LIVE NOW
Published : Nov 20, 2026, 07:40 AM IST

Karnataka News Today Live: ಕರ್ನಾಟಕ ಒನ್‌, ಗ್ರಾಮ ಒನ್‌ ಇನ್ನು ಮುಂದೆ ‘ಪ್ರಜಾಸೇವಾ ಕೇಂದ್ರ’

ಸಾರಾಂಶ

ರಾಜ್ಯಾದ್ಯಂತ ವಿವಿಧ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ನಾಗರಿಕ ಸೇವಾ ಕೇಂದ್ರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಪ್ರಜಾಸೇವಾ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (ಇಡಿಸಿಎಸ್‌) ಅಡಿಯಲ್ಲಿ ಬೆಂಗಳೂರು ನಗರದಲ್ಲಿ ‘ಬೆಂಗಳೂರು ಒನ್’, ಇತರೆ ನಗರಗಳಲ್ಲಿ ‘ಕರ್ನಾಟಕ ಒನ್’ ಮತ್ತು  ‘ಗ್ರಾಮ ಒನ್’ ಎಂಬ ಹೆಸರುಗಳಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲಾಗುತ್ತಿತ್ತು. ಇದೀಗ ಏಕರೂಪತೆ ತರುವ ಉದ್ದೇಶದಿಂದ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಪ್ರಜಾ ಸೇವಾ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದೆ.

ಇನ್ನು ಮುಂದೆ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳು, ನಾಮಫಲಕಗಳು, ವೆಬ್ ಪೋರ್ಟಲ್‌ಗಳು, ತಂತ್ರಾಂಶಗಳು, ರಸೀದಿಗಳು, ಪ್ರಚಾರ ಸಾಮಗ್ರಿಗಳಲ್ಲಿ ‘ಪ್ರಜಾ ಸೇವಾ ಕೇಂದ್ರ’ ಎಂಬ ಹೆಸರನ್ನೇ ಬಳಸಲು ಸೂಚಿಸಲಾಗಿದೆ.

ರಾಜ್ಯದ ಎಲ್ಲಾ ಪ್ರಜಾ ಸೇವಾ ಕೇಂದ್ರಗಳಿಗೆ ಏಕರೂಪದ ಬ್ರಾಂಡಿಂಗ್, ನಾಮಫಲಕದ ವಿನ್ಯಾಸ, ಲಾಂಛನ, ಬಣ್ಣದ ವಿನ್ಯಾಸ ಇತ್ಯಾದಿ‌ ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆಯುವಂತೆ ಇಡಿಸಿಎಸ್‌ ನಿರ್ದೇಶಕರಿಗೆ  ಸೂಚಿಸಲಾಗಿದೆ

ಕೇಂದ್ರಗಳ ನಿರ್ವಾಹಕರು ಹಾಗೂ ಫ್ರಾಂಚೈಸಿಗಳೊಂದಿಗಿನ ಒಪ್ಪಂದಗಳಲ್ಲಿಯೂ ಹೊಸ ಹೆಸರನ್ನು ಅಳವಡಿಸಿ, ಈ ಆದೇಶವನ್ನು ಅತ್ಯಂತ ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.


More Trending News