ರಾಷ್ಟ್ರಪಿತನ ಕುರಿತ ಎಲ್ಲ ಪ್ರಶ್ನೆಗಳಿಗೆ ಒಂದೇ ಪುಸ್ತಕದಲ್ಲಿ ಸಿಗಲಿದೆ ಉತ್ತರ...

Kannadaprabha News   | Asianet News
Published : Feb 14, 2022, 03:31 PM ISTUpdated : Feb 14, 2022, 03:40 PM IST
ರಾಷ್ಟ್ರಪಿತನ ಕುರಿತ ಎಲ್ಲ ಪ್ರಶ್ನೆಗಳಿಗೆ ಒಂದೇ ಪುಸ್ತಕದಲ್ಲಿ ಸಿಗಲಿದೆ ಉತ್ತರ...

ಸಾರಾಂಶ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕುರಿತ ಪುಸ್ತಕ ವಿಶ್ಲೇಷಣೆ ಸಹಿತ ಸಮಗ್ರ ಉತ್ತರಗಳುಳ್ಳ ಪುಸ್ತಕ ರಾಷ್ಟ್ರಪಿತನ ಬಗೆಗಿನ ತಪ್ಪು ಕಲ್ಪನೆಗಳು, ವದಂತಿಗಳಿಗೆ ಉತ್ತರ  

ಸಂದೀಪ್‌ ವಾಗ್ಲೆ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕುರಿತು ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳು, ವದಂತಿಗಳು, ಕಾಲ್ಪನಿಕ ಕತೆಗಳು, ವೈಭವೀಕರಣ ಪಸರಿಸುತ್ತಿರುವ ಕಾಲಘಟ್ಟದಲ್ಲಿ ಗಾಂಧೀಜಿ ಕುರಿತ ಇಂಥ ಎಲ್ಲ ಪ್ರಶ್ನೆಗಳಿಗೆ ಆಧಾರ- ವಿಶ್ಲೇಷಣೆ ಸಹಿತ ಸಮಗ್ರ ಉತ್ತರಗಳುಳ್ಳ ಪುಸ್ತಕ ಶೀಘ್ರದಲ್ಲೇ ಹೊರಬರಲಿದೆ.

ಗಾಂಧೀಜಿ ಕುರಿತ ಅನೇಕ ಪುಸ್ತಕಗಳು ಪ್ರಕಟವಾಗುತ್ತಲೇ ಇವೆ. ಆದರೆ ಗಾಂಧೀಜಿ (Gandhi)ಕುರಿತ ಬಹುತೇಕ ಎಲ್ಲ ಪರ- ವಿರೋಧ ಪ್ರಶ್ನೆಗಳಿಗೆ ಕ್ರೋಢೀಕೃತ, ಆಧಾರ ಸಹಿತ, ಪೂರ್ವಾಗ್ರಹ ರಹಿತ ಉತ್ತರ ರೂಪದ ಪುಸ್ತಕ ಹೊರಬರುತ್ತಿರುವುದು ಇದೇ ಮೊದಲು.

ಪ್ರಶ್ನೆಗಳಿಗೆ ಮುಕ್ತ ಆಹ್ವಾನ: ಲೇಖಕ, ಚಿಂತಕ ಅರವಿಂದ ಚೊಕ್ಕಾಡಿ ಸೇರಿದಂತೆ ಅನೇಕ ಸಮಾನ ಮನಸ್ಕರು ಸೇರಿ ಇತ್ತೀಚೆಗಷ್ಟೆಆರಂಭಿಸಿರುವ ‘ಗಾಂಧಿ ವಿಚಾರ ವೇದಿಕೆ​’ಯ ಮೊದಲ ಕನಸಿನ ಕೂಸು ಇದು. ಈ ಪುಸ್ತಕ ಪ್ರಕಟಣೆಗಾಗಿ ರಾಜ್ಯ ಮಟ್ಟದ ವಿವಿಧ ಚಿಂತಕರನ್ನೊಳಗೊಂಡ ಸಂಪಾದಕೀಯ ಮಂಡಳಿ ರಚಿಸಲಾಗಿದೆ. ಸಾಮಾಜಿಕ ಚಿಂತಕ ಎಂ.ಜಿ. ಹೆಗಡೆ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಾತ್ಮಾ ಗಾಂಧಿ ಕುರಿತು ಸಾರ್ವಜನಿಕರಿಂದಲೇ ಪ್ರಶ್ನೆಗಳನ್ನು ಆಹ್ವಾನಿಸಿದ್ದು ಈ ಪುಸ್ತಕದ ವಿಶೇಷತೆ. ಫೆ.10ಕ್ಕೆ ಪ್ರಶ್ನೆಗಳ ಆಹ್ವಾನಕ್ಕೆ ಅಂತಿಮ ದಿನಾಂಕ ನಿಗದಿಪಡಿಸಲಾಗಿತ್ತು. ಅದರಂತೆ 50ಕ್ಕೂ ಅಧಿಕ ಪ್ರಶ್ನೆಗಳು ಸಂಪಾದಕೀಯ ಮಂಡಳಿಗೆ ಬಂದಿವೆ.

