ಆಘಾತಕಾರಿ ಮಾಹಿತಿ: ಹತ್ಯೆಗೈದ ಭ್ರೂಣ ಕಾವೇರಿ ನದಿಗೆಸೆಯುತ್ತಿದ್ದ ದುರುಳರು..!

By Kannadaprabha NewsFirst Published Dec 3, 2023, 4:23 AM IST
Highlights

ಮಂಜುಳಾಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಆಕೆ ವಿಚಾರಣೆ ವೇಳೆ, ‘ಕೆಲವೊಮ್ಮೆ ಗರ್ಭಪಾತದ ವೇಳೆ ಜೀವಂತ ಭ್ರೂಣಗಳು ಹುಟ್ಟುತ್ತಿದ್ದವು. ಅವುಗಳ ಅಳು ನಿಲ್ಲುವವರೆಗೆ ನಾನು ಕಾಯುತ್ತಿದ್ದೆ. ಅವು ಉಸಿರು ಚೆಲ್ಲಿದ ನಂತರ ಕವರ್‌ನಲ್ಲಿ ಪ್ಯಾಕ್‌ ಮಾಡಿ ಕಾವೇರಿ ನದಿಗೆ ನನ್ನ ಸಹಚರ ನಿಸಾರ್‌ ಮೂಲಕ ವಿಸರ್ಜಿಸುತ್ತಿದ್ದೆ’ ಎಂದು ಬಾಯಿ ಬಿಟ್ಟಿದ್ದಾಳೆ. 

ಬೆಂಗಳೂರು(ಡಿ.04):  ರಾಜ್ಯದಲ್ಲಿ ತಲ್ಲಣ ಉಂಟುಮಾಡಿರುವ ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಘೋರ ವಿಚಾರ ಶನಿವಾರ ಹೊರಬಿದ್ದಿದೆ. ಮೈಸೂರು ಉದಯಗಿರಿಯ ಮಾತಾ ಆಸ್ಪತ್ರೆಯ ಶುಶ್ರೂಷಕಿ ಮಂಜುಳಾ, ಹೆಣ್ಣು ಮಗುವನ್ನು ಒಲ್ಲದ ಗರ್ಭಿಣಿಯರಿಗೆ ಗರ್ಭಪಾತ ಮಾಡಿಸುತ್ತಿದ್ದಳು. ಬಳಿಕ, ಯಾರಿಗೂ ಸಂದೇಹ ಬಾರದಿರಲಿ ಎಂದು ಮೃತ ಹೆಣ್ಣು ಭ್ರೂಣಗಳನ್ನು ಟೆಕ್ನೀಶಿಯನ್‌ ನಿಸಾರ್‌ ಎಂಬಾತನ ಜತೆ ಸೇರಿಕೊಂಡು ಕಾವೇರಿ ನದಿಗೆ ಬಿಸಾಕುತ್ತಿದ್ದಳು ಎಂದು ಗೊತ್ತಾಗಿದೆ.

ಮಂಜುಳಾಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಆಕೆ ವಿಚಾರಣೆ ವೇಳೆ, ‘ಕೆಲವೊಮ್ಮೆ ಗರ್ಭಪಾತದ ವೇಳೆ ಜೀವಂತ ಭ್ರೂಣಗಳು ಹುಟ್ಟುತ್ತಿದ್ದವು. ಅವುಗಳ ಅಳು ನಿಲ್ಲುವವರೆಗೆ ನಾನು ಕಾಯುತ್ತಿದ್ದೆ. ಅವು ಉಸಿರು ಚೆಲ್ಲಿದ ನಂತರ ಕವರ್‌ನಲ್ಲಿ ಪ್ಯಾಕ್‌ ಮಾಡಿ ಕಾವೇರಿ ನದಿಗೆ ನನ್ನ ಸಹಚರ ನಿಸಾರ್‌ ಮೂಲಕ ವಿಸರ್ಜಿಸುತ್ತಿದ್ದೆ’ ಎಂದು ಬಾಯಿ ಬಿಟ್ಟಿದ್ದಾಳೆ ಎಂದು ಮೂಲಗಳು ಹೇಳಿವೆ.

