2031ರ ಮಾಸ್ಟರ್ ಪ್ಲಾನ್‌ಗೆ ರಾಜ್ಯ ಸರ್ಕಾರದಿಂದ ತಡೆ!

By Kannadaprabha NewsFirst Published Jun 27, 2020, 11:36 AM IST
Highlights

ನಗರದ ಮಹಾ ಯೋಜನೆಗೆ ರಾಜ್ಯ ಸರ್ಕಾರದಿಂದ ತಡೆ!| 2011-12ರ ಅಂಕಿ ಅಂಶದ ಆಧಾರದಲ್ಲಿ ರಚಿಸಿದ್ದ ಪ್ಲ್ಯಾನ್‌| ಪರಿಷ್ಕೃತ ಯೋಜನಾ ವರದಿ ತಯಾರಿಸಿ, ಪ್ರಸ್ತಾವನೆ ಸಲ್ಲಿಸಿ

ಸಂಪತ್‌ ತರೀಕೆರೆ

ಬೆಂಗಳೂರು(ಜೂ. 27): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಿದ್ಧಪಡಿಸಿದ್ದ 2031ರ ಮಹಾ ಯೋಜನೆ (ಮಾಸ್ಟರ್‌ ಪ್ಲ್ಯಾನ್‌)ಗೆ ನೀಡಿದ್ದ ತಾತ್ಕಾಲಿಕ ಅನುಮೋದನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಪರಿಷ್ಕೃತ ಯೋಜನಾ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದೆ.

2031ರ ಮಹಾ ಯೋಜನೆ ರೂಪಿಸಲು 2011-12ರ ನಕ್ಷೆಗಳು, ಫೋಟೋಗಳು ಮತ್ತು ಇತರೆ ಅಂಕಿಅಂಶಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಪ್ರಸ್ತುತ ಬಳಸಿಕೊಳ್ಳಲಾಗಿರುವ ಸ್ಥಳಗಳಲ್ಲಿ ಹಲವಾರು ಬದಲಾವಣೆಗಳು ಮತ್ತು ಬೆಳವಣಿಗೆಗಳು ಆಗಿವೆ. ಹಾಗಾಗಿ ಯೋಜನೆಯಲ್ಲಿ ಸಾಕಷ್ಟುಬದಲಾವಣೆಗಳು ಆಗಬೇಕಿದೆ ಎಂದು ಮಹಾ ಯೋಜನೆಗೆ ನೀಡಿಲಾಗಿದ್ದ ಅನುಮೋದನೆ ಹಿಂಪಡೆಯಲು ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜತೆಗೆ ವಾಸ್ತವಿಕ ಅಂಕಿಅಂಶಗಳು ಮತ್ತು ನಕ್ಷೆ ಇತ್ಯಾದಿ ಮಾಹಿತಿಯನ್ನು ಒಳಗೊಂಡಂತೆ ಪರಿಷ್ಕೃತ ಯೋಜನೆ ವರದಿಯನ್ನು 9ರಿಂದ 12 ತಿಂಗಳೊಳಗಾಗಿ ಪೂರ್ಣಗೊಳಿಸಿ ಪುನಃ ಪ್ರಸ್ತಾವನೆ ಸಲ್ಲಿಸುವಂತೆ ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದೆ.

ಫ್ಲಾಟ್‌ಗಳಲ್ಲಿ ಹುಟ್ಟುಹಬ್ಬ, ಕಿಟ್ಟಿಪಾರ್ಟಿ ಆಚರಿಸುವ ಮುನ್ನ ಈ ಸುದ್ದಿ ನೋಡಿ!

