ಕೊರೋನಾ ಭೀತಿ : ಸರ್ಕಾರಿ ಕಚೇರಿಗಳಿಂದ ಹಬ್ಬಲ್ವಾ?

By Kannadaprabha NewsFirst Published Mar 17, 2020, 7:23 AM IST
Highlights

ರಾಜ್ಯದಲ್ಲಿ ಕೊರೋನಾ ಎಮರ್ಜೆನ್ಸಿ ಘೋಷಿಸಲಾಗಿದೆ. ಎಲ್ಲಾ ಖಾಸಗಿ ವಲಯಕ್ಕೆ ರಜೆ ಘೋಷಿಸಲಾಗಿದೆ. ಆದರೆ ಸರ್ಕಾರಿ ಕಚೇರಿಗಳಿಗೆ ರಜೆ ನೀಡಿಲ್ಲ. 

ಬೆಂಗಳೂರು [ಮಾ.17]:  ಕೊರೋನಾ ಸೋಂಕು ಹರಡುವುದನ್ನು ತಡೆಯಲು ಮಾಲ್‌, ಪಬ್‌, ಕಲ್ಯಾಣ ಮಂಟಪ, ಚಿತ್ರಮಂದಿರ ಸೇರಿದಂತೆ ಖಾಸಗಿ ವಲಯವನ್ನು ಭಾಗಶಃ ಲಾಕ್‌ಔಟ್‌ ಮಾಡಿರುವ ರಾಜ್ಯ ಸರ್ಕಾರವು ನೂರಾರು ಜನರು ಬಂದು ಹೋಗುವ ಸರ್ಕಾರಿ ಕಚೇರಿಗಳ ಬಗ್ಗೆ ಮಾತ್ರ ಗಮನ ಹರಿಸದೇ ಇರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕೊರೋನಾ ಸೋಂಕು ತಡೆಗೆ ಮುಂಜಾಗ್ರತೆಯಾಗಿ ಮದುವೆ, ಜಾತ್ರೆ, ರಥೋತ್ಸವಗಳ ಮೇಲೆ ಸರ್ಕಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಮಾಲ್‌, ಪಬ್‌, ಕಲ್ಯಾಣ ಮಂಟಪ, ಚಿತ್ರಮಂದಿರಗಳನ್ನು ಬಂದ್‌ ಮಾಡಿದೆ. ಆದರೆ, ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಸೇರಿದಂತೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ನೌಕರರು, ಅಧಿಕಾರಿಗಳು ಕಾರ್ಯನಿರ್ವಹಿಸುವ ವಿಕಾಸಸೌಧ, ಎಂ.ಎಸ್‌.ಬಿಲ್ಡಿಂಗ್‌ ಸೇರಿದಂತೆ ಪ್ರಮುಖ ಕಚೇರಿಗಳು, ಕೋರ್ಟ್‌ಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳು, ತಾಲೂಕು ಕಚೇರಿಗಳು, ಮಹಾನಗರ ಪಾಲಿಕೆಗಳು ಸೇರಿದಂತೆ ಸರ್ಕಾರಿ ಕಚೇರಿಗಳು, ಸ್ಥಳೀಯ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಈ ಕಚೇರಿಗಳಿಗೆ ನಿತ್ಯ ನೂರಾರು ಮಂದಿ ಬಂದು-ಹೋಗುತ್ತಿದ್ದಾರೆ.

ವಾಸ್ತವವಾಗಿ ಈ ಕಚೇರಿಗಳು ಸೋಂಕು ಹರಡಬಹುದಾದ ತಾಣಗಳೇ ಆಗಿವೆ. ಆದರೆ ಸರ್ಕಾರ ಈ ಕಚೇರಿಗಳ ಬಗ್ಗೆ ಮಾತ್ರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅವುಗಳು ಎಂದಿನಂತೆ ಕಾರ್ಯನಿರ್ವಹಿಸಲು ಬಿಟ್ಟಿದೆ. ಇದೇಕೆ ಎಂಬ ಪ್ರಶ್ನೆ ಇದೀಗ ಸಾರ್ವತ್ರಿಕವಾಗಿದೆ.

ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ ಸೇರಿದಂತೆ ಬೆಂಗಳೂರಿನ ಪ್ರಮುಖ ಸಾರ್ವಜನಿಕ ಕಚೇರಿಗಳಲ್ಲಿ ಸೋಮವಾರದಿಂದ ಸ್ಕ್ರೀನಿಂಗ್‌ ವ್ಯವಸ್ಥೆ ಆರಂಭಿಸುವುದಾಗಿ ಹೇಳಿದ್ದ ಸರ್ಕಾರ ಇನ್ನೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಶಕ್ತಿ ಕೇಂದ್ರಕ್ಕೆ ವಿವಿಧ ಕಾರಣಗಳಿಂದಾಗಿ ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ನಿಯೋಗಗಳು ಭೇಟಿ ನೀಡುತ್ತಿರುತ್ತವೆ. ಮತ್ತೊಂದೆಡೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಈ ಕಚೇರಿಗಳ ಶೌಚಾಲಯದಲ್ಲಿ ಕನಿಷ್ಠ ಪಕ್ಷ ಕೈತೊಳೆಯಲು ಒಂದು ಸಾಬೂನು ಕೂಡ ಇಲ್ಲ. ಇನ್ನು, ಜಿಲ್ಲೆ, ತಾಲೂಕು ಹಂತದ ಕಚೇರಿಗಳ ಪರಿಸ್ಥಿತಿ ಇದಕ್ಕಿಂತ ಹೊರತಾಗಿಲ್ಲ. ಇದು ಅಲ್ಲಿನ ನೌಕರರಲ್ಲಿ ಆತಂಕ ಹೆಚ್ಚಿಸಿದೆ.

ಕರೋನಾ ಕಾಟ; ಕಲ್ಯಾಣ ಕರ್ನಾಟಕ ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಕೇಂದ್ರ..

ನಿಜ, ಸರ್ಕಾರದ ಎಲ್ಲಾ ಕಚೇರಿಗಳಿಗೆ ರಜೆ ನೀಡಿದರೆ ಆಡಲಿತ ವ್ಯವಸ್ಥೆಯೇ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲು ಅಗತ್ಯವಿರುವ ಕಚೇರಿಗಳಲ್ಲಿ ಸೋಂಕು ಹರಡದಂತೆ ಸಾಕಷ್ಟುಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅವು ನಡೆಯುವಂತೆ ನೋಡಿಕೊಳ್ಳಬೇಕು. ಆದರೆ, ಸಾರ್ವಜನಿಕರ ನಿತ್ಯ ಭೇಟಿಯ ಕಚೇರಿಗಳು ಕೆಲ ದಿನ ಮುಚ್ಚಿದರೂ ಆಡಳಿತದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಇಂತಹ ಕಚೇರಿಗಳನ್ನು ಗುರುತಿಸಿ ಅವುಗಳನ್ನು ಕೂಡಲೇ ಬಂದ್‌ ಮಾಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಇನ್ನು ಕೊರೋನಾ ವೈರಸ್‌ ಸೋಂಕು ಆತಂಕದಿಂದ ಸಾರ್ವಜನಿಕ ವಲಯದ ನೌಕರರೇನೂ ಹೊರತಾಗಿಲ್ಲ. ಹಾಗಂತ ನಮಗೆ ರಜೆ ಘೋಷಿಸಿ, ನಾವು ಐಟಿ-ಬಿಟಿ ಕಂಪನಿಗಳ ಮಾದರಿಯಲ್ಲಿ ಮನೆಯಿಂದ ಕೆಲಸ ಮಾಡುತ್ತೇವೆ ಎಂದು ಹೇಳಲು ಆಗುವುದಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ, ಸರ್ಕಾರಿ ಕಚೇರಿಗಳಲ್ಲಿ ಕನಿಷ್ಠ ಮಟ್ಟದ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಸರ್ಕಾರಿ ನೌಕರರು ಕೂಡ ಸಾರ್ವನಿಕ ಸಾರಿಗೆ, ರಸ್ತೆ ಮೂಲಕ ಮನೆಯಿಂದ ಕಚೇರಿಗೆ ಬಂದು ಹೋಗುತ್ತಾರೆ. ಉನ್ನತ ಮಟ್ಟದ ಕೆಲ ಅಧಿಕಾರಿಗಳು, ನೌಕರರು ಸರ್ಕಾರಿ ಕಾರ್ಯಗಳ ನಿಮಿತ್ತ ಹಾಗೂ ಖಾಸಗಿ ಕಾರ್ಯಗಳ ನಿಮಿತ್ತವೂ ಹೊರ ರಾಜ್ಯ, ವಿದೇಶಗಳಿಗೂ ಹೋಗಿ ಬರುತ್ತಾರೆ. ಹೀಗಿರುವಾಗ ಸರ್ಕಾರಿ ಕಚೇರಿಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇನ್ನು ಜ್ವರ, ಶೀತದಂತಹ ಸಮಸ್ಯೆಯನ್ನು ಕೆಲವರು ಜಾಗೃತಿ ಕೊರತೆಯಿಂದ ನಿರ್ಲಕ್ಷಿಸುತ್ತಾರೆ. ಅಂತಹವರನ್ನಾದರೂ ಕಚೇರಿಯಲ್ಲಿ ಪರೀಕ್ಷೆಗೊಳಪಡಿಸುವ ಕೆಲಸ ಮಾಡಿದರೆ ಕೊಂಚ ಮಟ್ಟಿನ ಆತಂಕ ದೂರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಎಂ.ಎಸ್‌.ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಯೊಬ್ಬರು.

ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಸರ್ಕಾರ ಇದನ್ನು ಕೇವಲ ಖಾಸಗಿ ವಲಯಕ್ಕೆ ಸೀಮಿತಗೊಳಿಸಿದರೆ ಸಾರ್ವಜನಿಕ ವಲಯದಲ್ಲಿ ಆತಂಕ ಕಡಿಮೆಯಾಗುವುದಿಲ್ಲ. ಖಾಸಗಿ ಮತ್ತು ಸರ್ಕಾರಿ ವಲಯ ಒಂದೇ ಮನೆಯ ಎರಡು ಬಾಗಿಲು. ಒಂದು ಬಾಗಿಲು ಮುಚ್ಚಿ ಮತ್ತೊಂದು ಬಾಗಿಲು ತೆರೆದಂತಾಗಿದೆ. ಸರ್ಕಾರಿ ವಲಯದಲ್ಲೂ ಹೆಚ್ಚುವರಿ ಕ್ರಮ ವಹಿಸಬೇಕಾಗುತ್ತದೆ.

- ನರಸಿಂಹಲು, ಚಿತ್ರಮಂದಿರದ ಮಾಲಿಕ

ಕೊರೋನಾ ಸೋಂಕು ತಡೆಯಲು ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬಹಳಷ್ಟುಖಾಸಗಿ ವಲಯದ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಮುಜಾಗ್ರತಾ ಕ್ರಮ ಎನ್ನುವುದು ಖಾಸಗಿ, ಸರ್ಕಾರಿ ಎರಡೂ ವಲಯಗಳಿಗೂ ಅನ್ವಯಿಸಬೇಕು. ಕನಿಷ್ಠ ಪಕ್ಷ ಅಲ್ಲಿನ ನೌಕರರಿಗೆ ಸ್ಯಾನಿಟೇಶನ್‌ ಸೌಲಭ್ಯ, ಶೌಚಾಲಯಗಳಲ್ಲಿ ಕೈ ತೊಳೆಯಲು ಸಾಬೂನು ಕೂಡ ಇಡಲಾಗಿಲ್ಲ.

- ಶಶಿಕುಮಾರ್‌, ರಾಜ್ಯ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ

ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರಿ ಕಚೇರಿಗಳ ನೌಕರರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಸದ್ಯದ ಮಟ್ಟಿಗೆ ಸೋಂಕಿನ ಬಗ್ಗೆ ಅಂತಹ ಆತಂಕದ ವಾತಾವರಣ ಸರ್ಕಾರಿ ಕಚೇರಿಗಳಲ್ಲಿ ಇಲ್ಲ. ಸೋಂಕು ಹೆಚ್ಚಾಗಿ ವಿಕೋಪದ ಸ್ಥಿತಿ ಎದುರಾದರೆ ಸಾರ್ವಜನಿಕ ಕಚೇರಿಗಳನ್ನೂ ಬಂದ್‌ ಮಾಡಿ ರಜೆ ಕೊಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು.

- ಷಡಕ್ಷರಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ

click me!