ಕೊರೋನಾ ಕಾಟ: ಕ್ಷೌರಿಕರ ಲಾಕ್‌ಡೌನ್‌ ಪರಿಹಾರಕ್ಕೆ ಬಿಪಿಎಲ್‌ ಕಾರ್ಡ್‌ ಅಡ್ಡಿ!

By Kannadaprabha News  |  First Published Aug 24, 2020, 8:56 AM IST

ಲಾಕ್‌ಡೌನ್‌ ಪರಿಹಾರ ವಿಳಂಬ: ಕ್ಷೌರಿಕರಿಗೆ ಸಂಕಷ್ಟ| ಪರಿಹಾರ ಪಡೆಯಲು ಬಿಪಿಎಲ್‌ ಕಾರ್ಡ್‌ ಕಡ್ಡಾಯ| ಬಹುತೇಕ ಕ್ಷೌರಿಕರ ಬಳಿ ಬಿಪಿಎಲ್‌ ಕಾರ್ಡಿಲ್ಲದೆ ಸಮಸ್ಯೆ| 


ಶಂಕರ್‌.ಎನ್‌.ಪರಂಗಿ

ಬೆಂಗಳೂರು(ಆ.24): ಕೊರೋನಾ ಲಾಕ್‌ಡೌನ್‌ಗೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದ ಎಲ್ಲ ಕ್ಷೌರಿಕ ಸಮುದಾಯಗಳಿಗೆ ಮೂರು ತಿಂಗಳಾದರೂ ಘೋಷಿತ ಪರಿಹಾರವನ್ನು ಸರ್ಕಾರ ನೀಡದೆ ವಿಳಂಬ ಮಾಡುತ್ತಿರುವುದರಿಂದ ಕ್ಷೌರಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

Latest Videos

undefined

ರಾಜ್ಯದಲ್ಲಿ ಅಂದಾಜು 2.30 ಲಕ್ಷ ಕ್ಷೌರಿಕ ಕುಟುಂಬಗಳಿದ್ದು, ಬಹುತೇಕರು ಪರಿಹಾರಕ್ಕಾಗಿ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದ್ದರೂ, ಬಿಪಿಎಲ್‌ ಕಾರ್ಡ್‌ ಮಾಹಿತಿ ಸಲ್ಲಿಸಬೇಕು ಎಂಬೆಲ್ಲಾ ಷರತ್ತು ವಿಧಿಸಿರುವ ಕಾರಣ ಈವರೆಗೆ ಸುಮಾರು 25 ಫಲಾನುಭವಿಗಳಿಗೆ ಪರಿಹಾರ ದೊರೆತಿದೆ ಎಂದು ‘ಕರ್ನಾಟಕ ರಾಜ್ಯ ಸವಿತಾ ಸಮಾಜ’ ಹೇಳುತ್ತಿದೆ.

ಎಲ್ಲ ಕ್ಷೌರಿಕರಿಗೂ ಪರಿಹಾರ ಸಿಗಬೇಕು:

ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವಾಗ ಬಿಪಿಎಲ್‌ ಕಾರ್ಡ್‌ ಹೊಂದಿದ ಅರ್ಹ ಕ್ಷೌರಿಕರು ಆಧಾರ್‌ ನಂಬರ್‌, ಬ್ಯಾಂಕ್‌ ಖಾತೆ, ಸ್ವವಿಳಾಸ, ಮುಖ್ಯವಾಗಿ ಇವರು ಕ್ಷೌರಿಕರು ಎಂದು ಸಂಬಂಧಿಸಿದ ಅಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ ಸಲ್ಲಿಸಿ ಅರ್ಜಿ ಭರ್ತಿ ಮಾಡಬೇಕಿದೆ. ಆದರೆ ಸವಿತಾ ಸಮಾಜದ ಪ್ರಕಾರ ರಾಜ್ಯದಲ್ಲಿ ಇರುವ ಒಟ್ಟು 2.30 ಲಕ್ಷ ಕ್ಷೌರಿಕರೆಲ್ಲರಲ್ಲೂ ಬಿಪಿಎಲ್‌ ಕಾರ್ಡ್‌ ಇಲ್ಲ. ಈ ಕುರಿತು ಸರ್ಕಾರ ಯಾರ ಬಳಿ ಸರ್ವೇ ಸಹಿತ ಮಾಡಿಲ್ಲ. ಬಿಪಿಎಲ್‌ ಕಾರ್ಡ್‌ ಕಡ್ಡಾಯ ನಿಯಮದಿಂದಾಗಿ ಎಲ್ಲ ಬಡ ಕುಟುಂಬದ ಕ್ಷೌರಿಕರಿಗೂ ಐದು ಸಾವಿರ ಪರಿಹಾರ ಸಿಗುವುದು ಅನುಮಾನ. ಹೀಗಾಗಿ ನಿಯಮ ಕೈ ಬಿಡಬೇಕು ಎಂದು ಅಧಿಕಾರಿಗಳಲ್ಲಿ ಸಮಾಜ ಮನವಿ ಮಾಡಿದ್ದರೂ ಸರ್ಕಾರದಿಂದ ಸ್ಪಂದಿಸಿಲ್ಲ. ಜೊತೆಗೆ ಯಾವ ಯಾವ ಮಾನ ದಂಡಗಳಡಿ ಪರಿಹಾರ ನೀಡುತ್ತಿದೆ ಎಂಬುದು ತಿಳಿದಿಲ್ಲ. ಇತರ ಸಮುದಾಯಗಳಿಗೆ ಪರಿಹಾರ ನೀಡಲು ಅರ್ಜಿ ಸ್ವೀಕರಿಸುವಲ್ಲಿ ಬಿಪಿಎಲ್‌ ಕಾರ್ಡ್‌ ಕಡ್ಡಾಯ ಮಾಡಿಲ್ಲ. ಕ್ಷೌರಿಕರಿಗೆ ನಿಯಮ ಕಡ್ಡಾಯ ಮಾತ್ರ ಏಕೆ ಎಂದು ರಾಜ್ಯ ಸವಿತಾ ಸಮಾಜ ರಾಜ್ಯ ಸಂಚಾಲಕ ಎಂ.ಎಸ್‌. ಮುತ್ತುರಾಜ್‌ ಪ್ರಶ್ನಿಸಿದ್ದಾರೆ.

