ಪತಂಜಲಿ ಉತ್ಪನ್ನ ಮಾರುತ್ತಿದ್ದ ಗೌರಿ ಹತ್ಯೆ ಆರೋಪಿ ದೇವ್ಡೇಕರ!

By Suvarna NewsFirst Published Jan 11, 2020, 10:28 AM IST
Highlights

ಪತಂಜಲಿ ಉತ್ಪನ್ನ ಮಾರುತ್ತಿದ್ದ ಗೌರಿ ಹತ್ಯೆ ಆರೋಪಿ!| ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ದೇವ್ಡೇಕರ್‌ ಅಂಗಡಿ| ವ್ಡೇಕರ್‌ ಚಟುವಟಿಕೆಗಳ ಬಗ್ಗೆ ಗೊತ್ತಿರಲಿಲ್ಲ| ಆತನಿಗೆ ಅಂಗಡಿ, ಮನೆ ಬಾಡಿಗೆಗೆ ನೀಡಿದವರ ಹೇಳಿಕೆ| ಪಾನ್ಸಾರೆ, ದಾಭೋಲ್ಕರ್‌ ಕೇಸಲ್ಲಿ ದೇವ್ಡೇಕರ್‌ ಲಿಂಕ್‌?| ಕರ್ನಾಟಕ ಪೊಲೀಸರಿಂದ ಮಾಹಿತಿ ಕೋರಿದ ಮಹಾರಾಷ್ಟ್ರ

ಔರಂಗಾಬಾದ್‌[ಜ.11]: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಎಸ್‌ಐಟಿ ಪೊಲೀಸರಿಂದ ಬಂಧಿತನಾದ ಮಹಾರಾಷ್ಟ್ರದ ಔರಂಗಾಬಾದ್‌ ಮೂಲದ ರಿಷಿಕೇಶ್‌ ದೇವ್ಡೇಕರ್‌, ಈ ಹಿಂದೆ ಯೋಗಗುರು ಬಾಬಾ ರಾಮದೇವ್‌ ಅವರ ಪತಂಜಲಿ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ರಿಷಿಕೇಶ್‌ ದೇವ್ಡೇಕರ್‌ನನ್ನು ಜಾರ್ಖಂಡ್‌ನಲ್ಲಿ ಗುರುವಾರ ಬಂಧಿಸಲಾಗಿತ್ತು. ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಔರಂಗಾಬಾದ್‌ ನಿವಾಸಿ ಜಗದೀಶ್‌ ಕುಲಕರ್ಣಿ, ‘2014ರಿಂದ 2016ರವರೆಗೂ ಮಧ್ಯ ಮಹಾರಾಷ್ಟ್ರದ ಔರಂಗಬಾದ್‌ ನಗರದಲ್ಲೇ ಪತಂಜಲಿ ವಸ್ತುಗಳನ್ನು ಮಾರಾಟ ಮಾಡಿ, ಜೀವನ ನಡೆಸುತ್ತಿದ್ದ. ಇದಕ್ಕಾಗಿ ನನ್ನ ಮಳಿಗೆಯಲ್ಲಿನ ಅಂಗಡಿಯನ್ನು ಬಾಡಿಗೆಗೆ ಪಡೆದಿದ್ದ. ಅಂಗಡಿಗೆ ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿಸುತ್ತಿದ್ದ. ನಮ್ಮಿಬ್ಬರ ನಡುವಿನ ಸಂವಾದ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿತ್ತು’ ಎಂದಿದ್ದಾರೆ.

ಕುಟುಂಬಕ್ಕೆ ಗೊತ್ತಿಲ್ಲದೇ ಗೌರಿ ಲಂಕೇಶ್ ಹೆಸರಲ್ಲಿ ಬರೋಬ್ಬರಿ 7 ಕೋಟಿ ಸಂಗ್ರಹ!

ದಾಭೋಲ್ಕರ್‌, ಪಾನ್ಸರೆ ಹತ್ಯೆಯಲ್ಲೂ ಕೈವಾಡ?:

ದೇವ್ಡೇಕರ್‌ಗೆ ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಹತ್ಯೆಯಲ್ಲೂ ಭಾಗಿಯಾಗಿರುವ ಶಂಕೆ ಇದ್ದು, ಈ ಬಗ್ಗೆ ಕರ್ನಾಟಕ ಪೊಲೀಸರೊಂದಿಗೆ ಮಾಹಿತಿ ಕೋರಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಹೇಳಿದ್ದಾರೆ. ಈ ಮೂವರ ಕೊಲೆಯಲ್ಲೂ ಸಾಮ್ಯತೆ ಇರುವುದರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದಿದ್ದಾರೆ.

ಈ ನಡುವೆ, ದೇವ್ಡೇಕರ್‌ಗೆ ಬಾಡಿಗೆ ಮನೆ ನೀಡಿದ್ದ ಯಶವಂತ ಶುಕ್ಲಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ದೇವ್ಡೇಕರ್‌ ನನ್ನ ಮನೆ ಬಾಡಿಗೆ ಪಡೆದಿದ್ದ. 2016ರ ಫೆಬ್ರವರಿಯಲ್ಲಿ ನನ್ನ ಮನೆ ಬಾಡಿಗೆ ಪಡೆಯಲು ಮಾಡಿಕೊಳ್ಳಬೇಕಾದ ಒಪ್ಪಂದದ ವೇಳೆ ಮಾತ್ರವೇ ದೇವ್ಡೇಕರ್‌ ಜೊತೆ ನಾನು ದೀರ್ಘವಾಗಿ ಮಾತನಾಡಿದ್ದೇನೆ. ಆ ನಂತರ, ಆತ ಸೊಲ್ಲಾಪುರಕ್ಕೆ ಹೋಗಿದ್ದ. ಆದಾಗ್ಯೂ, 2019ರ ಏಪ್ರಿಲ್‌ವರೆಗೂ ನಮ್ಮ ಬಾಡಿಗೆ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ತನ್ನ ಪೋಷಕರನ್ನು ವಿಚಾರಿಸಿಕೊಳ್ಳಲು ಆಗ್ಗಾಗ್ಗೆ ಬರುತ್ತಿದ್ದ. ಆ ಬಳಿಕ ದೇವ್ಡೇಕರ್‌ ಪೋಷಕರು ಸಹ ತಮ್ಮ ಇನ್ನೋರ್ವ ಮಗ ಇರುವ ಮುಂಬೈಗೆ ತೆರಳಿದರು. ಆದರೆ, ಗೌರಿ ಹತ್ಯೆ ಕೇಸ್‌ನಲ್ಲಿ ದೇವ್ಡೇಕರ್‌ ಭಾಗಿಯಾಗಿದ್ದಾನೆ ಎಂಬುದು ನಿಜಕ್ಕೂ ಅಚ್ಚರಿ’ ಎಂದು ಯಶವಂತ್‌ ಶುಕ್ಲಾ ಹೇಳಿದ್ದಾರೆ.

ಗೌರಿ ಹತ್ಯೆ ತನಿಖೆ ಇನ್ನು ಪೊಲೀಸ್‌ ಅಧ್ಯಯನ ಗ್ರಂಥ!

click me!