ವಿಶ್ವ ನಂ.7 ರ್‍ಯುನೆ ವಿರುದ್ಧ ಹೋರಾಡಿ ಸೋತ ನಗಾಲ್‌

By Kannadaprabha NewsFirst Published Apr 12, 2024, 9:33 AM IST
Highlights

ಬುಧವಾರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. 3-6ರಲ್ಲಿ ಸುಮಿತ್‌ ಮೊದಲ ಸೆಟ್‌ ಸೋತಿದ್ದರು. ಗುರುವಾರ ಪಂದ್ಯ ಪುನಾರಂಭಗೊಂಡಿತು. ಅಮೋಘ ಪ್ರದರ್ಶನ ನೀಡಿದ ಸುಮಿತ್‌ 6-3 ಗೇಮ್‌ಗಳಲ್ಲಿ 2ನೇ ಸೆಟ್‌ ಜಯಿಸಿ, ಅಚ್ಚರಿ ಮೂಡಿಸಿದರು. ಆದರೆ 2-6ರಲ್ಲಿ 3ನೇ ಸೆಟ್‌ ಸೋತು, ಟೂರ್ನಿಯಿಂದ ಹೊರಬಿದ್ದರು.

ಮಾಂಟೆ ಕಾರ್ಲೊ: ಭಾರತದ ಯುವ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ಮತ್ತೊಮ್ಮೆ ಟೆನಿಸ್‌ ಜಗತ್ತಿನ ಗಮನ ಸೆಳೆದಿದ್ದಾರೆ. ಇಲ್ಲಿ ನಡೆಯುತ್ತಿರುವ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.7, ಡೆನ್ಮಾರ್ಕ್‌ನ ಹೋಲ್ಗರ್ ರ್‍ಯುನೆ ವಿರುದ್ಧ ಆಕರ್ಷಕ ಪ್ರದರ್ಶನ ತೋರಿದರು.

ಬುಧವಾರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. 3-6ರಲ್ಲಿ ಸುಮಿತ್‌ ಮೊದಲ ಸೆಟ್‌ ಸೋತಿದ್ದರು. ಗುರುವಾರ ಪಂದ್ಯ ಪುನಾರಂಭಗೊಂಡಿತು. ಅಮೋಘ ಪ್ರದರ್ಶನ ನೀಡಿದ ಸುಮಿತ್‌ 6-3 ಗೇಮ್‌ಗಳಲ್ಲಿ 2ನೇ ಸೆಟ್‌ ಜಯಿಸಿ, ಅಚ್ಚರಿ ಮೂಡಿಸಿದರು. ಆದರೆ 2-6ರಲ್ಲಿ 3ನೇ ಸೆಟ್‌ ಸೋತು, ಟೂರ್ನಿಯಿಂದ ಹೊರಬಿದ್ದರು. 2019ರ ಯುಎಸ್‌ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನಗಾಲ್‌ ಫೆಡರರ್‌ ವಿರುದ್ಧ ಒಂದು ಸೆಟ್‌ ಗೆದ್ದಿದ್ದರು.

ಫ್ರೆಂಚ್‌ ಓಪನ್‌ ಪ್ರಧಾನ ಸುತ್ತಿಗೆ ನಗಾಲ್‌ ಪ್ರವೇಶ:

ಕಳೆದೊಂದು ವರ್ಷದಿಂದ ಸ್ಥಿರ ಪ್ರದರ್ಶನ ತೋರುತ್ತಿರುವ ನಗಾಲ್‌ಗೆ ಈ ವರ್ಷ ಫ್ರೆಂಚ್‌ ಓಪನ್‌ ಪುರುಷರ ಸಿಂಗಲ್ಸ್‌ನ ಪ್ರಧಾನ ಸುತ್ತಿಗೆ ಪ್ರವೇಶ ದೊರೆತಿದೆ. 2019ರಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ ಬಳಿಕ ಫ್ರೆಂಚ್‌ ಓಪನ್‌ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಮೇ 20ರಿಂದ ಗ್ರ್ಯಾನ್‌ ಸ್ಲಾಂ ಆರಂಭಗೊಳ್ಳಲಿದೆ.

IPL 2024 ಸೂರ್ಯ-ಕಿಶನ್ ಆರ್ಭಟಕ್ಕೆ ತತ್ತರಿಸಿದ ಆರ್‌ಸಿಬಿ, ಫಾಫ್ ಪಡೆಗೆ ಹೀನಾಯ ಸೋಲು..!

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌: ಸಿಂಧು, ಪ್ರಣಯ್‌ಗೆ ಸೋಲು!

