ಬೆಳಗಾವಿ ಕಲಾಪ: ಉತ್ತರ ಕರ್ನಾಟಕದ ನಿರೀಕ್ಷೆಯೇನು?

By Web DeskFirst Published Dec 8, 2018, 4:04 PM IST
Highlights

ಸೋಮವಾರದಿಂದ ಬೆಳಗಾವಿಯಲ್ಲಿ ರಾಜ್ಯ ವಿಧಾನಮಂಡಲದ 9ನೇ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನಿವೆ ಎಂಬ ಪಟ್ಟಿ ಇಲ್ಲಿದೆ.

ರಾಜ್ಯ ವಿಧಾನಮಂಡಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಅಣಿಯಾಗಿ ನಿಂತಿದೆ. ಪ್ರತಿ ಬಾರಿಯಂತೆ ಪ್ರಸಕ್ತ ಅಧಿವೇಶನದಿಂದಲೂ ಸಾಕಷ್ಟುನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಇಲ್ಲಿನ ಜನತೆ. ಆದರೆ, ಆ ನಿರೀಕ್ಷೆಗಳನ್ನು ಎಷ್ಟರಮಟ್ಟಿಗೆ ಸರ್ಕಾರ ಈಡೇರಿಸಲಿದೆ ಎಂಬುದು ಮಾತ್ರ ಕುತೂಹಲದ ವಿಚಾರ.

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಈ ಭಾಗದಲ್ಲಿ ಆಗಬೇಕಿರುವ ನಾನಾ ಕಲ್ಯಾಣ ಕೆಲಸಗಳ ಬಗ್ಗೆಯೇ ಹೆಚ್ಚು ಚರ್ಚೆ ಆಗಬೇಕು ಎಂಬ ಉದ್ದೇಶದಿಂದ ರಾಜ್ಯ ರಾಜಧಾನಿಯಾದ ಬೆಂಗಳೂರಿನಿಂದ ಹೊರಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆರಂಭಿಸಲಾಗಿದೆ. ಆದರೆ, ಇದುವರೆಗೆ ನಡೆದ 8 ಅಧಿವೇಶನಗಳಿಂದ ನಿರೀಕ್ಷಿತ ಉದ್ದೇಶ ಮಾತ್ರ ಈಡೇರಿಲ್ಲ. ಹೀಗಾಗಿ ಒಂಬತ್ತನೇ ಅಧಿವೇಶನವಾದರೂ ಉತ್ತರ ಕರ್ನಾಟಕದ ಜನಕಲ್ಯಾಣ ಯೋಜನೆಗಳು, ಈ ಭಾಗದ ಅಭಿವೃದ್ಧಿ, ಇಲ್ಲಿನ ಸಮಸ್ಯೆಗಳ ಕುರಿತಾಗಿಯೇ ಇರಬೇಕು ಎಂಬ ಆಶಯ ಇಲ್ಲಿನ ಜನರದ್ದು.

ಶಾಸಕರ ನಿರಾಸಕ್ತಿಯೇ ಪ್ರಾಬ್ಲಂ ನಂ.1

ಬೆಳಗಾವಿ ಅಧಿವೇಶನದಲ್ಲಿ ಮೊದಲನೆಯದಾಗಿ ಕಾಡುತ್ತಿರುವ ಸಮಸ್ಯೆ ಕಲಾಪದಲ್ಲಿ ಜನಪ್ರತಿನಿಧಿಗಳ ಹಾಜರಾತಿ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳ ಹಾಜರಾತಿಯೇ ಕಡಿಮೆಯಿರುತ್ತದೆ. ಕಳೆದ ಬಾರಿ ಆರಂಭದಲ್ಲಿಯೇ ಶೇ.70ರಷ್ಟುಜನಪ್ರತಿನಿಧಿಗಳು ಕಲಾಪಕ್ಕೆ ಗೈರಾಗಿದ್ದರು. ಈ ರೀತಿ ಉ.ಕ. ಭಾಗದ ಜನಪ್ರತಿನಿಧಿಗಳೇ ಗೈರಾದರೆ ಕಲಾಪದಲ್ಲಿ ಇಲ್ಲಿನ ಸಮಸ್ಯೆಗಳನ್ನು ಎತ್ತಿ ಹಿಡಿಯಬೇಕಾದವರು ಯಾರು?

