ಗ್ರಾಫ್‌ ಹೀಗೇ ಇದ್ರೆ ಏಪ್ರಿಲ್‌ಗೆ ಕೋವಿಡ್‌ನಿಂದ ರಾಜ್ಯ ಪಾರು?

By Kannadaprabha NewsFirst Published Jan 24, 2021, 7:23 AM IST
Highlights

ಗ್ರಾಫ್‌ ಹೀಗೇ ಇದ್ರೆ ಏಪ್ರಿಲ್‌ಗೆ ಕೋವಿಡ್‌ನಿಂದ ರಾಜ್ಯ ಪಾರು?| ಜನವರಿ ಅಂತ್ಯಕ್ಕೆ ಕೊರೋನಾ 2ನೇ ಅಲೆ ಏಳುವ ಭೀತಿ ದೂರ| ಇದು ಮುಂದವರಿದರೆ ಏಪ್ರಿಲ್‌ಗೆ ಸುರಕ್ಷಿತ ಮಟ್ಟಕ್ಕೆ: ತಜ್ಞರು| ಜನತೆ ಈಗಲೂ ಎಚ್ಚರದಿಂದಿರಿ!

ಶ್ರೀಕಾಂತ್‌.ಎನ್‌. ಗೌಡಸಂದ್ರ

ಬೆಂಗಳೂರು(ಜ.24): ಕೊರೋನಾ ಸೋಂಕಿನ ಎರಡನೇ ಅಲೆ ಜನವರಿ ಅಂತ್ಯದಲ್ಲಿ ಕಾಣಿಸಬಹುದು ಎಂಬ ನಿರೀಕ್ಷೆ ಅದೃಷ್ಟವಶಾತ್‌ ಹುಸಿಯಾಗಿದೆ. ಜತೆಗೆ, ನಿತ್ಯ ಸೋಂಕಿನ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗಂತ ರಾಜ್ಯದಲ್ಲಿ ಕೊರೋನಾ ಕ್ರೂರ ಕಾಲ ಮುಕ್ತಾಯವಾಯಿತೇ?

‘ಖಂಡಿತಾ ಇಂತಹ ಭ್ರಮೆ ಬೇಡ’ ಎಂದು ಎಚ್ಚರಿಸುತ್ತಾರೆ ತಜ್ಞರು.

ಸೋಂಕಿನ ಪ್ರಮಾಣ ತಗ್ಗಿರಬಹುದು. ಸೋಂಕಿನ ಗ್ರಾಫ್‌ ಸಮಾನಾಂತರ ರೇಖೆಗೆ ಬಂದಿರಬಹುದು. ಆದರೆ, ಕೊರೋನಾ ಸೋಂಕು ರಾಜ್ಯದಲ್ಲಿ ಇನ್ನೂ ಸಕ್ರಿಯವಾಗಿದೆ. ಹೀಗಾಗಿ ಎಚ್ಚರಿಕೆ ಈಗಲೂ ಅಗತ್ಯ. ಸೋಂಕಿನ ಗ್ರಾಫ್‌ ರೇಖೆ ಏಪ್ರಿಲ್‌ನವರೆಗೂ ಇದೇ ರೀತಿ ಸಮಾನಾಂತರವಾಗಿ ಮುಂದುವರೆದರೆ ಆಗ ರಾಜ್ಯ ಕೊರೋನಾದಿಂದ ಸುರಕ್ಷಿತ ಎಂದು ಭಾವಿಸಬಹುದು ಎಂದು ಅವರು ಹೇಳುತ್ತಾರೆ.

