ಬಹುತೇಕ ಪಂಚಮಸಾಲಿಗಳು ನಡೆದುಕೊಳ್ಳುವುದು ಕೇದಾರ, ಶ್ರೀಶೈಲ, ಉಜ್ಜಯನಿ, ಕಾಶಿ ಮತ್ತು ರಂಭಾಪುರಿಗಳಲ್ಲಿ ಇರುವ ಪಂಚಪೀಠಗಳಿಗೆ ಮತ್ತು ಸ್ಥಳೀಯವಾಗಿ ಇರುವ ವಿರಕ್ತ ಮಠಗಳಿಗೆ.
ಇಂಡಿಯಾಗೇಟ್: ಪ್ರಶಾಂತ್ ನಾತು
ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು ಹೇಗೋ ಹಾಗೆಯೇ ಉತ್ತರ ಕರ್ನಾಟಕದಲ್ಲಿ ಕೃಷಿಕ ಸಮುದಾಯ ಅಂದರೆ, ಭೂಮಿ ಹಸನು ಮಾಡಿ ಉತ್ತುವುದು, ಬಿತ್ತುವುದು, ಬೆಳೆಯುವುದು, ಬೆಳೆ ಕಟಾವು ಮಾಡಿ ಮಾರಾಟ ಮಾಡುವವರೆಗಿನ ‘ಪಂಚ’ ಕೆಲಸಗಳನ್ನು ಮಾಡುವ ಸಮುದಾಯವೇ ಪಂಚಮಸಾಲಿ. ಅರ್ಕಸಾಲಿ, ಅಕ್ಕಸಾಲಿ, ತೈಲ ಸಾಲಿಗಳು ಇರುವಂತೆಯೇ ರೈತಾಪಿ ಸಮುದಾಯವನ್ನು ಪಂಚಮಸಾಲಿಗಳು ಎಂದು ಹೇಳುತ್ತಾರೆ. ಬಸವಣ್ಣ ಅವರ ಸಮಯದಲ್ಲಿ ಅತೀ ಹೆಚ್ಚು ಜೈನರು ಲಿಂಗ ದೀಕ್ಷೆ ತೆಗೆದುಕೊಂಡರು. ಆ ಪೈಕಿ ಕೃಷಿ ಕೆಲಸ ಮಾಡುವವರು ಕೂಡ ಪಂಚಮಸಾಲಿಗಳಾದರು ಎಂಬುದು ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಅಭಿಪ್ರಾಯ ಆಗಿತ್ತು. ಆದರೆ ಅನೇಕ ಇತಿಹಾಸಕಾರರು ಇದನ್ನು ಒಪ್ಪುವುದಿಲ್ಲ.
ಬಹುತೇಕ ಪಂಚಮಸಾಲಿಗಳು ನಡೆದುಕೊಳ್ಳುವುದು ಕೇದಾರ, ಶ್ರೀಶೈಲ, ಉಜ್ಜಯನಿ, ಕಾಶಿ ಮತ್ತು ರಂಭಾಪುರಿಗಳಲ್ಲಿ ಇರುವ ಪಂಚಪೀಠಗಳಿಗೆ ಮತ್ತು ಸ್ಥಳೀಯವಾಗಿ ಇರುವ ವಿರಕ್ತ ಮಠಗಳಿಗೆ. ಪಂಚಮಸಾಲಿ ನಾಯಕರು ಹೇಳಿಕೊಳ್ಳುವ ಪ್ರಕಾರ, ಒಂದೂವರೆ ಕೋಟಿ ಪಂಚಮಸಾಲಿಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿದ್ದಾರೆ. ಅದರಲ್ಲಿ 80 ಲಕ್ಷ ಕರ್ನಾಟಕದಲ್ಲೇ ಇದ್ದಾರೆ. ದಕ್ಷಿಣ ಕರ್ನಾಟಕದ ಲಿಂಗಾಯತ ಗೌಡರು, ಮಲೆನಾಡಿನ ಮಲೇಗೌಡರು, ಕಲ್ಯಾಣ ಕರ್ನಾಟಕದ ದೀಕ್ಷಾ ಲಿಂಗಾಯತರು ಮತ್ತು ಕರಾವಳಿ ಕರ್ನಾಟಕದ ಗೌಳಿ ಲಿಂಗಾಯತರು ಕೂಡ ಪಂಚಮಸಾಲಿಗಳು ಎಂದು ಹೇಳಲಾಗುತ್ತದೆ. ಪಂಚಮಸಾಲಿಗಳ ಬೇಸರ ಶುರು ಆಗಿದ್ದು- ಲಿಂಗಾಯತರಲ್ಲಿ ಜಾಸ್ತಿ ಸಂಖ್ಯೆ ಇದ್ದರೂ ರಾಜಕೀಯ ಅಧಿಕಾರ ಸಿಕ್ಕಿದ್ದು ಕಡಿಮೆ ಎಂಬ ಕಾರಣಕ್ಕೆ.
