ಪಿಬಿಎಲ್ ಆಕ್ಷನ್: ಸೈನಾ, ಸಿಂಧೂ 80 ಲಕ್ಷ ರೂಪಾಯಿಗೆ ಹರಾಜು!

By Web DeskFirst Published Oct 9, 2018, 9:51 AM IST
Highlights

4ನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ ಹರಾಜು ಪ್ರಕ್ರಿಯೆ ಮುಗಿದಿದೆ. ಕರ್ನಾಟಕ ಅಶ್ವಿನಿ ಪೊನ್ನಪ್ಪ 32 ಲಕ್ಷ ರೂಪಾಯಿಗೆ ಹರಾಜಾದರೆ, ಸೈನಾ ನೆಹ್ವಾಲ್, ಪಿವಿ ಸಿಂಧೂ ಗರಿಷ್ಠ ಮೊತ್ತಕ್ಕೆ ಹರಾಜಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನವದೆಹಲಿ(ಅ.09): ಡಿ. 22 ರಿಂದ ಜ. 13 ರವರೆಗೆ ನಡೆಯಲಿರುವ 4ನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್ ಗಾಗಿ ಸೋಮವಾರ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್ ₹ 80 ಲಕ್ಷ ಮೊತ್ತಕ್ಕೆ ಬಿಕರಿಯಾಗಿದ್ದಾರೆ. 

ಕನ್ನಡತಿ ಅಶ್ವಿನಿ ಪೊನ್ನಪ್ಪ 23 ಲಕ್ಷ ರೂಪಾಯಿ ಬೆಲೆಗೆ ಹರಾಜಾಗಿದ್ದಾರೆ.  ವಿಶ್ವ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಗರಿಷ್ಠ ಮೊತ್ತಕ್ಕೆ ಪುಣೆ ಸೆವೆನ್
ಏಸಸ್ ತಂಡದ ಪಾಲಾಗಿದ್ದಾರೆ. ಈ ಬಾರಿಯ ಟೂರ್ನಿಯ ಒಟ್ಟು ಮೊತ್ತ 60 ಕೋಟಿಯಾಗಿದ್ದು, ಪ್ರಶಸ್ತಿ ಮೊತ್ತ 6 ಕೋಟಿಯಾಗಿದೆ ಎಂದು ಪಿಬಿಎಲ್ ವ್ಯವಸ್ಥಾಪಕ ನಿರ್ದೇಶಕ ಅತುಲ್ ಪಾಂಡೆ ಹೇಳಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಐಕಾನ್ ಅಲ್ಲದ ಶಟ್ಲರ್ ಆದ ಭಾರತದ ಡಬಲ್ಸ್ ತಾರೆ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹೈದರಾಬಾದ್ ಹಂಟರ್ಸ್‌ಗೆ ₹ 52 ಲಕ್ಷಕ್ಕೆ
ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾತ್ವಿಕ್ ಮೂಲ ಬೆಲೆ ₹ 15 ಲಕ್ಷವಿತ್ತು. 

ಐಕಾನ್ ಅಲ್ಲದ ಶಟ್ಲರ್‌ಗಳ ಪಟ್ಟಿಯಲ್ಲಿ ಇಂಡೋನೇಷ್ಯಾದ ಟಾಮಿ ಸುಗಿರ್ತೊ ₹ 70 ಲಕ್ಷಕ್ಕೆ ಡೆಲ್ಲಿ ಡ್ಯಾಶರ್ಸ್‌ ಪಾಲಾಗಿದ್ದಾರೆ. ವಿಶ್ವ ನಂ.11 ಆಟಗಾರ ಸುಗಿರ್ತೊ ಮೂಲ ಬೆಲೆ ₹ 40 ಲಕ್ಷ ನಿಗದಿಯಾಗಿತ್ತು.  2015ರ ಬಳಿಕ ಎಲ್ಲ ಆಟಗಾರರು ಮೊದಲ ಬಾರಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮತ್ತು ರೈಟ್ ಟು ಮ್ಯಾಚ್ ಕಾರ್ಡ್ (ಆರ್‌ಟಿಎಮ್) ನ್ನು ಈ ಬಾರಿ ಬಳಸದೇ ಪ್ರಕ್ರಿಯೆ ನಡೆಸಲಾಯಿತು.

ಈ ಬಾರಿ 9ನೇ ತಂಡವಾಗಿ ಟೂರ್ನಿಗೆ ನಟಿ ತಾಪ್ಸಿ ಪನ್ನು ಒಡೆತನದ ಪುಣೆ ಸೆವೆನ್ ಏಸಸ್ ಸೇರ್ಪಡೆಯಾಗಿದೆ. ಪುಣೆ ತಂಡದಲ್ಲಿ ಸ್ಪೇನ್‌ನ ತಾರಾ ಶಟ್ಲರ್ ಕ್ಯಾರೋಲಿನಾ ಮರಿನ್ ಆಡಲಿದ್ದಾರೆ. ಕಳೆದ 2 ಆವೃತ್ತಿಗಳಲ್ಲಿ ಸಿಂಧು, ಚೆನ್ನೈ ಸ್ಮಾಶರ್ಸ್‌ ಪರ ಆಡಿದ್ದರು. ಈ ಬಾರಿ ಸಿಂಧು ಹೈದರಾಬಾದ್ ಪರ ಆಡುವ ಉತ್ಸಾಹದಲ್ಲಿದ್ದಾರೆ.

ಇನ್ನು ಪುರುಷರ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ವಿಕ್ಟರ ಅಕ್ಸೆಲ್ಸನ್, ಅಹ್ಮದಬಾದ್ ಸ್ಮಾಶ್ ಮಾಸ್ಟರ್ಸ್‌ನ್ನು ಪ್ರತಿನಿಧಿಸಿದರೆ, ಶ್ರೀಕಾಂತ್ ಬೆಂಗಳೂರು
ತಂಡದಲ್ಲಿ ಆಡಲಿದ್ದಾರೆ. ಎಚ್. ಎಸ್. ಪ್ರಣಯ್ ಡೆಲ್ಲಿ ಡ್ಯಾಶರ್ಸ್‌ ತಂಡ ಸೇರಿಕೊಂಡಿದ್ದಾರೆ. ಕೊರಿಯಾದ ಮಿಶ್ರ ಡಬಲ್ಸ್ ಸ್ಪೆಷಲಿಸ್ಟ್ ಈಮ್ ಹೀ ವಾನ್ 30 ಲಕ್ಷಕ್ಕೆ ಹೈದರಾಬಾದ್ ತಂಡಕ್ಕೆ ಬಿಕರಿಯಾಗಿದ್ದಾರೆ. ವಾನ್ ಮೂಲ ಬೆಲೆ ಕೇವಲ 7 ಲಕ್ಷವಾಗಿತ್ತು. 
 

click me!