ಬೆಂಗಳೂರು (ಆ.31): ಕೊರೋನಾ 3ನೇ ಅಲೆ ಬರುವುದು ಖಚಿತ. ಈ ಅಲೆ 2ನೆಯದ್ದಕ್ಕಿಂತ ತೀವ್ರವಾಗಿರುತ್ತದೆ. ಹೀಗಾಗಿ, ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಳ, ಜಿಲ್ಲಾ ಕೇಂದ್ರದಲ್ಲಿ ಔಷಧಗಳ ಸಂಗ್ರಹ, ಪ್ರತಿ ವಲಯಕ್ಕೆ ಆಮ್ಲಜನಕ ಪೂರೈಸಲು ಒಂದೊಂದು ಕಂಪನಿಗೆ ಜವಾಬ್ದಾರಿ ನೀಡಿಕೆ, ಮನೆಯಲ್ಲಿ ಪ್ರತ್ಯೇಕವಾಸ ಇರುವ ಸೋಂಕಿತರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು...
-ಹೀಗಂತ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಒಕ್ಕೂಟ (ಫನಾ) ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಜತೆಗೆ, ಸರ್ಕಾರ ಬಯಸಿದಾಗ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ. 50ರಷ್ಟುಹಾಸಿಗೆಗಳನ್ನು ವಹಿಸಿಕೊಡಲು ಸಿದ್ಧವಿವೆ. ಆದರೆ, ಹಾಸಿಗೆ ಅಗತ್ಯ ಕುರಿತು ಸರ್ಕಾರ ಒಂದು ವಾರದ ಮೊದಲು ಮಾಹಿತಿ ನೀಡಬೇಕು ಎಂದು ಕೋರಿದೆ.
undefined
ಕೋವಿಡ್ ಮೂರನೇ ಎದುರಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ‘ಫನಾ’ ರಚಿಸಿದ್ದ ತಜ್ಞರ ಸಮಿತಿ ಸೋಮವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಕೊರೋನಾ ಇಳಿಕೆ: ಮೊದಲ ಬಾರಿ 1 ಸಾವಿರಕ್ಕಿಂತ ಕಡಿಮೆ ಕೇಸ್
ವರದಿ ಸಲ್ಲಿಕೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ‘ಫನಾ’ ಅಧ್ಯಕ್ಷ ಡಾ. ಎಚ್.ಎಂ. ಪ್ರಸನ್ನ ಅವರು, ಕೋವಿಡ್ ಮೂರನೇ ಅಲೆ ಬರುವ ಎಲ್ಲ ಸಾಧ್ಯತೆ ಇದೆ. ಕೇರಳದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಕರಣ ಬರುತ್ತಿವೆ. ಎರಡನೇ ಅಲೆಗಿಂತಲೂ ಮೂರನೇ ಅಲೆ ತೀವ್ರವಾಗಿರಬಹುದು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಹಲವು ಶಿಫಾರಸು ಮಾಡಲಾಗಿದೆ ಎಂದರು.
ಮೂರನೇ ಅಲೆಯಲ್ಲಿಯೂ ತೀವ್ರ ನಿಗಾ ವಿಭಾಗದ ಹಾಸಿಗೆಗಳ ಕೊರತೆ, ಮಕ್ಕಳ ಐಸಿಯು ಕೊರತೆ ಮತ್ತು ತಜ್ಞ ವೈದ್ಯರ ಕೊರತೆ ಆಗಬಹುದು. ಆದ್ದರಿಂದ ವೈದ್ಯರಿಗೆ ವಿಶೇಷ ತರಬೇತಿಯನ್ನು ನೀಡಲು ಮತ್ತು ಐಸಿಯು ಹಾಸಿಗೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಔಷಧಿ ಸಂಗ್ರಹ ಇರಬೇಕು. ಎರಡನೇ ಅಲೆಯಲ್ಲಿ ಆಮ್ಲಜನಕದ ತೀವ್ರ ಸಮಸ್ಯೆಯಾಗಿದ್ದ ಹಿನ್ನೆಲೆಯಲ್ಲಿ ಆಮ್ಲಜನಕ ಪೂರೈಕೆಗೆ ವಲಯಗಳನ್ನು ಗುರುತಿಸಬೇಕು. ಪ್ರತಿ ವಲಯಕ್ಕೆ ಆಮ್ಲಜನಕ ಪೂರೈಸುವ ಹೊಣೆಯನ್ನು ಒಂದೊಂದು ಆಮ್ಲಜನಕ ಸರಬರಾಜು ಮಾಡುವ ಕಂಪನಿಗೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಅವರು ವಿವರಿಸಿದರು.
ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ನೀಡಬೇಕು. ಸದ್ಯ ಖಾಸಗಿ ಆಸ್ಪತ್ರೆಗಳಿಗೆ ಬಂದು ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆ ಆಗಿದೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳ ಕೋಟಾದಲ್ಲಿರುವ ಲಸಿಕೆಯನ್ನು ಸರ್ಕಾರ ಖರೀದಿಸಲಿದೆ. ಆ ಬಳಿಕ ನಾವು ಅದನ್ನು ಕಾರ್ಮಿಕರಿಗೆ ನೀಡುವ ಉದ್ದೇಶ ಹೊಂದಿದ್ದೇವೆ. ಈ ಪ್ರಸ್ತಾವನೆಗೆ ಈಗಾಗಲೇ ಕಾರ್ಮಿಕ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಡಾ. ಪ್ರಸನ್ನ ಹೇಳಿದರು.
ಕೋವಿಡ್ ನಿಯಂತ್ರಿಸಲು ಸರ್ಕಾರದೊಂದಿಗೆ ಸ್ಪಂದಿಸಲು ಸದಾ ಸಿದ್ಧರಿದ್ದೇವೆ. ಎರಡನೇ ಅಲೆಯ ಸಂದರ್ಭದಲ್ಲಿಯೂ ನಾವು ಶೇ.50 ಹಾಸಿಗೆಗಳನ್ನು ನೀಡಿದ್ದೇವೆ. ಮೂರನೇ ಅಲೆ ಬಂದರೆ ಆಗಲೂ ನಾವು ಶೇ.50 ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಲು ಸಿದ್ಧರಿದ್ದೇವೆ. ಸರ್ಕಾರ ಸೂಚಿಸಿದ ವಾರದೊಳಗೆ ಹಾಸಿಗೆ ಬಿಟ್ಟುಕೊಡಲು ನಾವು ಬದ್ಧರಿದ್ದೇವೆ ಎಂದು ಅವರು ತಿಳಿಸಿದರು.
‘ಫನಾ’ ಕಾರ್ಯತಂತ್ರ ವರದಿಯನ್ನು ಖ್ಯಾತ ಸ್ತ್ರಿ ರೋಗ ತಜ್ಞೆ ಡಾ. ಹೇಮಾ ದಿವಾಕರ್ ನೇತೃತ್ವದಲ್ಲಿ ಡಾ. ಪ್ರಸನ್ನ ಎಚ್.ಎಂ., ಡಾ. ರಾಜಶೇಖರ್, ಡಾ. ಯತೀಶ್, ಡಾ. ದಿವಾಕರ್ ಜಿ.ವಿ., ಡಾ.ಸುಭಾಶ್, ಡಾ. ರವಿ, ಡಾ. ಸತೀಶ್, ಡಾ. ರಂಜನ್ ಕುಮಾರ್ ಪೇಜಾವರ, ಡಾ. ಯೋಗಾನಂದ ರೆಡ್ಡಿ ಮತ್ತು ಡಾ. ಪಿ. ಪದ್ಮಾ ಅವರು ಸಿದ್ಧಪಡಿಸಿದ್ದಾರೆ.
ಪ್ರಮುಖ ಶಿಫಾರಸುಗಳು
*ಮನೆಯಲ್ಲಿ ಪ್ರತ್ಯೇಕವಾಸ ಇರುವವರ ಆರೋಗ್ಯದ ಮೇಲೆ ನಿಗಾ ಇಡಬೇಕು.
*ಆಮ್ಲಜನಕದ ಮಟ್ಟಕಡಿಮೆ ಆಗುತ್ತಿದ್ದಂತೆ ತಕ್ಷಣವೇ ಕೋವಿಡ್ ಕೇಂದ್ರ/ಆಸ್ಪತ್ರೆಗೆ ದಾಖಲಿಸಬೇಕು.
*ಆಮ್ಲಜನಕ ಪೂರೈಕೆ ಸುಗಮವಾಗಿರಲು ಪ್ರತಿ ವಲಯಕ್ಕೆ ಒಂದು ಕಂಪನಿಗೆ ಹೊಣೆ ನೀಡಬೇಕು
*ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ನಿರ್ವಹಣೆಯ ತರಬೇತಿಯನ್ನು ನೀಡಬೇಕು.
*ಕೋವಿಡ್ ಮಾಹಿತಿಯನ್ನು ಏಕ ಮಾದರಿಯಲ್ಲಿ ದಾಖಲಿಸಿಕೊಳ್ಳಬೇಕು.
- ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳ ಮೇಲೆ ಹೆಚ್ಚಿನ ನಿಗಾ ಇಡಿ
- ಸರ್ಕಾರ ಕೇಳಿದಾಗ ಶೇ.50ರಷ್ಟುಹಾಸಿಗೆಗಳನ್ನು ಬಿಟ್ಟುಕೊಡಲು ಸಿದ್ಧ