ಸಂವಿಧಾನ ಬಗ್ಗೆ ಬಿಜೆಪಿಗರ ಮಾತು ಸಾವರ್ಕರ್‌ರನ್ನು ಗೇಲಿ ಮಾಡಿದಂತೆ: ರಾಹುಲ್ ಗಾಂಧಿ
undefined
ಸಹಜ ನಾಯಕತ್ವವೋ ಅಥವಾ ಜಾತಿ ಸಮೀಕರಣವೋ ಏನೋ ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ್, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ್ ಬೊಮ್ಮಾಯಿ ಹೀಗೆ ಬಹುತೇಕ ಮುಖ್ಯಮಂತ್ರಿಗಳು ಬಣಜಿಗ ಮತ್ತು ಸಾದರ ಸಮುದಾಯಕ್ಕೆ ಸೇರಿದವರೆ ಹೊರತು ಪಂಚಮಸಾಲಿಗಳಲ್ಲ. ಆದರೆ ನಿಜಲಿಂಗಪ್ಪನವರು ಮತ್ತು ಜೆ.ಎಚ್.ಪಟೇಲರು ಪಂಚಮಸಾಲಿ ಹೌದಾದರೂ ಅವರು ಎಂದಿಗೂ ಅದನ್ನು ಗಟ್ಟಿಯಾಗಿ ಹೇಳಿಕೊಂಡವರಲ್ಲ. 2000ನೇ ಇಸವಿವರೆಗೆ ಪಂಚಮಸಾಲಿಗಳು ಮೀಸಲಾತಿಗೋಸ್ಕರ ಕೂಡ ತಲೆಕೆಡಿಸಿಕೊಂಡವರೂ ಅಲ್ಲ. ಯಾವಾಗ ಸತತ ಬರಗಾಲದಿಂದ ಕೃಷಿಯಲ್ಲಿ ನಷ್ಟ, ಬೆಲೆ ಕುಸಿತ ಮತ್ತು ಸಾಲ ಜಾಸ್ತಿ ಆಗತೊಡಗಿತೋ ಹಾಗೂ ಕುಟುಂಬ ಸದಸ್ಯರ ನಡುವೆ ಭೂಮಿ ಹಂಚಿಕೆಯಾಗಿ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಯಿತೋ ಆಗ ಜಾಟರು, ಪಟೇಲರು ಮತ್ತು ಮರಾಠರಿಗೆ ಅನ್ನಿಸಿದಂತೆ ಪಂಚಮಸಾಲಿಗಳಿಗೂ ನಮ್ಮ ಮಕ್ಕಳಿಗೂ ಶಿಕ್ಷಣ-ಉದ್ಯೋಗದಲ್ಲಿ ಮೀಸಲಾತಿ ಬೇಕು. ನಮ್ಮ ಸಂಖ್ಯೆ ಜಾಸ್ತಿಯಿದೆ. ಹೀಗಾಗಿ ಜಾಸ್ತಿ ಮೀಸಲಾತಿ ಬೇಕು ಅನ್ನಿಸಲು ಶುರು ಆಯಿತು. ಅದೇ ಇವತ್ತಿನ ಹೋರಾಟಕ್ಕೆ ಮೂಲ ಕಾರಣ.