ಈ ಬಗ್ಗೆ ‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದ ಹೆಸರೇಳಲಿಚ್ಛಿಸದ ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ಹಿರಿಯ ಸದಸ್ಯರು, ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಜನಸಾಮಾನ್ಯರಲ್ಲಿನ ಕೊರೋನಾ ಪಾಸಿಟಿವಿಟಿ ದರ ಶೇ.0.25ಕ್ಕೆ ಕುಸಿದಿದೆ. ಇದು ನೆಮ್ಮದಿಯ ವಿಚಾರ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದ್ದು, ಹಲವು ದಿನಗಳ ಹಿಂದೆಯೇ ಮೂರಂಕಿಗೆ ತಲುಪಿದೆ. ಶುಕ್ರವಾರವಂತೂ ಕೇವಲ 324 ಮಂದಿಗೆ ಮಾತ್ರ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿತ್ತು. ಅಕ್ಟೋಬರ್‌ನಿಂದಲೂ ರಾಜ್ಯದಲ್ಲಿ ಪ್ರಕರಣಗಳು ಇಳಿಕೆಯಾಗುತ್ತಲೇ ಇರುವುದರಿಂದ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂಬ ನಿಲುವಿಗೆ ಬರಬಹುದು. ಆದರೆ, ಸಂಪೂರ್ಣವಾಗಿ ಒಪ್ಪಲು ಏಪ್ರಿಲ್‌ವರೆಗೂ ಕಾಯಲೇಬೇಕು ಎಂದು ಸ್ಪಷ್ಟಪಡಿಸಿದರು.

ಹರ್ಡ್‌ ಇಮ್ಯುನಿಟಿ ವೃದ್ಧಿ?:

ರಾಜ್ಯದಲ್ಲಿ ಸದ್ಯ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ. ಇದಕ್ಕೆ ರಾಜ್ಯದ ಬಹುತೇಕ ಜನರಿಗೆ ಸಮುದಾಯ ಪ್ರತಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ವೃದ್ಧಿಸಿರುವುದು ಕಾರಣವಿರಬಹುದು. ಶೇ.75 ರಷ್ಟುಮಂದಿ ಸೋಂಕಿಗೆ ಗುರಿಯಾದರೆ ಆ ವೈರಾಣು ವಿರುದ್ಧ ಸಮುದಾಯಕ್ಕೆ ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಅರ್ಥ. ಸೆಪ್ಟೆಂಬರ್‌ನಲ್ಲಿ ನಡೆಸಿದ್ದ ಸೆರೋ ಸಮೀಕ್ಷೆಯಲ್ಲೇ ಶೇ.42 ರಷ್ಟುಮಂದಿಗೆ ಅದಾಗಲೇ ಕೊರೋನಾ ಬಂದಿದೆ ಎಂಬುದು ಸಾಬೀತಾಗಿತ್ತು. ಇನ್ನು ಜನವರಿ ವೇಳೆಗೆ ಹೆಚ್ಚುವರಿಯಾಗಿ ಶೇ.20 ರಷ್ಟುಮಂದಿಗೆ ಸೋಂಕು ಹರಡಿರಬಹುದು. ಪ್ರಸ್ತುತ ಎರಡನೇ ಹಂತದ ಸೆರೋ ಸಮೀಕ್ಷೆ ನಡೆಯುತ್ತಿದ್ದು, ನನ್ನ ಪ್ರಕಾರ ರಾಜ್ಯದಲ್ಲಿ ಹರ್ಡ್‌ ಇಮ್ಯುನಿಟಿ ವೃದ್ಧಿಸಿರಬಹುದು ಎಂದು ಕೊರೋನಾ ಪರೀಕ್ಷೆ ನೋಡಲ್‌ ಅಧಿಕಾರಿಯೂ ಆದ ತಜ್ಞ ವೈದ್ಯ ಡಾ.ಸಿ.ಎನ್‌. ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಆಸ್ಪತ್ರೆಗಳಲ್ಲಿ ಕೊರೋನಾ ಇನ್ನೂ ಇದೆ:

ಜನಸಾಮಾನ್ಯರಲ್ಲಿ ಪ್ರತಿ 100 ಮಂದಿಗೆ ಪರೀಕ್ಷೆ ನಡೆಸಿದರೆ ಶೇ.0.25 ರಷ್ಟುಮಂದಿಗೆ ಮಾತ್ರ ಸೋಂಕು ಖಚಿತವಾಗುತ್ತಿದೆ. ಆದರೆ, ಆಸ್ಪತ್ರೆಗಳಿಗೆ ವಿವಿಧ ಅನಾರೋಗ್ಯ ಸಮಸ್ಯೆಗಳಿಗಾಗಿ ಚಿಕಿತ್ಸೆಗೆ ಹೋಗುವವರ ಪರೀಕ್ಷೆಯಲ್ಲಿ ಪ್ರತಿ 100 ಮಂದಿಗೆ ಶೇ.1 ರಿಂದ 2ರಷ್ಟುಮಂದಿಗೆ ಸೋಂಕು ದೃಢಪಡುತ್ತಿದೆ. ಈ ಹಿಂದೆ ಈ ಪ್ರಮಾಣ ಶೇ.6 ರಿಂದ 7 ರಷ್ಟಿತ್ತು. ಈ ಪ್ರಮಾಣ ಕಡಿಮೆಯಾಗಿದ್ದರೂ, ಆಸ್ಪತ್ರೆಗಳಲ್ಲಿ ಇನ್ನೂ ಕೊರೋನಾ ಇದೆ ಎಂಬುದು ಸಾಬೀತಾಗುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಡಾ.ಸಿ.ಎನ್‌. ಮಂಜುನಾಥ್‌ ಸಲಹೆ ನೀಡುತ್ತಾರೆ.

ಏಪ್ರಿಲ್‌ವರೆಗೂ ಕಠಿಣ ಮುನ್ನೆಚ್ಚರಿಕೆ ಅನಿವಾರ್ಯ

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ಎರಡನೇ ಅಲೆ ಭೀತಿ ಇನ್ನೂ ಹೋಗಿಲ್ಲ. ಏಕೆಂದರೆ, ಯೂರೋಪ್‌ ರಾಷ್ಟ್ರಗಳಲ್ಲಿ ನಾಲ್ಕು ತಿಂಗಳು ಇಳಿಮುಖವಾಗಿದ್ದ ಪ್ರಕರಣಗಳು ಏಕಾಏಕಿ ಹೆಚ್ಚಾಗಿವೆ. ಇನ್ನು ರಾಜ್ಯದ ನೆರೆಯ ಕೇರಳದಲ್ಲಿ ಇನ್ನೂ ಹೆಚ್ಚೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಏಪ್ರಿಲ್‌ ಮೊದಲ ವಾರದವರೆಗೂ ಯಾವುದೇ ಕಾರಣಕ್ಕೂ ಕೊರೋನಾ ನಿಯಂತ್ರಣಕ್ಕೆ ಬಂದಿದೆಯೇ ಎಂಬ ಕುರಿತು ಅಂತಿಮ ನಿರ್ಧಾರಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅಲ್ಲಿಯವರೆಗೂ ಎಲ್ಲಾ ಕೊರೋನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಎಚ್ಚರಿಸಿದ್ದಾರೆ.

ಹರ್ಡ್‌ ಇಮ್ಯುನಿಟಿ

ರಾಜ್ಯದಲ್ಲಿ ಸದ್ಯ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ. ಇದಕ್ಕೆ ರಾಜ್ಯದ ಬಹುತೇಕ ಜನರಿಗೆ ಸಮುದಾಯ ಪ್ರತಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ವೃದ್ಧಿಸಿರುವುದು ಕಾರಣವಿರಬಹುದು. ಶೇ.75 ರಷ್ಟುಮಂದಿ ಸೋಂಕಿಗೆ ಗುರಿಯಾದರೆ ಆ ವೈರಾಣು ವಿರುದ್ಧ ಸಮುದಾಯಕ್ಕೆ ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಅರ್ಥ. ನನ್ನ ಪ್ರಕಾರ ರಾಜ್ಯದಲ್ಲಿ ಹರ್ಡ್‌ ಇಮ್ಯುನಿಟಿ ವೃದ್ಧಿಸಿರಬಹುದು.

- ಡಾ| ಸಿ.ಎನ್‌.ಮಂಜುನಾಥ್‌, ತಜ್ಞ ವೈದ್ಯ

click me!