‘ಜಿಗಿತ’ ಬಿಟ್ಟು ಓಡಿದ ಸಿಂಚಲ್‌ಗೆ ಒಲಿಂಪಿಕ್ಸ್ ಗುರಿ

By Kannadaprabha News  |  First Published Jun 26, 2023, 9:34 AM IST

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದ ಸಿಂಚಲ್ ಕಾವೇರಮ್ಮ
ಕೋಚ್ ಹೇಳಿದರು ಎಂಬ ಕಾರಣಕ್ಕೆ ಜಿಗಿತ ಬಿಟ್ಟು ಓಡಲು ಶುರು ಮಾಡಿದ ಸಿಂಚಲ್
ಕೊಡಗಿನ ಪೊನ್ನಂಪೇಟೆಯ ಸಿಂಚಲ್ ಕಾವೇರಮ್ಮ ಯಶಸ್ಸಿನ ಪಯಣದ ಕಥೆ


- ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು(ಜೂ.26): ಆಕೆಗೆ ಬಾಲ್ಯದಲ್ಲೇ ಅಥ್ಲೆಟಿಕ್ಸ್ ಮೇಲೆ ಪ್ರೀತಿ. ಹಲವು ಸಾಧಕರನ್ನು ಕಂಡು ತನಗೂ ಏನಾದರೂ ಸಾಧಿಸಬೇಕೆಂಬ ತುಡಿತ. ಅದರಲ್ಲೂ ಜಿಗಿತ ಎಂದರೆ ಎಲ್ಲಿಲ್ಲದ ಆಸಕ್ತಿ. ಆದರೆ ತನ್ನ ಕೋಚ್ ಹೇಳಿದರು ಎಂಬ ಕಾರಣಕ್ಕೆ ಜಿಗಿತ ಬಿಟ್ಟು ಓಡಲು ಶುರು ಮಾಡುತ್ತಾರೆ. ‘ಅಡೆ ತಡೆ’ ಮೆಟ್ಟಿ ಓಡಲು ಶುರುವಿಟ್ಟ 4 ವರ್ಷದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಏಷ್ಯನ್ ಗೇಮ್ಸ್‌ನಲ್ಲೂ ಆಡುವ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ.

Latest Videos

undefined

ಇದು ಕೊಡಗಿನ ಪೊನ್ನಂಪೇಟೆಯ ಸಿಂಚಲ್ ಕಾವೇರಮ್ಮ ಯಶಸ್ಸಿನ ಪಯಣ. ಇತ್ತೀಚೆಗಷ್ಟೇ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಹರ್ಡಲ್ಸ್ ನಲ್ಲಿ 56.76 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಪದಕ ಗೆದ್ದು, ಏಷ್ಯನ್ ಗೇಮ್ಸ್‌ನಲ್ಲೂ ಪಾಲ್ಗೊಳ್ಳುವ ಅವಕಾಶ ಪಡೆದಿದ್ದಾರೆ. ಸದ್ಯ ಏಷ್ಯಾಡ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿರುವ ರಾಜ್ಯದ ಮೂವರಲ್ಲಿ ಓರ್ವರೆನಿಸಿಕೊಂಡಿದ್ದು, ತಮ್ಮ ‘ಯಶಸ್ಸಿನ ಓಟ’ದ ಬಗ್ಗೆ ‘ಕನ್ನಡಪ್ರಭ’ದ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

ಹರ್ಡಲ್ಸ್‌ನತ್ತ ಗಮನ: ಗೋಣಿಕೊಪ್ಪದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಎಂ.ರವಿ-ರಶ್ಮಿ ದಂಪತಿಯ ಪುತ್ರಿ ಸಿಂಚಲ್, ಬಳಿಕ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಮೊದಲ ಬಾರಿ ಲಾಂಗ್‌ಜಂಪ್ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿಂದ ಕೆಲ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಾ ಬಂದ ಸಿಂಚಲ್, ಬಳಿಕ ಟ್ರಿಪಲ್ ಜಂಪ್‌ನಲ್ಲೂ ಮಿಂಚು ಹರಿಸುತ್ತಾರೆ. ಆದರೆ ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದ ಅವರು ಬೊಳ್ಳಂಡ ಅಯ್ಯಪ್ಪ ಎಂಬವರ ಜೊತೆ ತರಬೇತಿಗೆ ಸೇರಿಕೊಂಡು, ಬಳಿಕ ತಮ್ಮ ಸಂಪೂರ್ಣ ಗಮನವನ್ನು ಹರ್ಡಲ್ಸ್‌ನತ್ತ ಹರಿಸುತ್ತಾರೆ. ‘ಮೊದಲು ಜಿಗಿತದಲ್ಲಿ ಆಸಕ್ತಿ ಇತ್ತು. ಆದರೆ ಪದಕ ಗೆಲ್ಲಲು ಆಗುತ್ತಿರಲಿಲ್ಲ. ಕೋಚ್ ಹೇಳಿದ ಬಳಿಕ ರಿಲೇ, ಹರ್ಡಲ್ಸ್‌ನಲ್ಲಿ ಪಾಲ್ಗೊಂಡೆ. ಇದು ನನ್ನ ಬದುಕಿನಲ್ಲಿ ತಿರುವು ನೀಡಿತು’ ಎನ್ನುತ್ತಾರೆ 22 ವರ್ಷದ ಸಿಂಚಲ್.