ರಾಜ್ಯದಲ್ಲಿ ಮೀಸಲಾತಿ ಹೋರಾಟಗಳು: ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಹಾವನೂರು ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ರಚನೆ ಆಯಿತು. ಒಕ್ಕಲಿಗರು ಕೂಡ ಹಿಂದುಳಿದವರು ಎಂದು ವರದಿ ಕೊಟ್ಟ ಹಾವನೂರು ಆಯೋಗ, ಅದೇ ವೇಳೆ ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಷ್ಠರು ಎಂಬ ಕಾರಣಕ್ಕೆ ಲಿಂಗಾಯತರನ್ನು ಹಿಂದುಳಿದ ಪಟ್ಟಿಯಿಂದ ಹೊರಗಿಟ್ಟಿತು. ಪ್ರಕರಣ ಸುಪ್ರೀಂಕೋರ್ಟ್‌ವರೆಗೆ ಹೋಗಿ, ಸಂವಿಧಾನ ಪೀಠ ಹಾವನೂರು ವರದಿಯನ್ನೇ ಸರಿ ಎಂದಿತು. ಮುಂದೆ, ಲಿಂಗಾಯತರ ನಾಯಕ ಅಂತಲೇ ಗುರುತಿಸಿಕೊಂಡಿದ್ದ ರಾಮಕೃಷ್ಣ ಹೆಗಡೆ ಅವರು ವೆಂಕಟ ಸ್ವಾಮಿ ಆಯೋಗವನ್ನು ರಚಿಸಿದರು. ಲಿಂಗಾಯತರ ಜೊತೆ ಒಕ್ಕಲಿಗರು ಕೂಡ ಹಿಂದುಳಿದವರಲ್ಲ ಎಂದು ವೆಂಕಟಸ್ವಾಮಿ ಕೊಟ್ಟ ವರದಿಯನ್ನು ಹೆಗಡೆ ಒಪ್ಪಿಕೊಳ್ಳಲೇ ಇಲ್ಲ. ಆಮೇಲೆ ಚಿನ್ನಪ್ಪ ರೆಡ್ಡಿ ಆಯೋಗವು ಹಿಂದುಳಿದವರ 4 ಕೆಟಗಿರಿ ಮಾಡಿ 32 ಪ್ರತಿಶತ ಮೀಸಲಾತಿ ಘೋಷಿಸಿ 3ಎ ನಲ್ಲಿ ಒಕ್ಕಲಿಗರಿಗೆ ಶೇ.4ರಷ್ಟು, 3ಬಿಯಲ್ಲಿ ಲಿಂಗಾಯತ ಎಲ್ಲಾ ಉಪ ಪಂಗಡಗಳಿಗೆ ಶೇ.5 ಮೀಸಲಾತಿ ನೀಡಲು ವರದಿ ನೀಡಿತು.
