ಸಾಲದ ಸುಳಿಯಲ್ಲಿ ಬಿಎಂಟಿಸಿ, ನೌಕರರ ಭತ್ಯೆಗೂ ಹಣವಿಲ್ಲ!

By Web DeskFirst Published Dec 3, 2018, 8:54 AM IST
Highlights

ಕಳೆದ ನಾಲ್ಕೈದು ವರ್ಷಗಳಿಂದ ನಷ್ಟದ ಹಳಿಯಲ್ಲಿ ತೆವಳುತ್ತಿರುವ ಬಿಎಂಟಿಸಿ ಪ್ರಸ್ತುತ 1 ಸಾವಿರ ಕೋಟಿ ರೂಪಯಿ ಸಾಲ ಹೊಂದಿದೆ. ಇದರ ಜತೆಗೆ ನೌಕರರ ಗ್ರ್ಯಾಚ್ಯುಯಿಟಿ, ರಜೆ ನಗದೀಕರಣ, ಬೋನಸ್‌, ಸಹಕಾರ ಸಂಘದ ವಿಮಾ ಕಂತು ಸೇರಿದಂತೆ ವಿವಿಧ ಭತ್ಯೆಗಳ ಸುಮಾರು 200 ಕೋಟಿ ಬಾಕಿ ಉಳಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿಗಮದ ನೆರವಿಗೆ ಧಾವಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಬೆಂಗಳೂರು[ಡಿ.03]: ಸತತ ನಷ್ಟಅನುಭವಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಆರ್ಥಿಕ ಸ್ಥಿತಿ ಬಿಗಡಾಯಿಸಿದ್ದು, ಐದು ತಿಂಗಳ ಹಿಂದೆ ಸಮ್ಮಿಶ್ರ ಸರ್ಕಾರ ಮಂಡಿಸಿದ್ದ ಚೊಚ್ಚಲ ಬಜೆಟ್‌ನಲ್ಲಿ ಘೋಷಿಸಿದ್ದ 100 ಕೋಟಿ ನೇರ ಸಹಾಯಧನ ಇದುವರೆಗೂ ಬಿಡುಗಡೆಯಾಗಿಲ್ಲ.

ಕಳೆದ ನಾಲ್ಕೈದು ವರ್ಷಗಳಿಂದ ನಷ್ಟದ ಹಳಿಯಲ್ಲಿ ತೆವಳುತ್ತಿರುವ ಬಿಎಂಟಿಸಿ ಪ್ರಸ್ತುತ .1 ಸಾವಿರ ಕೋಟಿ ಸಾಲ ಹೊಂದಿದೆ. ಇದರ ಜತೆಗೆ ನೌಕರರ ಗ್ರ್ಯಾಚ್ಯುಯಿಟಿ, ರಜೆ ನಗದೀಕರಣ, ಬೋನಸ್‌, ಸಹಕಾರ ಸಂಘದ ವಿಮಾ ಕಂತು ಸೇರಿದಂತೆ ವಿವಿಧ ಭತ್ಯೆಗಳ ಸುಮಾರು .200 ಕೋಟಿ ಬಾಕಿ ಉಳಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿಗಮದ ನೆರವಿಗೆ ಧಾವಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ನಮ್ಮ ಬೆಂಗಳೂರು ಮೆಟ್ರೋ ರೈಲು ಸೇವೆ ಆರಂಭದ ಬಳಿಕ ಬಿಎಂಟಿಸಿಗೆ ಪ್ರಯಾಣಿಕರ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಮೆಟ್ರೋ ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಎದುರಾದ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಬಸ್‌ ಸಂಚಾರ ಕಡಿತಗೊಳಿಸಲಾಗಿದೆ. ಇದೂ ಕೂಡ ನಿಗಮದ ಆದಾಯದ ಮೇಲೆ ಪರಿಣಾಮ ಬೀರಿದೆ. ಇದರ ಜತೆಗೆ ಡೀಸೆಲ್‌ ದರ ಏರಿಕೆಯೂ ಕೂಡ ಬಿಎಂಟಿಸಿಗೆ ಭಾರಿ ಹೊಡೆತ ನೀಡಿದೆ. ಪ್ರತಿ ನಿತ್ಯ ತೈಲ ದರ ಪರಿಷ್ಕರಣೆ ಆಗುವುದರಿಂದ ಲೀಟರ್‌ ಡೀಸೆಲ್‌ಗೆ 10 ಪೈಸೆ ಹೆಚ್ಚಾದರೂ ಲಕ್ಷಾಂತರ ರು. ಹೊರೆಯಾಗುತ್ತದೆ. ಇದು ಮಾಸಿಕ ಹಲವು ಕೋಟಿ ರು. ದಾಟುತ್ತದೆ. ನಿಗಮವನ್ನು ನಷ್ಟದ ಹಳಿಯಿಂದ ಮೇಲೆತ್ತಲು ಹಲವು ಪ್ರಯೋಗ ಮಾಡುತ್ತಿದ್ದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ. ಬಜೆಟ್‌ನಲ್ಲಿ ಘೋಷಿಸಿದ್ದ 100 ಕೋಟಿ ಸಹಾಯಧನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ನೌಕರರಿಗೂ ಸಂಕಷ್ಟ:

ವರ್ಷದಿಂದ ವರ್ಷಕ್ಕೆ ನಿಗಮದ ಸಾಲ ಜತೆಗೆ ಅದರ ಬಡ್ಡಿ ಬೆಟ್ಟದಂತೆ ಬೆಳೆಯುತ್ತಿದ್ದು, ನೌಕರರಿಗೂ ಅದರ ಬಿಸಿ ತಟ್ಟುತ್ತಿದೆ. ಗ್ರಾಚ್ಯುಯಿಟಿ, ರಜೆ ನಿಗದೀಕರಣ, ಬೋನಸ್‌ ಸೇರಿದಂತೆ ಸುಮಾರು ಇನ್ನೂರು ಕೋಟಿ ರು. ಬಾಕಿಯಿದೆ. ಹಣ ಕೇಳಿದರೆ ಸಾಬೂಬು ಹೇಳಿಕೊಂಡು ಮುಂದೂಡಲಾಗುತ್ತಿದೆ. ಇದರಿಂದ ನೌಕರರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ನಿವೃತ್ತ ನೌಕರರು ದಿನ ಕೇಂದ್ರ ಕಚೇರಿಗೆ ಅಲೆದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿಗಮದ ನೆರವಿಗೆ ಧಾವಿಸಬೇಕು. ಬಜೆಟ್‌ನಲ್ಲಿ ಘೋಷಿಸಿರುವ ಸಹಾಯಧನದ ಜತೆಗೆ ವಿಶೇಷ ಅನುದಾನ ನೀಡುವ ಮೂಲಕ ನಿಗಮವನ್ನು ಉಳಿಸಬೇಕು ಎಂದು ಬಿಎಂಟಿಸಿ ನೌಕರರ ಮುಖಂಡರೊಬ್ಬರು ಆಗ್ರಹಿಸಿದರು.

ವರ್ಷ ಸಾಲ (ಕೋಟಿ ರು.ಗಳಲ್ಲಿ)
2013-14 361
2014-15 75.21
2015-16 103.01
2016-17 102.50
2017-18 329.90
ಒಟ್ಟು 971.6

-ಮೋಹನ್ ಹಂಡ್ರಂಗಿ

click me!