ವಿಕಲ ಚೇತನ ವ್ಯಕ್ತಿಗಳಿಂದ ಅಂಗವಿಕಲರ ರಾಷ್ಟ್ರೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ದಾಖಲೆ: ಹರ್ಡಲ್ಸ್ ಹಾಗೂ ರಿಲೇ ಸ್ಪರ್ಧೆಯಲ್ಲಿ ಈವರೆಗೆ ಹಲವು ರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಸಿಂಚಲ್ ಪ್ರತಿ ಟೂರ್ನಿಯಲ್ಲೂ ತಮ್ಮ ಪ್ರದರ್ಶನ ಮಟ್ಟವನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. 2021ರಲ್ಲಿ ದೆಹಲಿಯಲ್ಲಿ ನಡೆದ ಅಂಡರ್-23 ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸಿಂಚಲ್, 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಮುಕ್ತ ಅಥ್ಲೆಟಿಕ್ಸ್‌ನ 400 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ, ಹಾಗೂ 4*400 ಮೀ. ರಿಲೇ ಓಟದಲ್ಲಿ ಕಂಚು ತಮ್ಮದಾಗಿಸಿಕೊಂಡರು. ಬಳಿಕ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 400 ಮೀ. ಹರ್ಡಲ್ಸ್‌ನಲ್ಲಿ ಕಂಚು ಹಾಗೂ 4*400 ಮೀ. ರಿಲೇ ಓಟದಲ್ಲಿ ಕಂಚು ಜಯಿಸಿದ್ದಾರೆ. ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದ ಅಂತಾರಾಜ್ಯ ಅಥ್ಲೆಟಿಕ್ಸ್‌ನ 400 ಮೀ. ಹರ್ಡಲ್ಸ್‌ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ 56.76 ಸೆಕೆಂಡ್‌ಗಳಲ್ಲಿ ಕ್ರಮಿಸಿ, 2018ರಲ್ಲಿ ಚೌನಾ ಮುರ್ಮು ನಿರ್ಮಿಸಿದ್ದ 57.02 ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಒಲಿಂಪಿಕ್ಸ್ ಗುರಿ

ಈವರೆಗೆ ಹಲವು ರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಗೆದ್ದಿರುವ ಸಿಂಚಲ್‌ಗೆ ಸದ್ಯ ಏಷ್ಯನ್ ಗೇಮ್ಸ್ ಪದಕ ಕಣ್ಣ ಮುಂದಿದೆ. ಈ ಮೂಲಕ ಮೊದಲ ಅಂತಾರಾಷ್ಟ್ರೀಯ ಪದಕ ಗೆಲ್ಲುವ ನಿರೀಕ್ಷೆಯಲ್ಲಿರುವ ಅವರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಗುರಿಯೂ ಇದೆ. ‘ಈವರೆಗೆ ಹಲವು ಟೂರ್ನಿಗಳಲ್ಲಿ ಪದಕ ಗೆದ್ದಿದ್ದಕ್ಕೆ ಖುಷಿ ಇದೆ. ಈಗ ಏಷ್ಯನ್ ಗೇಮ್ಸ್‌ಗೆ ಸಜ್ಜಾಗುತ್ತಿದ್ದೇನೆ. ಮುಂದೆ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಬೇಕು’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಸಿಂಚಲ್.

ಪ್ರಾಯೋಜಕರಿಲ್ಲ

ಸಿಂಚಲ್ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದರೂ ಈವರೆಗೆ ಪ್ರಾಯೋಜಕರು ಸಿಕ್ಕಿಲ್ಲ. ಮೊದಲಿಂದಲೂ ತಮ್ಮ ಪೋಷಕರನ್ನೇ ನೆಚ್ಚಿಕೊಂಡಿದ್ದು, ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಬೇಕಾದ ಅಗತ್ಯ ಹಣಕಾಸಿನ ನೆರವನ್ನೂ ಪೋಷಕರೇ ಭರಿಸುತ್ತಿದ್ದಾರೆ. ಶೀಘ್ರದಲ್ಲೇ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗುವ ಬಗ್ಗೆ ಭರವಸೆ ವ್ಯಕ್ತಪಡಿಸುವ ಸಿಂಚಲ್, ಪ್ರಾಯೋಜಕರು ಸಿಕ್ಕರೆ ಸಾಧನೆಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದಿದ್ದಾರೆ.

click me!