ನಿಂಗ್ಬೋ(ಚೀನಾ): ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಪ್ರಿ ಕ್ವಾರ್ಟರ್‌ನಲ್ಲಿ ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌ ಇಬ್ಬರೂ ಸೋತು ಹೊರಬಿದ್ದರು. ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಂಧುಗೆ ಚೀನಾದ ಹಾನ್‌ ಯೂಹಿ ವಿರುದ್ಧ 18-21, 21-13, 17-21 ಗೇಮ್‌ಗಳಲ್ಲಿ ಸೋಲು ಎದುರಾಯಿತು. ಈ ಪಂದ್ಯಕ್ಕೂ ಮುನ್ನ ಸಿಂಧು, ಹಾನ್‌ ವಿರುದ್ಧ ಸತತ 5 ಪಂದ್ಯಗಳನ್ನು ಗೆದ್ದಿದ್ದರು. ಇನ್ನು ಪ್ರಣಯ್‌, ಚೈನೀಸ್‌ ತೈಪೆಯ ಲಿನ್‌ ಚುನ್‌ ಯೀ ವಿರುದ್ಧ 18-21, 11-21ರಲ್ಲಿ ಪರಾಭವಗೊಂಡರು. ಮಹಿಳಾ ಡಬಲ್ಸ್‌ನ ಪ್ರಿ ಕ್ವಾರ್ಟರಲ್ಲಿ ಅಶ್ವಿನಿ-ತನಿಶಾ ಜೋಡಿಗೂ ಸೋಲು ಎದುರಾಯಿತು.

ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್, ಪ್ರಜ್ಞಾನಂದಗೆ ಗೆಲುವು

ಟೊರೊಂಟೊ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ಗಳಾದ ಆರ್‌.ಪ್ರಜ್ಞಾನಂದ ಹಾಗೂ ವಿದಿತ್‌ ಗುಜರಾತಿ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ 6ನೇ ಸುತ್ತಿನಲ್ಲಿ ಗೆಲುವು ಸಾಧಿಸಿದರೆ, ಡಿ.ಗುಕೇಶ್‌ ಡ್ರಾ ಸಾಧಿಸಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಪ್ರಜ್ಞಾನಂದ ಅಜರ್‌ಬೈಜಾನ್‌ನ ನಿಜತ್‌ ಅಬಸೊವ್‌ ವಿರುದ್ಧ ಗೆದ್ದರೆ, ಫ್ರಾನ್ಸ್‌ನ ಅಲಿರೇಜಾ ವಿರುದ್ಧ ವಿದಿತ್‌ ಗೆಲುವು ಸಾಧಿಸಿದರು. ಇನ್ನು ಅಮೆರಿಕದ ಹಿಕಾರು ನಕಮುರಾ ವಿರುದ್ಧ ಗುಕೇಶ್‌ ಡ್ರಾ ಸಾಧಿಸಿದರು.

ಸನಾ ಜಾವೆದ್ ಜತೆ ಈದ್ ಆಚರಿಸಿದ ಶೋಯೆಬ್ ಮಲಿಕ್..! ಇಲ್ಲಿವೆ ಫೋಟೋಗಳು

ಇನ್ನೂ 8 ಸುತ್ತುಗಳು ಬಾಕಿ ಇದ್ದು, 4 ಅಂಕ ಹೊಂದಿರುವ 17 ವರ್ಷದ ಗುಕೇಶ್‌, ರಷ್ಯಾದ ಇಯಾನ್‌ ನೆಪೋನ್ಮಿಯಾಚಿ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಹಿಳೆಯರ ವಿಭಾಗದ 6ನೇ ಸುತ್ತಿನಲ್ಲಿ ಆರ್‌.ವೈಶಾಲಿ ಹಾಗೂ ಕೊನೆರು ಹಂಪಿ ಇಬ್ಬರೂ ಸೋಲುಂಡರು.

ಸೋಲಿನೊಂದಿಗೆ ಐಎಸ್‌ಎಲ್‌ ಅಭಿಯಾನ ಮುಗಿಸಿದ ಬಿಎಫ್‌ಸಿ

ಬೆಂಗಳೂರು: 2023-24ರ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯನ್ನು ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) ಸೋಲಿನೊಂದಿಗೆ ಮುಕ್ತಾಯಗೊಳಿಸಿದೆ. ಗುರುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಬಿಎಫ್‌ಸಿ 0-4 ಗೋಲುಗಳಿಂದ ಮೋಹನ್‌ ಬಗಾನ್‌ ವಿರುದ್ಧ ಪರಾಭವಗೊಂಡಿತು. ಇದರೊಂದಿಗೆ ಈ ಆವೃತ್ತಿಯಲ್ಲಿ ಆಡಿದ 22 ಪಂದ್ಯಗಳಲ್ಲಿ ಕೇವಲ 5 ಜಯ ಸಾಧಿಸಲಷ್ಟೇ ಸುನಿಲ್‌ ಚೆಟ್ರಿ ಪಡೆ ಶಕ್ತವಾಯಿತು. 10 ಸೋಲುಗಳನ್ನು ಅನುಭವಿಸಿದ ಬಿಎಫ್‌ಸಿ, 7 ಪಂದ್ಯಗಳನ್ನು ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

click me!