ವಿಂಬಲ್ಡನ್ ಗ್ರ್ಯಾನ್‌ಸ್ಲಾಂನಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟ ನೋವಾಕ್ ಜೋಕೋವಿಕ್
ಸತತ 5ನೇ ಬಾರಿಗೆ ವಿಂಬಲ್ಡನ್ ಗೆಲ್ಲುವ ವಿಶ್ವಾಸದಲ್ಲಿ ಜೋಕೋವಿಚ್
ಆಸ್ಟ್ರೇಲಿಯಾದ ಜೊರ್ಡನ್ ಥಾಂಪ್ಸನ್ ವಿರುದ್ಧ 6-3, 7-4(7/6), 7-5 ಸೆಟ್‌ಗಳಲ್ಲಿ ಜಯ
ಲಂಡನ್(ಜು.07): 23 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ. ಸತತ 5ನೇ ವಿಂಬಲ್ಡನ್ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಜೋಕೋ ಬುಧವಾರ ರಾತ್ರಿ ಆಸ್ಟ್ರೇಲಿಯಾದ ಜೊರ್ಡನ್ ಥಾಂಪ್ಸನ್ ವಿರುದ್ಧ 6-3, 7-4(7/6), 7-5 ಸೆಟ್‌ಗಳಲ್ಲಿ ಜಯಗಳಿಸಿದರು. ಇದೇ ವೇಳೆ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ 2ನೇ ಸುತ್ತು ಪ್ರವೇಶಿಸಿದರೆ, ರಷ್ಯಾದ ಆ್ಯಂಡ್ರೆ ರುಬ್ಲೆವ್, ವಿಂಬಲ್ಡನ್ ಹೊರತುಪಡಿಸಿ ಉಳಿದೆಲ್ಲಾ ಗ್ರ್ಯಾನ್‌ಸ್ಲಾಂ ಗೆದ್ದಿರುವ ಸ್ವಿಜರ್‌ಲೆಂಡ್‌ನ ಸ್ಟ್ಯಾನ್ ವಾಂವ್ರಿಕಾ 3ನೇ ಸುತ್ತಿಗೆ ಲಗ್ಗೆ ಇಟ್ಟರು.
ಅಜರೆಂಕಾಗೆ ಮುನ್ನಡೆ: ಮಹಿಳಾ ಸಿಂಗಲ್ಸ್‌ನಲ್ಲಿ 2 ಗ್ರ್ಯಾನ್‌ಸ್ಲಾಂ ವಿಜೇತೆ, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ, ಅರ್ಜೆಂಟೀನಾದ ಪೊಡೊರೊಸ್ಕಾ ವಿರುದ್ಧ ಗೆದ್ದು 3ನೇ ಸುತ್ತಿಗೆ ಮುನ್ನಡೆದರು. ಆದರೆ ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಫೈನಲ್‌ಗೇರಿದ್ದ ಚೆಕ್ ಗಣರಾಜ್ಯದ ಕ್ಯಾರೊಲಿನಾ ಮುಕೋವಾ, ಶ್ರೇಯಾಂಕರಹಿತ ಜರ್ಮನಿಯ ಜೂಲ್ ನೀಮಿಯರ್ ವಿರುದ್ಧ ಸೋತು ಹೊರಬಿದ್ದರು.
Achievement unlocked 🔓
Novak Djokovic's 350th Grand Slam match win! 👏 | pic.twitter.com/Qv0yilhPUm
undefined
ಕೆನಡಾ ಓಪನ್: ಸಿಂಧು, ಸೇನ್ ಶುಭಾರಂಭ
ಕ್ಯಾಲ್ಗರಿ: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್ ಕೆನಡಾ ಓಪನ್ ಸೂಪರ್ 500 ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. 4ನೇ ಶ್ರೇಯಾಂಕತೆ ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ ಕೆನಡಾದ ತಾಲಿಯಾ ವಿರುದ್ಧ 21-16, 21-9 ಅಂತರದಲ್ಲಿ ಸುಲಭ ಗೆಲುವು ಸಾಧಿಸಿ 2ನೇ ಸುತ್ತಿಗೆ ಮುನ್ನಡೆದರು. ಆದರೆ ರುತ್ವಿಕಾ ಶಿವಾನಿ ಸೋತು ಹೊರಬಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಸೇನ್, ಥಾಯ್ಲೆಂಡ್‌ನ ಕುನ್ಲಾವುಟ್ ವಿರುದ್ಧ 21-18, 21-15 ನೇರ ಗೇಮ್‌ಗಳಲ್ಲಿ ಗೆದ್ದರು. ಸಾಯಿ ಪ್ರಣೀತ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದರು.