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು, ಶೈಕ್ಷಣಿಕ, ಆರೋಗ್ಯ, ಕೃಷಿ, ಪ್ರವಾಸೋದ್ಯಮ, ನಗರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಸಾರಿಗೆ, ಸಾಮಾಜಿಕ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಇನ್ನೂ ಸಾಕಷ್ಟುಅಭಿವೃದ್ಧಿಯಾಗಬೇಕಿದೆ. ಆ ನಿಟ್ಟಿನಲ್ಲಿ ಅಧಿವೇಶನದ ವೇದಿಕೆಯಲ್ಲಿ ಏನೇನು ಚರ್ಚೆಯಾಗಬೇಕು ಎಂಬ ಆಶಯಗಳ ಪೈಕಿ ಇಲ್ಲಿ ಕೆಲವನ್ನು ನೀಡಲಾಗಿದೆ.

ಕಬ್ಬು ಮತ್ತು ರೈತರ ಸಮಸ್ಯೆ

ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಪ್ರದೇಶ ಬೆಳಗಾವಿ ಹಾಗೂ ಬಾಗಲಕೋಟೆ. ಈ ಭಾಗದಲ್ಲೇ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ರೈತರು ಪೂರೈಕೆ ಮಾಡಿದ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳ ಮಾಲಿಕರು ಸರಿಯಾಗಿ ದರ ನೀಡುತ್ತಿಲ್ಲ. ಜತೆಗೆ ಹಣವನ್ನೂ ಪಾವತಿ ಮಾಡುತ್ತಿಲ್ಲ. ಇದರಿಂದ ಕಬ್ಬು ಬೆಳೆಗಾರರು ಜೀವನ ನಡೆಸುವುದೇ ಕಷ್ಟವಾಗಿದೆ. ಈ ಬಾರಿಯ ಅಧಿವೇಶನದ ಸಂದರ್ಭದಲ್ಲಿ ಹೋರಾಟ ನಡೆಸುವುದಕ್ಕೆ ಮತ್ತೆ ರೈತರು ಸಜ್ಜಾಗಿದ್ದಾರೆ.

ಕಬ್ಬು ಬೆಳೆಗಾರರು ಮಾತ್ರವಲ್ಲ, ಈ ಭಾಗದಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾದ ಈರುಳ್ಳಿ, ಹೆಸರು, ಮೆಕ್ಕೆಜೋಳ, ತೊಗರಿ, ಮೆಣಸಿನಕಾಯಿ, ಹತ್ತಿ, ಶೇಂಗಾ, ಜೋಳ ಬೆಳೆಯುವ ರೈತರ ನೆರವಿಗೂ ಸರ್ಕಾರ ಧಾವಿಸಬೇಕಿದೆ. ಈ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಜತೆಗೆ ನಿಗದಿತ ದರವನ್ನು ಒದಗಿಸಬೇಕಾದ ಅನಿವಾರ್ಯತೆ ಇದೆ.

ನೀರಾವರಿ, ಕಳಸಾ ಬಂಡೂರಿ

ಉ.ಕ. ಭಾಗದ ಬಹುತೇಕ ಭಾಗಗಳು ಬರಗಾಲಪೀಡಿತವಾಗಿವೆ. ಹೀಗಾಗಿ ಈ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಬೇಕು. ಉ.ಕ. ಭಾಗದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ವರದಾ, ಹಿರಣ್ಯಕೇಶಿ, ವೇದಗಂಗಾ, ದೂದಗಂಗಾ, ತುಂಗಭದ್ರಾ ನದಿಗಳಿವೆ. ಈ ನದಿ ಪಾತ್ರಗಳ ಗ್ರಾಮಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪರಿಣಾಮಕಾರಿಯಾಗಿ ಆಗಬೇಕಿದೆ.

