ಕೊರೋನಾ ಎದು​ರಿ​ಸಲು ರಾಜ್ಯದಲ್ಲಿ ಭರ್ಜರಿ ಸಿದ್ಧತೆ, ಲಾಕ್‌​ಡೌನ್‌ ತೆರವು ಕಷ್ಟ!

By Kannadaprabha NewsFirst Published Apr 7, 2020, 8:01 AM IST
Highlights

ಕೊರೋನಾ ಎದು​ರಿ​ಸಲು ಭರ್ಜರಿ ಸಿದ್ಧತೆ| ಲಾಕ್‌​ಡೌನ್‌ ತೆರವು ಕಷ್ಟ| ಸೋಂಕು ಹೆಚ್ಚಳ ಸಂಭ​ವ|  ಏಪ್ರಿಲ್‌ ಅಂತ್ಯ, ಮೇ ಮೊದಲ ವಾರ ಸೋಂಕಿತರ ಸಂಖ್ಯೆ ಹೆಚ್ಚಳ ಭೀತಿ| ನಿರ್ಬಂಧ ತೆರವಾದರೆ ಸೋಂಕು ಕೈಮೀರುವ ಅಪಾಯ|  ತಜ್ಞರಿಂದ ಈ ಎಚ್ಚರಿಕೆ ಬಂದ ಕಾರಣ ಸರ್ಕಾರದಿಂದ ಪೂರ್ವಸಿದ್ಧತೆ|  ಲಾಕ್‌ಡೌನ್‌ ಮುಂದುವರಿಕೆ ಸಂಭವ ಹೆಚ್ಚು: ಸರ್ಕಾರದ ಮೂಲಗಳು

ಬೆಂಗಳೂರು(ಏ.07): ಮಹಾಮಾರಿ ಕೊರೋನಾ ಸೋಂಕು ಮನುಕುಲದ ಮೇಲೆ ಮತ್ತಷ್ಟುವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಲಾಕ್‌ಡೌನ್‌ ಮುಂದುವರೆಸುವ ಸಾಧ್ಯತೆಯೇ ಹೆಚ್ಚು.

ಏಕೆಂದರೆ, ತಜ್ಞರು ನೀಡುತ್ತಿರುವ ಸೂಚನೆ ಪ್ರಕಾರ ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಏಪ್ರಿಲ್‌ ಅಂತ್ಯ ಹಾಗೂ ಮೇ ಮೊದಲ ವಾರದಲ್ಲಿ ತೀವ್ರವಾಗಿ ಹೆಚ್ಚಲಿದೆ. ಈ ಸೂಚನೆ ಅರಿತಿರುವ ಸರ್ಕಾರ ಇದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಭರದಿಂದ ನಡೆಸುತ್ತಿದೆ. ವೈದ್ಯರಿಗೆ ಪಿಪಿಇ ಕಿಟ್‌ಗಳು, ವೆಂಟಿಲೇಟರ್‌ಗಳು, ಐಸೋಲೇಷನ್‌ ವಾರ್ಡ್‌ಗಳ ಸ್ಥಾಪನೆ, ರೈಲಿನಲ್ಲೂ ವೆಂಟಿಲೇಟರ್‌ ಅಳವಡಿಸಿದ ಸುಸಜ್ಜಿತ್‌ ವಾರ್ಡ್‌ಗಳ ಸಜ್ಜುಗೊಳಿಸುವಿಕೆಯಂತಹ ಕಾರ್ಯಗಳು ಅತ್ಯಂತ ತ್ವರಿತವಾಗಿ ನಡೆಯುತ್ತಿದೆ.

ಲಾಕ್‌​ಡೌನ್‌ ಕೊಂಚ ಸಡಿಲ ಬೇಕರಿ ತಿನಿಸು ಮಾರಾ​ಟಕ್ಕೆ ಅವ​ಕಾಶ

ಇದರರ್ಥ ಏಪ್ರಿಲ್‌ ಅಂತ್ಯದಲ್ಲಿ ಸೋಂಕು ವಿಪರೀತವಾಗಲಿದೆ ಎಂದು ಸರ್ಕಾರಕ್ಕೆ ಮನದಟ್ಟಾಗಿದೆ. ಹೀಗಾಗಿಯೇ ಈ ಸಿದ್ಧತೆ ನಡೆಸಿದೆ. ಇಂತಹ ಸಿದ್ದತೆ ನಡೆಸಿರುವ ಸರ್ಕಾರ ಲಾಕ್‌ಡೌನ್‌ ಅನ್ನು ತೆರವುಗೊಳಿಸಿ ಮತ್ತಷ್ಟುಅಪಾಯವನ್ನು ಎಳೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಲಾಕ್‌ಡೌನ್‌ ಮುಂದುವರೆಯುವ ಸಾಧ್ಯತೆಯೇ ಹೆಚ್ಚು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಜನರ ಸ್ಪಂದನೆ ಇಲ್ಲ:

ಏ.14ಕ್ಕೆ ಲಾಕ್‌ಡೌನ್‌ ಅವಧಿ ಮುಕ್ತಾಯಗೊಳ್ಳಲಿದೆ. ಆದರೆ, ಜನತೆ ಸರ್ಕಾರ ನಿರೀಕ್ಷಿಸಿದ ಪ್ರಮಾಣದಲ್ಲಿ ಲಾಕ್‌ಡೌನ್‌ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ದಿನಸಿಗಳು ಮತ್ತು ಪ್ರತಿನಿತ್ಯ ಅಗತ್ಯ ವಸ್ತುಗಳಿಗಾಗಿ ಮಾರುಕಟ್ಟೆಗೆ ತೆರಳುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಪರಿಣಾಮ ಸೋಂಕಿತರ ಸಂಖ್ಯೆ ಅಧಿಕಗೊಳ್ಳುವ ಆತಂಕ ಎದುರಾಗಿದೆ. ಇದಲ್ಲದೇ, ದೆಹಲಿಯ ನಿಜಾಮುದ್ದೀನ್‌ನ ತಬ್ಲೀಘಿ ಜಮಾತ್‌ ಸಮ್ಮೇಳನದಲ್ಲಿ ಭಾಗಿಯಾದವರಲ್ಲಿಯೂ ಸೋಂಕು ಖಚಿತವಾಗುವ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ.

ಇದಲ್ಲದೆ, ಲಾಕ್‌ಡೌನ್‌ ಹಂತಹಂತವಾಗಿ ಸಡಿಲಗೊಳಿಸುವುದಕ್ಕೆ ತಜ್ಞರ ಆಕ್ಷೇಪ ಇದೆ. ಸಮರ್ಪಕವಾಗಿ ಲಾಕ್‌ಡೌನ್‌ ಪಾಲನೆಯಾಗುತ್ತಿಲ್ಲ ಕಾರಣ ಮತ್ತಷ್ಟುಸೋಂಕು ಹರಡುವ ಸಾಧ್ಯತೆ ಇದೆ. ಆಗ ಸೋಂಕು ಕೈ ಮೀರಿ ಹೋಗುವ ಸಾಧ್ಯತೆ ಇದೆ. ಏಪ್ರಿಲ್‌ ಅಂತ್ಯದವರೆಗೆ ಲಾಕ್‌ಡೌನ್‌ ಮುಂದುವರಿಸುವುದು ಉತ್ತಮ. ಇಲ್ಲವಾದರೆ ಈಗ ಮಾಡಿರುವ ಪ್ರಯತ್ನಗಳೆಲ್ಲಾ ವ್ಯರ್ಥವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸರ್ಕಾರವು ಸಹ ತಜ್ಞರ ಅಭಿಪ್ರಾಯವನ್ನು ಗಂಭೀರವಾಗಿ ಪರಿಣಗಿಸಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಸಹ ಕೈಗೊಳ್ಳಲು ಮುಂದಾಗಿದೆ.

ಸರ್ಕಾರದ ಸಿದ್ಧತೆ:

ಕೊರೋನಾ ವೈರಾಣು ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಈಗಾಗಲೇ 1.43 ಲಕ್ಷ ಪಿಪಿಇ (ವೈಯಕ್ತಿಕ ರಕ್ಷಣಾ ಸಲಕರಣೆ) ಕಿಟ್‌ ಸರಬರಾಜು ಮಾಡಲಾಗಿದೆ. ಇನ್ನೂ 9.80 ಲಕ್ಷ ಪಿಪಿಇ ಕಿಟ್‌ಗಳ ಸರಬರಾಜಿಗೆ ಮುಂದಾಗಿದೆ. 1570 ವೆಂಟಿಲೇಟರ್‌ಗಳಿಗೆ ಆದೇಶಿಸಲಾಗಿದ್ದು, ಮುಂದಿನ ವಾರದಲ್ಲಿ ಮತ್ತೆ 20 ವೆಂಟಿಲೇಟರ್‌ಗಳು ಬರಲಿವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರವು ಸಹ ರೈಲುಗಳನ್ನು ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡುತ್ತಿದೆ. ರೈಲ್ವೆ ಇಲಾಖೆಯು ಸಹ ಸರ್ಕಾರದ ಜತೆ ಕೈಜೋಡಿಸಿ ಹಲವು ರೈಲುಗಳನ್ನು ಬಿಟ್ಟುಕೊಟ್ಟಿದೆ. ರೈಲಿನಲ್ಲಿ ವೆಂಟಿಲೇಟರ್‌ಗಳನ್ನು ಅಳವಡಿಸಿ ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಮುಂದುವರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.

ಜನ ಲಾಕ್‌ಡೌನ್‌ ಪಾಲಿ​ಸ​ದಿದ್ದರೆ 14ರ ನಂತರವೂ ಮುಂದುವರಿಕೆ: ಸಿಎಂ

ಷರತ್ತು ಸಾಧ್ಯತೆ:

ಒಂದು ವೇಳೆ ಏ.15ರಿಂದ ಲಾಕ್‌ಡೌನ್‌ ಸಡಿಲಗೊಳಿಸಿದರೆ, ಕೆಲವು ಷರತ್ತುಗಳನ್ನು ವಿಧಿಸಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂಬ ನಿರ್ದೇಶನ ನೀಡುವ ಸಾಧ್ಯತೆಯೂ ಇದೆ. ಐಟಿ-ಬಿಟಿ ಕಂಪನಿಗಳು ಶೇ.25ರಷ್ಟುಉದ್ಯೋಗಿಗಳಿಗೆ ಮಾತ್ರ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡುವ ಕ್ರಮ ಕೈಗೊಳ್ಳುವ ಸಾಧ್ಯತೆ. ಅಗತ್ಯ ಸೇವೆಗಳನ್ನು ಪೂರೈಕೆ ಮಾಡುವ ಸಂಸ್ಥೆಗಳಿಗೆ ಅನುಮತಿ ನೀಡಿ, ಅಗತ್ಯವಲ್ಲದ ಸೇವೆಗಳನ್ನು ಮತ್ತಷ್ಟುದಿನಗಳ ಕಾಲ ಲಾಕ್‌ಡೌನ್‌ ಪಾಲನೆ ಮಾಡುವಂತೆ ಸೂಚನೆ ನೀಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಲಾಕ್‌ಡೌನ್‌ ಉಲ್ಲಂಘಿಸಿದರೆ ಕಠಿಣ ಕಾಯ್ದೆಯಡಿ ಕೇಸು

ಬೆಂಗಳೂರು: ರಾಜ್ಯದಲ್ಲಿ ಜನರು ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟುಬಿಗಿಗೊಳಿಸಲು ನೇರವಾಗಿ ಅಖಾಡಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇಳಿದಿದೆ. ಲಾಕ್‌ಡೌನ್‌ ಅವಧಿಯಲ್ಲಿ ನಿಯಮ ಉಲ್ಲಂಘಿಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹೆಚ್ಚು ಅಧಿಕಾರ ನೀಡುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005 ಅಡಿ ಬಳಸಲು ಪೊಲೀಸರಿಗೆ ಸೂಚನೆ ನೀಡಿದೆ.

ಈ ಬಗ್ಗೆ ಕೈಗೊಳ್ಳಲು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಅವರಿಗೆ ಸೂಚನೆ ನೀಡಿರುವ ವಿಪತ್ತು ನಿರ್ವಹಣೆ ಸಮಿತಿಯ ಉಪಾಧ್ಯಾಕ್ಷ ಆರ್‌.ಅಶೋಕ್‌ ಅವರು, ಲಾಕ್‌ ಡೌನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಪ್ರಕರಣ ದಾಖಲಿಸುವಂತೆ ಠಾಣಾಧಿಕಾರಿಗಳಿಗೆ ಸೂಚಿಸಲು ನಿರ್ದೇಶಿಸಿದ್ದಾರೆ.

click me!