ಭಾರತೀಯ ಬಾಸ್ಕೆಟ್‌ಬಾಲ್‌ಗೆಅರ್ಜುನ ನೂತನ ಅಧ್ಯಕ್ಷ
ನವದೆಹಲಿ: ಫಿಬಾ ಏಷ್ಯಾ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರಾಗಿರುವ ಡಾ.ಕೆ.ಗೋವಿಂದರಾಜು ಅವರು 8 ವರ್ಷಗಳ ಬಳಿಕ ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಶನ್(ಬಿಎಫ್‌ಐ) ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ತಮಿಳುನಾಡಿನ ಆಧವ್ ಅರ್ಜುನ 39 ಮತಗಳ ಪೈಕಿ 38 ಮತ ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದರು. ಮಧ್ಯಪ್ರದೇಶದ ಕುಲ್ವಿಂದರ್ ಸಿಂಗ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಬಿ.ದಯಾನಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲನುಭವಿಸಿದರು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಆಗಿರುವ ಗೋವಿಂದರಾಜು 2015ರಲ್ಲಿ ಮೊದಲ ಬಾರಿ ಬಿಎಫ್‌ಐ ಅಧ್ಯಕ್ಷರಾಗಿದ್ದರು. ಬಳಿಕ 2019ರಲ್ಲಿ ಮರು ಆಯ್ಕೆಯಾಗಿದ್ದರು.
ರಾಜ್ಯ ಸಂಸ್ಥೆಗಳಿಗೆ ಹಾಕಿ ಇಂಡಿಯಾದಿಂದ 8 ಕೋಟಿ ಮೌಲ್ಯದ ಉಪಕರಣ ವಿತರಣೆ
ನವದೆಹಲಿ: ದೇಶದಲ್ಲಿ ಹಾಕಿಯ ಬೆಳವಣಿಗೆ ಹಾಗೂ ಯುವ ಜನತೆಯನ್ನು ಹಾಕಿಯತ್ತ ಸೆಳೆಯುವ ಉದ್ದೇಶದಿಂದ ಹಾಕಿ ಇಂಡಿಯಾ ಹೊಸ ಯೋಜನೆ ಪರಿಚಯಿಸಿದ್ದು, ಇದರ ಭಾಗವಾಗಿ ವಿವಿಧ ರಾಜ್ಯ ಸಂಸ್ಥೆಗಳು, ಅಕಾಡೆಮಿಗಳಿಗೆ ಬರೋಬ್ಬರಿ 8 ಕೋಟಿ ರು. ವೆಚ್ಚದಲ್ಲಿ ಹಾಕಿ ಉಪಕರಣಗಳನ್ನು ವಿತರಿಸುತ್ತಿದೆ. ಒಟ್ಟಾರೆ 11,000 ಹಾಕಿ ಸ್ಟಿಕ್, 3300 ಚೆಂಡು ಹಾಗೂ ಇನ್ನಿತರ ಸುರಕ್ಷತಾ ಉಪಕರಣಗಳನ್ನು ವಿವಿಧ ರಾಜ್ಯ ಸಂಸ್ಥೆಗಳಿಗೆ ನೀಡಿದೆ. ಕರ್ನಾಟಕ ಹಾಕಿ ಸಂಸ್ಥೆಗೂ 437 ಸ್ಟಿಕ್, 134 ಚೆಂಡು ಹಾಗೂ ಕೆಲ ಸುರಕ್ಷತಾ ಉಪಕರಣ ಲಭಿಸಿದೆ ಎಂದು ರಾಜ್ಯ ಸಂಸ್ಥೆ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರೊ ಲೀಗ್ ಹಾಕಿ: 4ನೇ ಸ್ತಾನಕ್ಕೆ ಭಾರತ ತೃಪ್ತಿ
ನವದೆಹಲಿ: 2022-23 ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಳೆದ ಆವೃತ್ತಿಯಲ್ಲಿ 3ನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ 16 ಪಂದ್ಯಗಳಲ್ಲಿ 8 ಗೆಲುವು, 3 ಡ್ರಾ ಹಾಗೂ 5 ಸೋಲಿನೊಂದಿಗೆ 30 ಅಂಕ ಸಂಪಾದಿಸಿತು. ನೆದರ್‌ಲೆಂಡ್ಸ್(35 ಅಂಕ) ಸತತ 2ನೇ ಬಾರಿ ಚಾಂಪಿಯನ್ ಎನಿಸಿಕೊಂಡರೆ, ಬ್ರಿಟನ್(32 ಅಂಕ) ದ್ವಿತೀಯ, ಬೆಲ್ಜಿಯಂ(30 ಅಂಕ) ತೃತೀಯ ಸ್ಥಾನ ಪಡೆದವು. ಪ್ರೊ ಲೀಗ್‌ನಲ್ಲಿ ಈ ಬಾರಿ 9 ತಂಡಗಳು ಪಾಲ್ಗೊಂಡಿದ್ದವು. ಪ್ರತಿ ತಂಡ ಇನ್ನುಳಿದ 8 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಿದ್ದವು.