ತಪ್ಪು ಕಲ್ಪನೆಗಳೇ ಅಧಿಕ!: ಬಹುತೇಕ ಪ್ರಶ್ನೆಗಳು ಗಾಂಧೀಜಿ ಕುರಿತು ಸೃಷ್ಟಿಯಾದ ವದಂತಿಗಳು ಹಾಗೂ ತಪ್ಪು ಕಲ್ಪನೆಗಳ ಕುರಿತಾಗಿಯೇ ಬಂದಿವೆ. ದೇಶ ವಿಭಜನೆಗೆ ಗಾಂಧೀಜಿ ಕಾರಣಕರ್ತರಾ? ಅವರು ಹಿಂದೂ ವಿರೋಧಿ, ಮುಸ್ಲಿಂ ಪರ ಎನ್ನುವ ಪ್ರಶ್ನೆ, ಗಾಂಧೀಜಿಗೆ ದುಶ್ಚಟ, ವೇಶ್ಯೆಯರ ಸಹವಾಸವಿತ್ತೇ? ಮದ್ಯ ಸೇವನೆ ಮಾಡುತ್ತಿದ್ದರೇ? ಗಾಂಧೀಜಿಯನ್ನು ಸ್ವಾತಂತ್ರ್ಯ ಚಳವಳಿಯ ನಾಯಕ ಎಂದು ಬಿಂಬಿಸಲಾಯಿತೇ? ಜಿನ್ನಾ ಪ್ರಧಾನಿಯಾಗಬೇಕೆಂಬ ಇಚ್ಛೆ ಗಾಂಧೀಜಿಗೆ ಇತ್ತೇ? ಇತ್ಯಾದಿ ಅನೇಕ ಪ್ರಶ್ನೆಗಳು ಬಂದಿವೆ. ಜತೆಗೆ, ಅಹಿಂಸಾ ತತ್ವದ ಮೂಲಕ ಒತ್ತಡ ಹೇರುವ ಹೋರಾಟ ಹಿಂಸೆ ಅಲ್ಲವೇ? ಹಿಂಸೆ ನಿಗ್ರಹಿಸುವುದು ಸರಿ, ಹಿಂಸಾ ಪ್ರವೃತ್ತಿ ನಿಲ್ಲಿಸೋದು ಹೇಗೆ ಎಂದು ಗಾಂಧಿ ಹೇಳಲೇ ಇಲ್ಲ? ಗಾಂಧೀಜಿಯವರ ಯಂತ್ರ ನಾಗರಿಕತೆ ಪರಿಕಲ್ಪನೆ ಪ್ರಸ್ತುತ ಪರಿಸ್ಥಿತಿಗೆ ಅನ್ವಯಿಸಬಲ್ಲದೆ.. ಇತ್ಯಾದಿ ಚಿಂತನೆಗೆ ಹಚ್ಚುವ ಪ್ರಶ್ನೆಗಳೂ ಬಂದಿವೆ ಎಂದು ಪ್ರಧಾನ ಸಂಪಾದಕ ಎಂ.ಜಿ. ಹೆಗಡೆ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ಕ್ರೋಢೀಕೃತ ಉತ್ತರ: ಬಂದಿರುವ ಎಲ್ಲ ಪ್ರಶ್ನೆಗಳಿಗೆ ಸಂಪಾದಕ ಮಂಡಳಿ ಸೇರಿದಂತೆ, ಸಮಾಜದಲ್ಲಿ ಗಾಂಧಿ ಕುರಿತು ಸಂಶೋಧನೆ ಮಾಡಿದ ತಜ್ಞರಿಂದ ಉತ್ತರಗಳನ್ನು ಪಡೆದುಕೊಂಡು, ಪರಿಶೀಲನೆ ಮಾಡಿ, ಕ್ರೋಢೀಕರಿಸಿ, ಸರಳೀಕರಿಸಿ, ದಾಖಲೆಗಳೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಈ ಪ್ರಶ್ನೆಗಳು ಮಾತ್ರವಲ್ಲದೆ, ಗಾಂಧೀಜಿಯ ಅನೇಕ ಚಿಂತನೆಗಳ ಕುರಿತು ಸಮಾಜದಲ್ಲಿ ಪ್ರಚಲಿತದಲ್ಲಿರುವ ಪ್ರಶ್ನೆಗಳನ್ನೂ ಸೇರಿಸಿ, ಅವುಗಳಿಗೂ ಉತ್ತರವನ್ನು ಪ್ರಕಟಿಸಲಾಗುವುದು. ಸಮಾಜದ ಎಲ್ಲ ಸ್ತರದ ಜನರಿಗೂ ಇದು ಆಕರ ಗ್ರಂಥವಾಗಿ ಮೂಡಿಬರಲಿದೆ ಎಂದು ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಹೇಳಿದ್ದಾರೆ.