ಆದರೆ 2003ರಲ್ಲಿ ಪಂಚಾಚಾರ್ಯರಲ್ಲಿ ಕೆಲವರು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಳಿಗೆ ಹೋಗಿ, ಜಂಗಮ ಸಮುದಾಯವನ್ನು ಬೇಡ ಜಂಗಮ ಎಂದು ಘೋಷಿಸಿ ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಕೇಳಿಕೊಂಡರು. ಅದೇ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಇದ್ದಾಗ ಬಲಿಜರ ಜೊತೆ ಕೆಲ ಬಣಜಿಗ ಸಮುದಾಯಗಳನ್ನು ಅತೀ ಹಿಂದುಳಿದ 2ಎ ಪಟ್ಟಿಯಲ್ಲಿ ಸೇರಿಸುವ ಪ್ರಯತ್ನ ಮಾಡಿದಾಗ ಪಂಚಮಸಾಲಿಗಳಲ್ಲಿ ತಳಮಳ ಶುರು ಆಯಿತು. ಲಿಂಗಾಯತ ಅಂತ ಬರೆಸದೆ ಹಿಂದೂ ಕುಂಬಾರ, ಹಿಂದೂ ಗಾಣಿಗ ಅಂತ ಬರೆಸಿದರೆ ಬಹುತೇಕ ಲಿಂಗಾಯತ ಉಪ ಪಂಗಡಗಳು 15 ಪ್ರತಿಶತ ಮೀಸಲಾತಿ ಪಟ್ಟಿಯಲ್ಲಿ ಉನ್ನತ ಶಿಕ್ಷಣದ ಸೀಟು ಪಡೆಯುತ್ತಾರೆ. ನಮ್ಮ ಮಕ್ಕಳು ಯಾಕೆ 5 ಪ್ರತಿಶತದಲ್ಲಿ ಗುದ್ದಾಡಬೇಕು ಎನ್ನುವುದು ಸಮಾಜದ ಹಿರಿಯರ ಮನಸ್ಸಿನಲ್ಲಿ ಬಂದಿದೆ. ಹೀಗಾಗಿ ನಾವು ಶೇ.5 ರಿಂದ ಶೇ.15ಕ್ಕೆ ಹೋಗಬೇಕು ಅನ್ನುವ ಹೋರಾಟ ಶುರು ಆಗಿದ್ದು.
‘ಮೀಸಲಾತಿ’ ಮಂತ್ರ ದಂಡ: ರಾಜಕೀಯ ಪಕ್ಷಗಳಿಗೆ ಚುನಾವಣಾ ಸಲಹೆ ನೀಡುವ ಕಂಪನಿಯೊಂದರ ಮುಖ್ಯಸ್ಥರು ಕೆಲ ದಿನಗಳ ಹಿಂದೆ ಸಿಕ್ಕಿದ್ದರು. ಅವರು ಹೇಳುವ ಪ್ರಕಾರ, ಚುನಾವಣೆ ಗೆಲ್ಲಲು ಮೂರು ವಿಷಯಗಳು ಮಾತ್ರ ಕೆಲಸ ಮಾಡುತ್ತವೆ ಅಂತೆ. ಮೊದಲನೆಯದು ಧರ್ಮ; ಅದು ಕೂಡ ಪರ ಧರ್ಮ ಹೀಯಾಳಿಕೆ, ಅವಹೇಳನ ವೋಟು ತರಬಲ್ಲದು ಬಿಟ್ಟರೆ ಸ್ವಧರ್ಮ ಶ್ರೇಷ್ಠತೆ ಅಲ್ಲ. ಎರಡನೆಯದು ಜಾತಿ. ಅದರಲ್ಲೂ ಜಾತಿ ನಾಯಕತ್ವ ಬಿಟ್ಟರೆ ಮೀಸಲಾತಿ ಭರವಸೆಗಳು. ಮೂರನೆಯದು ಪುಕ್ಕಟೆ ಅದು ಕೊಡುತ್ತೇವೆ ಇದು ಕೊಡುತ್ತೇವೆ ಎಂಬ ಗ್ಯಾರಂಟಿ ವಾಗ್ದಾನಗಳು. ಅಮೆರಿಕ ಮತ್ತು ಪಶ್ಚಿಮದ ದೇಶಗಳಂತೆ ‘ನಾನು ಆರ್ಥಿಕತೆ ಸರಿಪಡಿಸುತ್ತೇನೆ. ನಾನು ರಾಜಕೀಯ ಶುಚಿತ್ವ ತರುತ್ತೇನೆ’ ಎಂಬ ಮಾತುಗಳಿಗೆ ಚುನಾವಣಾ ಮಾರುಕಟ್ಟೆಯಲ್ಲಿ ಕೊಳ್ಳುವವರು, ಕೇಳುವವರು ಇಲ್ಲ.
