ಕಾವೇರಿ ಹೋರಾಟಕ್ಕೆ 100 ದಿನ: ಸರ್ಕಾರಕ್ಕೆ ಮುಟ್ಟದ ಕಾವೇರಿ ಕೂಗು!

By Kannadaprabha NewsFirst Published Dec 15, 2023, 5:40 AM IST
Highlights

ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ ನೂರು ದಿನ ಪೂರೈಸಿದೆ. ತಮಿಳುನಾಡಿಗೆ ಹರಿಯುತ್ತಿರುವ ನೀರು ಮಾತ್ರ ನಿರಂತರವಾಗಿ ಹರಿಯುತ್ತಲೇ ಇದೆ. ಹೋರಾಟ ಶತದಿನದವರೆಗೆ ನಡೆದರೂ ಸರ್ಕಾರ ದಿವ್ಯಮೌನ ವಹಿಸಿದೆ. ಆಳುವವರ ನಡೆ ಧರಣಿ ನಿರತರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ವಿಶೇಷ ವರದಿ

ಮಂಡ್ಯ (ಡಿ.15):  ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ ನೂರು ದಿನ ಪೂರೈಸಿದೆ. ತಮಿಳುನಾಡಿಗೆ ಹರಿಯುತ್ತಿರುವ ನೀರು ಮಾತ್ರ ನಿರಂತರವಾಗಿ ಹರಿಯುತ್ತಲೇ ಇದೆ. ಹೋರಾಟ ಶತದಿನದವರೆಗೆ ನಡೆದರೂ ಸರ್ಕಾರ ದಿವ್ಯಮೌನ ವಹಿಸಿದೆ. ಆಳುವವರ ನಡೆ ಧರಣಿ ನಿರತರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಕಾವೇರಿ ಹೋರಾಟ ೫೬ನೇ ದಿನಕ್ಕೆ ಕಾಲಿಟ್ಟ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯಕ್ಕೆ ಆಗಮಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ರೈತರ ಹಿತ ಕಾಪಾಡುವ ಭರವಸೆ ನೀಡಿದ್ದರು. ಆದರೆ, ಅವರು ಬಂದು ಹೋದ ನಂತರವೂ ನೀರು ನಿರ್ವಹಣಾ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರ ಎರಡು ಬಾರಿ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಹೊರಹಾಕಿದ್ದವು. ಇದು ಹೋರಾಟಗಾರರ ತಾಳ್ಮೆಯನ್ನು ಕೆಣಕುವಂತೆ ಮಾಡಿತ್ತು. ಜೊತೆಗೆ ಸರ್ಕಾರವೂ ನೀರು ಬಿಡುಗಡೆ ಆದೇಶಕ್ಕೆ ಪೂರಕ ನಡೆಯನ್ನು ಅನುಸರಿಸಿತ್ತು.

 

ಬೆಂಗಳೂರು ಕಾವೇರಿ ನೀರುಗಳ್ಳರಿಗೆ ಜಲಮಂಡಳಿ ಬಿಗ್ ಶಾಕ್ ; ಅಕ್ರಮ ನೀರಿನ ಸಂಪರ್ಕಕ್ಕೆ ದಂಡ ಅಷ್ಟೇ ಅಲ್ಲ, ಜೈಲೂಟ ಫಿಕ್ಸ್!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯಕ್ಕೆ ಭೇಟಿ ನೀಡಿ ೪೪ ದಿನಗಳು ಕಳೆದರೂ ಇದುವರೆಗೂ ಒಮ್ಮೆಯೂ ಕಾವೇರಿ ನದಿ ನೀರಿನ ವಿಚಾರವಾಗಿ ಸಣ್ಣದೊಂದು ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅಧಿವೇಶನದಲ್ಲಿ ಕಾವೇರಿ ವಿಚಾರದ ಪ್ರಸ್ತಾಪವೇ ಆಗಿಲ್ಲ. ಇನ್ನೆಷ್ಟು ದಿನಗಳ ಕಾಲ ಧರಣಿ, ಉಪವಾಸ, ಹೋರಾಟ ನಡೆಸುವುದು ಎಂಬ ಜಿಜ್ಞಾಸೆ ಹೋರಾಟಗಾರರನ್ನು ತೀವ್ರವಾಗಿ ಕಾಡುತ್ತಿದೆ.

ಮಂಕಾದ ಹೋರಾಟ:

ಕಾವೇರಿ ನದಿ ನೀರಿನ ಹೋರಾಟ ಆರಂಭದ ಒಂದು ತಿಂಗಳು ತೀವ್ರತೆಯಿಂದ ಕೂಡಿತ್ತು. ಕಾವೇರಿ ಚಳವಳಿ ನೆಲದಲ್ಲಿ ನಡೆದ ಮಂಡ್ಯ ಬಂದ್ ಮುಂದೆ ಬೆಂಗಳೂರು ಬಂದ್ ನಂತರ ಕರ್ನಾಟಕ ಬಂದ್‌ಗೂ ಪ್ರೇರಣೆಯಾಗಿತ್ತು. ಆನಂತರದಲ್ಲಿ ಚಳವಳಿ ದಿನೇ ದಿನೇ ತಣ್ಣಗಾಗುತ್ತಾ ಬಂದಿತು. ಚಳವಳಿಯ ಸೂತ್ರ ಹಿಡಿದವರಿಗೆ ಮುಂದೆ ಹೋರಾಟವನ್ನು ಯಾವ ರೀತಿ ಮುಂದುವರೆಸಬೇಕು ಎನ್ನುವುದು ಗೊತ್ತಾಗಲೇ ಇಲ್ಲ.