ಸರ್ಕಾರ ಕಾವೇರಿಗೆ ಮೇಕೆದಾಟುವಿನಲ್ಲಿ ಮತ್ತೊಂದು ಅಣೆಕಟ್ಟು ಮಾಡಲು ಉತ್ಸುಕವಾಗಿದೆ. ಆದರೆ, ಅದೇ ಉತ್ಸಾಹವನ್ನು ಕಳಸಾ ಬಂಡೂರಿಯತ್ತ ಗಮನಹರಿಸಲು ತೋರಬೇಕಿದೆ. ಇನ್ನು, ಆಲಮಟ್ಟಿಜಲಾಶಯದಲ್ಲಿ ಮಳೆಗಾಲದ ವೇಳೆ ಅಂದಾಜು ನಿತ್ಯ 1.5 ಲಕ್ಷ ಕ್ಯೂಸೆಕ್‌ ಹೊರಹರಿವು ಇರುತ್ತದೆ. ಇದೇ ನೀರಿನಿಂದ ಮತ್ತೊಂದು ಯೋಜನೆ ರೂಪಿಸುವ ತುರ್ತು ಕೆಲಸವಾಗಬೇಕಿದೆ.

ಕಚೇರಿಗಳ ಸ್ಥಳಾಂತರ ಯಾವಾಗ?

ರಾಜಧಾನಿ ಬೆಂಗಳೂರಿನಲ್ಲಿಯೇ ಬಹುತೇಕ ಎಲ್ಲ ಕಚೇರಿಗಳು ಕೇಂದ್ರೀಕೃತವಾಗಿವೆ. ಅದರಲ್ಲಿ ಉ.ಕ. ಭಾಗದ ಬಹುತೇಕ ಕಚೇರಿಗಳು ಕೂಡ ಸೇರಿವೆ. ಈ ಪೈಕಿ ಕೆಲವನ್ನು ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಬೇಕು ಎನ್ನುವ ಕೂಗು ಮೊದಲಿನಿಂದಲೂ ಇದೆ. ಈ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಆದರೆ, ಅನುಷ್ಠಾನ ಮಾತ್ರ ಶೂನ್ಯ. ಇದರ ಜತೆಗೆ ಉ.ಕ. ಭಾಗಕ್ಕೆ ಸೇರಿದ ನಿಗಮ ಮಂಡಳಿಗಳು, ಪ್ರಾಧಿಕಾರಗಳನ್ನು ಕೂಡ ಸುವರ್ಣಸೌಧಕ್ಕೆ ಸ್ಥಳಾಂತರಿಸುವ ನಿರ್ಣಯವನ್ನು ಅಧಿವೇಶದಲ್ಲಿ ಕೈಗೊಳ್ಳಬೇಕಿದೆ.