ಈ ಪರಿಪ್ರೇಕ್ಷದಲ್ಲಿ ರಾಜಕಾರಣವನ್ನು ನೋಡಿದಾಗ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಹರ್ಯಾಣ, ಆಂಧ್ರದ ನಂತರ ಈಗ ಕರ್ನಾಟಕದಲ್ಲಿ ಮೀಸಲಾತಿ ಹೋರಾಟ ಆಗಾಗ ಯಾಕೆ ಸ್ವಯಂ ಕಿಚ್ಚು ಹಚ್ಚಿಕೊಳ್ಳುತ್ತದೆ ಅನ್ನುವುದು ಅರ್ಥ ಆಗುತ್ತದೆ. ಆದರೆ ಧರ್ಮ, ಜಾತಿ ಮತ್ತು ಗ್ಯಾರಂಟಿಗಳ ಚುನಾವಣಾ ಬಳಕೆಯಲ್ಲಿ ಸ್ವಲ್ಪ ಅತಿರೇಕ ಮಾಡಿದರೆ ಮೀಸಲಾತಿ ಪರ ಇದ್ದವರಿಗಿಂತ ವಿರುದ್ಧ ಇದ್ದವರು ಒಟ್ಟಾಗಿ ಬಂದು ಸೋಲಿಸುತ್ತಾರೆ ಅನ್ನೋದು ಕೂಡ ವಾಸ್ತವ. ಒಳ ಮೀಸಲಾತಿ ತಂದು ಲಂಬಾಣಿ, ಬೋವಿಗಳಿಂದ 2023ರಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸೋತ ಹಾಗೆಯೇ ಮರಾಠ ಮೀಸಲಾತಿ ಕಿಚ್ಚು ಹಚ್ಚಿ ಲೋಕಸಭೆ ಗೆದ್ದುಕೊಂಡ ಶರದ್ ಪವಾರ್‌ಗೆ, ವಿಧಾನಸಭೆಯಲ್ಲಿ ಮರಾಠ ವಿರುದ್ಧದ ಹಿಂದುಳಿದವರ ಕ್ರೋಢಿಕರಣವೇ ಮುಳುವಾಯಿತು. ಅಷ್ಟೇ ಏಕೆ, 2018ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ತರಲು ಹೊರಟ ಸಿದ್ದರಾಮಯ್ಯ ಅವರಿಗೆ ಬೆಂಬಲಕ್ಕೆ ನಿಂತವರಿಗಿಂತ ವಿರೋಧ ಮಾಡಿದವರೇ ಹೆಚ್ಚು. ಒಂದು ರೀತಿಯಲ್ಲಿ ಈ ಮೀಸಲಾತಿ ಅಸ್ತ್ರಗಳು ಎರಡು ಅಲಗಿನ ಹತ್ಯಾರ್‌ಗಳು. ಮತ್ತೊಬ್ಬರ ವಿರುದ್ಧ ಬಳಕೆ ಮಾಡಲು ಹೋಗಿ ಬಳಸಿದವನ ಕೈಯನ್ನು ಕುಯ್ದ ಉದಾಹರಣೆಗಳು ಕೂಡ ಜಾಸ್ತಿ.
