ಸಂಪೂರ್ಣ ರಾಜ್ಯ ಲಾಕ್‌ಡೌನ್‌ಗೆ ಹಿಂದೇಟು ಏಕೆ?

By Kannadaprabha NewsFirst Published Mar 23, 2020, 7:41 AM IST
Highlights

ಸಂಪೂರ್ಣ ರಾಜ್ಯ ಲಾಕ್‌ಡೌನ್‌ಗೆ ಹಿಂದೇಟು ಏಕೆ?|  ಕೊರೋನಾ ಸೋಂಕಿತ 9 ಜಿಲ್ಲೆಗಳಲ್ಲೂ ಸರ್ಕಾರದಿಂದ ಅರೆಬರೆ ನಿರ್ಬಂಧ| ಹೀಗೆ ಮಾಡಿದರೆ ಸೋಂಕು ಹರಡುವಿಕೆ ತಡೆ ಅಸಾಧ್ಯ: ತಜ್ಞರ ಎಚ್ಚರಿಕೆ

ಬೆಂಗಳೂರು(ಮಾ.22): ಮಾರಕ ಕೊರೋನಾವೈರಸ್‌ ಸಮುದಾಯಗಳಿಗೆ ಹಬ್ಬುವ ಮಾರಕ ಹಂತ ಮುಟ್ಟಿದೆ. ಈ ಹಂತದಲ್ಲಿ ಅತ್ಯಂತ ಕಠಿಣ ನಿರ್ಧಾರ ಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರ ಸೋಂಕಿತರು ಹೆಚ್ಚಿರುವ 9 ಜಿಲ್ಲೆಗಳಿಗೆ ಮಾತ್ರ ನಿರ್ಬಂಧ ಹೇರುವ ಮಧ್ಯಮ ಸ್ತರದ ಕ್ರಮಗಳಿಗೆ ತೃಪ್ತಿಪಡುತ್ತಿದೆ ಎಂದು ವಿಷಯ ತಜ್ಞರು ಟೀಕಿಸಿದ್ದು, ಕೊರೋನಾ ತಡೆಗೆ ಸಂಪೂರ್ಣ ರಾಜ್ಯವನ್ನು ಲಾಕ್‌ಡೌನ್‌ ಮಾಡುವ ಕಠಿಣ ಕ್ರಮವೊಂದೇ ಅಸ್ತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ ಹಬ್ಬುವಿಕೆಯಲ್ಲಿ ಮೂರನೇ ಹಂತ ಅತ್ಯಂತ ಅಪಾಯಕಾರಿ. ಈ ಹಂತದಲ್ಲಿ ಈ ಮಾರಕ ವೈರಸ್‌ ಸಮುದಾಯದಲ್ಲಿ ವ್ಯಾಪಕವಾಗಿ ಹಬ್ಬತೊಡಗುತ್ತದೆ. ರಾಜ್ಯ ಹಾಗೂ ದೇಶ ಈ ಹಂತವನ್ನು ಈಗ ಮುಟ್ಟಿರುವ ಲಕ್ಷಣಗಳಿವೆ. ಇಂತಹ ಸಂದರ್ಭದಲ್ಲಿ ಸಂಪೂರ್ಣ ‘ಲಾಕ್‌ಡೌನ್‌’ ಕ್ರಮ ಅನುಸರಿಸಬೇಕಾಗಿದ್ದ ರಾಜ್ಯ ಸರ್ಕಾರವು ಹಂತ-ಹಂತವಾಗಿ ಸೇವೆಗಳನ್ನು ನಿರ್ಬಂಧಿಸಿ ತಡ ಮಾಡುತ್ತಿದೆ ಎಂದೇ ತಜ್ಞರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದರಿಂದಾಗಿ ರಾಜ್ಯ ಸರ್ಕಾರವೇ ಕೊರೋನಾ ವೈರಾಣುವಿನ ಭೀಕರ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ. ಕೂಡಲೇ ಎರಡು ವಾರಗಳ ಕಾಲ ಕಟ್ಟುನಿಟ್ಟಿನ ಲಾಕ್‌ಡೌನ್‌ ಕ್ರಮ ತೆಗೆದುಕೊಳ್ಳದಿದ್ದರೆ ಸೋಂಕು ನಿಯಂತ್ರಣ ಅಸಾಧ್ಯ ಎಂದು ಸಮುದಾಯ ಆರೋಗ್ಯ ಕ್ಷೇತ್ರದ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಅರೆಬರೆ ನಿರ್ಧಾರಗಳು, ಹಂತ-ಹಂತವಾಗಿ ತೆಗೆದುಕೊಳ್ಳುವ ಕ್ರಮಗಳು ಯಾವುದೇ ಫಲ ನೀಡುವುದಿಲ್ಲ. ಭಾನುವಾರ ‘ಜನತಾ ಕಫä್ರ್ಯ’ ಮಾದರಿಯ ಸ್ಪಂದನೆ ಎರಡು ವಾರ ನಿರ್ಮಾಣವಾದರೆ ಮಾತ್ರ ಮಹಾಮಾರಿಯನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯ ಎಂದು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ.

