ಪಶ್ಚಿಮಘಟ್ಟ ಕುರಿತ ಕಸ್ತೂರಿರಂಗನ್‌ ವರದಿ ತಿರಸ್ಕಾರ, ರಾಜ್ಯದ ಮಹತ್ವದ ನಿರ್ಧಾರ!

By Suvarna NewsFirst Published Dec 29, 2020, 8:26 AM IST
Highlights

ಪಶ್ಚಿಮಘಟ್ಟ ಕುರಿತ ಕಸ್ತೂರಿರಂಗನ್‌ ವರದಿ ತಿರಸ್ಕಾರ| 2 ದಿನದಲ್ಲಿ ಕೇಂದ್ರಕ್ಕೆ ಈ ಬಗ್ಗೆ ಪತ್ರ| ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ| ವರದಿ ಅವೈಜ್ಞಾನಿಕ, ಹೀಗಾಗಿ ಒಪ್ಪಿಗೆ ಇಲ್ಲ| ಪಶ್ಚಿಮಘಟ್ಟದ ರಕ್ಷಣೆಗೆ ನೀಡಲಾಗಿದ್ದ ವರದಿ

ಬೆಂಗಳೂರು(ಡಿ.29): ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರ ಮತ್ತು ಜೀವವೈವಿಧ್ಯ ರಕ್ಷಣೆಗಾಗಿ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್‌ ನೀಡಿರುವ ವರದಿ ಅವೈಜ್ಞಾನಿಕವೆಂದು ತೀರ್ಮಾನಿಸಿರುವ ರಾಜ್ಯ ಸರ್ಕಾರ ಜನರ ಹಿತದೃಷ್ಟಿಯಿಂದ ಈ ವರದಿಯನ್ನು ಸಾರಸಗಟಾಗಿ ತಿರಸ್ಕರಿಸಲು ನಿರ್ಧರಿಸಿದೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದ್ದು, ಎರಡು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಂಪುಟ ಉಪಸಮಿತಿ ಸದಸ್ಯರೂ ಆಗಿರುವ ಕಂದಾಯ ಸಚಿವ ಆರ್‌.ಅಶೋಕ್‌ ಮತ್ತು ಅರಣ್ಯ ಸಚಿವ ಆನಂದ್‌ಸಿಂಗ್‌ ಅವರು, ‘ಕಸ್ತೂರಿ ರಂಗನ್‌ ವರದಿಯಿಂದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಲ್ಲಿ ವಾಸ ಮಾಡುವವರಿಗೆ ತೊಂದರೆ ಆಗಲಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ನಿಂದ ವಿಧಾನಸಭೆವರೆಗೂ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಹಾಗಾಗಿ ವರದಿ ಕೈಬಿಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಕಸ್ತೂರಿ ರಂಗನ್‌ ವರದಿ ಕುರಿತು ಡಿ.31ರೊಳಗೆ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ (ಎನ್‌ಜಿಟಿ) ವಿಚಾರಣೆಗೆ ಬರಲಿದ್ದು, ಕೇಂದ್ರ ಸರ್ಕಾರ ಈ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಅದರಲ್ಲಿ ರಾಜ್ಯ ಸರ್ಕಾರ ಭಾಗಿಯಲ್ಲ. ಆದರೂ ನಮ್ಮ ನಿಲುವೇನು ಎಂಬುದನ್ನು ತಿಳಿಸಲು ಸುದೀರ್ಘವಾದ ಚರ್ಚೆ ನಡೆಯಲಾಯಿತು. ಕಸ್ತೂರಿ ರಂಗನ್‌ ವರದಿಯನ್ನು ಅವೈಜ್ಞಾನಿಕವಾಗಿದ್ದು, ಇದಕ್ಕೆ ರಾಜ್ಯದ ವಿರೋಧವಿದೆ ಎಂಬುದನ್ನು ಕೇಂದ್ರಕ್ಕೆ ತಿಳಿಸಲಾಗುವುದು’ ಎಂದು ಹೇಳಿದರು.