ಬಲಾಢ್ಯರಿಗೆ ಮೀಸಲಾತಿ ಹೇಗೆ?: ದೇಶದ ಬಹುತೇಕ ರೈತಾಪಿ ಸಮುದಾಯಗಳು ಸತತವಾಗಿ ಅಧಿಕಾರ ಹಿಡಿದು ರಾಜಕೀಯವಾಗಿ, ಸಾಮಾಜಿಕವಾಗಿ ಬಲಾಢ್ಯರಾಗಿದ್ದರೂ ಕಳೆದ 20 ವರ್ಷಗಳಲ್ಲಿ ಗ್ರಾಮೀಣ ಆರ್ಥಿಕತೆ ಕುಸಿತದಿಂದ ಚಿಂತಿತ ಅವಸ್ಥೆಯಲ್ಲಿವೆ. ಜಮೀನು ಇದೆ, ಕೈಯಲ್ಲಿ ದುಡ್ಡಿಲ್ಲ ಎನ್ನುವ ಪರಿಸ್ಥಿತಿ ಗ್ರಾಮೀಣ ಭಾಗದ ಯುವಕರದ್ದು. ಬೇರೆ ಸಮುದಾಯದ ಯುವಕರಿಗೆ ಮೀಸಲಾತಿ ದೆಸೆಯಿಂದ ಅನುಕೂಲವಾಗುತ್ತಿದ್ದರೂ, ತಮಗೇನೂ ಲಾಭವಾಗುತ್ತಿಲ್ಲ ಎಂಬ ಅಸಮಾಧಾನ ಬೇರೆ. ಇಂತಹ ಯುವಕರ ಪೋಷಕರಿಗೆ ರಾಜಕಾರಣಿಗಳು ತೋರಿಸಿರುವ ಸುಲಭ ಮಂತ್ರದಂಡ- ಮೀಸಲಾತಿ. ಅದು ಬಂದರೆ ಎಲ್ಲ ಸರಿ ಹೋಗುತ್ತದೆ ಎಂದು ಬಿಂಬಿಸಲಾಗುತ್ತಿದೆ. ವಿರೋಧಪಕ್ಷಗಳಲ್ಲಿರುವ ನಾಯಕರು ತಾವು ಅಧಿಕಾರಕ್ಕೆ ಬರಲು ಈ ಮೀಸಲಾತಿ ಹೋರಾಟಗಳನ್ನು ಊರುಗೋಲಾಗಿ ಬಳಸಿಕೊಳ್ಳುತ್ತಿದ್ದಾರೆ.
ಮರಾಠಾ ಮೀಸಲಾತಿ ಕಿಚ್ಚು ಹಚ್ಚಿದ ಶರದ್ ಪವಾರ್, 1999 ರಿಂದ 2014ರವರೆಗೆ ತಾವೇ ಅಧಿಕಾರದಲ್ಲಿದ್ದಾಗ ಒಂದು ಪ್ರಸ್ತಾವನೆಯನ್ನು ಕೂಡ ದಿಲ್ಲಿಗೆ ಕಳುಹಿಸಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಮೀಸಲಾತಿ ಹೋರಾಟ ನಡೆಸಿದ ಮರಾಠರು, ಪಟೇಲರು ಮತ್ತು ಜಾಟರು ಆಯಾ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಕೂಡ ಹಿಂದುಳಿದವರ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಮೋದಿ ಸಾಹೇಬರು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕೊಟ್ಟು ಅವರ ಸಿಟ್ಟನ್ನು ಶಾಂತ ಮಾಡಿದರು. ಆದರೆ ಮಹಾರಾಷ್ಟ್ರದಲ್ಲಿ ಮರಾಠರು ನಮಗೆ ಹಿಂದುಳಿದ ಪಟ್ಟಿಯಲ್ಲಿ ಸೇರಿಸಿ ಕುಣಬಿ ಎಂದು ಪ್ರಮಾಣ ಪತ್ರ ಕೊಟ್ಟು ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದರೆ, ಕರ್ನಾಟಕದಲ್ಲಿ ಪಂಚಮಸಾಲಿಗಳು ನಾವು ಹಿಂದುಳಿದ ಪಟ್ಟಿಯಲ್ಲೇ ಇದ್ದೇವೆ. ನಮಗೆ ಪ್ರತಿಶತ 5ರಲ್ಲಿ ಬೇಡ, ಕುರುಬರು ಸೇರಿದಂತೆ ಉಳಿದವರ ಜೊತೆ ಸೇರಿ ಮೀಸಲಾತಿ ಕೊಡಿ ಅನ್ನುತ್ತಿದ್ದಾರೆ.