ಮೂರರಿಂದ ಆರು ತಿಂಗಳೊಳಗೆ ಈ ಪುಸ್ತಕ ಪ್ರಕಟಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಕನ್ನಡದಲ್ಲಿ ಪ್ರಕಟವಾಗುತ್ತಿದ್ದು, ಮುಂದಿನ ಹಂತದಲ್ಲಿ ಇಂಗ್ಲಿಷ್‌ ಭಾಷೆಗೂ ತರ್ಜುಮೆಗೊಳಿಸುವ ಕಾರ್ಯವೂ ನಡೆಯಲಿದೆ. ಸುಮಾರು 200ರಷ್ಟುಪುಟಗಳು ಇರಲಿವೆ. ಜನರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ ಎಂದು ಎಂ.ಜಿ. ಹೆಗಡೆ ತಿಳಿಸಿದ್ದಾರೆ.


ಮಹಾತ್ಮಾ ಗಾಂಧೀಜಿ ಕುರಿತು ಸಮಾಜದ ಒಂದು ವರ್ಗಕ್ಕೆ ತಪ್ಪು ಕಲ್ಪನೆಗಳಿವೆ. 90ರ ದಶಕದಲ್ಲಿ ರಾಜಕೀಯ ಚಳವಳಿ ಹೊಸ ರೂಪಕ್ಕೆ ತಿರುಗಿದ ಬಳಿಕ ಗಾಂಧಿ ವಿರೋಧಿ ಪ್ರತಿಪಾದನೆ ಬಲವಾಗಿ, ಗಾಂಧಿ ವ್ಯಕ್ತಿತ್ವ ಅಳೆಯುವ ಪ್ರವೃತ್ತಿ ಹೆಚ್ಚಾಯಿತು. ಸಾಮಾಜಿಕ ಜಾಲತಾಣಗಳು ಆರಂಭವಾದ ಬಳಿಕವಂತೂ ಗಾಂಧೀಜಿ ಬಗ್ಗೆ ಕಾಲ್ಪನಿಕ ಕತೆಗಳೇ ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ಗಾಂಧೀಜಿ ಕುರಿತ ಎಲ್ಲ ಬಗೆಯ ಪ್ರಶ್ನೆಗಳಿಗೆ ಉಲ್ಲೇಖ ಸಹಿತ ಸಮಗ್ರ ಉತ್ತರ ರೂಪದಲ್ಲಿ ಈ ಪುಸ್ತಕ ಹೊರತರಲು ನಿರ್ಧರಿಸಲಾಗಿದೆ.

ಎಂ.ಜಿ. ಹೆಗಡೆ (M.G. Hegde, ಪ್ರಧಾನ ಸಂಪಾದಕರು.


ಗಾಂಧೀಜಿ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಮಾತ್ರವಲ್ಲದೆ ಅನಗತ್ಯ ಒಳ್ಳೆತನಗಳನ್ನು ಕೂಡ ಹೇರಲಾಗಿದೆ. ಗಾಂಧೀಜಿಯ ಕುರಿತ ನಿಜವಾದ ಚಿತ್ರಣ ಹೆಚ್ಚಿನವರಲ್ಲಿ ಇಲ್ಲ. ನಿಜವಾದ ಗಾಂಧಿ ಹೇಗಿದ್ದರು ಎನ್ನುವುದನ್ನು ತೋರಿಸುವುದು ಈ ಪುಸ್ತಕದ ಉದ್ದೇಶ. ಗಾಂಧೀಜಿ ಬದುಕಿದ್ದಾಗ ತಮ್ಮ ಕುರಿತಾದ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದು ಆಗಲೇ ಪ್ರಕಟವಾಗಿತ್ತು. ಆ ಕುರಿತ ಪುಸ್ತಕವೂ ಬರಲಿದೆ.

ಅರವಿಂದ ಚೊಕ್ಕಾಡಿ(Aravinda Chokkadi), ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