'ಸಾಲ ಮಾಡದೆ ಅಭಿವೃದ್ಧಿ ಮಾಡೋದು ಹೇಗೆ? ನಾವೇನು ಮೋಜಿಗಾಗಿ ಸಾಲ ಮಾಡಿಲ್ಲ'

By Kannadaprabha NewsFirst Published Mar 25, 2021, 7:26 AM IST
Highlights

ಸಾಲ ಮಾಡಿ ತುಪ್ಪ ತಿಂದಿಲ್ಲ: ಬಿಎಸ್‌ವೈ| ಋುಣ ಭಾರ| ಸಾಲ ಮಾಡದೆ ಯಾವ ಸರ್ಕಾರಗಳೂ ಯೋಜನೆ ಜಾರಿಗೊಳಿಸಿಲ್ಲ| ನಾವೇನು ಮೋಜಿಗಾಗಿ ಸಾಲ ಮಾಡಿಲ್ಲ: ಸಿಎಂ| ಕೋವಿಡ್‌ ವೇಳೆ ಸಾಲ ಮಾಡದೆ ಅಭಿವೃದ್ಧಿ ಮಾಡೋದು ಹೇಗೆ?| ಬಜೆಟ್‌ ಮೇಲಿನ ಉತ್ತರದಲ್ಲಿ ವಿಪಕ್ಷಗಳಿಗೆ ತಿರುಗೇಟು

ವಿಧಾನಸಭೆ(ಮಾ.25): ಸಾಲ ಮಾಡದೆ ಯಾವ ಸರ್ಕಾರಗಳೂ ಯೋಜನೆಗಳ ಅನುಷ್ಠಾನ ಮಾಡಿದ ಉದಾಹರಣೆಗಳಿಲ್ಲ. ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ ಅಥವಾ ಮೋಜಿಗಾಗಿ, ಔತಣ ನಡೆಸಲು ಸಾಲದ ಹಣ ಬಳಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರತಿಪಕ್ಷ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಬುಧವಾರ ಪ್ರತಿಪಕ್ಷ ಕಾಂಗ್ರೆಸ್‌ ಧರಣಿ ನಡುವೆಯೇ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಸಮೃದ್ಧಿಯ ಸಂದರ್ಭಗಳಲ್ಲಿಯೇ ಸರ್ಕಾರಗಳು ಸಾಲ ಮಾಡಿವೆ. ಹೀಗಿರುವಾಗ ಸಾಂಕ್ರಾಮಿಕದಂತಹ ಸಂಕಷ್ಟ, ಪ್ರವಾಹ ಮತ್ತಿತರ ಪ್ರಕೃತಿ ವಿಕೋಪ ಸೃಷ್ಟಿಸಿದ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾಲ ಮಾಡದೆ ಅಭಿವೃದ್ಧಿ ಕಾರ್ಯಕೈಗೊಳ್ಳುವುದು ಹೇಗೆ ಸಾಧ್ಯ? ಆರ್ಥಿಕತೆಗೆ ಚೈತನ್ಯ ನೀಡಲು ಹೇಗೆ ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದರು.

ಸಾಂಕ್ರಾಮಿಕದಿಂದ ಜನರ ಜೀವ ರಕ್ಷಣೆ ಮಾಡಲು ಮತ್ತು ಪ್ರಕೃತಿ ವಿಕೋಪ ತಂದ ಸಂಕಷ್ಟನಿವಾರಣೆಗಾಗಿ ಅಗತ್ಯವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಅಭಿವೃದ್ಧಿ ಚಕ್ರವನ್ನು ಚಾಲನೆಯಲ್ಲಿ ಇರಿಸಿಕೊಳ್ಳಲು ಸಾಲ ಮಾಡಲಾಗಿದೆ. ಕೇಂದ್ರ ಸರ್ಕಾರವು ಸಹ 2021-22ನೇ ಸಾಲಿಗೆ ಜಿಎಸ್‌ಡಿಪಿಯ ಶೇ.4ರವರೆಗೆ ಸಾಲ ಪಡೆಯಲು ಅನುಮತಿ ನೀಡಿದೆ. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ-2002ಕ್ಕೆ ತಿದ್ದುಪಡಿ ಮಾಡಿ ಈ ಅವಕಾಶವನ್ನು ಬಳಸಿಕೊಳ್ಳಲಾಗುವುದು. ಆರ್ಥಿಕತೆ ಸ್ಥಗಿತದಿಂದಾಗಿ ಜಿಡಿಪಿ ಬೆಳವಣಿಗೆ ಕುಂಠಿತಗೊಂಡಿದೆ. ತೆರಿಗೆ ಸಂಗ್ರಹಣೆಯಲ್ಲಿ ಕೊರತೆಯುಂಟಾಗಿದೆ. ಆದರೂ ಬದ್ಧವೆಚ್ಚಗಳ ನಿರ್ವಹಣೆ ಜತೆಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕೈಗೊಂಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

