಷೆ ನಡೆಸಬೇಕು. ಇವುಗಳ ಜತೆಗೆ ಬಿಡುಗಡೆ ಸಂದರ್ಭದಲ್ಲಿ ಡಿ-ಡಿಮ್ಮರ್‌, ಎಸ್‌.ಫೆರಿಟಿನ್‌, ಎಸ್‌.ಎಲ್‌ಡಿಎಚ್‌ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಸಮಾಧಾಕರವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸೋಂಕಿತರಿಗೆ ಏಳು ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಸೂಚಿಸಬೇಕು. ಒಂದು ವೇಳೆ ಹೋಂ ಕ್ವಾರಂಟೈನ್‌ ಸೌಲಭ್ಯ ಇಲ್ಲವಾದರೆ ಸಾಂಸ್ಥಿಕ ಕ್ವಾರಂಟೈನ್‌ಗೆ ಸಲಹೆ ನೀಡಬೇಕು. ಈ ಅವಧಿಯಲ್ಲಿ ಆರೋಗ್ಯ ಸಿಬ್ಬಂದಿ ದೂರವಾಣಿ ಮೂಲಕ ನಿಗಾವಹಿಸಬೇಕು.

ಐವತ್ತಕ್ಕೂ ಅಧಿಕ ದೇಶಕ್ಕೆ ವ್ಯಾಪಿಸಿದ ರೂಪಾಂತರಿ ವೈರಸ್, ಪರಿಣಾಮ!

ಆರನೇ ದಿನ ಮತ್ತೊಮ್ಮೆ ಸೋಂಕು ಪರೀಕ್ಷೆ ನಡಿಸಿ ವರದಿ ನೆಗೆಟಿವ್‌ ಬಂದ ಬಳಿಕ ಹೋಂ ಕ್ವಾರಂಟೈನ್‌ ತೆರವು ಮಾಡಬಹುದು. ಉಳಿದಂತೆ ಎಚ್‌ಐವಿ ರೋಗಿಗಳು, ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೊಳಪಟ್ಟವರು ಹಾಗೂ ಇತರೆ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಒಮಿಕ್ರೋನ್‌ ಸೋಂಕು ದೃಢಪಟ್ಟಿದ್ದರೆ ಹೆಚ್ಚಿನ ನಿಗಾವಹಿಸಬೇಕು. ಸಂಪೂರ್ಣ ಗುಣಮುಖರಾದ ಬಳಿಕವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು. ಜತೆಗೆ ಇತರೆ ಒಮಿಕ್ರೋನ್‌ ಸೋಂಕಿತರ ಬಿಡುಗಡೆ ಸಂದರ್ಭದಲ್ಲಿ ಸೂಚಿಸಿರುವ ಕ್ರಮಗಳನ್ನೇ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಗಡಿ ಜಿಲ್ಲೆಗಳಲ್ಲಿ ಇನ್ನಷ್ಟುಬಿಗಿ:  ಗಡಿಭಾಗದ ಜಿಲ್ಲೆಗಳಲ್ಲಿ (Border Districts) ಪ್ರಸ್ತುತ ಇರುವ ನಿಯಮಗಳ ಜತೆಗೆ ಇನ್ನಷ್ಟುನಿಯಮಗಳನ್ನು ಜಾರಿ ಮಾಡಲಾಗುವುದು. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಯಾವೆಲ್ಲಾ ನಿಯಮಗಳನ್ನು ಜಾರಿ ಮಾಡಿದ್ದೇವೋ ಅವುಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.

ವಸತಿ ಶಾಲೆಗಳಿಗೆ (Residential School) ಬಿಗಿ ನಿಯಮ

- ಹಾಸ್ಟೆಲ್‌ಗಳಲ್ಲಿ 2 ದಿನಕ್ಕೊಮ್ಮೆ ಸ್ಯಾನಿಟೈಸ್‌ ಮಾಡುವುದು ಕಡ್ಡಾಯ

- ವಿದ್ಯಾರ್ಥಿಗಳೆಲ್ಲ ಒಟ್ಟಿಗೇ ಊಟ ಮಾಡದೆ ಪಾಳಿಯಲ್ಲಿ ಭೋಜನ

- ಅಡುಗೆ ಸಿಬ್ಬಂದಿ, ವಾರ್ಡನ್‌ 2 ಡೋಸ್‌ ಲಸಿಕೆ ಪಡೆವುದು ಕಡ್ಡಾಯ

- ವಿದ್ಯಾರ್ಥಿಗಳು ಮಲಗುವಾಗಲೂ ಅಂತರ ಕಾಪಾಡಿಕೊಳ್ಳಲು ಸಲಹೆ

- ಸೋಂಕಿತ ವಿದ್ಯಾರ್ಥಿಗಳನ್ನಿರಿಸಲು ಐಸೋಲೇಷನ್‌ಗೆ ವಿಶೇಷ ಕೊಠಡಿ 

 

ಲಸಿಕೆಗೂ (Vaccine) ಬಗ್ಗದ ಭಯಾನಕ ಕೊರೋನಾ ವೈರಸ್ಸಿನ ರೂಪಾಂತರಿ ಒಮಿಕ್ರೋನ್‌ (Omicron) ಪ್ರಭೇದವು ಈ ಹಿಂದಿನ ತಳಿಗಳಿಗಿಂತಲೂ ಅತೀ ವೇಗವಾಗಿ ಹಬ್ಬಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಧಾನ ನಿರ್ದೇಶಕ ಟೆಡ್ರೋಸ್‌ ಅಧೋನಾಮ್‌ ಗೆಬ್ರಿಯೆಸಸ್‌ ಎಚ್ಚರಿಕೆ ನೀಡಿದ್ದರು.

ವೈರಸ್‌ ಈಗಾಗಲೇ 57 ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ನಿವಾರಣೆಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಭಾರತದಲ್ಲಿ 2ನೇ ಅಲೆಯ ಸೋಂಕಿಗೆ ಕಾರಣವಾದ ಡೆಲ್ಟಾಪ್ರಭೇದಕ್ಕಿಂತಲೂ ಒಮಿಕ್ರೋನ್‌ ಹೆಚ್ಚು ಅಪಾಯಕಾರಿಯಲ್ಲ. ಆದಾಗ್ಯೂ, ಈಗಾಗಲೇ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗವನ್ನು ಹೆಚ್ಚಿಸಿಕೊಂಡಿದೆ ಎಂದು ತಿಳಿಸಿದ್ದರು. 

 

 

click me!