ದಳ ಸೋಲಿಗೆ ಸಮುದಾಯ ನಾಯಕತ್ವ ಕೊರತೆ ಕಾರಣ: ಎಚ್‌ಡಿಕೆ ಏಕಾಂಗಿ ಹೋರಾಟ

By Kannadaprabha NewsFirst Published May 16, 2023, 5:13 AM IST
Highlights

ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಹಗಲಿರುಳು ಪ್ರಚಾರ ಮಾಡಿದರೂ ಕೇವಲ 19 ಸ್ಥಾನಕ್ಕೆ ಸೀಮಿತವಾಗಿರುವುದಕ್ಕೆ ಪಕ್ಷದಲ್ಲಿ ಸಮುದಾಯದ ನಾಯಕತ್ವ ಕೊರತೆಯೇ ಕಾರಣ ಎಂಬ ಮಾತು ಪಕ್ಷದಿಂದಲೇ ಕೇಳಿಬರತೊಡಗಿದೆ.

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು (ಮೇ.16) : ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಹಗಲಿರುಳು ಪ್ರಚಾರ ಮಾಡಿದರೂ ಕೇವಲ 19 ಸ್ಥಾನಕ್ಕೆ ಸೀಮಿತವಾಗಿರುವುದಕ್ಕೆ ಪಕ್ಷದಲ್ಲಿ ಸಮುದಾಯದ ನಾಯಕತ್ವ ಕೊರತೆಯೇ ಕಾರಣ ಎಂಬ ಮಾತು ಪಕ್ಷದಿಂದಲೇ ಕೇಳಿಬರತೊಡಗಿದೆ.

Latest Videos

ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಏಕೈಕ ಗುರಿಯೊಂದಿಗೆ ಕುಮಾರಸ್ವಾಮಿ ಅವರು ತನು, ಮನ, ಧನವನ್ನು ಅರ್ಪಿಸಿ ದುಡಿದರು. ಆದರೆ, ಅವರು ಏಕಾಂಗಿಯಾಗಿ ಹೋರಾಟ ನಡೆಸಿದರೆ ವಿನಃ ಸಮುದಾಯದ ನಾಯಕತ್ವ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಚಿಂತನೆ ನಡೆಸದಿರುವುದೇ ಪಕ್ಷದ ಪ್ರಸ್ತುತ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ.

Karnataka election results: ಎಚ್‌ಡಿ ಕುಮಾರಸ್ವಾಮಿ ಗೆಲುವು : ಮುಡಿ ಹರಕೆ ತೀರಿಸಿದ ಬೆಂಬಲಿಗ

ಒಕ್ಕಲಿಗ ಸಮುದಾಯ ಪ್ರತಿನಿಧಿಸುವ ನಾಯಕತ್ವವನ್ನು ಕುಮಾರಸ್ವಾಮಿ ವಹಿಸಿಕೊಂಡಿದ್ದರು. ಇನ್ನು, ಮುಸ್ಲಿಂ ಸಮುದಾಯದ ನಾಯಕತ್ವ ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಇದ್ದರೂ ಹೇಳಿಕೊಳ್ಳುವಂತಹ ಪರಿಣಾಮ ಬೀರಲಿಲ್ಲ. ಇಬ್ರಾಹಿಂ ಜತೆಗೆ ವಿಧಾನಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌ ಸೇರಿದಂತೆ ಇತರೆ ಮುಸ್ಲಿಂ ಮುಖಂಡರು ಪ್ರಚಾರ ಕಾರ್ಯ ನಡೆಸಿದರು. ಆದರೆ, ಸಮುದಾಯದ ಮತ ಸೆಳೆಯಲು ವಿಫಲರಾದರು. ದಲಿತ, ಲಿಂಗಾಯತ ಸೇರಿದಂತೆ ಇತರೆ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕತ್ವವು ಪಕ್ಷದಲ್ಲಿಲ್ಲ. ಒಂದು ಸಮುದಾಯವನ್ನು ಪಕ್ಷದತ್ತ ಸೆಳೆಯುವಂತಹ ನಾಯಕತ್ವ ಗುಣಗಳುಳ್ಳ ಮುಖಂಡರು ಪಕ್ಷದಲ್ಲಿ ಇಲ್ಲದಿರುವುದು ಸಹ ಪಕ್ಷವು ಹೀನಾಯ ಸೋಲಿಗೆ ಕಾರಣ. ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದರ ಜತೆಗೆ ಇತರೆ ಸಮುದಾಯಕ್ಕೆ ನಾಯಕತ್ವ ನೀಡಿ ಚುನಾವಣೆಗೆ ಧುಮುಕಿದ್ದರೆ ಚುನಾವಣೆಯಲ್ಲಿ ಆ ಸಮುದಾಯದ ಮತಗಳನ್ನು ಸೆಳೆಯಲು ಸಹಕಾರಿಯಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಚುನಾವಣೆಯಲ್ಲಿ ಕುಮಾರಸ್ವಾಮಿ ವಿಭಿನ್ನ ಪ್ರಯೋಗಗಳನ್ನು ನಡೆಸಿದ್ದರು. ಪಕ್ಷದ ಅಭ್ಯರ್ಥಿಗಳಾಗುವವರಿಗೆ ಕಾರ್ಯಾಗಾರ, ಜನತಾ ಜಲಧಾರೆ, ಪಂಚರತ್ನ ಯಾತ್ರೆ ಹೀಗೆ ಹಲವು ಪ್ರಯೋಗಗಳನ್ನು ನಡೆಸಿ ದಿಟ್ಟಹೆಜ್ಜೆ ಇಟ್ಟಿದ್ದರು. ಜೆಡಿಎಸ್‌ನ ಯಾತ್ರೆಗಳಲ್ಲಿ ಜನಸ್ತೋಮವೇ ಸೇರುತ್ತಿತ್ತು. ಗಿನ್ನಿಸ್‌ ದಾಖಲೆ ಮಾಡಿದ ಹಾರಗಳು, ಸಾಗರೋಪಾದಿಯಲ್ಲಿ ಜನರು ಬಹಿರಂಗ ಸಭೆಗಳಲ್ಲಿ ಸೇರುತ್ತಿದ್ದರು. ಆದರೆ, ಈ ಎಲ್ಲಾ ಪ್ರಯೋಗವು ಮತವಾಗಿ ಪರಿವರ್ತನೆಯಾಗಲಿಲ್ಲ. ಪ್ರಣಾಳಿಕೆಯಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿದ್ದರು. ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಸಹ ಬಿಡುಗಡೆ ಮಾಡಿದ್ದರೂ ಮತದಾರರ ಮನ ಮುಟ್ಟುವಲ್ಲಿ ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ಮುಸ್ಲಿಂ ಪರವಾಗಿ ಗಟ್ಟಿದನಿ ಸಹ ಎತ್ತಿ ಹಿಡಿದಿದ್ದರು. ಹಿಜಾಬ್‌, ಹಲಾಲ್‌ ಸೇರಿದಂತೆ ಇತರೆ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಿದರು. ಹಿಂದಿ ಹೇರಿಕೆ, ಬ್ಯಾಂಕಿಂಗ್‌ ಸೇರಿದಂತೆ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆ ಕುರಿತು ದೊಡ್ಡ ದನಿ ಎತ್ತಿ ಹೋರಾಟ ಮಾಡಿದರು. ಇಷ್ಟೆಲ್ಲಾ ಮಾಡಿದರೂ ಮತದಾರರ ಮಾತ್ರ ಜೆಡಿಎಸ್‌ನತ್ತ ಮುಖ ಮಾಡಲೇ ಇಲ್ಲ ಎನ್ನುವುದೇ ವಿಪರ್ಯಾಸ.

