Karnataka State Anthem: ನಾಡಗೀತೆಗೆ ಅನಂತ ಸ್ವಾಮಿ ಧಾಟಿ ಅಂತಿಮ

By Kannadaprabha NewsFirst Published Sep 24, 2022, 7:49 AM IST
Highlights

ಗಾಯಕ, ರಾಗ ಸಂಯೋಜಕ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ ಧಾಟಿಯಲ್ಲಿ ಕುವೆಂಪು ಅವರ ಕವನದ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದು, ಅದಕ್ಕಾಗಿ 2.30 ನಿಮಿಷಗಳ ಕಾಲಮಿತಿಯನ್ನೂ ನಿಗದಿಪಡಿಸಿದೆ.
 

ಬೆಂಗಳೂರು(ಸೆ.24):  ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಗೆ ಧಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡುವ ಮೂಲಕ ರಾಜ್ಯ ಸರ್ಕಾರ ದಶಕಗಳಿಂದ ಇದ್ದ ಗೊಂದಲಕ್ಕೆ ತೆರೆ ಎಳೆದಿದೆ. ಗಾಯಕ, ರಾಗ ಸಂಯೋಜಕ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ ಧಾಟಿಯಲ್ಲಿ ಕುವೆಂಪು ಅವರ ಕವನದ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದು, ಅದಕ್ಕಾಗಿ 2.30 ನಿಮಿಷಗಳ ಕಾಲಮಿತಿಯನ್ನೂ ನಿಗದಿಪಡಿಸಿದೆ.

ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ 2.30 ನಿಮಿಷಗಳಲ್ಲಿ ನಾಡಗೀತೆಯನ್ನು ಹಾಡಲು ಸಾಧ್ಯ ಎಂದು ಮೈಸೂರಿನ ಸಂಗೀತ ವಿದುಷಿ ಎಚ್‌.ಆರ್‌.ಲೀಲಾವತಿ ಅಧ್ಯಕ್ಷತೆಯ ಸಮಿತಿ ಮಾಡಿದ್ದ ಶಿಫಾರಸಿನ ಅನ್ವಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.

ನಾಡಗೀತೆ ತಿರುಚಿದ ಬಗ್ಗೆ ಪತ್ರ ಗಂಭೀರವಾಗಿ ಪರಿಗಣನೆ: ಸಿಎಂ

ಈ ಕುರಿತು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ಕುಮಾರ್‌ ಅವರು, ‘ಕುವೆಂಪು ವಿರಚಿತ ನಾಡಗೀತೆ ಜಯಭಾರತ ಜನನಿಯ ತನುಜಾತೆಗೆ ಧಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ. ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ ಇನ್ನು 2.30 ನಿಮಿಷಗಳಲ್ಲಿ ನಾಡಗೀತೆಯನ್ನು ಹಾಡಬಹುದು. ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಇನ್ನು ಅಧಿಕೃತವಾಗಿ ಹಾಡಬಹುದು’ ಎಂದು ತಿಳಿಸಿದ್ದಾರೆ.

ದಶಕಗಳ ಸಮಸ್ಯೆ:

ನಾಡಗೀತೆಯ ಧಾಟಿ ಹಾಗೂ ಯಾರ ಸ್ವರ ಸಂಯೋಜನೆ ಬಳಸಬೇಕು ಎಂಬ ಬಗ್ಗೆ ದಶಕಗಳ ಕಾಲ ಪರ- ವಿರೋಧ ಚರ್ಚೆ ನಡೆದಿವೆ. ಗಂಭೀರ ಚಿಂತನೆ ಆರಂಭವಾಗಿದ್ದು, 2013ರ ಜೂನ್‌ನಲ್ಲಿ. ಆಗ ವಿದ್ವಾಂಸ ವಸಂತ ಕನಕಾಪುರ ಅವರ ಅಧ್ಯಕ್ಷತೆಯಲ್ಲಿ ನಾಡಗೀತೆಗೆ ನಿರ್ದಿಷ್ಟಧಾಟಿ ಕುರಿತು ನಿರ್ಧರಿಸಲು ನಡೆದಿದ್ದ ಸಭೆ ನಡೆದಿತ್ತು. ಮೈಸೂರು ಅನಂತಸ್ವಾಮಿ ಅವರು ನಾಡಗೀತೆಯ ಒಂದು ಪಲ್ಲವಿ, ಎರಡು ಚರಣಗಳಿಗೆ ಮಾತ್ರ ಸ್ವರ ಸಂಯೋಜನೆ ಮಾಡಿದ್ದು, ಪೂರ್ಣ ಪಾಠಕ್ಕೆ ಮಾಡಿಲ್ಲ. ಅವರ ಪಾಠದಲ್ಲಿ ಭೂದೇವಿಯ ಮಕುಟದ, ಜನನಿಯ ಜೋಗುಳ, ತೈಲಪ ಹೊಯ್ಸಳ ಇವುಗಳನ್ನು ಸೇರಿಸಿಲ್ಲ. ಸ್ವರ ಸಂಯೋಜನೆ ಸುಶ್ರಾವ್ಯವಾಗಿದೆ.

