ಅಂಜನಾದ್ರಿ ಹನುಮ ವಿಶ್ವಪ್ರಸಿದ್ಧ, 12 ವರ್ಷದ ರಥಯಾತ್ರೆಯೂ ಶುರು!

By Suvarna NewsFirst Published Apr 11, 2021, 8:01 AM IST
Highlights

ಅಂಜನಾದ್ರಿ ಹನುಮ ವಿಶ್ವಪ್ರಸಿದ್ಧ, ಈಗಾಗಲೇ ರಥಯಾತ್ರೆಯೂ ಶುರು| ಕೊಪ್ಪಳದ ಪರ ಇತಿಹಾಸ ತಜ್ಞರ ಪ್ರಬಲ ವಾದ| ಆಂಜನೇಯನ ಜನ್ಮಸ್ಥಳ ತಿರುಮಲ ಎಂಬ ಟಿಟಿಡಿ ವಾದಕ್ಕೆ ವ್ಯಾಪಕ ಆಕ್ಷೇಪ| ಕರ್ನಾಟಕವೇ ಜನ್ಮಸ್ಥಳ ಎಂಬುದಕ್ಕೆ ಸಾಕಷ್ಟುಸಾಕ್ಷ್ಯ

ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.11): ಕೊಪ್ಪಳ ಜಿಲ್ಲೆಯ ಆನೆಗೊಂದಿ ವ್ಯಾಪ್ತಿಯ ಭೂಪ್ರದೇಶವೇ ರಾಮಾಯಣದಲ್ಲಿ ಉಲ್ಲೇಖವಾಗಿರುವ ಕಿಷ್ಕಿಂಧೆ, ಇಲ್ಲಿರುವ ಅಂಜನಾದ್ರಿ ಬೆಟ್ಟವೇ ರಾಮಭಕ್ತ ಆಂಜನೇಯನ ಜನ್ಮಭೂಮಿ ಎಂದು ಈಗಾಗಲೇ ವಿಶ್ವಪ್ರಸಿದ್ಧವಾಗಿದೆ. ಉತ್ತರ ಭಾರತೀಯರೂ ಸೇರಿದಂತೆ ದೇಶಾದ್ಯಂತ ಹನುಮಭಕ್ತರು ಇದನ್ನೇ ಹಮಮ ಜನ್ಮಭೂಮಿಯೆಂದು ಬಲವಾಗಿ ನಂಬಿದ್ದು, ಹಿಂದಿನಿಂದಲೂ ಇಲ್ಲಿಗೆ ಆಗಮಿಸಿ ಪೂಜೆ, ಪುನಸ್ಕಾರಗಳನ್ನೂ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲದೆ ಈ ನೆಲವನ್ನು ಮತ್ತಷ್ಟುಪ್ರಚಾರಕ್ಕೆ ತರುವ ಸಲುವಾಗಿ ಸ್ವರ್ಣಹಂಪಿ ಆಶ್ರಮದ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಂಪಿಯಿಂದ ಹೊರಟು ದೇಶಾದ್ಯಂತ 12 ವರ್ಷಗಳ ಕಾಲ ನಡೆಯಲಿರುವ ಹನುಮರಥಯಾತ್ರೆಗೂ ಚಾಲನೆ ದೊರೆತಿದೆ. ಈ ಎಲ್ಲದರ ನಡುವೆ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ತಿರುಮಲ ಬೆಟ್ಟವೇ ಆಂಜನೇಯನ ಜನ್ಮಸ್ಥಳ ಎಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕೊಪ್ಪಳದ ಅಂಜನಾದ್ರಿಯ ಅಭಿವೃದ್ಧಿಯನ್ನು ಸಹಿಸದೇ ಈ ತಲೆಬುಡವಿಲ್ಲದ ವಾದ ಮುಂದಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ಆಂಜನೇಯ ಜನ್ಮಸ್ಥಳದ ಕುರಿತು ಟಿಟಿಡಿ ಟ್ರಸ್ಟ್‌ (ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌) ಸತ್ಯಸಂಶೋಧನೆ ನಡೆಸಿ ಅಂಜನೇಯ ಜನಿಸಿದ್ದು ಕರ್ನಾಟಕದ ಕಿಷ್ಕಿಂಧೆಯ ಅಂಜನಾದ್ರಿಯಲ್ಲಿ ಅಲ್ಲ, ಬದಲಾಗಿ ಆಂಧ್ರದ ತಿರುಪತಿಯ ಅಂಜನಾದ್ರಿಯಲ್ಲಿ ಎಂಬ ಹೇಳಿಕೆ ನೀಡಿದೆ. ಪ್ರಸಕ್ತ ಯುಗಾದಿಯ ದಿನ ಸತ್ಯಶೋಧನಾ ಸಮಿತಿ ವರದಿ ನೀಡಲಿರುವುದಾಗಿ ತಿಳಿಸಿದೆ. ಆದರೆ ಈ ಸತ್ಯಶೋಧನೆಯನ್ನು ಯಾಕೆ ಮಾಡಲಾಯಿತು? ಇದು ಸರ್ಕಾರದ ಅಧಿಕೃತ ಆದೇಶದ ಪ್ರಕಾರವೇ ಮಾಡಲಾಯಿತೇ ಎಂಬಿತ್ಯಾದಿಗಳ ಬಗ್ಗೆ ಉತ್ತರ ನೀಡಿಲ್ಲ.