ಹಳೇ ಮೈಸೂರು ಭಾಗ ಜೆಡಿಎಸ್‌ನ ಭದ್ರಕೋಟೆ ಎಂದೇ ಭಾವಿಸಲಾಗಿತ್ತು. ಆದರೆ ಈ ಬಾರಿ ಇದು ಹುಸಿಯಾಯಿತು. ಕೆ.ಆರ್‌.ಪೇಟೆ ಹೊರತುಪಡಿಸಿದರೆ ಯಾವ ಕ್ಷೇತ್ರದಲ್ಲಿಯೂ ಜೆಡಿಎಸ್‌ ಜಯಗಳಿಸಲು ಸಾಧ್ಯವಾಗಿಲ್ಲ. ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರ ಮಾತ್ರ ಜೆಡಿಎಸ್‌ ಪಾಲಾಗಿದೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಕೆಲವು ಸ್ಥಾನಗಳನ್ನು ಪಡೆದುಕೊಂಡಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೆಡಿಎಸ್‌ ಮಕಾಡೆ ಮಲಗಿದ್ದು, ಈ ಪರಿಯ ಫಲಿತಾಂಶದಿಂದ ಜೆಡಿಎಸ್‌ ಅಕ್ಷರಶಃ ಕಂಗಾಲಾಗಿದೆ.

 

ಜೆಡಿಎಸ್‌ಗೆ 2 ದಶಕದಲ್ಲೇ ಅತಿ ಕಡಿಮೆ ಸ್ಥಾನ; ಶೇ.10ಕ್ಕಿಂತ ಕಮ್ಮಿಯಿದ್ರೆ ಸೌಧದಲ್ಲಿ ಜೆಡಿಎಸ್‌ಗೆ ಕಚೇರಿ ಇಲ್ಲ?

ಸಮುದಾಯದ ನಾಯಕತ್ವದ ಜತೆಗೆ ಕುಟುಂಬ ಸದಸ್ಯರಿಂದಲೂ ಹೆಚ್ಚಿನ ಬೆಂಬಲವನ್ನು ನಿರೀಕ್ಷಿಸಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಹೊರತುಪಡಿಸಿದರೆ ಚುನಾವಣೆ ಸಮಯದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಇಳಿವಯಸ್ಸಿನಲ್ಲೂ ಪ್ರಚಾರದಲ್ಲಿ ತೊಡಗಿಸಿಕೊಂಡರು. ಇನ್ನುಳಿದಂತೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕೇವಲ ಹಾಸನಕ್ಕೆ ಸಿಮೀತರಾದರು. ರೇವಣ್ಣ ಪುತ್ರರು ಸಹ ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಒಂದರ್ಥದಲ್ಲಿ ಕುಮಾರಸ್ವಾಮಿ ಒಬ್ಬರೇ ಏಕಾಂಗಿಯಾಗಿ ಹೋರಾಟ ನಡೆಸಿದರು. ಮುಂಬರುವ ಚುನಾವಣೆಗಳಲ್ಲಿ ಪಕ್ಷವು ಗೆಲುವು ಸಾಧಿಸಬೇಕಾದರೆ ಸಮುದಾಯದ ನಾಯಕತ್ವಕ್ಕೆ ಹೆಚ್ಚಿನ ಒತ್ತು ನೀಡಿದರೆ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ.

click me!