ಜಿಲ್ಲೆಯ ಜನರನ್ನು ಸಂಘಟಿಸಿ ಹೋರಾಟಕ್ಕೆ ಉಗ್ರ ಸ್ವರೂಪ ನೀಡುವ, ಹೊಸದೊಂದು ಆಯಾಮದೊಂದಿಗೆ, ಹೊಸ ದಿಕ್ಕಿನಲ್ಲಿ ಪರಿಣಾಮಕಾರಿಯಾಗಿ ಚಳವಳಿಯನ್ನು ಮುನ್ನಡೆಸುವ ಪ್ರಯತ್ನಕ್ಕೂ ಇಳಿಯಲೇ ಇಲ್ಲ. ಕೇವಲ ಉಪವಾಸ, ಧರಣಿಗಷ್ಟೇ ಚಳವಳಿಯನ್ನು ಸೀಮಿತಗೊಳಿಸಿದರು. ಒಂದೊಂದು ಸಂಘಟನೆಯವರು ಒಂದೊಂದು ದಿನ ಧರಣಿ ಸ್ಥಳಕ್ಕೆ ಬಂದು ಕುಳಿತು ಹೊರನಡೆದರು. ಹೋರಾಟ ವ್ಯಾಪಕವಾಗಿ ಎಲ್ಲ ತಾಲೂಕುಗಳಿಗೆ ಹರಡದೆ ಒಂದು ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾಯಿತು. ಇದು ಹೋರಾಟದ ತೀವ್ರತೆ ಕ್ಷೀಣಿಸುವುದಕ್ಕೂ ಪ್ರಮುಖ ಕಾರಣವಾಯಿತು.

ಹೋರಾಟಗಾರರಲ್ಲಿ ಭಿನ್ನಮತ:

ಮುಖ್ಯಮಂತ್ರಿಯವರು ಭೇಟಿ ನೀಡಿ ಹೋದ ಬಳಿಕ ಕಾವೇರಿ ಹೋರಾಟವನ್ನು ಮುಂದುವರೆಸುವ ವಿಚಾರದಲ್ಲಿ ಹೋರಾಟಗಾರಲ್ಲೇ ಭಿನ್ನಮತ ಮೂಡಿತ್ತು. ಈ ವಿಚಾರವಾಗಿ ವಾಕ್ಸಮರವೂ ನಡೆದಿತ್ತು. ಧರಣಿ ಸ್ಥಳದಲ್ಲೇ ೪೫ ನಿಮಿಷಗಳ ಕಾಲ ಇದ್ದ ಸಿಎಂ ಸಮ್ಮುಖದಲ್ಲೇ ಹೋರಾಟ ನಿಲ್ಲಿಸುವುದಾಗಿ ಘೋಷಿಸಬೇಕಿತ್ತು. ಇದರಿಂದ ಮುಂದೆ ಸಿಎಂ ಭೇಟಿಗೆ ಅವಕಾಶ ಸಿಗುತ್ತಿತ್ತು. ಆಗ ರೈತರ ಕಷ್ಟಗಳನ್ನು ಅವರ ಬಳಿ ನಿವೇದಿಸಿಕೊಂಡು ವಿಶೇಷ ಪ್ಯಾಕೇಜ್ ಘೋಷಿಸಿಕೊಳ್ಳಬಹುದಿತ್ತು ಎನ್ನುವುದು ಕೆಲವರ ವಾದವಾದರೆ, ನೀರು ಬಿಡುಗಡೆ ಆದೇಶ ಸಿಎಂ ಬಂದ ದಿನವೇ ಹೊರಬಿದ್ದಿದ್ದು, ಆ ಸಮಯದಲ್ಲಿ ಹೋರಾಟ ಕೈಬಿಟ್ಟಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಹೋರಾಟ ಮುಂದುವರೆಸುವ ನಿರ್ಧಾರ ಮಾಡಿದ್ದೇ ಸರಿ ಎನ್ನುವುದು ಮತ್ತೆ ಕೆಲವರ ವಾದವೂ ಆಗಿತ್ತು.