ಕೇಂದ್ರ ಸರ್ಕಾರವೂ ಒಪ್ಪಿಗೆ:

ಆಂಜನೇಯನ ಜನ್ಮಸ್ಥಳವಾದ ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ‘ಮಾಸ್ಟರ್‌ ಪ್ಲಾನ್‌’ ರಚಿಸಿ ಕಾರ್ಯೋನ್ಮುಖ ಆಗುತ್ತಿದ್ದಂತೆ ಆಂಧ್ರಪ್ರದೇಶದ ಟಿಟಿಡಿಯಿಂದ ಈ ಕ್ಯಾತೆ ಆರಂಭವಾಗಿದೆ. ಟಿಟಿಡಿಯ ಈ ನಿಲುವಿಗೆ ನಾಡಿನ ಇತಿಹಾಸಕಾರರ, ಪುರಾತತ್ವ ತಜ್ಞರ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಐತಿಹಾಸಿಕ ದಾಖಲೆ:

ಆಂಜನೇಯನ ಜನ್ಮಸ್ಥಳ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟಅನ್ನುವುದಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ದಾಖಲೆಗಳು ಇವೆ. ಸ್ಥಳ ಪುರಾಣಗಳಿವೆ. ಇದೆಲ್ಲಕ್ಕಿಂತ ಮಿಗಿಲಾಗಿ ಕ್ರಿ.ಶ. 1000ರಲ್ಲಿಯೇ ಕೆತ್ತಲಾದ ಶಾಸನಗಳಿವೆ. ಕಿಷ್ಕಿಂಧೆಯಲ್ಲಿ ಸಾಕ್ಷಿಗಳು, ರಾಮಾಯಣದ ಐತಿಹ್ಯಗಳು ಇವೆ. ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ ಅವರು ಬರೆದಿರುವ ಇತಿಹಾಸ ಪುಸ್ತಕದಲ್ಲಿ ನಾನಾ ಉಲ್ಲೇಖದೊಂದಿಗೆ ಇದನ್ನು ಸಾಬೀತು ಮಾಡಿದ್ದಾರೆ.

ಆನೆಗೊಂದಿಯಿಂದ 10 ಕಿ.ಮೀ. ದೂರದದಲ್ಲಿರುವ ದೇವಘಾಟದ ಕ್ರಿ.ಶ.1069ರ ಶಾಸನದಲ್ಲಿ ತುಂಗಭದ್ರಾ ತಟದ ಬಡಗ ಕಿಷ್ಕಿಂಧೆ ಪರ್ವತಂ ಎಂದಿದೆ. ಪಶ್ಚಿಮಕ್ಕೆ 20 ಕಿ.ಮೀ. ದೂರದಲ್ಲಿರುವ ಹುಲಿ ಗ್ರಾಮದಲ್ಲಿ ಕ್ರಿ.ಶ.1088ರ ಶಾಸನದಲ್ಲಿ ಕಿಷ್ಕಿಂಧೆ ಪರ್ವತ, ಋುಷ್ಯಮೂಕಾಚಲ ಎಂಬ ಉಲ್ಲೇಖಗಳಿವೆ. ಹೀಗೆ ಅನೇಕ ಸಾಕ್ಷಿ ಮತ್ತು ಶಾಸನಗಳ ಪುರಾವೆಗಳ ಆಧಾರದ ಮೇಲೆ ಆಂಜನೇಯನ ಜನ್ಮಸ್ಥಳ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟಎನ್ನುವುದನ್ನು ಇತಿಹಾಸಕಾರರು ದೃಢಪಡಿಸಿದ್ದಾರೆ.