ಗಡಿಭಾಗದ ಶಾಲೆಗಳಿಗೆ ಒತ್ತು

ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡಬೇಕಿದೆ. ಅಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿವೆ. ಕನ್ನಡ ಕಲಿಯಲು ಮಕ್ಕಳು ಕೂಡ ಆಸಕ್ತರಾಗಿದ್ದಾರೆ. ಆದರೆ, ಕನ್ನಡ ಬೋಧನೆ ಮಾಡುವ ಶಿಕ್ಷಕರ ಕೊರತೆಯಿದೆ. ಜತೆಗೆ ಕೊಠಡಿ, ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯದ ಕೊರತೆಗಳೂ ಸಾಕಷ್ಟಿವೆ. ಅವುಗಳತ್ತಲೂ ಸರ್ಕಾರ ಗಮನಹರಿಸಬೇಕಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉ.ಕ. ಭಾಗಕ್ಕೆ ಒತ್ತು ನೀಡಬೇಕಿದೆ. ಕೆಆರ್‌ಎಸ್‌ ಅನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ ಆಸಕ್ತಿ ತೋರಿದೆ. ಅದೇ ರೀತಿ ಆಲಮಟ್ಟಿಯಲ್ಲಿಯೂ ಅಂತಹ ಯೋಜನೆ ಕೈಗೊಳ್ಳಲಿ. ಇದರಿಂದ ಅಲ್ಲಿನ ಸ್ಥಳೀಯರಿಗೂ ಉದ್ಯೋಗ ನೀಡಿದಂತಾಗುತ್ತದೆ. ಬಾದಾಮಿ, ಐಹೊಳೆ, ಪಟ್ಟಕದಲ್ಲು, ಬನವಾಸಿ, ಗೋಕಾಕ ಫಾಲ್ಸ್‌, ಖಾನಾಪುರದ ಜಾಂಬೋಟಿ, ಚಿಖಲೆ ಫಾಲ್ಸ್‌, ಧಾರ್ಮಿಕ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಇದರಿಂದ ಇಲ್ಲಿನ ಜನರ ನಿರುದ್ಯೋಗ ಸಮಸ್ಯೆಗೂ ಮುಕ್ತಿ ಸಿಕ್ಕಂತಾಗುತ್ತದೆ.

- ಬೆಂಗಳೂರಿನಲ್ಲಿರುವ ಐಟಿ- ಬಿಟಿ ಕಂಪನಿಗಳು ಉ.ಕ. ಭಾಗದ ಕಡೆಗೆ ಒಲವು ತೋರುವಂತೆ ವಿಶೇಷ ಪ್ಯಾಕೇಜ್‌ಗಳನ್ನು ನೀಡಬೇಕು.

- ಬೆಂಗಳೂರಿನಿಂದ ತುಮಕೂರಿಗೆ ಲೋಕಲ್‌ ರೈಲುಗಳನ್ನು ಬಿಟ್ಟಂತೆಯೇ, ಹುಬ್ಬಳ್ಳಿ- ಧಾರವಾಡದ ನಡುವೆಯೂ ಲೋಕಲ್‌ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು.

- ಉ.ಕ. ಭಾಗದಲ್ಲಿಯೇ ಹೆಚ್ಚು ಹತ್ತಿ ಬೆಳೆಯುತ್ತಿರುವುದರಿಂದ ಜವಳಿ ಉದ್ಯಮಕ್ಕೆ ಉತ್ತೇಜನ ನೀಡಬೇಕು.

- ಉಡಾನ್‌ ಯೋಜನೆ ಅಡಿ ಬೆಳಗಾವಿ, ಹುಬ್ಬಳ್ಳಿಯಲ್ಲಿ ಈಗಾಗಲೇ ನಾನಾ ವಿಮಾನ ಸೇವೆಗಳು ಆರಂಭಗೊಂಡಿವೆ. ಇದನ್ನೇ ಬಳಸಿಕೊಂಡು ಇಲ್ಲಿನ ರೈತರು ಬೆಳೆಯುತ್ತಿರುವ ಸಂಬಾರ ಬೆಳೆಗಳು, ತೋಟಗಾರಿಕೆ ಬೆಳೆಗಳಿಗೆ ವಿಶ್ವದಾದ್ಯಂತ ಮಾರುಕಟ್ಟೆಒದಗಿಸುವ ಕೆಲಸ ಮಾಡಬೇಕು.

- ಮಳೆ ಬರಲಿ, ಬಾರದಿರಲಿ, ಬೇಸಿಗೆ ಕಾಲದಲ್ಲಿ ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ, ಜಿಲ್ಲೆಗಳ ಕೆಲವು ರೈತರು ಗೋವಾ, ಕೇರಳ ರಾಜ್ಯಗಳಿಗೆ ದುಡಿಯಲು ಗುಳೆ ಹೋಗುತ್ತಿದ್ದಾರೆ. ಅವರಿಗೆ ಇಲ್ಲೇ ಉದ್ಯೋಗ ಸಿಗುವಂತಾಗಬೇಕು.

- ಬ್ರಹ್ಮಾನಂದ ಎನ್‌ ಹಡಗಲಿ

click me!