ಧರಣಿ ಸ್ಥಳದತ್ತ ತಿರುಗಿನೋಡದ ಬಿಜೆಪಿ-ಜೆಡಿಎಸ್:

ಸಿಎಂ ಬಂದು ಹೋದ ನಂತರದಲ್ಲಿ ೪೪ ದಿನಗಳ ಕಾಲ ಚಳವಳಿ ನಡೆದರೂ ಕಾವೇರಿ ಹೋರಾಟದ ಬಗ್ಗೆ ಸರ್ಕಾರ ಕಿವಿಗೊಡುತ್ತಲೇ ಇಲ್ಲ. ಚಳವಳಿ ಆರಂಭಗೊಂಡ ಒಂದೂವರೆ ತಿಂಗಳು ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದವು. ಇದೀಗ ಆ ಪಕ್ಷದ ನಾಯಕರು, ಮುಖಂಡರು ಯಾರೂ ಧರಣಿ ಸ್ಥಳದತ್ತ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ ಕಾವೇರಿ ಚಳವಳಿ ಮಸುಕಾಗಿ ಚಳವಳಿ ನೇತೃತ್ವ ವಹಿಸಿರುವವರೂ ನಿತ್ರಾಣರಾಗಿದ್ದಾರೆ.

ಚಳವಳಿ ಮುಂದುವರೆಸುವ ಆಸಕ್ತಿ ಹೋರಾಟಗಾರರಲ್ಲೂ ದಿನೇ ದಿನೇ ಕ್ಷೀಣಿಸುತ್ತಿದೆ. ಯಾವ ಕಾರಣ ಅಥವಾ ಹೋರಾಟಕ್ಕೆ ಯಾವ ಫಲ ಸಿಕ್ಕಿತು ಎಂದು ಜನರಿಗೆ ತಿಳಿಸಿ ಚಳವಳಿ ಸ್ಥಗಿತಗೊಳಿಸುವುದು ಎಂಬ ಚಿಂತೆ ಹೋರಾಟಗಾರರನ್ನೂ ಕಾಡುತ್ತಿದೆ. ನೂರು ದಿನ ಕಳೆದಿರುವ ಕಾವೇರಿ ಚಳವಳಿಯನ್ನು ಎಲ್ಲಿಯವರೆಗೆ ಮುನ್ನಡೆಸಿಕೊಂಡು ಹೋಗುವುದು. ಧರಣಿ, ಪ್ರತಿಭಟನೆ, ಉಪವಾಸ ನಿರಂತರವಾಗಿ ನಡೆದರೂ ತಮಿಳುನಾಡಿಗೆ ಹರಿಯುತ್ತಿರುವ ನೀರೂ ನಿಂತಿಲ್ಲ, ಸರ್ಕಾರದಿಂದ ಪ್ರತಿಕ್ರಿಯೆಯೂ ದೊರಕುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಶಾಸಕರೆಲ್ಲರೂ ಬೆಳಗಾವಿ ಅಧಿವೇಶನದಲ್ಲಿದ್ದಾರೆ. ಅಲ್ಲಿ ಕಾವೇರಿ ವಿಚಾರ ಚರ್ಚೆಗೇ ಬರಲಿಲ್ಲ. ಹೋರಾಟಗಾರರಿಗೆ ನೀಡಿದ್ದ ಭರವಸೆ ಹುಸಿಯಾಗಿದೆ. ಕಾವೇರಿ ವಿಷಯವಾಗಿ ದನಿ ಏರಿಸಬೇಕಿದ್ದ ಬಿಜೆಪಿ-ಜೆಡಿಎಸ್ ಮೌನ ವಹಿಸಿವೆ. ಇತ್ತ ಕಾವೇರಿ ಕೂಗು ಕ್ಷೀಣಿಸುತ್ತಾ ಸಾಗಿದೆ. ಹೋರಾಟ ಅಂತ್ಯಗೊಳಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಮುಖಂಡರಲ್ಲಿ ಚರ್ಚೆಗಳು ಆರಂಭಗೊಂಡಿವೆ. 

 

ಕಾವೇರಿ ನೀರಿಗಾಗಿ ಕರ್ನಾಟಕದ ಕತ್ತು ಹಿಡಿದಿದ್ದ ತಮಿಳುನಾಡಲ್ಲಿ ಭರ್ಜರಿ ಪ್ರವಾಹ: ಆಹಾರಕ್ಕೂ ಆಸರೆಯಾದ ಕನ್ನಡಿಗರು

ಕಾವೇರಿ ಹೋರಾಟ ನೂರು ದಿನ ಪೂರೈಸಿದೆ. ಚಳವಳಿ ಸ್ಥಗಿತಗೊಳಿಸುವ ನಿಟ್ಟಿನಲ್ಲೂ ಮುಖಂಡರುಗಳೊಂದಿಗೆ ಚರ್ಚಿಸುತ್ತಿದ್ದೇವೆ. ಸಕಾರಣ ನೀಡಿ ಹೋರಾಟವನ್ನು ಸ್ಥಗಿತಗೊಳಿಸುವ ಅಗತ್ಯವಿದೆ. ಡಿ.೧೯ಕ್ಕೆ ಪ್ರಾಧಿಕಾರದ ಮತ್ತೊಂದು ಸಭೆ ಎಂದು ಹೇಳಲಾಗುತ್ತಿದೆ. ಅದರ ತೀರ್ಪನ್ನು ಆಧರಿಸಿ ಡಿ.೨೩ರ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ.

- ಸುನಂದಾ ಜಯರಾಂ, ಸಂಘಟನಾ ಕಾರ್ಯದರ್ಶಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

click me!