10 ತಿಂಗಳ ಕಾಲ ನಿಸ್ತೇಜಗೊಂಡಿದ್ದ ಆರ್ಥಿಕತೆ ಕೇವಲ ಮೂರು ತಿಂಗಳಲ್ಲಿ ಪರಿಪೂರ್ಣವಾಗಿ ಚೇತರಿಸಿಕೊಳ್ಳುವುದು ಸುಲಭದ ಮಾತಲ್ಲ. ಕಳೆದ ವರ್ಷದಲ್ಲಿ ಅನುಭವಿಸಿದ ಕಷ್ಟ-ನಷ್ಟಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಅಲ್ಲದೇ, 2021-22ನೇ ಸಾಲಿನ ಬಜೆಟ್‌ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರುವಂತೆ ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಹಿಂದೆಂದೂ ಕಂಡರಿಯದ ವಿಶ್ವವ್ಯಾಪಿ ಸಾಂಕ್ರಾಮಿಕವು ಅನಿರೀಕ್ಷಿತವಾಗಿ ಬಂದೆರಗಿದಾಗ ಸರ್ಕಾರದ ಬಳಿ ದಿಢೀರ್‌ ಆಗಿ ಪರಿಹಾರ ನೀಡಲು ಯಾವುದೇ ಮಂತ್ರ ದಂಡ ಇರುವುದಿಲ್ಲ. ಸರ್ಕಾರದ ಬೊಕ್ಕಸ ಅಕ್ಷಯಪಾತ್ರೆಯೇನೂ ಅಲ್ಲ ಎನ್ನುವ ವಿಚಾರ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದವರಿಗೂ ತಿಳಿದಿದೆ ಎಂದರು.

ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ-2002 ಜಾರಿಯಾದ ಬಳಿಕ ರಾಜಸ್ವ ಮಿಗತೆ ಮುಂಗಡ ಪತ್ರಗಳನ್ನು ಆಯಾ ಕಾಲದ ಸರ್ಕಾರಗಳು ಮಂಡಿಸಿವೆ. ನಾನು ಸಹ ಈವರೆಗೆ ಮಂಡಿಸಿದ ಎಂಟು ಬಜೆಟ್‌ಗಳ ಪೈಕಿ ಏಳು ಬಜೆಟ್‌ಗಳು ರಾಜಸ್ವ ಮಿಗತೆ ಮುಂಗಡ ಪತ್ರಗಳಾಗಿದ್ದವು. ಆದರೆ, ಈ ದುರ್ಬರ ಸನ್ನಿವೇಶದಲ್ಲಿ ರಾಜಸ್ವ ಮಿಗತೆ ಸಾಧ್ಯವಾಗಿಲ್ಲ. ಇದು ಕೋವಿಡ್‌ ಸಂಕಷ್ಟಸನ್ನಿವೇಶದ ಪರಿಣಾಮವಾಗಿದೆ. ಇದನ್ನು ಸರಿಪಡಿಸಲು ಪೂರಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರವು ಬದ್ಧವಾಗಿದೆ. ಸಂಭಾವ್ಯ ಲೋಪದೋಷಗಳಿದ್ದರೆ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಮೃದ್ಧಿಯ ಸಂದರ್ಭಗಳಲ್ಲಿಯೇ ಸರ್ಕಾರಗಳು ಸಾಲ ಮಾಡಿವೆ. ಹೀಗಿರುವಾಗ ಸಾಂಕ್ರಾಮಿಕದಂತಹ ಸಂಕಷ್ಟ, ಪ್ರವಾಹ ಮತ್ತಿತರ ಪ್ರಕೃತಿ ವಿಕೋಪ ಸೃಷ್ಟಿಸಿದ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾಲ ಮಾಡದೆ ಅಭಿವೃದ್ಧಿ ಕಾರ್ಯಕೈಗೊಳ್ಳುವುದು ಹೇಗೆ ಸಾಧ್ಯ? ಆರ್ಥಿಕತೆಗೆ ಚೈತನ್ಯ ನೀಡಲು ಹೇಗೆ ಸಾಧ್ಯ?

- ಬಿ.ಎಸ್‌.ಯಡಿಯೂರಪ್ಪ

 

click me!