ವಿಂಬಲ್ಡನ್‌: ಕ್ವಾರ್ಟರ್‌ನಲ್ಲಿ ಜೋಕೋವಿಚ್‌ಗೆ ರುಬ್ಲೆವ್‌ ಸವಾಲು?

By Kannadaprabha News  |  First Published Jul 1, 2023, 10:44 AM IST

ವಿಂಬಲ್ಡನ್‌: ಕ್ವಾರ್ಟರ್‌ನಲ್ಲಿ ಜೋಕೋವಿಚ್‌ಗೆ ರುಬ್ಲೆವ್‌ ಸವಾಲು?
23 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್‌ ಜೋಕೋವಿಚ್‌ ಪೆಡ್ರೊ ಕ್ಯಾಚಿನ್‌ ಅಭಿಯಾನ ಆರಂಭ
ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಕೊಕೊ ಗಾಫ್ ಎದುರಾಗುವ ಸಾಧ್ಯತೆ 


ಲಂಡನ್‌(ಜು.01): ಸೋಮವಾರದಿಂದ ಆರಂಭಗೊಳ್ಳಲಿರುವ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ 23 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್‌ ಜೋಕೋವಿಚ್‌, ಅರ್ಜೆಂಟೀನಾದ ಪೆಡ್ರೊ ಕ್ಯಾಚಿನ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಶುಕ್ರವಾರ ಟೂರ್ನಿಯ ಡ್ರಾ ಪ್ರಕಟಗೊಂಡಿದ್ದು, ಜೋಕೋಗೆ ಕ್ವಾರ್ಟರ್‌ನಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೆವ್‌ ಸವಾಲು ಎದುರಾಗುವ ಸಾಧ್ಯತೆಯಿದೆ. 

ಇನ್ನು, ವಿಶ್ವ ನಂ.1 ಆಟಗಾರ ಕಾರ್ಲೊಸ್‌ ಆಲ್ಕರಜ್‌ ಕ್ವಾರ್ಟರ್‌ಗೇರಿದರೆ ಅವರು ಡೆನ್ಮಾರ್ಕ್‌ನ ಹೋಲ್ಗರ್‌ ರ್‍ಯುನ್‌ ವಿರುದ್ಧ ಮುಖಾಮುಖಿಯಾಗಬಹುದು. ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಕೊಕೊ ಗಾಫ್ ಎದುರಾಗುವ ಸಾಧ್ಯತೆ ಇದೆ. ಎಲೆನಾ ರಬೈಕೆನಾಗೆ ಟ್ಯುನೀಶಿಯಾದ ಒನ್ಸ್‌ ಜಬುರ್‌, ವಿಶ್ವ ನಂ.2 ಅರೈನಾ ಸಬಲೆಂಕಾಗೆ ಮರಿಯಾ ಸಕ್ಕಾರಿ ಸವಾಲು ಎದುರಾಗಬಹುದು.

Latest Videos

undefined

ವಿಂಬಲ್ಡನ್‌: ಆಲ್ಕರಜ್‌, ಇಗಾಗೆ ಅಗ್ರ ಶ್ರೇಯಾಂಕ

ಲಂಡನ್‌: ಜುಲೈ 3ರಿಂದ ಆರಂಭಗೊಳ್ಳಲಿರುವ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಶ್ರೇಯಾಂಕ ಪಟ್ಟಿ ಬಿಡುಗಡೆಗೊಂಡಿದ್ದು, ವಿಶ್ವ ನಂ.1 ಟೆನಿಸಿಗರಾದ ಕಾರ್ಲೊಸ್‌ ಆಲ್ಕರಜ್‌ ಹಾಗೂ ಇಗಾ ಸ್ವಿಯಾಟೆಕ್‌ ಕ್ರಮವಾಗಿ ಪುರುಷ, ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. 

Neeraj Chopra: ಸತತ ಎರಡನೇ ಬಾರಿಗೆ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ

ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಇತ್ತೀಚೆಗಷ್ಟೇ ಫ್ರೆಂಚ್‌ ಓಪನ್‌ ಗೆದ್ದಿದ್ದರೂ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದು, ಡ್ಯಾನಿಲ್‌ ಮೆಡ್ವೆಡೆವ್‌, ಕ್ಯಾಸ್ಪೆರ್‌ ರುಡ್‌, ಸಿಟ್ಸಿಪಾಸ್‌ ನಂತರದ ಸ್ಥಾನಗಳಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಅರೈನಾ ಸಬಲೆಂಕಾ 2ನೇ ಸ್ಥಾನದಲ್ಲಿದ್ದು, ಎಲೆನಾ ರಬೈಕೆನಾ, ಜೆಸ್ಸಿಕಾ ಪೆಗುಲಾ, ಕ್ಯಾರೊಲಿನಾ ಗಾರ್ಸಿಯಾ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ಪಾಕ್‌ ಸ್ನೂಕರ್‌ ಪಟು ಮಾಜಿದ್‌ ಅಲಿ ಆತ್ಮಹತ್ಯೆ

ಕರಾಚಿ: ಖಿನ್ನತೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಯುವ ಸ್ನೂಕರ್‌ ಆಟಗಾರ ಮಾಜಿದ್‌ ಅಲಿ(28) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಜಿದ್‌ ದೀರ್ಘ ಸಮಯದಿಂದಲೂ ಖಿನ್ನತೆಯಿಂದ ಬಳಲುತ್ತಿದ್ದು, ಗುರುವಾರ ಫೈಸಲಾಬಾದ್‌ನ ತಮ್ಮ ಗ್ರಾಮದಲ್ಲಿ ಮರ ಕಡಿಯುವ ಯಂತ್ರ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಏಷ್ಯನ್‌ ಅಡರ್‌-21 ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮಾಜಿದ್‌ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು.

ಫಿಫಾ ವಿಶ್ವ ರ‍್ಯಾಂಕಿಂಗ್‌: 100ನೇ ಸ್ಥಾನಕ್ಕೆ ಭಾರತ

ನವದೆಹಲಿ: ಫಿಫಾ ಫುಟ್ಬಾಲ್‌ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ 1 ಸ್ಥಾನ ಏರಿಕೆ ಕಂಡಿದ್ದು 100ನೇ ಸ್ಥಾನ ಪಡೆದಿದೆ. ಲೆಬನಾನ್‌ ಹಾಗೂ ನ್ಯೂಜಿಲೆಂಡ್‌ ತಂಡಗಳನ್ನು ಭಾರತ ಹಿಂದಿಕ್ಕಿದೆ. 2018ರ ಮಾ.15ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಅಗ್ರ 100ರಲ್ಲಿ ಸ್ಥಾನ ಪಡೆದಿದೆ. ಆಗ ಭಾರತ 99ನೇ ಸ್ಥಾನದಲ್ಲಿತ್ತು.

click me!