ಕೊರೋನಾ ಕಾಟಕ್ಕೆ ಬಳಲಿ ಬೆಂಡಾದ ಕ್ಷೌರಿಕರು: ಸಲೂನ್‌ನತ್ತ ಮುಖಮಾಡದ ಜನ..!

ಸಚಿವರು ಹೇಳೋದೇನು?

ಪರಿಹಾರ ಹಣ ಪಡೆಯಲು ರಾಜ್ಯದ ಕ್ಷೌರಿಕರು ಹಾಗೂ ಅಗಸರ ಪೈಕಿ ಒಟ್ಟು ಒಂದು ಲಕ್ಷ 21 ಸಾವಿರ ಸಂತ್ರಸ್ತರು ಸೇವಾಸಿಂಧುವಿನಲ್ಲಿ ನೋಂದಣಿಯಾಗಿದ್ದಾರೆ. ಪರಿಹಾರ ನೀಡಲು ಉದ್ದೇಶಿಸಿರುವ ಒಟ್ಟು 2.86 ಲಕ್ಷ ಜನರಲ್ಲಿ 2.10 ಲಕ್ಷ ಕ್ಷೌರಿಕರು, ಉಳಿದವರ ಅಗಸ ಸಮುದಾಯದವರು ಇದ್ದಾರೆ. ಈ ಎರಡು ಸಮುದಾಯದ ಒಟ್ಟು 59 ಸಾವಿರ ಕುಟುಂಬಕ್ಕೆ ತಲಾ 5000 ಪರಿಹಾರ ನೀಡಲಾಗಿದೆ. ಜೊತೆಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಜನರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ 145 ಕೋಟಿ ಮೀಸಲಿಟ್ಟಿದೆ. ತಾಂತ್ರಿಕ ಕಾರಣ, ಕೊರೋನಾ ಹಾಗೂ ಪ್ರವಾಹದಂಥ ಸಂಕಷ್ಟ ಕಾಲದಲ್ಲಿ ಏಕಕಾಲಕ್ಕೆ ಎಲ್ಲ ಫಲಾನುಭವಿಗಳಿಗೂ ಹಣ ವಿತರಿಸುವುದು ಅಸಾಧ್ಯ. ಹಂತ ಹಂತವಾಗಿ ಪರಿಹಾರ ಹಣ ವಿತರಿಸಲಿದೆ. ಪರಿಹಾರ ನೀಡಲು ಹಣದ ಕೊರತೆ ಎದುರಾಗಿಲ್ಲ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಂ ಹೆಬ್ಬಾರ್‌ ಪ್ರತಿಕ್ರಿಯಿಸಿದ್ದಾರೆ.

ವಿಳಂಬ ಮಾಡದೇ ಹಂತ ಹಂತವಾಗಿ ಪರಿಹಾರ ನೀಡಲಾಗುವುದು. ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಪರಿಶೀಲಿಸಲಾಗಿದ್ದು, ಅರ್ಜಿ ಸಲ್ಲಿಸಲು ಬಿಪಿಎಲ್‌ ಕಾರ್ಡ್‌ ಕಡ್ಡಾಯ ಮಾಡಿರುವುದರಿಂದ ಯಾರಿಗೂ ತೊಂದರೆಯಾಗಿರುವುದು ಕಂಡು ಬಂದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ತಿಳಿಸಿದ್ದಾರೆ. 
 

click me!