‘ಈ ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ಹಲವಾರು ನ್ಯೂನತೆಗಳಾಗಿವೆ. ಈ ವರದಿ ಜಾರಿ ಮಾಡಲು ಸಾಧುವಲ್ಲ. ಇದರಿಂದ ಪಶ್ಚಿಮಘಟ್ಟಗಳಲ್ಲಿ ವಾಸ ಮಾಡುವ ಎಲ್ಲ ಜಿಲ್ಲೆಗಳಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಅಲ್ಲಿನ ಜನ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಇತರೆ ಕೆಲವು ಸಚಿವರು ಉಪಸ್ಥಿತರಿದ್ದ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದು ಕೇಂದ್ರ ಪರಿಸರ ಇಲಾಖೆ ಸಚಿವರಿಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ. ಹಾಗೆಯೇ ಎನ್‌ಜಿಟಿಯಲ್ಲಿ ಇದಕ್ಕೆ ವ್ಯತಿರಿಕ್ತವಾದ ತೀರ್ಪು ಬಂದರೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಕಂದಾಯ ಇಲಾಖೆ ವ್ಯಾಪ್ತಿಗೆ ಡೀಮ್‌್ಡ ಫಾರೆಸ್ಟ್‌:

ರಾಜ್ಯದ ಸುಮಾರು 9.50 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಅರಣ್ಯವೆಂದು ಪರಿಭಾವಿಸಿದ್ದ (ಡೀಮ್‌್ಡ ಫಾರೆಸ್ಟ್‌) ಜಮೀನಿನ ಪೈಕಿ 6 ಲಕ್ಷ ಹೆಕ್ಟೇರ್‌ಗಳನ್ನು ಕಂದಾಯ ಇಲಾಖೆಗೆ ವಾಪಸ್‌ ನೀಡಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ಇದರಿಂದ ಬಗರ್‌ ಹುಕುಂ ಸಾಗುವಳಿದಾರರಿಗೆ ಜಮೀನು ಮಂಜೂರು ಮಾಡಲು ಅನುಕೂಲವಾಗಲಿದೆ. ಉಳಿದ 3.50 ಲಕ್ಷ ಹೆಕ್ಟೇರ್‌ ಜಮೀನು ಅರಣ್ಯ ಇಲಾಖೆಯಲ್ಲೇ ಇರಲಿದೆ. ಈ ಸಂಬಂಧ ಶೀಘ್ರವೇ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಅಶೋಕ್‌ ತಿಳಿಸಿದರು.

ತಿರಸ್ಕಾರ ಏಕೆ?

- ವರದಿ ಜಾರಿ ಆದರೆ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ

- ಪಶ್ಚಿಮ ಘಟ್ಟಪ್ರದೇಶದಲ್ಲಿ ವಾಸ ಮಾಡುವವರಿಗೆ ತೊಂದರೆ

ವರದಿಯಲ್ಲಿ ಏನಿತ್ತು?

- ಪಶ್ಚಿಮ ಘಟ್ಟವ್ಯಾಪ್ತಿಯ 60 ಸಾವಿರ ಚಕಿಮೀ ವ್ಯಾಪ್ತಿಯ ಪ್ರದೇಶವು ಪರಿಸರ ಸೂಕ್ಷ್ಮ ವಲಯ

- ಈ ವಲಯದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲ/ಪವನ ವಿದ್ಯುತ್‌ ಯೋಜನೆ ನಿಷೇಧ

- ಎಲ್ಲ ಹಾಲಿ ಗಣಿಗಳು ಮುಂದಿನ 5 ವರ್ಷ ಮುಗಿಯುತ್ತಿದ್ದಂತೆಯೇ ಸ್ಥಗಿತ

- ಪರಿಸರ ಸೂಕ್ಷ್ಮ ವಲಯದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿಗೆ ಸರ್ಕಾರ, ಗ್ರಾಪಂ ಅನುಮತಿ ಕಡ್ಡಾಯ

- ಪರಿಸರ ಸೂಕ್ಷ್ಮ ವಲಯದಲ್ಲಿ 123 ಗ್ರಾಮಗಳು

click me!