2018 ರಲ್ಲಿ ಬಿಜೆಪಿ ಮುಖ್ಯಮಂತ್ರಿ ಆಗಿದ್ದ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದಲ್ಲಿರುವ ಶೇ.27ರಷ್ಟಿರುವ ಮರಾಠ ಸಮುದಾಯವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಎಂದು ಘೋಷಿಸಿ ಶೇ.16ರಷ್ಟು ಮೀಸಲಾತಿ ಘೋಷಿಸಿದರು. ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋದಾಗ ಸಂವಿಧಾನ ಪೀಠ ಯಾವುದೇ ರಾಜ್ಯದ ಮೀಸಲಾತಿ ಪ್ರಮಾಣ ಶೇ.50 ಮೀರುವ ಹಾಗಿಲ್ಲ ಎಂದು ಹೇಳಿತು. ಅಷ್ಟೇ ಅಲ್ಲ ಯಾವುದೇ ಜಾತಿ ಹಿಂದುಳಿದಿದೆ ಎಂದು ನಿರ್ಧರಿಸುವ ಅಧಿಕಾರ 102ನೇ ಸಂವಿಧಾನಿಕ ತಿದ್ದುಪಡಿ ನಂತರ ರಾಜ್ಯಗಳಿಗಿಲ್ಲ ಎಂದು ಹೇಳಿತು. ಸುಪ್ರೀಂ ಕೋರ್ಟ್ ಯಾವುದೇ ಕುಲ ಶಾಸ್ತ್ರಿಯ ಅಧ್ಯಯನ ಇಲ್ಲದೇ ಒಂದು ಮುಂದುವರೆದ ಜಾತಿಯನ್ನು ಹಿಂದುಳಿದಿದೆ ಎಂದು ಹೇಗೆ ಹೇಳುತ್ತೀರಿ ಎಂದು ಉಲ್ಲೇಖ ಮಾಡಿ ಮೀಸಲಾತಿ ರದ್ದುಗೊಳಿಸಿತು
ಪಂಚಮಸಾಲಿ ಭವಿಷ್ಯ: ದೇಶದಲ್ಲಿ ಹಿಂದುಳಿದವರಿಗೆ ಶೇ.27 ಮೀಸಲಾತಿ ಇದ್ದರೆ, ಕರ್ನಾಟಕದಲ್ಲಿ ಮುಸ್ಲಿಮರಿಗೂ ಶೇ.4 ಮೀಸಲಾತಿ ಇರುವುದರಿಂದ ಹಿಂದುಳಿದವರಿಗೆ ಇರುವ ಮೀಸಲಾತಿ ಶೇ.32. ಪರಿಶಿಷ್ಟ ಜಾತಿಗಳ ಮೀಸಲಾತಿ ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳದ್ದು ಶೇ.3 ರಿಂದ 7ಕ್ಕೆ ಏರಿಕೆ ಆಗಿರುವುದರಿಂದ ಒಟ್ಟು ಮೀಸಲಾತಿಯ ಪ್ರಮಾಣವೇ ಶೇ.56 ಆಗಿದೆ. ಅಂದರೆ ಈಗಾಗಲೇ ಸುಪ್ರೀಂ ಕೋರ್ಟ್ ವಿಧಿಸಿರುವ ಮಿತಿಗಿಂತ ಶೇ.6 ಹೆಚ್ಚು. ಇನ್ನು ಬಿಜೆಪಿ ಸರ್ಕಾರ ಮುಸ್ಲಿಮರ ಶೇ.4 ಮೀಸಲಾತಿ ತೆಗೆದು ಶೇ.2ರಷ್ಟು ಲಿಂಗಾಯತರಿಗೆ, ಶೇ.2ರಷ್ಟು ಅನ್ನು ಒಕ್ಕಲಿಗರಿಗೆ ಹಂಚಿದರು. ಅದು ಕೋರ್ಟ್‌ನಲ್ಲಿ ರದ್ದಾಗಿ ಈಗ ಹಳೆಯ ಯಥಾಸ್ಥಿತಿ ಮುಂದುವರೆದಿದೆ. 2 ಎದಿಂದ ಪರಿಶಿಷ್ಟ ಪಂಗಡಗಳಿಗೆ ಹೋಗುವ ಬಗ್ಗೆ ಕುರುಬರಿಂದ ಹೋರಾಟ ನಡೆಯಿತಾದರೂ ಸ್ವತಃ ಸಿದ್ದರಾಮಯ್ಯ ಒಪ್ಪಿಗೆ ಅದಕ್ಕಿಲ್ಲ ಮತ್ತು ಅದರಿಂದ ನಾಯಕ ಸಮುದಾಯ ಕೆರಳುವುದು ಸಹಜ. ಇನ್ನು ಕೂಡಲ ಸಂಗಮ ಶ್ರೀಗಳು ಕೇಳುತ್ತಿರುವಂತೆ ಬರೀ ಪಂಚಮಸಾಲಿಗಳನ್ನು 3ಬಿಯಿಂದ 2ಎ ಗೆ ತಂದರೆ ಸ್ವತಃ ಸಿದ್ದರಾಮಯ್ಯ ಮುಖ್ಯಮಂತ್ರಿ ಇರುವಾಗ ಕುರುಬರು ಒಪ್ಪುವುದಿಲ್ಲ. ಅದು ಸಾಧ್ಯವೂ ಇಲ್ಲ.