Latest Videos

ಕೊಡಗು: ಹೆಣ್ಣು ಭ್ರೂಣ ಹತ್ಯೆ ಕೇಸ್‌ನಲ್ಲಿ ಹೆಸರು ಕೇಳಿ ಬಂದಿದ್ದ ಡಾಕ್ಟರ್‌ ಆತ್ಮಹತ್ಯೆ?

3 ವರ್ಷಗಳಿಂದ ಹೆಣ್ಣು ಭ್ರೂಣ ಹತ್ಯೆ ಜಾಲದಲ್ಲಿ ಮಂಜುಳಾ ಸಕ್ರಿಯವಾಗಿದ್ದಳು. ಪ್ರತಿ ತಿಂಗಳು 30ಕ್ಕೂ ಹೆಚ್ಚಿನ ಗರ್ಭಿಣಿಯರಿಗೆ ಆಕೆ ಗರ್ಭಪಾತ ಮಾಡಿಸಿದ್ದಳು. ಇದೇ ಪ್ರಕರಣದ ಬಂಧಿತನಾಗಿರುವ ಮೈಸೂರು ನಗರದ ಉದಯಗಿರಿಯ ಮಾತಾ ಆಸ್ಪತ್ರೆಯ ಮಾಲಿಕ ಡಾ.ಚಂದನ್ ಬಲ್ಲಾಳ್‌ನ ಸಹಾಯಕಿಯಾಗಿ ಮಂಜುಳಾ ಕೆಲಸ ಮಾಡುತ್ತಿದ್ದಳು. ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಒಲ್ಲದವರಿಗೆ ವೈದ್ಯ ಬಲ್ಲಾಳ್ ಜತೆ ಸೇರಿ ಮಂಜುಳಾ ಗರ್ಭಪಾತ ಮಾಡಿಸುತ್ತಿದ್ದಳು. ಬಳಿಕ ಭ್ರೂಣಗಳನ್ನು ಕವರ್‌ನಲ್ಲಿ ಪ್ಯಾಕ್ ಮಾಡಿ ಬಳಿಕ ಕಾವೇರಿ ನದಿಗೆ ಮತ್ತೊಬ್ಬ ಆರೋಪಿ ನಿಸಾರ್‌ ಮೂಲಕ ಬಿಸಾಡಿಸುತ್ತಿದ್ದಳು ಎಂದು ಬೈಯಪ್ಪನಹಳ್ಳಿ ಪೊಲೀಸರ ಮೂಲಗಳು ಹೇಳಿವೆ.

ಹಣ ಪಡೆದು ಹತ್ಯೆ:

ತನ್ನ ಮಾಲಿಕತ್ವದ ಮಾತಾ ಆಸ್ಪತ್ರೆಯಲ್ಲಿ ಹಣ ಪಡೆದು ಕಾನೂನುಬಾಹಿರವಾಗಿ ಗರ್ಭಿಣಿಯರಿಗೆ ಭ್ರೂಣದ ಲಿಂಗವನ್ನು ಚಂದನ್‌ ಬಲ್ಲಾಳ್ ಪತ್ತೆ ಪರೀಕ್ಷೆ ನಡೆಸುತ್ತಿದ್ದ. ಈ ವೇಳೆ ಹೆಣ್ಣು ಭ್ರೂಣ ಪತ್ತೆಯಾದರೆ ಗರ್ಭಿಣಿಯರಿಗೆ ಅದೇ ಆಸ್ಪತ್ರೆಯಲ್ಲಿ ಆರೋಪಿಗಳು ಗರ್ಭಪಾತ ಸಹ ಮಾಡುತ್ತಿದ್ದರು. ಇನ್ನು ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತಕ್ಕೆ ಪ್ರತ್ಯೇಕವಾಗಿ ಬಲ್ಲಾಳ್ ತಂಡ ಹಣ ವಸೂಲಿ ಮಾಡುತ್ತಿತ್ತು. ಈ ಕೃತ್ಯದಲ್ಲಿ ಬಲ್ಲಾಳ್‌ಗೆ ಆತನ ಪತ್ನಿ ಮೀನಾ, ಸ್ವಾಗತಗಾರ್ತಿ ರಿಜ್ಮಾ ಖಾನಂ, ಶುಶ್ರೂಷಕಿ ಮಂಜುಳಾ ಹಾಗೂ ಟೆಕ್ನಿಶಿಯನ್‌ ನಿಸಾರ್ ಸಾಥ್ ಕೊಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಆರು ತಿಂಗಳ ಗರ್ಭಿಣಿಯರಿಗೆ ಸ್ವಾಭಾವಿಕ ಹೆರಿಗೆ ಮಾದರಿಯಲ್ಲೇ ಚಂದನ್ ಬಲ್ಲಾಳ್ ತಂಡ ಗರ್ಭಪಾತ ಮಾಡಿಸುತ್ತಿತ್ತು. ಆದರೆ 5 ತಿಂಗಳೊಗಿನ ಗರ್ಭಿಣಿಯರಿಗೆ ಮಾತ್ರೆ ನೀಡಿ ಅ‍ವರು ಗರ್ಭ ತೆಗೆಸುತ್ತಿದ್ದರು. ಭ್ರೂಣ ಲಿಂಗ ಪರೀಕ್ಷೆಗೊಳಗಾದ ಐದಾರು ತಿಂಗಳ ಗರ್ಭಿಣಿಯರು ಗರ್ಭಪಾತಕ್ಕೆ ಒಪ್ಪಿದರೆ ಅಂತಹವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಸಿಕೊಳ್ಳುತ್ತಿದ್ದರು. ನಂತರ ಆ ಗರ್ಭಿಣಿಯರಿಗೆ ಹೆರಿಗೆ ನೋವಿನ ಮಾತ್ರೆಗಳನ್ನು ನೀಡಿ ಬಳಿಕ ಹೆರಿಗೆ ಮಾಡಿಸುತ್ತಿದ್ದರು. ಕೆಲವೊಮ್ಮೆ ಗರ್ಭಪಾತದ ವೇಳೆ ಶಿಶುಗಳು ಜೀವಂತವಾಗಿರುತ್ತಿದ್ದವು. ಆಗ ಅವುಗಳು ಉಸಿರು ನಿಲ್ಲಿಸುವವರೆಗೆ ಲೇಬರ್ ವಾರ್ಡ್‌ನಿಂದ ಆರೋಪಿ ಮಂಜುಳಾ ಹೊರ ಬರುತ್ತಿದ್ದಳು. ಅವುಗಳ ಅಳು ನಿಂತಾಗ ಮೃತಪಟ್ಟಿವೆ ಎಂಬುದು ಖಚಿತಪಡಿಸಿಕೊಂಡು ಲೇಬರ್‌ ವಾರ್ಡ್‌ಗೆ ಹೋಗುತ್ತಿದ್ದ ಆಕೆ, ಮೃತ ಭ್ರೂಣಗಳನ್ನು ಕವರ್‌ನಲ್ಲಿ ಸುತ್ತಿ ನಿಸಾರ್‌ಗೆ ಕೊಡುತ್ತಿದ್ದಳು. ಆನಂತರ ಮೈಸೂರು ಹಾಗೂ ಶ್ರೀರಂಗಪಟ್ಟಣ ಸುತ್ತಮುತ್ತಲ ಪ್ರದೇಶದಲ್ಲಿ ಕಾವೇರಿ ನದಿಗೆ ಭ್ರೂಣಗಳನ್ನು ಎಸೆದು ನಿಸಾರ್ ಬರುತ್ತಿದ್ದ ಎಂದು ವಿಚಾರಣೆ ವೇಳೆ ಮಂಜುಳಾ ಬಾಯ್ಬಿಟ್ಟಿರುವುದಾಗಿ ತಿಳಿದು ಬಂದಿದೆ.

ರಾಜಕಾಲುವೆಗೆ ಎಸೆದಾಗ ರಾದ್ಧಾಂತ:

ಕಾವೇರಿ ನದಿಗೆ ವಿಸರ್ಜಿಸುವ ಮೊದಲು ತಮ್ಮ ಆಸ್ಪತ್ರೆ ಸಮೀಪದ ರಾಜ ಕಾಲುವೆಗೆ ಮೃತ ಭ್ರೂಣಗಳನ್ನು ಮಂಜುಳಾ ಹಾಗೂ ಆಕೆಯ ಸಹಚರ ನಿಸಾರ್ ಎಸೆಯುತ್ತಿದ್ದರು. ಆದರೆ ಒಮ್ಮೆ ರಾಜಾಕಾಲುವೆಗೆ ಎಸೆದ ಸತ್ತ ಭ್ರೂಣ ನೀರಿನಲ್ಲಿ ತೇಲಿಕೊಂಡು ದಡಕ್ಕೆ ಬಂದಿತ್ತು. ಆಗ ಅದನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರಿಂದ ರಾದ್ಧಾಂತವಾಗಿತ್ತು. ಈ ರಗಳೆ ಬಳಿಕ ಎಚ್ಚೆತ್ತ ಆರೋಪಿಗಳು, ರಾಜಾಕಾಲುವೆ ಬದಲಿಗೆ ಮೃತ ಭ್ರೂಣಗಳನ್ನು ಕಾವೇರಿ ನದಿಯಲ್ಲಿ ವಿರ್ಸಜಿಸುತ್ತಿದ್ದರು. ನದಿ ನೀರಿನಲ್ಲಿ ಭ್ರೂಣಗಳು ಕೊಚ್ಚಿಕೊಂಡು ಹೋದರೆ ತಲೆನೋವಿಲ್ಲ ಎಂದು ಆರೋಪಿಗಳು ಭಾವಿಸಿದ್ದರು ಎನ್ನಲಾಗಿದೆ.

ಭ್ರೂಣ ಲಿಂಗ ಪತ್ತೆ ಪ್ರಕರಣ; 2 ವರ್ಷದಲ್ಲಿ ಬರೋಬ್ಬರಿ 900 ಭ್ರೂಣ ಹತ್ಯೆ ಮಾಡಿರುವ ಪಾಪಿಗಳು!

150 ಭ್ರೂಣ ಕೊಂದಿದ್ದ ಇಬ್ಬರು ನರ್ಸ್‌ಗಳ ಸೆರೆ

ಮಂಡ್ಯ ಹಾಗೂ ಮೈಸೂರಿನಲ್ಲಿ ಬೆಳಕಿಗೆ ಬಂದಿರುವ ಭ್ರೂಣಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ನರ್ಸ್‌ಗಳನ್ನು ಶನಿವಾರ ಬಂಧಿಸಿದ್ದಾರೆ. ಇಬ್ಬರೂ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಗಳಾಗಿದ್ದು, ಒಟ್ಟು 150ಕ್ಕೂ ಹೆಚ್ಚು ಭ್ರೂಣಗಳನ್ನು ಕೊಂದಿದ್ದರು ಎಂದು ತಿಳಿದುಬಂದಿದೆ. ಮೈಸೂರಿನ ಉದಯಗಿರಿಯ ಮಾತಾ ಆಸ್ಪತ್ರೆಯ ಶುಶ್ರೂಷಕಿ ಮಂಜುಳಾ ಹಾಗೂ ಚಾಮುಂಡೇಶ್ವರಿ ಆಸ್ಪತ್ರೆಯ ಉಮಾ ಬಂಧಿತರು. ಇವರ ಬಂಧನದೊಂದಿಗೆ ಈವರೆಗೆ ಪ್ರಕರಣದಲ್ಲಿ ಬಂಧಿತರಾದ ವೈದ್ಯರು, ಏಜೆಂಟರು ಹಾಗೂ ನರ್ಸ್‌ಗಳ ಸಂಖ್ಯೆ ಒಟ್ಟು 12ಕ್ಕೆ ಏರಿಕೆಯಾಗಿದೆ.

ಭ್ರೂಣಹತ್ಯೆ ತಡೆ ಕಾಯ್ದೆ ಇನ್ನಷ್ಟು ಬಿಗಿ: ದಿನೇಶ್‌

ಭ್ರೂಣ ಹತ್ಯೆ ತಡೆ ಕಾನೂನನ್ನು ಇನ್ನಷ್ಟು ಕಠಿಣಗೊಳಿಸುವ ಅಗತ್ಯವಿದೆ. ಈ ಸಂಬಂಧ ಗೃಹ ಇಲಾಖೆ ಮತ್ತು ಆರೋಗ್ಯ ಇಲಾಖೆ ಸೇರಿಕೊಂಡು ಜಂಟಿಯಾಗಿ ಕಾನೂನು ಜಾರಿಗೆ ಚಿಂತನೆ ನಡೆಸಲಾಗುವುದು. ಈಗ ಬೆಳಕಿಗೆ ಬಂದಿರುವ ಭ್ರೂಣಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.  

click me!