
ಚಾಮರಾಜನಗರ[ನ.28]: ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿರುವ ಕಾಡಂಚಿನ ಗ್ರಾಮಗಳಿಗೆ ‘ವೈರ್‌ಲೆಸ್ ವಾಕಿಟಾಕಿ’ ನೀಡಲು ಅರಣ್ಯ ಇಲಾಖೆ ಮುಂದಾಗಿದೆ.
ಅರಣ್ಯ ಪ್ರದೇಶದ ಸುತ್ತಮುತ್ತಲ ಗ್ರಾಮಗಳಿಗೆ ಕಾಡು ಪ್ರಾಣಿಗಳು ನುಗ್ಗಿ ರೈತರ ಆಸ್ತಿ ಪಾಸ್ತಿ ಹಾಗೂ ಪ್ರಾಣಕ್ಕೆ ಹಾನಿಯನ್ನುಂಟು ಮಾಡುತ್ತಿವೆ. ಇದರಿಂದ ಈ ಗ್ರಾಮಗಳ ಜನ ಭಯದ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ. ಇದು ಬದಲಾಗಬೇಕಾಗಿದೆ. ಆದ್ದರಿಂದ ಗ್ರಾಮಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗೆ ನೇರ ಮಾಹಿತಿ ರವಾನೆ ಮಾಡುವಂತೆ ಮಾಡುವ ಸಲುವಾಗಿ ಈ ಚಿಂತನೆ ನಡೆಸಲಾಗಿದೆ.
ಆನೆ, ಹುಲಿ ಸೇರಿದಂತೆ ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ತವೆ. ಅಂತಹ ಸಂದರ್ಭದಲ್ಲಿ ಗ್ರಾಮಸ್ಥರು ಗಾಬರಿಯಾಗಿ ಕೂಗಾಡುತ್ತಾರೆ. ಕೆಲ ಪ್ರಕರಣಗಳಲ್ಲಿ ಕಾಡು ಪ್ರಾಣಿಗಳೇ ರೈತರನ್ನು ಕೊಂದಿವೆ. ಈ ಸಂಕಷ್ಟತಪ್ಪಿಸಲು ವಾಕಿಟಾಕಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಚಾಮರಾಜನಗರ ಜಿಲ್ಲೆಯ ಮರೂರು ಗ್ರಾಮದ ರೈತರೊಂದಿಗೆ ನಡೆದ ಸಂವಾದದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದರು.
ಮೇವನ್ನರಿಸಿ ಕಾಡಿನಿಂದ ನಾಡಿಗೆ ಪ್ರಾಣಿಗಳ ಹಿಂಡು ಬಂದಾಗ ನೂರಾರು ಜನ ಗ್ರಾಮಸ್ಥರು ಸೇರುತ್ತಾರೆ. ಇದರಿಂದ ಗಾಬರಿಗೊಳ್ಳುವ ಪ್ರಾಣಿಗಳು ಜನರ ಮೇಲೆರಗುತ್ತವೆ. ಪರಿಣಾಮ ಜನರ ಮತ್ತು ಪ್ರಾಣಿಗಳ ಜೀವಕ್ಕೆ ಹಾನಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದಲ್ಲಿ ಸ್ಥಳಕ್ಕೆ ಬಂದು ಪ್ರಾಣಿಗಳು ಮತ್ತು ಮನುಷ್ಯರ ಪ್ರಾಣಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬಹುದು ಎಂದರು.
ಗ್ರಾಮದಲ್ಲಿ ಒಬ್ಬರನ್ನು ಗುರುತಿಸಿ ವಾಕಿಟಾಕಿ ನೀಡಲಾಗುವುದು. ಅವರಿಗೆ ಅದನ್ನು ಬಳಸಲು ತರಬೇತಿ ನೀಡಲಾಗುವುದು. ಜೊತೆಗೆ ಅದನ್ನು ಚಾಜ್‌ರ್ ಮಾಡಲು ಸೋಲಾರ್ ಚಾರ್ಜರ್ ನೀಡಲಾಗುವುದು ಎಂದರು.
ಹೊಲದಲ್ಲಿ ಮರ ಬೆಳೆಸಲು ಒತ್ತು:
ಅರಣ್ಯದ ಅಂಚಿನಲ್ಲಿರುವ ತೋಟಗಳಿಗೆ ಕಾಡು ಪ್ರಾಣಿಗಳು ನುಗ್ಗಿ ಬೆಳೆ ನಾಶ ಮಾಡುತ್ತವೆ. ಪರಿಣಾಮ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಪೂರ್ಣ ಪ್ರಮಾಣದ ಪರಿಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ರೈತರ ಜಮೀನುಗಳಲ್ಲಿ ಅರಣ್ಯದಲ್ಲಿ ಬೆಳೆಯುವ ಬೆಲೆಬಾಳುವ ಮರಗಳನ್ನು ಬೆಳೆಸಲು (ಆಗ್ರೋ ಫಾರೆಸ್ಟ್ರಿ) ಒತ್ತು ನೀಡಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಮತ್ತಷ್ಟುಹೆಚ್ಚಳ ಆಗಬೇಕಾಗಿದೆ. ಪ್ರಾಣಿಗಳು ಹೆಚ್ಚಾದಂತೆ ಕಾಡಂಚಿನ ಗ್ರಾಮಗಳಿಗೆ ನುಗ್ಗುವುದು ಸಾಮಾನ್ಯ. ಆದ್ದರಿಂದ ರೈತರ ಜಮೀನಿನಲ್ಲಿ ಬೆಲೆಬಾಳುವ ಮರಗಳನ್ನು ಬೆಳೆಸಲು ಸೂಚಿಸಲಾಗುತ್ತಿದೆ. ಇದರಿಂದ ರೈತರಿಗೆ ಸಾಮಾನ್ಯ ಬೆಳೆಗಳಿಗಿಂತ ಹೆಚ್ಚು ಲಾಭ ಸಿಗುತ್ತದೆ. ರೈತರು ಬೆಳೆಯುವ ಮರಗಳನ್ನು ಖರೀದಿಸಲು ಕೆಲ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಇದರಿಂದ ರೈತರು ನೆಮ್ಮದಿಯ ಜೀವನ ನಡೆಸಬಹುದು ಎಂದರು.
5 ಲಕ್ಷ ರು. ಪರಿಹಾರ:
ಕಳೆದ ಕೆಲ ದಿನಗಳ ಹಿಂದೆ ಮರೂರು ಗ್ರಾಮದಲ್ಲಿ ಸಿದ್ದಪ್ಪ ಎಂಬ ರೈತನನ್ನು ಆನೆಯೊಂದು ತುಳಿದು ಸಾಯಿಸಿತ್ತು. ಈಗಾಗಲೇ ಅವರ ಕುಟುಂಬಕ್ಕೆ ಐದು ಲಕ್ಷ ರು.ಗಳನ್ನು ಪರಿಹಾರ ನೀಡಲಾಗಿದೆ. ಅಲ್ಲದೆ, ಮುಂದಿನ ಐದು ವರ್ಷಗಳ ಕಾಲ ಪ್ರತಿ ತಿಂಗಳು ಎರಡು ಸಾವಿರ ರು. ನೀಡಲಾಗುತ್ತಿದೆ. ಜೊತೆಗೆ ಮೃತ ಸಿದ್ದಪ್ಪನ ಪುತ್ರನಿಗೆ ಅರಣ್ಯ ರಕ್ಷಕ ಹುದ್ದೆ ನೀಡಲಾಗಿದೆ ಎಂದು ಏಡುಕೊಂಡಲು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