ಜೈಲಲ್ಲಿ ನಟ ಅಲ್ಲು ಅರ್ಜುನ್ ಸಾಧಾರಣ ಕೈದಿಯಂತೆ ಅನ್ನ, ಸಾಂಬಾರ್ ಸೇವನೆ
ಅತೀ ಹಿಂದುಳಿದ ಪಟ್ಟಿಗೆ ಆ ರೀತಿ ಏಕಾಏಕಿ ಸೇರಿಸಲು ಸರ್ಕಾರದ ಬಳಿ ಕುಲಶಾಸ್ತ್ರೀಯ ವರದಿ ಕೂಡ ಇಲ್ಲ. ಹಾಗಿರುವಾಗ ಇರುವ ಏಕೈಕ ದಾರಿ 3ಬಿಯಲ್ಲೇ ಮೀಸಲಾತಿ ಹೆಚ್ಚಿಗೆ ಮಾಡಬೇಕು. ಸರ್ಕಾರ ಮಾಡಿದರೂ ಸುಪ್ರೀಂ ಕೋರ್ಟ್ ಶೇ.50 ಕ್ಕಿಂತ ಹೆಚ್ಚಳ ಒಪ್ಪುವುದಿಲ್ಲ. ಕೊಟ್ಟರೆ ಪೂರ್ತಿ ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೂ ಹೆಚ್ಚಳ ಮಾಡಬೇಕಾಗುತ್ತದೆಯೇ ಹೊರತು ಬರೀ ಪಂಚಮಸಾಲಿಗಳಿಗೆ ಕೊಡುವುದು ಅಸಾಧ್ಯ. ಅದಕ್ಕೆ ಇರುವ ಇನ್ನೊಂದು ಮಾರ್ಗ- ಜಾತಿ ಗಣತಿ ಮಾಡಿಸಿ ಸಮುದಾಯವಾರು ಸ್ಥಿತಿಗತಿಯ ಅಧ್ಯಯನ ನಡೆಸುವುದು. ಹಾಗಾದಾಗ ಲಿಂಗಾಯಿತರ 99 ಜಾತಿಗಳಲ್ಲಿ ಕೆಲವು ಉಪ ಜಾತಿಗಳು ಉಪ ಜಾತಿಯ ಹಿಂದೆ ಲಿಂಗಾಯತ ಎಂದು ಬರೆಸದೆ ಹಿಂದೂ ಗಾಣಿಗ, ಹಿಂದೂ ಕುಂಬಾರ ಇತ್ಯಾದಿ ಇತ್ಯಾದಿ ಬರೆಸಿದರೆ ಏನು ಎಂಬ ಚಿಂತೆ ಕೂಡ ಸಹಜವಾಗಿ ಲಿಂಗಾಯತ ಸಮುದಾಯದ ರಾಜಕಾರಣಿಗಳಿಗಿದೆ.