ಪರಿಷ್ಕೃತ ಯೋಜನಾ ವರದಿಯಲ್ಲಿ ನಗರಾಭಿವೃದ್ಧಿ ದೃಷ್ಟಿಕೋನ ಮತ್ತು ಮುಖ್ಯ ಉದ್ದೇಶಗಳನ್ನು ನಿಗದಿಪಡಿಸುವ ಹಂತದಿಂದ ಆರಂಭಿಸಿ ನಗರದ ಅಭಿವೃದ್ಧಿಗೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಬೇಕು. ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳು ಮತ್ತು ಹಸಿರು ವಲಯ ಪ್ರದೇಶಗಳನ್ನು ಹೆಚ್ಚಿಸುವ ಭೂ​​​-ಬಳಕೆಯ ಯೋಜನೆ ಕುರಿತು ಪುನರ್‌ ಪರಿಶೀಲನೆ ನಡೆಸಬೇಕು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದಂತೆ ಬಫರ್‌ ಝೋನ್‌ ನಿಗದಿಪಡಿಸಬೇಕು. ರಸ್ತೆಗಳು, ಉದ್ಯಾನವನಗಳು, ಸಾರ್ವಜನಿಕ ಸ್ಥಳಗಳು ಮತ್ತು ಮೂಲ ಸೌಕರ್ಯಾಭಿವೃದ್ಧಿಯನ್ನು ಖಾತರಿ ಪಡಿಸುವ ಚೌಕಟ್ಟಿನ ಸ್ಪಷ್ಟಚಿತ್ರಣವನ್ನು ಒಳಗೊಂಡಿರಬೇಕು. ಸಾರಿಗೆ ಆಧಾರಿತ ಅಭಿವೃದ್ಧಿ(ಟಿಒಡಿ) ವಲಯಗಳನ್ನು ನಿರ್ಧರಿಸಬೇಕು. ಎಫ್‌ಎಆರ್‌ ನಿಬಂಧನೆಗಳನ್ನು ಮತ್ತು ವಲಯ ನಿಯಮಗಳನ್ನು ಪುನರ್‌ ರಚಿಸಬೇಕು ಎಂಬ ಸಲಹೆಗಳನ್ನು ನೀಡಲಾಗಿದೆ.

ಪ್ಲಾನ್‌ ಕುರಿತು ವಿರೋಧವಿತ್ತು!:

ಬಿಡಿಎ ಸಿದ್ದಪಡಿಸಿದ್ದ ಸಮಗ್ರ ಯೋಜನೆ ಸಮಗ್ರವಾಗಿಲ್ಲ ಮತ್ತು ವೈಜ್ಞಾನಿಕವಾಗಿದೆ ಎಂದು ಹಿಂದಿನಿಂದಲೂ ಬಿಜೆಪಿ ಶಾಸಕರು ಆರೋಪಿಸಿದ್ದರು. ಸಿಡಿಪಿ ಕರಡು ಸಂಪೂರ್ಣ ಅವೈಜ್ಞಾನಿಕವಾಗಿದೆ. ಖಾಸಗಿ ಭೂಮಿಯನ್ನು ಪಾರ್ಕ್-ಜೋನ್‌ ಎಂದು ಗುರುತಿಸಲಾಗಿದೆ. ಖಾಸಗಿ ಕಟ್ಟಡಗಳಿರುವ ಜಾಗ ಹಾಗೂ ಕೆರೆ ಏರಿಗಳ ಮೇಲೆ ರಸ್ತೆಗಳನ್ನು ಗುರುತು ಮಾಡಲಾಗಿದೆ. ಅರಣ್ಯ ಪ್ರದೇಶವಿರುವ ಜಾಗಗಳ ಮಧ್ಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ರಿಯಲ್‌ ಎಸ್ಟೇಟ್‌ ಮತ್ತು ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಟ್ಟು ರೈತರ ಭೂಮಿ ನುಂಗಿ ಹಾಕಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪ ಮಾಡಿದ್ದರು.

ಸಮಗ್ರ ಯೋಜನೆ ಕೊರತೆ!