ಹಂಪಿ ಭಾಗದಲ್ಲಿ ವ್ಯಾಪಕ ಅಧ್ಯಯನ ನಡೆಸಿರುವ ಸಂಶೋಧಕ ಡಾ.ಅ.ಸುಂದರ ಅವರು, ಆನೆಗೊಂದಿಯೇ ರಾಮಾಯಣ ಕಾಲದ ಕಿಷ್ಕಿಂಧೆ ಎನ್ನುವುದಕ್ಕೆ ಅನೇಕ ಪುರಾವೆಗಳನ್ನು ಒದಗಿಸಿದ್ದಾರೆ. ಶ್ರೀರಾಮ ಇಲ್ಲಿ ಬಂದಿರುವುದು, ಸುತ್ತಾಡಿದ ಬಗ್ಗೆ ಅನೇಕ ಪುರಾವೆಗಳಿವೆ. ರಾಮನಿಗಾಗಿ ಶಬರಿ ಕಾದಿರುವ ಸ್ಥಳವಿದೆ. ವಾಲಿ, ಸುಗ್ರೀವ ಕಾದಾಡಿದ ಜಾಗವೂ ಇಲ್ಲಿಯೇ ಇದೆ. ಪಂಪಾ ಸರೋವರ ಇದೆ. ಇದೆಲ್ಲವೂ ಆಂಜನೇಯನ ಜನ್ಮಸ್ಥಳ ಕಿಷ್ಕಿಂಧೆಯ ಅಂಜನಾದ್ರಿ ಎನ್ನುವುದಕ್ಕೆ ದೊರೆತಿರುವ ಪುರಾವೆಗಳು ಎಂದು ತಿಳಿಸಿದ್ದಾರೆ.

ವ್ಯಾಪಕ ಆಕ್ರೋಶ:

ಏಕಾಏಕಿ ಟಿಟಿಡಿಯ ಈ ಹೇಳೆಕೆ ಇತಿಹಾಸಕಾರರ, ಪುರಾತತ್ವ ತಜ್ಞರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಅಂಜನಾದ್ರಿ ಎನ್ನುವ ಪರ್ವತ ಇದ್ದರೆ ಸಾಲದು, ಅದು ಕಿಷ್ಕಿಂಧೆಯ ಭಾಗವಾಗಿರಬೇಕು. ಅಂದಾಗಲೇ ಅದು ನಿಜವಾದ ಅಂಜನಾದ್ರಿಯಾಗುತ್ತದೆ. ಈಗ ಅಂಜನಾದ್ರಿಯ ಅಭಿವೃದ್ಧಿಯನ್ನು ಸಹಿಸದೆ ಈ ರೀತಿ ವಾದ ಮಂಡನೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ. ತಾವೇ ಸತ್ಯಶೋಧನೆ ಮಾಡಿ ವರದಿ ಸಲ್ಲಿಸುತ್ತಿರುವುದು ಯಾವ ನ್ಯಾಯ ಎಂದು ಈ ಭಾಗದ ಇತಿಹಾಸಕಾರರು ಪ್ರಶ್ನಿಸುತ್ತಿದ್ದಾರೆ.

ಆಂಜನೇಯನ ಜನ್ಮಸ್ಥಳ ಕಿಷ್ಕಿಂಧೆಯ ಅಂಜನಾದ್ರಿ ಎನ್ನುವುದು ಅನೇಕ ಬಾರಿ ರುಜುವಾತಾಗಿದೆ. ಶಾಸನ, ದಾಖಲೆಗಳು, ಪುರಾಣದ ಪುರಾವೆಗಳಿವೆ. ಮಹಾನ್‌ ಇತಿಹಾಸಕಾರರೇ ಇದು ನಿರ್ವಿವಾದ ಸ್ಥಳ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಏಕಾಏಕಿ ಟಿಟಿಡಿಯವರ ಹೇಳಿಕೆಯಿಂದ ಅಚ್ಚರಿಯಾಗಿದೆ.

-ಶರಣಬಸಪ್ಪ ಕೋಲ್ಕಾರ, ಇತಿಹಾಸಕಾರರು

ಆಂಧ್ರದಲ್ಲೇ ತಜ್ಞರ ಆಕ್ಷೇಪ

ಆಂಜನೇಯನ ಜನ್ಮಸ್ಥಳ ತಿರುಮಲದ ಅಂಜನಾದ್ರಿ ಎಂಬ ವಾದಕ್ಕೆ ಆಂಧ್ರಪ್ರದೇಶದಲ್ಲೇ ತಜ್ಞರು ಆಕ್ಷೇಪಿಸಿದ್ದಾರೆ. ರಾಷ್ಟ್ರೀಯ ಹಸ್ತಪ್ರತಿ ಮಿಷನ್‌ನ ಮಾಜಿ ನಿರ್ದೇಶಕ ಪ್ರೊ.ವೆಂಕಟರಮಣ ರೆಡ್ಡಿ ಇಂತಹ ‘ಸಂಶೋಧನೆಗೆ’ ಅಸಮಾಧಾನ ವ್ಯಕ್ತಪಡಿಸಿದ್ದರೆ, ಟಿಟಿಡಿ ಕ್ರಮದ ಕುರಿತು ಪ್ರತಿಕ್ರಿಯಿಸಲು ತಿರುಮಲ ದೇಗುಲದ ಮುಖ್ಯ ಅರ್ಚಕರು ನಿರಾಕರಿಸಿದ್ದಾರೆ.

click me!