ರಾಜ್ಯದ ಅರೆಬರೆ ಕ್ರಮ:

ರಾಜ್ಯ ಸರ್ಕಾರವು 9 ಜಿಲ್ಲೆಗಳಲ್ಲಿ ನಾಮ್‌ಕೆವಾಸ್ತೆ ನಿರ್ಬಂಧ ವಿಧಿಸಿದೆ. ಸೋಂಕು ಹರಡಿರುವ 9 ಜಿಲ್ಲೆಗಳಲ್ಲೂ ಅಂತರ್‌ಜಿಲ್ಲಾ ಸಾರ್ವಜನಿಕ ಸಾರಿಗೆ ಹೊರತುಪಡಿಸಿ ಉಳಿದ ಯಾವ ವಾಹನಗಳಿಗೂ ನಿರ್ಬಂಧ ವಿಧಿಸಿಲ್ಲ. ಕಂಪನಿಗಳು, ಕೈಗಾರಿಕೆಗಳು, ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟು ಸೇರಿದಂತೆ ಎಲ್ಲವೂ ಎಂದಿನಂತೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಸಾವಿರಾರು ಮಂದಿ ಕಾರ್ಯನಿರ್ವಹಿಸುವ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಟ್ಟಮೇಲೆ ಇನ್ನು ನಿರ್ಬಂಧ ವಿಧಿಸುವುದಾದರೂ ಏಕೆ ಎಂದು ರಾಜ್ಯ ಸರ್ಕಾರದ ರೆಸ್ಪಾನ್ಸ್‌ ತಂಡದಲ್ಲಿರುವ ಹಿರಿಯ ತಜ್ಞ ವೈದ್ಯರೇ ಅಭಿಪ್ರಾಯಪಡುತ್ತಾರೆ.

ಜನತಾ ಕರ್ಫ್ಯೂಗೆ ಒಂದಾದ ಭಾರತ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಉಳಿದ ಜಿಲ್ಲೆಗಳಲ್ಲಂತೂ ಸಹಜ ಜೀವನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದರಿಂದ ಪರಸ್ಪರ ಗುಂಪುಗೂಡುವಿಕೆ, ಜನರೊಂದಿಗಿನ ಸಂಪರ್ಕ ಸೇರಿದಂತೆ ಯಾವುದನ್ನೂ ನಿರ್ಬಂಧಿಸಲು ಸಾಧ್ಯವಾಗಿಲ್ಲ. ಪ್ರಮುಖವಾಗಿ ಸಾಧಿಸಬೇಕಾಗಿರುವ ಸಾಮಾಜಿಕ ಅಂತರ ಸಾಧಿಸುವುದು ಅಸಾಧ್ಯವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಭಾನುವಾರ ಘೋಷಿಸಿರುವ ಅರೆಬರೆ ಕ್ರಮ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೊಂದಲಮಯ ನಿರ್ಧಾರಗಳು:

ರಾಜ್ಯ ಸರ್ಕಾರವು ಕೊರೋನಾ ಸೋಂಕು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ತನ್ನ ಆದೇಶಗಳ ಸಾಧಕ-ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸದೇ, ತಜ್ಞರ ಜೊತೆ ಚರ್ಚಿಸದೇ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದೆ. ಪ್ರಮುಖವಾಗಿ ಒಂಬತ್ತು ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ‘ಲಾಕ್‌ಡೌನ್‌’ ಘೋಷಣೆ ಮಾಡಿರುವುದರಿಂದ ಮೂಲ ಉದ್ದೇಶವೇ ವಿಫಲವಾಗುವ ಸಾಧ್ಯತೆ ಹೆಚ್ಚು.

ಎಸ್ಸೆಸ್ಸೆಲ್ಸಿ ಪರೀಕ್ಷೆ, ಪಿಯುಸಿ ಪರೀಕ್ಷೆ ಮುಂದೂಡಿಕೆ ಸೇರಿದಂತೆ ಯಾವುದನ್ನೂ ಒಂದೇ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಒಂದೇ ದಿನದಲ್ಲಿ ಎರಡು ಮೂರು ರೀತಿಯ ನಿರ್ಧಾರಗಳನ್ನು ಬದಲಿಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರವು ಇದೇ ರೀತಿ ಮುಂದುವರೆದರೆ ಇಟಲಿ ಹಾಗೂ ಇರಾನ್‌ ಮಾದರಿಯಲ್ಲೇ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ದಕ್ಷಿಣ ಕೊರಿಯಾ ಮಾದರಿಯಲ್ಲಿ ಕೂಡಲೇ ಕಟ್ಟುನಿಟ್ಟಿನ ಕ್ರಮ ವಹಿಸಿದರೆ ಮಾತ್ರ ಬಚಾವಾಗಬಹುದು. ಏಕೆಂದರೆ, ನಮ್ಮಲ್ಲಿ ಸೋಂಕು ಹರಡಿದರೆ ಚಿಕಿತ್ಸೆ ನೀಡಲು ಅಗತ್ಯವಾಗುಷ್ಟುಪ್ರಮಾಣದ ವೈದ್ಯಕೀಯ ಸಾಮರ್ಥ್ಯವೂ ಇಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ವಿಳಂಬ ಮಾಡಿದೆ. ಮುಖ್ಯವಾಗಿ ವಿದೇಶದಿಂದ ಬಂದವರನ್ನು ಕ್ವಾರಂಟೈನ್‌ ಮಾಡುವ ತೀರ್ಮಾನವನ್ನು ಆರಂಭದಲ್ಲೇ ಮಾಡಬೇಕಿತ್ತು. ಇನ್ನಾದರೂ ಕಠಿಣ ತೀರ್ಮಾನಗಳನ್ನು ತ್ವರಿತವಾಗಿ ತೆಗೆದುಕೊಳ್ಳಬೇಕು. ವಿಳಂಬ ಮಾಡಬಾರದು. ವಿಳಂಬ ಮಾಡಿದರೆ ಇಡೀ ರಾಜ್ಯವನ್ನೇ ಸರ್ಕಾರ ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ.

- ಬಿ.ಎಲ್‌.ಶಂಕರ್‌, ಹಿರಿಯ ಕಾಂಗ್ರೆಸ್ಸಿಗ

click me!