2015ರ ಪರಿಷ್ಕೃತ ಮಹಾ ಯೋಜನೆಯು ಸಾಕಷ್ಟುಲೋಪದೋಷಗಳಿಂದ ಕೂಡಿತ್ತು. ವಾಸ್ತವ ಮತ್ತು ಯೋಜನೆಯ ಅಂಶಗಳಲ್ಲಿ ಸಾಕಷ್ಟುವ್ಯತ್ಯಾಸವಿದ್ದ ಕಾರಣ ಯೋಜನೆ ಅನುಷ್ಠಾನವಾಗಿದ್ದು ಕೇವಲ ಶೇ.15ರಿಂದ 20ರಷ್ಟುಮಾತ್ರ. 2015ರ ಮಾಸ್ಟರ್‌ ಪ್ಲಾನ್‌ಗಿಂತ ಕೊಂಚ ಭಿನ್ನವಾಗಿರುವ 2031ರ ಮಾಸ್ಟರ್‌ ಪ್ಲಾನ್‌ ಅನ್ನು ಸ್ವಲ್ಪ ಬದಲಾವಣೆ ಮಾಡಿ ಅನುಷ್ಠಾನ ಮಾಡಲು ಹೊರಟರೆ ಬೆಂಗಳೂರಿನ ಪರಿಸ್ಥಿತಿ 2031 ಇಸವಿ ವೇಳಗೆ ಸದ್ಯದ ಸ್ಥಿತಿಗಿಂತ ಮತ್ತಷ್ಟುಹದಗೆಡಲಿದೆ ಎಂಬುದು ನಗರ ತಜ್ಞರ ಆಕ್ಷೇಪವಾಗಿತ್ತು.

BDA ಅಕ್ರಮ ಸೈಟ್‌ಗಳಿಗೆ ಸಕ್ರಮ ಭಾಗ್ಯ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

2031ರ ಕರಡು ಪ್ಲಾನ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಏಕ ಉದ್ದೇಶ ಮತ್ತು ದೂರದೃಷ್ಟಿಕೊರತೆ, ಯೋಜನಾ ಜಿಲ್ಲೆಯ ವಾಸ್ತವ ಭೂಬಳಕೆ ಮಾಹಿತಿಯಲ್ಲಿ ದೋಷಗಳಿವೆ. ಬೆಂಗಳೂರಿನ ಸಾರಿಗೆ-ಸಂಚಾರ ವ್ಯವಸ್ಥೆ ಅಂದಾಜು ಸರಿಯಾಗಿಲ್ಲ. ಜನರ ಜೀವನದ ಗುಣಮಟ್ಟಸುಧಾರಿಸುವ ಬಗ್ಗೆ ಪ್ರಸ್ತಾವವಿಲ್ಲ ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು.

ಸುಮಾರು 15 ಕೋಟಿ ವೆಚ್ಚದಲ್ಲಿ 2031ರ ಮಾಸ್ಟರ್‌ಪ್ಲಾನ್‌ ಸಿದ್ಧಪಡಿಸಲಾಗಿದೆ. 2015ರ ಪ್ಲಾನ್‌ ಮುಗಿದು ಈಗಾಗಲೇ ಐದು ವರ್ಷವಾಗಿದ್ದು, ಈ ಸಂದರ್ಭದಲ್ಲಿ 2031ರ ಮಾಸ್ಟರ್‌ ಪ್ಲಾನ್‌ ಹಿಂಪಡೆಯುವುದು ಸರಿಯಲ್ಲ. ಬದಲಿಗೆ ಎಲ್ಲೆಲ್ಲಿ ಲೋಪವಾಗಿದೆಯೋ ಅದನ್ನು ಸರಿಪಡಿಸಿ ಅನುಷ್ಠಾನಕ್ಕೆ ತರುವುದು ಒಳಿತು.

-ಸಾಯಿದತ್ತ, ಸಾಮಾಜಿಕ ಕಾರ್ಯಕರ್ತ.

click me!