ಆದರೆ, ಸಿ.ಅಶ್ವತ್ಥ್‌ ಅವರು ಪೂರ್ಣ ಪಾಠಕ್ಕೆ ಸ್ವರ ಸಂಯೋಜನೆ ಮಾಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆ ಒಪ್ಪಿದರೆ ಒಂದು ಪಲ್ಲವಿ ಮತ್ತು ಎರಡು ಚರಣವನ್ನು ನಾಡಗೀತೆಯಾಗಿ ಅಂಗೀಕರಿಸಬೇಕು. ಇನ್ನು ಪೂರ್ಣ ಪಾಠವನ್ನು ನಾಡಗೀತೆಯಾಗಿ ಮಾಡಿಕೊಂಡರೆ ಸಿ.ಅಶ್ವತ್‌್ಥ ಅವರ ಧಾಟಿಯಲ್ಲಿ ಹಾಡಬೇಕೆಂಬ ಬಗ್ಗೆ ಚರ್ಚಿಸಲಾಗಿತ್ತು.

ಇದಕ್ಕೆ ಸಹಮತ ಬರದಿದ್ದರಿಂದ 2014ರಲ್ಲಿ ಚೆನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಸಮಿತಿಯು ನಾಡಗೀತೆಯ ಪಠ್ಯವನ್ನು ಅರ್ಥಪೂರ್ಣವಾಗಿ 21 ಸಾಲುಗಳಿಗೆ ಸೀಮಿತಗೊಳಿಸಬೇಕು. ಇದಕ್ಕೆ ಸಿ.ಅಶ್ವತ್‌್ಥ ರಾಗ ಸಂಯೋಜಿಸಿರುವ ಧಾಟಿ ಬಳಸಬೇಕು. ಆದರೆ, ಅದರಲ್ಲಿನ ಪುನರಾವರ್ತನೆ, ಆಲಾಪನೆ, ಹಿನ್ನೆಲೆ ಸಂಗೀತ ಕೈಬಿಡಬೇಕು ಎಂದು ನಿರ್ಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆ ನಂತರವೂ ನಾಡಗೀತೆ ಹಾಡುವ ಕಾಲಾವಧಿಯನ್ನು ನಿಗದಿಪಡಿಸುವ ಬಗ್ಗೆ ಅನೇಕ ಸಭೆಗಳು ನಡೆದವು. ಹಿರಿಯರು ತಮ್ಮ ಅಭಿಪ್ರಾಯವನ್ನು ಪ್ರತಿಪಾದಿಸಿದ್ದರು.

BC Nagesh: ನಾಡಗೀತೆ ವಿವಾದ: ಚುಂಚಶ್ರೀಗೆ ನಾಗೇಶ್‌ ವಿವರಣೆ!

ಸಿ.ಅಶ್ವತ್ಥ್‌ ದಾಟಿ ಬಳಕೆಗೆ ಆಗ್ರಹ:

ಈ ನಡುವೆ ಕುವೆಂಪು ಅವರ ವಾರಸುದಾರರ ಅಭಿಪ್ರಾಯ ಪಡೆದಿದ್ದ ರಾಜ್ಯ ಸರ್ಕಾರ, ನಾಡಗೀತೆಯ ಯಾವುದೇ ಸಾಲಿಗೆ ಕತ್ತರಿ ಹಾಕದೆ ಪೂರ್ಣ ಪಾಠವನ್ನೇ ಹಾಡಲು 2016ರಲ್ಲಿ ಮಾನ್ಯತೆ ನೀಡಿತ್ತು. ಹಾಗಾಗಿ ಸಿ.ಅಶ್ವತ್ಥ್‌ ಅವರ ದಾಟಿಯನ್ನೇ ಬಳಕೆ ಮಾಡಬೇಕೆಂಬ ಕೂಗುಕೇಳಿ ಬಂದಿತ್ತು.

ಪೂರ್ತಿ ಗೀತೆಗೆ ಅನಂತಸ್ವಾಮಿ ರಾಗ:

2018ರಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ಸಭೆ ಸೇರಿ, 2.30 ನಿಮಿಷದಲ್ಲಿ ಹಾಡಿ ಮುಗಿಸಲು ಸಹಮತ ಸೂಚಿಸಲಾಗಿತ್ತು. ಅಂದಿನ ಸಭೆಯ ನಡಾವಳಿಯನ್ನು ಆಗಿನ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಆ ನಂತರ ಮೈಸೂರಿನ ಸುಗಮ ಸಂಗೀತ ಹಿರಿಯ ಕಲಾವಿದೆ ಎಚ್‌.ಆರ್‌.ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆದ ಸಾಹಿತಿ, ಸಂಗೀತ ಕಲಾವಿದರ ತಜ್ಞರ ಸಮಿತಿ ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯ ಧಾಟಿ ಅಳವಡಿಸಿಕೊಂಡು 2.30 ನಿಮಿಷಗಳ ಕಾಲಮಿತಿಯಲ್ಲಿ ಕವನದ ಪೂರ್ಣಪಾಠವನ್ನು ಹಾಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ದಶಕಗಳ ಗೊಂದಲಕ್ಕೆ ತೆರೆ

- ನಾಡಗೀತೆ ಧಾಟಿ ಬಗ್ಗೆ ದಶಕಗಳಿಂದ ಚರ್ಚೆ
- ಮೈಸೂರು ಅನಂತಸ್ವಾಮಿ ಧಾಟಿಗೆ ಕೆಲವರ ಒತ್ತಡ
- ಸಿ. ಅಶ್ವತ್ಥ್‌ ಧಾಟಿ ಬಳಸಲು ಮತ್ತೆ ಕೆಲವರ ಆಗ್ರಹ
- ಅನಂತಸ್ವಾಮಿ ಧಾಟಿ ಅಂತಿಮಗೊಳಿಸಿದ ಸರ್ಕಾರ
 

click me!